ನಾಟಿಂಗಂ, ಇಂಗ್ಲೆಂಡ್: ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ವಿಶ್ವಕಪ್‌ನಲ್ಲಿ ‘ಸಹಸ್ರ ರನ್’ ಪೂರೈಸುವ ಹೊಸ್ತಿಲಿನಲ್ಲಿದ್ದಾರೆ. ಈ ಸಾಧನೆ ಮಾಡಲು ಅವರು 56ರನ್ ಗಳಿಸಬೇಕಿದೆ.
ಎಡಗೈ ಬ್ಯಾಟ್ಸ್‌ಮನ್ ಗೇಲ್ ಖಾತೆಯಲ್ಲಿ ಸದ್ಯ 944 ರನ್‌ಗಳಿವೆ. 1000 ರನ್ ಪೂರೈಸಿದರೆ ಈ ಸಾಧನೆ ಮಾಡಿದ ವಿಶ್ವದ 18ನೇ ಬ್ಯಾಟ್ಸ್‌ಮನ್ ಎಂಬ ಶ್ರೇಯ ಅವರದ್ದಾಗಲಿದೆ.
ಈ ದಾಖಲೆ ಬರೆದ ವೆಸ್ಟ್ ಇಂಡೀಸ್‌ನ ಮೂರನೇ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೂ ಭಾಜನರಾಗಲಿದ್ದಾರೆ. ಬ್ರಯಾನ್ ಲಾರಾ (1,225) ಮತ್ತು ವಿವಿಯನ್ ರಿಚರ್ಡ್ಸ್ (1,003) ಈಗಾಗಲೇ ಈ ಸಾಧನೆ ಮಾಡಿದ್ದಾರೆ.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬೌಂಡರಿ ಮತ್ತು ಸಿಕ್ಸರ್ ಗಳಿಸಿದ ಸಾಧನೆ ಮಾಡುವ ಅವಕಾಶವೂ ಗೇಲ್ ಅವರಿಗಿದೆ.ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ಗೇಲ್ ತಲಾ 37 ಬೌಂಡರಿ ಮತ್ತು ಸಿಕ್ಸರ್ ಗಳಿಸಿದ್ದಾರೆ. ಡಿವಿಲಿಯರ್ಸ್ ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ವಿಂಡೀಸ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲೂ ಗೇಲ್‌ಗೆಅವಕಾಶ ಇದೆ. ಈ ಮೈಲುಗಲ್ಲು ಸ್ಥಾಪಿಸಲು ಅವರು ಇನ್ನೂ ಎರಡು ಅರ್ಧಶತಕ ಸಿಡಿಸಬೇಕು. ‘ಯೂನಿವರ್ಸಲ್ ಬಾಸ್’ ಗೇಲ್ ಖಾತೆಯಲ್ಲಿ ಸದ್ಯ ಎಂಟು ಅರ್ಧಶತಕಗಳಿವೆ. ಪ್ರಸ್ತುತ ಈ ದಾಖಲೆ ಬ್ರಯಾನ್ ಲಾರಾ (9) ಹೆಸರಿನಲ್ಲಿದೆ.
ಗೇಲ್ ಅವರು ವಿಶ್ವಕಪ್‌ನಲ್ಲಿ 13 ಕ್ಯಾಚ್ ಹಿಡಿದಿದ್ದಾರೆ. ಇನ್ನೂ ಐದು ಕ್ಯಾಚ್ ಪಡೆದರೆ, ಅತಿ ಹೆಚ್ಚು ಕ್ಯಾಚ್ ಹಿಡಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (28 ಕ್ಯಾಚ್) ಅಗ್ರಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.