ವಾರ್ಸಾ, ಪೋಲೆಂಡ್: ಹಾಲಿ ಚಾಂಪಿಯನ್, ಭಾರತದ ಕೊನೇರು ಹಂಪಿ ಅವರು ಫಿಡೆ ವಿಶ್ವ ರ‍್ಯಾಪಿಡ್ ಚೆಸ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಆರನೇ ಸ್ಥಾನ ಗಳಿಸಿದರು.
ಇಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಹಂಪಿ ಅವರು 7.5 ಪಾಯಿಂಟ್ಸ್ ಸಂಗ್ರಹಿಸಿದರು. ಮುಕ್ತ ವಿಭಾಗದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಒಂಬತ್ತು ಪಾಯಿಂಟ್ಸ್ ಗಳಿಸಿ ಒಂಬತ್ತನೇ ಸ್ಥಾನ ಗಳಿಸಿದರು. ಚಾಂಪಿಯನ್ ಪಟ್ಟ ಧರಿಸಿದ ಉಜ್ಬೆಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತೊರೊವ್ (9.5 ಪಾಯಿಂಟ್ಸ್) ಅವರಿಗಿಂತ ಕೇವಲ ಅರ್ಧ ಪಾಯಿಂಟ್ ಹಿಂದುಳಿದರು.
17 ವರ್ಷದ ಅಬ್ದುಸತ್ತೊರೊವ್ ಅವರು ಟೈಬ್ರೇಕ್‌ನಲ್ಲಿ ರಷ್ಯಾದ ಇಯಾನ್ ನೆಪೊಮ್‌ನಿಶಿ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದರು.
ಮಹಿಳಾ ವಿಭಾಗದಲ್ಲಿ ಆರ್. ವೈಶಾಲಿ 14ನೇ ಸ್ಥಾನ ಗಳಿಸಿದರೆ, ವಂತಿಕಾ ಅಗರವಾಲ್ 38ನೇ ಸ್ಥಾನ ಮತ್ತು ಪದ್ಮಿಣಿ ರಾವತ್ 49ನೇ ಸ್ಥಾನಕ್ಕೆ ಕುಸಿದರು. ಈ ವಿಭಾಗದಲ್ಲಿ ರಷ್ಯಾದ ಅಲೆಕ್ಸಾಂಡ್ರಾ ಕೊಸ್ತೆನಿಕ್ ಪ್ರಶಸ್ತಿ ಜಯಿಸಿದರು.
ಮುಕ್ತ ವಿಭಾಗದಲ್ಲಿ ಮಿತ್ರಾಭ ಗುಹಾ ಉತ್ತಮ ಸಾಮರ್ಥ್ಯ ತೋರಿ 15ನೇ ಸ್ಥಾನ ಗಳಿಸಿದರು. ವಿದಿತ್ ಗುಜರಾತಿ 45ನೇ ಮತ್ತು ಹರೀಶ್ ಭರತಕೋಟಿ 60ನೇ ಸ್ಥಾನ ಗಳಿಸಿದರು. ಅನುಭವಿ ಪಿ. ಹರಿಕೃಷ್ಣ 99ನೇ ಸ್ಥಾನಕ್ಕೆ ಜಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.