ADVERTISEMENT

ವಿಶ್ವಕಪ್ ಶೂಟಿಂಗ್: ಮನುಗೆ ಚಿನ್ನ, 10 ಮೀ.ಏರ್ ಪಿಸ್ತೂಲ್ ವಿಭಾಗದಲ್ಲಿ ಹೊಸ ದಾಖಲೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 7:25 IST
Last Updated 21 ನವೆಂಬರ್ 2019, 7:25 IST
   

ಪುತಿಯಾನ್‌ (ಚೀನಾ): ಭಾರತದ ಮನು ಭಾಕರ್‌ ಐಎಸ್‌ಎಸ್‌ ವಿಶ್ವಕಪ್‌ ಶೂಟಿಂಗ್‌ ಟೂರ್ನಿಯ 10 ಮೀಟರ್‌ ಏರ್ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಕೊರಳಿಗೇರಿಸಿದ್ದಾರೆ. 10 ಮೀಟರ್ ಏರ್‌ ರೈಫಲ್‌ ವಿಭಾಗದಲ್ಲಿಭಾರತದಎಳವೇನಿಲ್‌ ವಲರಿವಾನ್‌ಚಿನ್ನದ ಪದಕ ಗಳಿಸುವ ಮೂಲಕ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಗುರುವಾರ ನಡೆದ ಶೂಟಿಂಗ್‌ ಸ್ಪರ್ಧೆಯಲ್ಲಿ ಒಟ್ಟು 244.7 ಪಾಯಿಂಟ್ಸ್‌ ಗಳಿಸಿದ ಮನು ಜ್ಯೂನಿಯರ್‌ ವಿಶ್ವ ದಾಖಲೆ ಮುರಿದಿದ್ದು,ಈ ಸಾಲಿನ ವಿಶ್ವಕಪ್‌ ಶೂಟಿಂಗ್‌ ಟೂರ್ನಿಯ ಮೊದಲ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯ ಬಳಿಕ ನಡೆದ 10 ಮೀಟರ್‌ ಏರ್‌ ರೈಫಲ್‌ನಲ್ಲಿಎಳವೇನಿಲ್‌ ವಲರಿವಾನ್‌ ಸಹ ಚಿನ್ನ ಗಳಿಸಿದ ಸಾಧನೆ ಮಾಡಿದ್ದು, ಪುತಿಯಾನ್‌ನಲ್ಲಿ ಭಾರತೀಯ ಮಹಿಳಾ ಶೂಟರ್‌ಗಳು ಮಿಂಚಿದ್ದಾರೆ.

ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್ ಏರ್‌ ಪಿಸ್ತೂಲ್‌ ಮಹಿಳಾ ವಿಭಾಗದಲ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಶೂಟರ್‌ ಎಂಬ ಹೆಗ್ಗಳಿಕೆಗೆ ಮನು ಪಾತ್ರರಾಗಿದ್ದಾರೆ. ಹೀನಾ ಸಿಧು ಮೊದಲ ಬಾರಿಗೆ ಚಿನ್ನದ ಪದಕ ಗಳಿಸಿದ ದಾಖಲೆ ಹೊಂದಿದ್ದಾರೆ.

ADVERTISEMENT

ಯಶಸ್ವಿನಿ ದೇಸ್ವಾಲ್‌ ಸಹ ಇದೇ ವಿಭಾಗದಲ್ಲಿ ಸ್ಪರ್ಧಿಸಿ ಅಂತಿಮ ಸುತ್ತಿನಲ್ಲಿ 6ನೇ ಸ್ಥಾನ ಪಡೆದರು.ಸರ್ಬಿಯಾದ ಜೊರಾನಾ ಅರುನೋವಿಕ್‌ 241.9 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಪದಕ ಮತ್ತು 221.8 ಪಾಯಿಂಟ್ಸ್‌ ಗಳಿಸಿದ ಚೀನಾದ ಕ್ವಿಯಾನ್‌ ವಾಂಗ್‌ ಕಂಚಿನ ಪದಕ ಪಡೆದರು.

ಪುರುಷರ 10 ಮೀಟರ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಅಭಿಶೇಕ್‌ ವರ್ಮಾ ಮತ್ತು ಸೌರಭ್‌ ಚೌಧರಿ ಅಂತಿಮ ಹಂತಕ್ಕೆ ಅರ್ಹತೆ‍ಪಡೆದಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್ ಚಿನ್ನದ ಪದಕ ವಿಜೇತೆ ಮನು, ಬುಧವಾರ ನಡೆದ 25 ಮೀಟರ್‌ ಏರ್ ಪಿಸ್ತೂಲ್‌ ವಿಭಾಗದ ಫೈನಲ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲರಾಗಿದ್ದರು. ಅರ್ಹತಾ ಸುತ್ತಿನ ಪ್ರಿಸಿಷನ್‌ ಹಾಗೂ ರ‍್ಯಾಪಿಡ್‌ ವಿಭಾಗಗಳಲ್ಲಿ ಕ್ರಮವಾಗಿ 292 ಹಾಗೂ 291 (ಒಟ್ಟು 583) ಪಾಯಿಂಟ್ಸ್‌ ಗಳಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.