ಡಾ. ಎಚ್. ಎಸ್. ಅನುಪಮಾ
ಮಹಿಳಾ ಕುಸ್ತಿಪಟುಗಳು ಗಂಡಾಳಿಕೆಯ ದಮನದ ಕಥನವಾಗಿ ಈಗಲೂ ಧ್ವನಿ ಎತ್ತುತ್ತಿರುವಾಗ 1911ರ ಸುಮಾರಿನಲ್ಲಿಯೇ ಪಂಜಾಬ್‌ನ ಮಿರ್ಜಾಪುರದ ಕುಸ್ತಿಪಟುಗಳ ಮನೆಯಲ್ಲಿ ಕುಸ್ತಿ ನೋಡುತ್ತ, ಅಖಾಡಕ್ಕಿಳಿಯುವ ಕನಸು ಕಾಣುತ್ತ ಬೆಳೆದಿದ್ದವರು ಹಮೀದಾ ಬಾನು ಅವರ ಬದುಕಿನ ಪುಟಗಳು ಕಣ್ಣರಳುವಂತೆ ಮಾಡುತ್ತವೆ.
ಎದೆಯುಬ್ಬಿಸಿ, ತೊಡೆ ತಟ್ಟಿ ಎದುರಾಳಿಯನ್ನು ಆಹ್ವಾನಿಸುವ ಕುಸ್ತಿ ಕಣದಲ್ಲಿ ಏಣಿ ಶ್ರೇಣಿಯೇ ಉಸಿರಾದ ಗಂಡುಮೌಲ್ಯಗಳು ಮೆರೆಯುವುದು ಏನೂ ಅಚ್ಚರಿಯಲ್ಲ. ಗಂಡುಹಿರಿಮೆಯ ರೋಗಕ್ಕೆ ಬಲಶಾಲಿ ‘ಅಬಲೆ’ಯರು ಬಲಿಯಾಗುವುದೂ ಹೊಸತಲ್ಲ. ನಂಬಿ, 2004ರವರೆಗೆ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ ಪಂದ್ಯಗಳಿರಲಿಲ್ಲ. ದೈಹಿಕವಾಗಿ ಬಲಿಷ್ಠರಾಗಿದ್ದರೂ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ತಡೆಯಲಾಗಲಿಲ್ಲ. ಹೆಣ್ಣೆಂಬ ಕಾರಣಕ್ಕೆ ಹಿಂಸೆ, ಹೀಯಾಳಿಕೆಗಳನ್ನು ಅವರೀಗಲೂ ಎದುರಿಸುತ್ತಿದ್ದಾರೆ. ಅವಕಾಶ, ಅಧಿಕಾರದ ನೆಪದಲ್ಲಿ ದೌರ್ಜನ್ಯ ಅವ್ಯಾಹತವಾಗಿ ಮುಂದುವರೆದಿದೆ.
ಈ ಹೇಳಿಕೆಗೆ ಇಂಬುಕೊಡುವಂತೆ ನಾವು ಮರೆತ ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನು ಬೇಗಂ ಬಗೆಗೆ ಒಂದಷ್ಟು ಮಾಹಿತಿ ಪ್ರಕಟವಾಗಿದೆ. ಪೇಪರ್‌ಕ್ಲಿಪ್ ಮತ್ತು ಬಿಬಿಸಿ ಜಾಲತಾಣಗಳು ಶತಮಾನದ ಹಿಂದೆ ಭಾರತದ ಮುಸ್ಲಿಂ ಹುಡುಗಿಯೊಬ್ಬಳು ಕುಸ್ತಿಪಟುವಾಗಲು ಯತ್ನಿಸಿ, ಮನೆ ಬಿಟ್ಟುಬಂದು, ಉಸ್ತಾದನನ್ನು ತಾನೇ ಹುಡುಕಿಕೊಂಡು ಅಜೇಯಳಾಗಿ ಮೆರೆದ ರೋಚಕ ಕಥನವನ್ನು ವೃತ್ತಪತ್ರಿಕೆಯ ವರದಿಗಳಿಂದ ಹೆಕ್ಕಿ ತೆಗೆದಿವೆ. ಮಾಹಿತಿ ಅಸ್ಪಷ್ಟವಾಗಿದ್ದರೂ ಅವಳ ಬದುಕು, ಸಾಧನೆಗಳು ದಿಙ್ಮೂಢಗೊಳಿಸುವಂತಿವೆ.
