ADVERTISEMENT

ವಿಶ್ವ ಜೂನಿಯರ್‌ ಸ್ನೂಕರ್‌ ಪ್ರಶಸ್ತಿ: ಚಾಂಪಿಯನ್‌ ಆದರೂ ಗುರುತಿಸದ ಕ್ರೀಡಾ ಇಲಾಖೆ

ತರಬೇತಿಗೆ ನಿತ್ಯ ಕೆಜಿಎಫ್‌ನಿಂದ ರಾಜಧಾನಿಗೆ ಪಯಣ!

ಕೆ.ಓಂಕಾರ ಮೂರ್ತಿ
Published 26 ಜುಲೈ 2023, 19:57 IST
Last Updated 26 ಜುಲೈ 2023, 19:57 IST
ಆಟದಲ್ಲಿ ನಿರತ ಕೀರ್ತನಾ ಪಾಂಡಿಯನ್‌
ಆಟದಲ್ಲಿ ನಿರತ ಕೀರ್ತನಾ ಪಾಂಡಿಯನ್‌   

ಕೋಲಾರ: ಅರವಿಂದ ಸವೂರ್‌, ಎಂ.ಜಿ.ಜಯರಾಂ, ಬಿ.ಭಾಸ್ಕರ್‌, ಟಿ.ಎ.ಸೆಲ್ವರಾಜ್‌, ಬಿ.ವಿ.ಎಸ್‌.ಮೂರ್ತಿ, ಪಂಕಜ್‌ ಅಡ್ವಾಣಿ, ವಿದ್ಯಾ ಪಿಳ್ಳೈ, ಚಿತ್ರಾ ಮಗಿಮೈರಾಜ್‌, ಉಷಾ ರಾವ್‌, ಜೂಡಿ ವಾಲಿಯಾ, ಉಮಾದೇವಿ, ವರ್ಷಾ ಸಂಜೀವ್‌ ಸೇರಿದಂತೆ ಹಲವಾರು ಹೆಸರಾಂತ ಬಿಲಿಯರ್ಡ್ಸ್‌ ಹಾಗೂ ಸ್ನೂಕರ್‌ ಆಟಗಾರರನ್ನು ಕಂಡಿದ್ದರೂ ರಾಜ್ಯದಲ್ಲಿ ಈ ಕ್ರೀಡೆ ಹಾಗೂ ಆಟಗಾರರತ್ತ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. 

10 ದಿನಗಳ ಹಿಂದೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ವಿಶ್ವ 21 ವರ್ಷದೊಳಗಿನವರ ಸ್ನೂಕರ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿರುವ ಕೆಜಿಎಫ್‌ನ ಕೀರ್ತನಾ ಪಾಂಡಿಯನ್ ಅವರ ಸಾಧನೆಯನ್ನೂ ರಾಜ್ಯ ಸರ್ಕಾರ ಗುರುತಿಸಿಲ್ಲ. ಇದು ಸಹಜವಾಗಿಯೇ ಕೀರ್ತನಾ ಹಾಗೂ ಅವರ ತಂದೆ ಪಾಂಡಿಯನ್‌ ಅವರಲ್ಲಿ ಬೇಸರ ಉಂಟು ಮಾಡಿದೆ.

