ADVERTISEMENT

ಅಡ್‌ಹಾಕ್‌ ಸಮಿತಿಯಿಂದ ಕುಸ್ತಿ ಚಟುವಟಿಕೆಗೆ ಚಾಲನೆ: ಅಭ್ಯಾಸ ಆರಂಭಿಸಿದ ಕುಸ್ತಿಪಟುಗಳು

ಪಿಟಿಐ
Published 8 ಮೇ 2023, 19:43 IST
Last Updated 8 ಮೇ 2023, 19:43 IST
ಬಜರಂಗ್ ಪೂನಿಯಾ
ಬಜರಂಗ್ ಪೂನಿಯಾ   

ನವದೆಹಲಿ: ಭಾರತದ ಪ್ರಮುಖ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್ ಅವರು ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ಗೆ ಸಿದ್ಧತೆ ನಡೆಸಲು ಸೋಮವಾರ ಮ್ಯಾಟ್‌ನಲ್ಲಿ ಅಭ್ಯಾಸ ಆರಂಭಿಸಿದರು.

ಇದೇ ವೇಳೆ ಭಾರತ ಒಲಿಂಪಿಕ್‌ ಸಂಸ್ಥೆ ನಿಯೋಜಿಸಿರುವ ಅಡ್‌–ಹಾಕ್‌ ಸಮಿತಿಯು ಏಷ್ಯನ್‌ ಚಾಂಪಿಯನ್‌ಷಿಪ್‌ (17 ಮತ್ತು 23 ವರ್ಷದೊಳಗಿನವರ) ಟ್ರಯಲ್ಸ್‌ಗೆ ದಿನಾಂಕ ಅಂತಿಮಗೊಳಿಸುವ ಮೂಲಕ ಕುಸ್ತಿ ಚಟುವಟಿಕೆಗಳ ಪುನರಾರಂಭಕ್ಕೆ ಚಾಲನೆ ಕೊಟ್ಟಿದೆ.

15 ದಿನಗಳಲ್ಲಿ ಇದೇ ಮೊದಲ ಬಾರಿ ಬಜರಂಗ್ ಮತ್ತು ವಿನೇಶಾ ಅವರು ಸಹ ಕುಸ್ತಿಪಟುಗಳ ಜೊತೆ ಮ್ಯಾಟ್‌ ಮೇಲೆ ಅಭ್ಯಾಸ ನಡೆಸಿದರು.

ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಕೆಲವು ದಿನಗಳಿಂದ ಬಜರಂಗ್‌, ಸಾಕ್ಷಿ ಮಲಿಕ್, ವಿನೇಶಾ ಮತ್ತಿತರರು ಜಂತರ್‌ ಮಂಥರ್‌ನಲ್ಲಿ ಪ್ರತಿಭಟನೆಗೆ ಕುಳಿತ ನಂತರ ಕುಸ್ತಿ ಅಭ್ಯಾಸದ ಮಾತು ದೂರವಾಗಿತ್ತು.

ಜನವರಿಯಿಂದೀಚೆಗೆ ಬಜರಂಗ್ ಮತ್ತು ವಿನೇಶಾ ಅವರು ಯಾವುದೇ ಅಂತರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಿಲ್ಲ. ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಈ ಇಬ್ಬರು ಕುಸ್ತಿಪಟುಗಳ ಮನವಿ ಮೇರೆಗೆ ತರಬೇತಿ ಮತ್ತು ಅಂತರರಾಷ್ಟ್ರೀಯ ಅನುಭವ ಉದ್ದೇಶದಿಂದ ವಿದೇಶ ಪ್ರವಾಸಕ್ಕೆ ಸಮ್ಮತಿ ನೀಡಿದೆ. ಆದರೆ ಅವರು ಹೋಗಿರಲಿಲ್ಲ.

‘ಪಟ್ಟು’ ಸಡಿಲಿಸಿದ ಪೈಲ್ವಾನರು: ತಮ್ಮ ಬೇಡಿಕೆ ಈಡೇರುವವರೆಗೆ ತಾವು ಯಾವುದೇ ತರಬೇತಿ ಅಥವಾ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ತೀರಾ ಇತ್ತೀಚಿನವರೆಗೂ ತಾರಾ ಕುಸ್ತಿಪಟುಗಳು ಪಟ್ಟುಹಿಡಿದಿದ್ದರು. ಆದರೆ, ‘ಇನ್ನು ಮುಂದೆ ತರಬೇತಿ ಆರಂಭಿಸುತ್ತೇವೆ ಮತ್ತು ಯಾವುದೇ ಟೂರ್ನಿ ತಪ್ಪಿಸಿಕೊಳ್ಳುವುದಿಲ್ಲ’ ಎಂದು ವಿನೇಶಾ ಭಾನುವಾರ ಹೇಳಿದ್ದಾರೆ.

ಸಮೀಪದ ಕ್ರೀಡಾಂಗಣದಲ್ಲಿ ಬಜರಂಗ್ ಅವರು ಜಿತೇಂದರ್‌ ಕಿನ್ಹಾ ಜೊತೆ ಅಭ್ಯಾಸ ನಡೆಸಿದರು. ವಿನೇಶಾ ಅವರು ತಮ್ಮ ಸೋದರಿ ಸಂಗೀತಾ ಫೋಗಟ್ ಮತ್ತು ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌  ಅವರೊಡನೆ ತಾಲೀಮಿನಲ್ಲಿ ತೊಡಗಿದರು. ಸತ್ಯವ್ರತ ಕಡಿಯಾನ್ ಅವರು ತಮ್ಮ ಸಹೋದರ ಸೋಮವೀರ್ ಜೊತೆ ಕುಸ್ತಿ ಅಭ್ಯಾಸ ನಡೆಸಿದರು.