1911ರ ಸುಮಾರು ಪಂಜಾಬ್‌ನ ಮಿರ್ಜಾಪುರದ ಕುಸ್ತಿಪಟುಗಳ ಮನೆಯಲ್ಲಿ ಕುಸ್ತಿ ನೋಡುತ್ತ, ಅಖಾಡಕ್ಕಿಳಿಯುವ ಕನಸು ಕಾಣುತ್ತ ಹಮೀದಾ ಬಾನು ಬೆಳೆದಳು. ಸಾಂಪ್ರದಾಯಿಕ ಪರಿಸರದಲ್ಲಿ ಕುಸ್ತಿಪಟುವಾಗುವುದು ಕಷ್ಟ ಎಂದರಿವಾದದ್ದೇ ಮನೆಬಿಟ್ಟು ಅಮೃತಸರಕ್ಕೆ ಬಂದಳು. ಸಲಾಂ ಪೈಲ್ವಾನ ಎಂಬವನ ಮನವೊಲಿಸಿ ತರಬೇತಿ ಪಡೆಯತೊಡಗಿದಳು. 1937ರಲ್ಲಿ ಮೊದಲ ಬಾರಿ ಅಖಾಡಕ್ಕಿಳಿದಾಗ ಮಹಿಳಾ ಪೈಲ್ವಾನರಿರದ ಕಾರಣ ಪುರುಷರೊಡನೆ ಸೆಣಸಬೇಕಾಯಿತು. ಪರ್ದಾದಲ್ಲಿರಬೇಕಾದ ಭಾರತೀಯ ನಾರಿ, ಅದರಲ್ಲೂ ಮುಸ್ಲಿಂ ಮಹಿಳೆ ಪೈಲ್ವಾನರನ್ನು ಕೆಡವಿ, ಗುದ್ದಿ, ಎತ್ತಿ ಒಗೆಯುವುದೆಂದರೆ?! ಅಮೃತಸರವೆಂಬ ಕುಸ್ತಿಯ ತವರು ಹುಬ್ಬುಗಂಟಿಕ್ಕಿತು. ಸಂಪ್ರದಾಯವಾದಿಗಳ ಕಣ್ಣು ಕೆಂಪಾದವು. ಬದುಕಲು ಕಷ್ಟವಾದಾಗ ಹಮೀದಾ ಅಲಿಘರಕ್ಕೆ ಬಂದಳು. ದೆಹಲಿಯ ಕೆಲವು ಪೈಲ್ವಾನರನ್ನು ಸೋಲಿಸಿದಳು.
ಲಾಹೋರಿನ ಫಿರೋಜ್ ಖಾನನೊಡನೆ ಆಗ್ರಾದಲ್ಲಿ ನಡೆದ ಪಂದ್ಯ ಅವಳನ್ನು ಪ್ರಖ್ಯಾತಗೊಳಿಸಿತು. ಹೆಂಗಸಿನೊಡನೆ ಕುಸ್ತಿಯೇ ಎಂದು ಮೂದಲಿಸಿದ ಫಿರೋಜ್‌ನನ್ನು ಕೆಲವೇ ನಿಮಿಷಗಳಲ್ಲಿ ಕೆಡವಿದಳು. ಚುರುಕುತನದ ಪಟ್ಟುಗಳಿಂದ ದಿನಬೆಳಗಾಗುವುದರಲ್ಲಿ ಖ್ಯಾತಳಾದಳು. ಒಬ್ಬರಾದ ಮೇಲೊಬ್ಬರನ್ನು ಮಣಿಸಿದಳು.
