ನವದೆಹಲಿ : ಪ್ರತಿಭಟನಾನಿರತ ಕುಸ್ತಿಪಟುಗಳು ತಾವು ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಕುರಿತು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಬರೆದಿದ್ದ ಪತ್ರವೊಂದನ್ನು ಕುಸ್ತಿಪಟು ವಿನೇಶಾ ಫೋಗಟ್ ಬಹಿರಂಗಪಡಿಸಿದ್ದಾರೆ.
ವಿನೇಶಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಈ ಪತ್ರದಲ್ಲಿ ದಿನಾಂಕದ ಉಲ್ಲೇಖವಿಲ್ಲ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆಯಲಾಗಿದೆ.
‘ಈ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಕುಸ್ತಿಪಟುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಾಗಿ ನಡೆಯುವ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಮುನ್ನ ಪೂರ್ವಸಿದ್ಧತೆಗಾಗಿ ಸಮಯಾವಕಾಶ ನೀಡಲು ಕೋರುತ್ತೇವೆ‘ ಎಂದು ಬರೆಯಲಾಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಜರಂಗ್ ಪೂನಿಯಾ (65ಕೆ.ಜಿ), ಸಾಕ್ಷಿ ಮಲಿಕ್ (62 ಕೆ.ಜಿ), ಸತ್ಯವ್ರತ್ ಕಾದಿಯಾನ್ (97 ಕೆ.ಜಿ), ಸಂಗೀತಾ ಫೋಗಟ್ (57ಕೆ.ಜಿ), ಜಿತೇಂದರ್ ಕುಮಾರ್ (86ಕೆ.ಜಿ) ಮತ್ತು ವಿನೇಶಾ ಫೋಗಟ್ ಅವರಿಗೆ ಕಾಲಾವಕಾಶ ನೀಡುವಂತೆ ಕೋರಲಾಗಿತ್ತು. ಈ ಆರು ಕುಸ್ತಿಪಟುಗಳೂ ಪತ್ರಕ್ಕೆ ಸಹಿ ಹಾಕಿದ್ದಾರೆ.
‘ ಈ ಕುಸ್ತಿಪಟುಗಳಿಗೆ 2023ರ ಆಗಸ್ಟ್ 10ರ ನಂತರ ಟ್ರಯಲ್ಸ್ ಆಯೋಜಿಸಬೇಕು‘ ಎಂದೂ ಮನವಿ ಮಾಡಲಾಗಿತ್ತು.
’ಧರನಿನಿರತ ಕುಸ್ತಿಪಟುಗಳು ಟ್ರಯಲ್ಸ್ ದಿನಾಂಕ ಮುಂದೂಡಲು ಮಾತ್ರ ಕೋರಿದ್ದರು. ಕಳೆದ ಆರು ತಿಂಗಳುಗಳಿಂದ ಧರಣಿಯಲ್ಲಿ ನಿರತರಾಗಿರುವುದರಿಂದ ಅಭ್ಯಾಸಕ್ಕಾಗಿ ಹೆಚ್ಚು ಸಮಯ ಸಿಕ್ಕಿಲ್ಲ. ಆದ್ದರಿಂದ ಈ ಮನವಿ ಮಾಡಿದ್ದೆವು‘ ಎಂದು ವಿನೇಶಾ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.