‘ಧರಣಿ ಕುಳಿತುಕೊಳ್ಳುವ ಒಂದು ದಿನ ಹಿಂದಿನವರೆಗೂ ನಾವು ಮ್ಯಾಟ್‌ ಮೇಳೆ ಅಭ್ಯಾಸ ನಡೆಸಿದ್ದೆವು. 15 ದಿನಗಳಿಂದ ನಮಗೆ ಬಿಡುವೇ ಸಿಗುತ್ತಿರಲಿಲ್ಲ. ಬೆಂಬಲಿಗರ ಜೊತೆ ಸಭೆ, ರಾತ್ರಿಯವರೆಗೂ ಮಾತುಕತೆ ಕಾರಣ ಅಭ್ಯಾಸ ನಡೆಸುವುದು ಸಾಧ್ಯವಿರಲಿಲ್ಲ’ ಎಂದು ಕುಸ್ತಿಪಟುವೊಬ್ಬರು ತಿಳಿಸಿದರು.

ಆದರೆ ಬಿಷೆಕ್‌ನಲ್ಲಿ (ಕಿರ್ಗಿಸ್ತಾನ) ಜೂನ್‌ 1ರಿಂದ 4ರವರೆಗೆ ನಡೆಯಲಿರುವ ಯುಡಬ್ಲ್ಯುಡಬ್ಲ್ಯು ರ‍್ಯಾಂಕಿಂಗ್ ಕುಸ್ತಿ ಸರಣಿ ಸ್ಪರ್ಧೆಗೆ ಭಾರತ ತಂಡವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಏಪ್ರಿಲ್‌ನಲ್ಲಿ ಕಜಕಸ್ತಾನದ ಅಸ್ತಾನಾದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ತಂಡವನ್ನೇ ಅಲ್ಲಿಗೂ ಆಯ್ಕೆ ಮಾಡಲಾಗಿದೆ. ಭಾರತದ ಸ್ಪರ್ಧಿಗಳು ಏಷ್ಯನ್‌ ಕೂಟದಲ್ಲಿ 14 ಪದಕಗಳನ್ನು ಗೆದ್ದುಕೊಂಡಿದ್ದರು.

ಪ್ರತಿಭಟನೆಯಲ್ಲಿದ್ದ ಕಾರಣ ಬಜರಂಗ್, ವಿನೇಶಾ, ಸಾಕ್ಷಿ, ಸತ್ಯವ್ರತ್‌ ಮತ್ತು ಸಂಗೀತಾ ಅವರು ಅಸ್ತಾನಾದಲ್ಲಿ ಪಾಲ್ಗೊಂಡ ಭಾರತ ತಂಡದಲ್ಲಿ ಇರಲಿಲ್ಲ.‌

ಚಟುವಟಿಕೆಗೆ ಚಾಲನೆ

ಕುಸ್ತಿ ಫೆಡರೇಷನ್‌ ದೈನಂದಿನ ವ್ಯವಹಾರಗಳನ್ನು ನಡೆಸಲು ಐಒಎ ರೂಪಿಸಿರುವ ಅಡ್‌ಹಾಕ್‌ ಸಮಿತಿ, ತರಬೇತುದಾರರ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದೆ.

ಅಡ್‌ಹಾಕ್ ಸಮಿತಿ ಸದಸ್ಯೆಯಾಗಿರುವ ರಾಷ್ಟ್ರೀಯ ಶೂಟಿಂಗ್ ಕೋಚ್‌ ಸುಮಾ ಶೀರೂರ್‌ ಅವರು ಉಪಸ್ಥಿತರಿರಲಿಲ್ಲ. ಆದರೆ ಮತ್ತೊಬ್ಬ ಸದಸ್ಯ ಭೂಪೇಂದ್ರ ಸಿಂಗ್‌ ಬಾಜ್ವಾ ಅವರು ಕೋಚ್‌ಗಳ ಜೊತೆ ಮುಂದಿನ ದಾರಿ ಏನಿರಬೇಕೆಂದು ಚರ್ಚಿಸಿದರು.

ಬಿಷೆಕ್‌ನಲ್ಲಿ ಮೇ 17ರಿಂದ 19ರವರೆಗೆ ನಡೆಯುವ ಏಷ್ಯ 17 ಮತ್ತು 23 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ಗೆ ಇದೇ ತಿಂಗಳ 17 ರಿಂದ 19ರವರೆಗೆ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಟ್ರಯಲ್ಸ್‌ ನಡೆಸಲು ಸಮಿತಿ ನಿರ್ಧರಿಸಿದೆ.

ಸೀನಿಯರ್ ಕುಸ್ತಿಪಟುಗಳಿಗೆ ರಾಷ್ಟ್ರೀಯ ಶಿಬಿರ ಪುನರಾರಂಭಿಸುವ ಬಗ್ಗೆಯೂ ಮಾತುಕತೆ ನಡೆಯಿತು. ಈ ಬಗ್ಗೆ ಕ್ರೀಡಾ ಪ್ರಾಧಿಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.