‘ಒಂದು ಅಭಿನಂದನೆ, ಸನ್ಮಾನ ಮಗಳಿಗೆ ಮತ್ತಷ್ಟು ಸ್ಫೂರ್ತಿ ತುಂಬಬಲ್ಲದು. ಆದರೆ, ಸರ್ಕಾರದ ಪ್ರತಿನಿಧಿಗಳಾಗಲಿ, ಕ್ರೀಡಾ ಇಲಾಖೆ‌ಯಾಗಲಿ ಕೀರ್ತನಾಳ ಸಾಧನೆ ಗುರುತಿಸಿಲ್ಲ’ ಎಂದು ಪಾಂಡಿಯನ್‌ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಚಾಂಪಿಯನ್‌ಷಿಪ್‌ ಸವಾಲಿನಿಂದ ಕೂಡಿತ್ತು. ಕಳೆದ ಬಾರಿ ಕಂಚಿನ ಪದಕ ಗೆದ್ದಿದ್ದೆ. ಮತ್ತಷ್ಟು ಪರಿಶ್ರಮ ಹಾಕಿ ತರಬೇತಿ ಪಡೆದು ಈ ಬಾರಿ ಮೊದಲ ಸ್ಥಾನ ಗಳಿಸಿದ್ದೇನೆ. ಆದರೆ, ರಾಜ್ಯ ಸರ್ಕಾರ ಅಥವಾ ಕ್ರೀಡಾ ಇಲಾಖೆಯಿಂದ ಒಬ್ಬರೂ ಮಾತನಾಡಿಸಿಲ್ಲ. ಅಭಿನಂದನೆ ಸಲ್ಲಿಸಿಲ್ಲ’ ಎಂದು ಕೀರ್ತನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಂಡಿಯನ್‌ ಕೆಜಿಎಫ್‌ನಲ್ಲಿ ಬೆಮಲ್‌ನಲ್ಲಿ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ (ಡಿಜಿಎಂ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಜಿಎಫ್‌ನ ಮಹಾವೀರ ಜೈನ್‌ ಕಾಲೇಜಿನಲ್ಲಿ ತೃತೀಯ ಬಿ.ಕಾಂ ಓದುತ್ತಿರುವ ಕೀರ್ತನಾ ಅಭ್ಯಾಸಕ್ಕೆಂದು ನಿತ್ಯ ಬೆಂಗಳೂರಿನ ವಸಂತನಗರದಲ್ಲಿರುವ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆಗೆ ಹೋಗಿ ಬರುತ್ತಾರೆ. ಪಂಕಜ್‌ ಅಡ್ವಾಣಿ ಹಾಗೂ ನುರಿತ ಆಟಗಾರರ ಮಾರ್ಗದರ್ಶನ ದೊರೆಯುತ್ತಿದೆ. ಇವರ ಕೋಚ್‌ ಮಾಜಿ ಚಾಂಪಿಯನ್‌ ಯಾಸಿನ್‌ ಮರ್ಚೆಂಟ್‌.

ಬೆಳಿಗ್ಗೆ 10.30ಕ್ಕೆ ಕಾಕಿನಾಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಗಳೂರು ತಲುಪಿ ಅಭ್ಯಾಸ ಮುಗಿಸಿ ಸಂಜೆ 7 ಗಂಟೆಗೆ ಮನೆ ತಲುಪುತ್ತಾರೆ. ಆರು ವರ್ಷಗಳಿಂದ ಈ ಕಸರತ್ತು ಮುಂದುವರಿದಿದೆ.

‘ನಿತ್ಯ ಸುಮಾರು 3ರಿಂದ 4 ಗಂಟೆ ಸಮಯ ಪ್ರಯಣದಲ್ಲೇ ಕಳೆದು ಹೋಗುತ್ತದೆ. ನಿತ್ಯ ಕನಿಷ್ಠವೆಂದರೆ ₹ 400 ಖರ್ಚಾಗುತ್ತದೆ’ ಎಂದು ಕೀರ್ತನಾ ಹೇಳಿದರು.

ಅಭ್ಯಾಸ ತರಬೇತಿಗೆ ಹೆಚ್ಚು ಹಣ ಖರ್ಚಾಗುತ್ತಿದೆ. ಮುಂಬೈನಲ್ಲಿ ಸ್ವಂತ ಖರ್ಚಿನಿಂದ ಕೋಚಿಂಗ್‌ ಪಡೆದೆ. ಟೂರ್ನಿಯಲ್ಲಿ ಪಾಲ್ಗೊಂಡಾಗ ಮಾತ್ರ ಫೆಡರೇಷನ್‌ ಖರ್ಚು ಭರಿಸುತ್ತದೆ.
ಕೀರ್ತನಾ, ವಿಶ್ವ ಜೂನಿಯರ್‌ ಸ್ನೂಕರ್‌ ಚಾಂಪಿಯನ್‌

ಸತತ ಅಭ್ಯಾಸ ಹಾಗೂ ಟೂರ್ನಿಗಳ ಕಾರಣ ಪರೀಕ್ಷಾ ಸಮಯದಲ್ಲಿ ಮಾತ್ರ ಪಠ್ಯದತ್ತ ಹೆಚ್ಚು ಗಮನ ಹರಿಸುವ ಅವರು ಶೈಕ್ಷಣಿಕ ವಿಚಾರದಲ್ಲೂ ಮುಂದಿದ್ದಾರೆ. ದ್ವಿತೀಯ ಬಿ.ಕಾಂನಲ್ಲಿ ಶೇ 82 ಅಂಕ ಪಡೆದಿದ್ದಾರೆ.

