ADVERTISEMENT

ವಿಶ್ವ ಚಾಂಪಿಯನ್‌ನಿಂದ ಡಕಾರ್‌ ರ‍್ಯಾಲಿಯತ್ತ...

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 19:45 IST
Last Updated 25 ಆಗಸ್ಟ್ 2019, 19:45 IST
   

ಐಶ್ವರ್ಯಾ ಪಿಸ್ಸೆ, ವಿಶ್ವ ಮೋಟರ್‌ಸ್ಪೋರ್ಟ್ಸ್‌ನಲ್ಲಿ ಈಗ ಸಂಚಲನ ಮೂಡಿಸಿರುವ ಚತುರೆ. ಮೋಟರ್‌ಸೈಕಲ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಬೆಂಗಳೂರಿನ ಬೆಡಗಿ ಐಶ್ವರ್ಯಾಗೆ ಈಗ ಕೇವಲ 23 ವರ್ಷ. ಈ ಪಟ್ಟಕ್ಕೆ ಏರಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು ಮುಂದೆ ಸಾಗಬೇಕಿರುವ ಹಾದಿ ತೀರಾ ದೊಡ್ಡದಿದೆ. ಸದ್ಯ ಅವರು ಗುರಿ ಇಟ್ಟಿರುವುದು ಡಕಾರ್‌ ರ‍್ಯಾಲಿಯತ್ತ...

15 ದಿನಗಳ ಹಿಂದಷ್ಟೇ ವಿಶ್ವ ಮೋಟರ್‌ಸೈಕಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಹೆಸರನ್ನು ಮೊದಲ ಸ್ಥಾನದಲ್ಲಿರಿಸಿದ ಅವರಿಗೆ ಅದು ಅತ್ಯಂತ ಭಾವುಕ ಮತ್ತು ರೋಚಕ ಕ್ಷಣವಾಗಿತ್ತು.

ಏಕೆಂದರೆ ಕಳೆದ ವರ್ಷ ರೇಸ್ ಟ್ರ್ಯಾಕ್‌ನಲ್ಲೇ ಜಾರಿಬಿದ್ದಿದ್ದ ಐಶ್ವರ್ಯಾ ಅವರ ಕಾಲರ್‌ ಬೋನ್‌ ಮುರಿದಿತ್ತು. ನೀವಿನ್ನೂ ಕೆಲ ತಿಂಗಳು ಬೈಕ್ ಓಡಿಸುವ ಹಾಗೇ ಇಲ್ಲ ಎಂಬುದು ವೈದ್ಯರ ಸೂಚನೆಯಾಗಿತ್ತು. ಆದರೆ ಕೆಲವೇ ವಾರಗಳಲ್ಲಿ ಈ ಋತುವಿನ ರೇಸ್ ಆರಂಭವಾಗಲಿತ್ತು. ಬೈಕ್‌ ಮತ್ತು ಟ್ರ್ಯಾಕ್‌ ಅವರನ್ನು ಕರೆಯುತ್ತಲೇ ಇತ್ತು. ಶಸ್ತ್ರಚಿಕಿತ್ಸೆ ಆಗಿ ಕೆಲವೇ ದಿನಗಳಲ್ಲಿ ವೈದ್ಯರ ಎಚ್ಚರಿಕೆಯನ್ನು ಕಡೆಗಣಿಸಿ ಬೈಕ್‌ ಹತ್ತಿ, ಟ್ರ್ಯಾಕ್‌ಗೆ ಇಳಿದರು.

