ADVERTISEMENT

1999 ವಿಶ್ವಕಪ್: ಮುದ ನೀಡಿದ ‘ಸೂಪರ್‌ ಸಿಕ್ಸ್‌’ ಪರಿಕಲ್ಪನೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 3:04 IST
Last Updated 27 ಮೇ 2019, 3:04 IST
ಗ್ಲೆನ್ ಮೆಗ್ರಾ ಸಂಭ್ರಮ
ಗ್ಲೆನ್ ಮೆಗ್ರಾ ಸಂಭ್ರಮ   

ಪ್ರಮುಖವಾಗಿ ಇಂಗ್ಲೆಂಡ್‌ ಆತಿಥ್ಯ ವಹಿಸಿದ್ದ 1999ರ ವಿಶ್ವಕಪ್‌ ಟೂರ್ನಿಯಲ್ಲಿ (7ನೆಯದ್ದು) ಚಾಂಪಿಯನ್‌ ಆಗಿ ಹೊಮ್ಮಿದ್ದು ಆಸ್ಟ್ರೇಲಿಯಾ. ಸ್ಕಾಟ್ಲೆಂಡ್‌, ಐರ್ಲೆಂಡ್‌, ವೇಲ್ಸ್‌ ಹಾಗೂ ನೆದರ್‌ಲ್ಯಾಂಡ್ಸ್‌ನಲ್ಲಿ ಐದು ಪಂದ್ಯಗಳು ನಡೆದವು. ಒಟ್ಟು 42 ಪಂದ್ಯಗಳ ಪೈಕಿ 37 ನಡೆದದ್ದು ಇಂಗ್ಲೆಂಡ್‌ನಲ್ಲಿ.

*ದಕ್ಷಿಣ ಆಫ್ರಿಕಾದ ಲ್ಯಾನ್ಸ್‌ ಕ್ಲೂಸ್ನರ್‌ ಸರಣಿ ಶ್ರೇಷ್ಠ ಗೌರವ ಪಡೆದರು.

*1983ರ ನಂತರ ಇಂಗ್ಲೆಂಡ್‌ ಆಯೋಜಿಸಿದ್ದ ಪ್ರತಿಷ್ಠಿತ ಟೂರ್ನಿ ಇದಾಗಿತ್ತು. ‘ಸೂಪರ್‌ ಸಿಕ್ಸ್‌’ ಪರಿಕಲ್ಪನೆಯನ್ನು ಇದರಲ್ಲಿ ಪರಿಚಯಿಸಿದ್ದು ವಿಶೇಷ. ‘ಎ’ ಹಾಗೂ ‘ಬಿ’ ಗುಂಪುಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವ ತಂಡಗಳು ‘ಸೂಪರ್‌ ಸಿಕ್ಸ್‌’ಗೆ ಪ್ರವೇಶಿಸಿದವು. ಒಂದು ಗುಂಪಿನ ಎರಡು ತಂಡಗಳು ‘ಸೂಪರ್‌ ಸಿಕ್ಸ್‌’ ಪ್ರವೇಶಿಸಿದರೆ, ಆ ಪೈಕಿ ಯಾವ ತಂಡ ಇನ್ನೊಂದನ್ನು ಸೋಲಿಸಿರುವುದದೋ ಅದು ಗುಂಪಿನ ಹಂತದಲ್ಲಿ ಗಳಿಸಿದ್ದ ಪಾಯಿಂಟ್‌ಗಳು ಮುಂದುವರಿಯಲಿದೆ ಎನ್ನುವುದು ಹೊಸ ನಿಯಮದ ಆಕರ್ಷಣೆ.

ADVERTISEMENT

* ಭಾರತ, ಪಾಕಿಸ್ತಾನದ ನಡುವೆ ಆಗ ಯುದ್ಧದ ವಾತಾವರಣವಿತ್ತು. ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಎರಡೂ ತಂಡಗಳು ಅಂಥ ಸಂದರ್ಭದಲ್ಲಿ ಮುಖಾಮುಖಿಯಾದದ್ದು ಅದೇ ಮೊದಲೆನ್ನಬೇಕು. ಹೀಗಾಗಿ ಏಷ್ಯಾದಲ್ಲಿ ಕ್ರಿಕೆಟ್‌ ಅಭಿಮಾನಿಗಳು ತೆರೆದ ಕಣ್ಣಿನಿಂದ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸಿದರು. ‘ಸೂಪರ್‌ ಸಿಕ್ಸ್‌’ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಮಣಿಸಿತು.

* ಗ್ರೂಪ್‌ ‘ಎ’ನಲ್ಲಿ ದಕ್ಷಿಣ ಆಫ್ರಿಕಾ, ಭಾರತ, ಜಿಂಬಾಬ್ವೆ, ಇಂಗ್ಲೆಂಡ್‌, ಶ್ರೀಲಂಕಾ, ಕೀನ್ಯಾ ತಂಡಗಳಿದ್ದವು. ಗ್ರೂಪ್‌ ‘ಬಿ’ನಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ವೆಸ್ಟ್‌ಇಂಡೀಸ್‌, ಬಾಂಗ್ಲಾದೇಶ ಹಾಗೂ ಸ್ಲಾಟ್ಲೆಂಡ್‌. ಪಾಕಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಜಿಂಬಾಬ್ವೆ ಹಾಗೂ ಭಾರತ ‘ಸೂಪರ್‌ ಸಿಕ್ಸ್‌’ ಪ್ರವೇಶಿಸಿದವು.

* ಎರಡನೇ ಸೆಮಿಫೈನಲ್‌ ಪಂದ್ಯ ಈ ವಿಶ್ವಕಪ್‌ನ ಹೈಲೈಟ್. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯವು ‘ಟೈ’ ಆಯಿತು. ಇದು ವಿಶ್ವಕಪ್‌ನ ಅತ್ಯಾಕರ್ಷಕ ಪಂದ್ಯಗಳಲ್ಲಿ ಒಂದೆನಿಸಿದೆ. ‘ಸೂಪರ್‌ ಸಿಕ್ಸ್‌’ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಅದೇ ಪಾಯಿಂಟ್ಸ್‌ ಆಧಾರದ ಮೇಲೆ ಫೈನಲ್ ಪ್ರವೇಶಿಸಿತು. * ಪಾಕಿಸ್ತಾನ, ಆಸ್ಟ್ರೇಲಿಯಾ ಫೈನಲ್ ಪ್ರವೇಶಿದವು. ಶೇನ್‌ ವಾರ್ನ್‌ ನಾಲ್ಕು ವಿಕೆಟ್‌ ಪಡೆದು ಪಾಕಿಸ್ತಾನವನ್ನು ಕಟ್ಟಿ ಹಾಕಿತ್ತು. ಆಸ್ಟ್ರೇಲಿಯಾ ಸುಲಭವಾಗಿ 8 ವಿಕೆಟ್‌ಗಳಿಂದ ಗೆದ್ದಿತು.

* ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಬಿಳಿ ‘ಡ್ಯೂಕ್’ ಚೆಂಡನ್ನು ಬಳಸಲಾಗಿತ್ತು. ಬ್ರಿಟಿಷ್ ಕ್ರಿಕೆಟ್‌ ಬಾಲ್ಸ್‌ ಲಿಮಿಟೆಡ್‌ ತಯಾರಿಸಿದ ಈ ಚೆಂಡು ಹೆಚ್ಚು ತಿರುವು ಪಡೆಯಿತೆನ್ನುವುದು ವಿಶ್ಲೇಷಕರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.