‘ಸ್ನೂಕರ್, ಬಿಲಿಯರ್ಡ್ಸ್ ಮಾತ್ರವಲ್ಲ; ಬೇರೆ ಯಾವುದೇ ಕ್ರೀಡೆಯಲ್ಲಿ ಗೆದ್ದು ಬಂದರೂ ರಾಜ್ಯದಲ್ಲಿ ಪ್ರೋತ್ಸಾಹ, ಮೆಚ್ಚುಗೆ ಕಡಿಮೆಯೇ. ವ್ಯವಸ್ಥೆ, ಮನಸ್ಥಿತಿ ಬದಲಾಗಬೇಕಿದೆ. ನಾವು ಆಡುವಾಗಲೂ ಇದೇ ಪರಿಸ್ಥಿತಿ ಇತ್ತು. ಒಂದು ಮೆಚ್ಚುಗೆಯ ಮಾತು, ಸನ್ಮಾನ ಸಾಧಕರಿಗೆ ಸ್ಫೂರ್ತಿ ತುಂಬುತ್ತದೆ’ ಎಂದು ಮಾಜಿ ಬಿಲಿಯರ್ಡ್ಸ್‌ ಚಾಂಪಿಯನ್‌ ಆರ್‌.ಉಮಾದೇವಿ ನಾಗರಾಜ್‌ ಅಭಿಪ್ರಾಯಪಟ್ಟರು.

ಅರ್ಜುನ ಪ್ರಶಸ್ತಿ (2004), ಖೇಲ್‌ ರತ್ನ ಪ್ರಶಸ್ತಿಗೆ (2006) ಭಾಜನವಾಗಿರುವ ಪಂಕಜ್‌ ಅಡ್ವಾಣಿ ಅವರಿಗೆ ರಾಜ್ಯ ಸರ್ಕಾರ 2007ರಲ್ಲಿ ‘ಏಕಲವ್ಯ’ ಪ್ರಶಸ್ತಿ ನೀಡಿತ್ತು. ‘ಖೇಲ್‌ ರತ್ನ’ ಸಿಗುವವರೆಗೆ ಅವರ ಸಾಧನೆ ಗುರುತಿಸಿರಲಿಲ್ಲ. ಈ ಕ್ರೀಡೆಯ ಮೇಲಿನ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಅವರು ಆ ವರ್ಷ ಪ್ರಶಸ್ತಿ ನಿರಾಕರಿಸಿದ್ದು. ಆದರೆ, ರಾಜ್ಯ ಸರ್ಕಾರದ ಮನವಿ ಹಾಗೂ ಪ್ರೋತ್ಸಾಹ ಭರವಸೆ ಮೇರೆಗೆ 2009ರಲ್ಲಿ ‘ಏಕಲವ್ಯ’ ಪ್ರಶಸ್ತಿ ಸ್ವೀಕರಿಸಿದ್ದರು.

ಟ್ರೋಫಿಯೊಂದಿಗೆ ಕೀರ್ತನಾ ಪಾಂಡಿಯನ್‌
ಸಾಧನೆ ಗುರುತಿಸಿದಾಗ ಖುಷಿಯಾಗುತ್ತದೆ. ಪರಿಶ್ರಮ ಹಾಕಿದ್ದಕ್ಕೂ ಹಣ ಖರ್ಚು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಆದರೆ ಮಗಳ ಸಾಧನೆಯನ್ನು ರಾಜ್ಯ ಸರ್ಕಾರ ಗುರುತಿಸಿಲ್ಲ
ಪಾಂಡಿಯನ್, ಕೀರ್ತನಾ ತಂದೆ

ಇನ್ನು ಸೀನಿಯರ್‌ ಮಟ್ಟದಲ್ಲಿ ಆಟ

ಕೀರ್ತನಾ ಇನ್ನು ಸೀನಿಯರ್‌ ಮಟ್ಟದಲ್ಲಿ ಮಾತ್ರ ಸ್ಪರ್ಧಿಸಬೇಕಿದೆ. ಅಕ್ಟೋಬರ್‌ನಲ್ಲಿ ಭಾರತದಲ್ಲೇ ವಿಶ್ವ ಸೀನಿಯರ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ ನಡೆಯಲಿದ್ದು ಅದರಲ್ಲಿ ಭಾಗವಹಿಸಲಿದ್ದಾರೆ. ‘ವೃತ್ತಿಪರ ಸ್ನೂಕರ್‌ ಟೂರ್ನಿಯಲ್ಲಿ ಆಡಬೇಕು ವಿಶ್ವ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.