ADVERTISEMENT

ದೇಹಸ್ವಾಸ್ತ್ಯವನ್ನು ಕಡೆಗಣಿಸಿ ಈ ಋತುವಿನ ನಾಲ್ಕೂ ರೇಸ್‌ಗಳಲ್ಲಿ ಅವರು ಆತ್ಮವಿಶ್ವಾಸದಿಂದಲೇ ಬೈಕ್‌ ಆಕ್ಸಿಲೇಟರ್‌ನ ಕಿವಿ ಹಿಂಡಿದ್ದರು. ಅವರ ಬೈಕ್‌ ಅಹ ಅವರ ತುಡಿತಕ್ಕೆ ಸರಿಯಾಗಿ ಸ್ಪಂದಿಸಿತ್ತು. ನಾಲ್ಕನೇ ರೇಸ್ ಮುಗಿದಾಗ ಐಶ್ವರ್ಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಅಪಘಾತದಲ್ಲಿ ಗಾಯಗೊಂಡಿದ್ದಾಗ, ರೇಸಿಂಗ್‌ ಅಧ್ಯಾಯ ಮುಗಿಯಿತೇನೋ ಎಂದು ಭಯವಾಗಿತ್ತು. ಆದರೆ ಭಂಡ ಧೈರ್ಯದಿಂದ ಟ್ರ್ಯಾಕ್‌ಗೆ ಇಳಿದೆ. ಈಗ ಚಾಂಪಿಯನ್ ಆಗಿರುವುದಕ್ಕೆ ನನಗೇ ಆಶ್ಚರ್ಯವಾಗುತ್ತಿದೆ. ಆದರೆ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂದಾಗ ಆ ನೋವು–ಆತಂಕವೆಲ್ಲಾ ಮರೆಯಾಗುತ್ತದೆ ಎಂದು ಐಶ್ವರ್ಯಾ ಭಾವುಕರಾಗುತ್ತಾರೆ.

‘ಭಾರತದಲ್ಲಿ ಮಹಿಳೆಯರಿಗೆ ಮೋಟರ್‌ ಸ್ಪೋರ್ಟ್ಸ್‌ನಲ್ಲಿ ಉತ್ತೇಜನ ಕಡಿಮೆ. ಇದರ ಮಧ್ಯೆಯೂ ಹಲವು ಯುವತಿಯರು ಸ್ಪೋರ್ಟ್ಸ್‌ ಬೈಕ್‌ನ ಸಾಂಗತ್ಯ ಬೆಳೆಸಿಕೊಂಡಿದ್ದಾರೆ. ಆದರೆ ಅವರಲ್ಲಿ ಬಹುಪಾಲು ಮಂದಿ ಅದನ್ನು ಹವ್ಯಾಸಕ್ಕಷ್ಟೇ ಸೀಮಿತಗೊಳಿಸಿಕೊಂಡಿದ್ದಾರೆ. ನನ್ನ ಜತೆ ತರಬೇತಿ ಪಡೆದವರಲ್ಲೂ ಬಹುತೇಕರು ಹವ್ಯಾಸದ ಮಿತಿಯನ್ನು ಮೀರಲೇ ಇಲ್ಲ. ಆದರೆ ನಾನು ಹಾಗೆ ಆಗಲಿಲ್ಲ. ಬೈಕ್‌ ಮತ್ತು ಟ್ರ್ಯಾಕ್‌ ಅನ್ನು ನಾನು ವೃತ್ತಿಪರವಾಗಿ ಸ್ವೀಕರಿಸಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆಯಿದೆ’ ಎಂಬುದು ಅವರ ಮಾತು. ಐಶ್ವರ್ಯಾ ಅವರ ಮುಂದಿನ ಗುರಿ ಡಕಾರ್‌ ರ‍್ಯಾಲಿ. ಹಲವು ದೇಶಗಳನ್ನು ಹಾದುಹೋಗುವ, ಮರಳುಗಾಡಿನಲ್ಲಿ ಹಾದಿ ತಪ್ಪಿಸುವ ಈ ರ್‍ಯಾಲಿ ಜಗತ್ತಿನ ಮೋಟರ್‌ ಸ್ಪೋರ್ಟ್ಸ್‌ನಲ್ಲೇ ಅತ್ಯಂತ ಕಠಿಣವಾದ ಸ್ಪರ್ಧೆ ಎನಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ಬಹುತೇಕ ಸ್ಪರ್ಧಿಗಳು ರ‍್ಯಾಲಿಯನ್ನು ಪೂರ್ಣಗೊಳಿಸುವುದೇ ಇಲ್ಲ.ಈ ರ್‍ಯಾಲಿಗೆ ಆಯ್ಕೆಯಾಗಲು ಐಶ್ವರ್ಯಾ ಸಿದ್ಧತೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.