ಗಂಡಸರಿಗಿಂತ ಚೆನ್ನಾಗಿ ಕುಸ್ತಿ ಮಾಡುವ ಹೆಣ್ಣು! ಅರಗಿಸಿಕೊಳ್ಳಲು ಸಮಾಜಕ್ಕೆ ಕಷ್ಟವಾಯಿತು. ಅವಮಾನಿಸುವ ಬೈಗುಳಗಳು ತೂರಿಬಂದವು. ಕೋಪ ಬಂದರೂ ತಡೆದುಕೊಂಡ ಹಮೀದಾ ಅಖಾಡದಲ್ಲಿ ಗೆದ್ದು ಉತ್ತರಿಸಿದಳು. ‘ಮುಂಚೆನೇ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿರ‍್ತಾಳೆ. ಎದುರಾಳಿಗಳು ಬೇಕೆಂದೇ ಸೋಲ್ತಾರೆ’ ಎಂದು ಹುಯಿಲೆಬ್ಬಿಸಲಾಯಿತು. ಪುಣೆಯ ರಾಮಚಂದ್ರ ಸಾಳುಂಕೆಯೊಡನೆ ಪಂದ್ಯ ಏರ್ಪಟ್ಟಾಗ ಕುಸ್ತಿ ಒಕ್ಕೂಟ ತಕರಾರೆತ್ತಿ ಪಂದ್ಯವನ್ನು ರದ್ದುಗೊಳಿಸಿತು. ಕೊಲ್ಲಾಪುರದ ಪೈಲ್ವಾನನೊಬ್ಬನನ್ನು ಸೋಲಿಸಿದ ಬಳಿಕ ಅವನ ಅಭಿಮಾನಿಗಳು ಕಲ್ಲೆಸೆದು ಗದ್ದಲವೆಬ್ಬಿಸಿದರು. ಗುಂಪು ಚದುರಿಲು ಪೊಲೀಸರು ಬರಬೇಕಾಯಿತು. ಮತ್ತೊಮ್ಮೆ ಅವಳ ಪಂದ್ಯದ ಬಳಿಕ ಕುಂಟ ಮತ್ತು ಕುರುಡನ ನಡುವೆ ಕುಸ್ತಿ ಪಂದ್ಯ ಏರ್ಪಡಿಸಿ ಅವಳ ಪಂದ್ಯವನ್ನು ಮನೋರಂಜನೆಯ ಡಮ್ಮಿ ಪಂದ್ಯವೆಂಬಂತೆ ಬಿಂಬಿಸಲಾಯಿತು. ಅಷ್ಟಾದರೂ ಅವಳ ಜನಪ್ರಿಯತೆ ಎಷ್ಟಿತ್ತೆಂದರೆ 1944ರಲ್ಲಿ ಗೂಂಗಾ ಪೈಲ್ವಾನ್ ಜೊತೆಗಿನ ಕುಸ್ತಿ ನೋಡಲು ಮುಂಬಯಿಯಲ್ಲಿ 20,000 ಜನ ಸೇರಿದ್ದರು! ಕೊನೆಯ ಗಳಿಗೆಯಲ್ಲಿ ಪೈಲ್ವಾನ್ ಬೃಹತ್ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಸಿದ್ಧತೆ ನಡೆಸಲು ಸಮಯ ಬೇಕೆಂದು ಪಂದ್ಯ ರದ್ದುಗೊಳಿಸಿದ. ಬಂದ ಜನ ಕೋಪಗೊಂಡು ತಿರುಗಿ ಹೋದರೆಂದು ಬಾಂಬೆ ಕ್ರಾನಿಕಲ್ ಬರೆಯಿತು.
