ಟಿರಾನಾ (ಅಲ್ಬೇನಿಯಾ), (ಪಿಟಿಐ): ಭಾರತದ ಮಾನಸಿ ಅಹ್ಲಾವತ್ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಆದರೆ ಪುರುಷರ ಫ್ರೀಸ್ಟೈಲ್ ಮತ್ತು ಗ್ರೀಕೊ ರೋಮನ್ ಕುಸ್ತಿಪಟುಗಳು ನಿರಾಸೆ ಮೂಡಿಸಿ ಬರಿಗೈಲಿ ಮರಳುವಂತಾಯಿತು.
ಮಹಿಳೆಯರ 59 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿದ ಮಾನಸಿ, ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಕೆನಡಾದ ಲಾರೆನ್ಸ್ ಬಿಯುರ್‌ಗಾರ್ಡ್ ಅವರನ್ನು 5–0 ಯಿಂದ ಸೋಲಿಸಿದರು. ಮಾನಸಿ ಅವರು ಸರ್ ಚೋಟುರಾಮ್ ಅಖಾಡದಲ್ಲಿ ಮನದೀಪ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಇದಕ್ಕೆ ಮೊದಲು ಅವರು ಬುಧವಾರ ನಡೆದ ಸೆಮಿಫೈನಲ್‌ನಲ್ಲಿ 1–4ರಲ್ಲಿ ಮಂಗೋಲಿಯಾದ ಸುಖೀ ಸೆರೆನ್‌ಚಿಮೆಡ್ ಎದುರು ಸೋಲನುಭವಿಸಿದ್ದರು.
ಮನಿಷಾ ಭಾನವಾಲಾ ಅವರು 65 ಕೆ.ಜಿ. ವಿಭಾಗದಲ್ಲಿ ಪದಕದ ಸನಿಹ ಬಂದಿದ್ದರು. ಆದರೆ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ ಜಪಾನ್‌ನ ಮಿವಾ ಮೊರಿಕಾವಾ ಎದುರು 2–8 ರಲ್ಲಿ ಸೋಲನುಭವಿಸಿದರು. ಮನಿಷಾ, ರೆಪೆಷಾಜ್ ಸುತ್ತಿನಲ್ಲಿ 7–2 ರಿಂದ ಮಂಗೋಲಿಯಾದ ಎನ್ಕ್‌ಜಿನ್ ಅವರನ್ನು ಮಣಿಸಿ ಪದಕದ ಸುತ್ತಿಗೆ ತಲುಪಿದ್ದರು.
ಪುರುಷರ ಫ್ರೀಸ್ಟೈಲ್‌ನಲ್ಲಿ ಸಂದೀಪ್ ಮಾನ್ (92 ಕೆ.ಜಿ) ರೆಪೆಷಾಜ್ ಸುತ್ತಿಗೆ ತಲುಪಿದರೂ, ತಾಂತ್ರಿಕ ಕೌಶಲದ ಆಧಾರದಲ್ಲಿ ಸ್ಲೊವಾಕಿಯಾದ ಟಿರ್ಬೆಕ್ ಸಾಕುಕ್ಲೊವ್ ಅವರೆದುದು ಸೋತರು. 61 ಕೆ.ಜಿ. ಸ್ಪರ್ಧೆಯಲ್ಲಿ ಉದಿತ್, 70 ಕೆ.ಜಿ. ವಿಭಾಗದಲ್ಲಿ ಮನಿಷ್ ಗೋಸ್ವಾಮಿ, 70 ಕೆ.ಜಿ. ವಿಭಾಗದಲ್ಲಿ ಪರ್ವಿಂದರ್ ಸಿಂಗ್ ಅವರು ಪದಕ ಸುತ್ತಿಗೆ ತಲುಪಲು ವಿಫಲರಾದರು.
ಗ್ರೀಕೊ ರೋಮನ್ ವಿಭಾಗದಲ್ಲೂ ಭಾರತದ ಮಲ್ಲರು ನಿರಾಸೆ ಮೂಡಿಸಿದರು. ಸಂಜೀವ್ (55 ಕೆ.ಜಿ), ಚೇತನ್ (63 ಕೆ.ಜಿ), ಅಂಕಿತ್ ಗುಲಿಯಾ (72 ಕೆ.ಜಿ) ಮತ್ತು ರೋಹಿತ್ ದಹಿಯಾ (82 ಕೆ.ಜಿ) ಬೇಗನೇ ನಿರ್ಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.