ನವದೆಹಲಿ: ಭಾರತದ ತಂಡವು ಪೆರು ರಾಜಧಾನಿ ಲಿಮಾದಲ್ಲಿ ನಡೆದ ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ 24 ಪದಕಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ಅಭಿಯಾನವನ್ನು ಮುಗಿಸಿದೆ.
ಕೂಟದಲ್ಲಿ ಭಾರತ 13 ಚಿನ್ನ, 3 ಬೆಳ್ಳಿ ಮತ್ತು 8 ಕಂಚಿನ ಪದಕಗಳನ್ನು ಜಯಿಸಿದೆ. 5 ಚಿನ್ನ ಸೇರಿದಂತೆ 10 ಪದಕ ಗೆದ್ದ ಇಟಲಿ ಮತ್ತು ನಾಲ್ಕು ಚಿನ್ನ ಸೇರಿ 10 ಪದಕ ಜಯಿಸಿರುವ ನಾರ್ವೆ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ.
ಸ್ಪರ್ಧೆಯ ಕೊನೆಯ ದಿನವಾದ ಸೋಮವಾರ ಭಾರತದ ಪುರುಷರ ತಂಡವು 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿತು. ದೀಪಕ್ ದಲಾಲ್ (545 ಅಂಕ), ಕಮಲಜೀತ್ (543) ಮತ್ತು ರಾಜ್ ಚಂದ್ರ (528) ಅವರನ್ನು ಒಳಗೊಂಡ ತಂಡವು 1616 ಪಾಯಿಂಟ್ಸ್ ಗಳಿಸಿತು. ಅಜರ್‌ಬೈಜಾನ್ ಮತ್ತು ಅರ್ಮೇನಿಯಾ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದಿತು.
ಮುಕೇಶ್ ನೆಲವಳ್ಳಿ (548) ಅವರು ವೈಯಕ್ತಿಕ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗೆದ್ದರು. ಕೂಟದಲ್ಲಿ ಅವರಿಗೆ ಇದು ಆರನೇ ಪದಕವಾಗಿದೆ. ಅಜರ್‌ಬೈಜಾನ್‌ನ ಇಮ್ರಾನ್ ಗರಾಯೆವ್ (552) ಚಿನ್ನ ಜಯಿಸಿದರು.
ಮಹಿಳೆಯರ ವಿಭಾಗದಲ್ಲಿ ಪರಿಶಾ ಗುಪ್ತಾ (540) ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಹಂಗರಿಯ ಮಿರಿಯಮ್ ಜಾಕೊ (546) ಜೂನಿಯರ್ ವಿಶ್ವ ದಾಖಲೆಯೊಂದಿಗೆ ಚಾಂಪಿಯನ್ ಆದರು.
ಸೆಜಲ್ ಕಾಂಬ್ಳೆ (529), ಕೇತನ್ (525) ಮತ್ತು ಕನಿಷ್ಕಾ ದಾಗರ್ (513) ಅವರನ್ನು ಒಳಗೊಂಡ ಭಾರತದ ಮಹಿಳಾ ತಂಡವು ಬೆಳ್ಳಿ ಪದಕ ಗೆದ್ದಿತು. ಶಾರ್ದೂಲ್ ವಿಹಾನ್ ಮತ್ತು ಸಬೀರಾ ಹ್ಯಾರಿಸ್ ಅವರ ಸಂಯೋಜನೆಯ ತಂಡವು ಟ್ರ್ಯಾಪ್ ಸ್ಪರ್ಧೆಯಲ್ಲಿ ಕಂಚು ಜಯಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.