ಕ್ರಾಪ್‌ಕಟ್‌ನ ಕೇಶವಿನ್ಯಾಸ, ಯುದ್ಧ ಕವಚದಂತಹ ಅಂಗಿ ತೊಡುತ್ತಿದ್ದ ಹಮೀದಾಳ ಎತ್ತರ, ತೂಕ, ಊಟ ಎಲ್ಲವೂ ದೇಶ–ವಿದೇಶಗಳಲ್ಲಿ ಸುದ್ದಿಯಾದವು. ದಿನಕ್ಕೆಂಟು ತಾಸು ನಿದ್ರೆ, 6 ತಾಸು ತಾಲೀಮು, 10 ತಾಸು ಊಟ ಎಂದೆಲ್ಲ ಕತೆಗಳು ಹಬ್ಬಿದವು. ಐದಡಿ ಮೂರಿಂಚು ಎತ್ತರವಿದ್ದ ಹಮೀದಾ 108 ಕೆ.ಜಿ. ತೂಗುತ್ತಿದ್ದಳು. ಪ್ರತಿದಿನ 5.6 ಲೀಟರ್ ಹಾಲು, 2.8 ಲೀಟರ್ ಸೂಪು, 1.8 ಲೀಟರ್ ಜ್ಯೂಸ್ ಕುಡಿಯುತ್ತಿದ್ದಳು. ದಿನವೂ ಒಂದು ಕೋಳಿ, ಒಂದು ಕೆ.ಜಿ ಮಟನ್, ಒಂದು ಕೆ.ಜಿ ಬಾದಾಮಿ, ಅರ್ಧ ಕೆ.ಜಿ ಬೆಣ್ಣೆ, 6 ಮೊಟ್ಟೆ, ಎರಡು ದೊಡ್ಡ ಬ್ರೆಡ್‌ಲೋಫ್, ಎರಡು ತಟ್ಟೆ ಬಿರಿಯಾನಿ ತಿನ್ನುತ್ತಿದ್ದಳು.
ಆ ವೇಳೆಗೆ 320 ಪಂದ್ಯಗಳಲ್ಲಿ ಅಜೇಯಳಾಗುಳಿದ ‘ಅಲಿಘರದ ಅಮೆಜಾನ್’, ‘ನನ್ನನ್ನು ಸೋಲಿಸಿದವರನ್ನು ಮದುವೆಯಾಗುವೆ’ನೆಂದು ಫೆಬ್ರುವರಿ 1954ರಲ್ಲಿ ಪ್ರಕಟಿಸಿದಳು. ಬಹಿರಂಗ ಸವಾಲಿಗೆ ಉತ್ತರವಾಗಿ ಪಾಟಿಯಾಲಾ, ಕೊಲ್ಕತ್ತದಿಂದ ಪೈಲ್ವಾನರು ಬಂದು ಸೋತುಹೋದರು. ಮೇ ತಿಂಗಳಲ್ಲಿ ಬರೋಡಾದ ಆಸ್ಥಾನ ಪೈಲ್ವಾನ್ ಛೋಟೆ ಗಾಮಾ ಮತ್ತು ಬಾಬಾ ಪೈಲ್ವಾನರೊಡನೆ ಸೆಣಸಬೇಕಿತ್ತು. ಪಂದ್ಯ ಶುರುವಾಯಿತು. ಗಾಮಾನನ್ನು ಇನ್ನೇನು ಮಣಿಸಿಯೇಬಿಟ್ಟಳು ಎನ್ನುವಷ್ಟರಲ್ಲಿ ‘ಛೇ, ಹೆಂಗಸಿನೊಂದಿಗೆ ಸೆಣಸುವುದೇ?’ ಎಂದಾತ ಹಿಂದೆಗೆದ. ನಂತರ ಬಾಬಾ ಪೈಲ್ವಾನನು ‘ಗೆದ್ದರೆ ಮದುವೆ, ಸೋತರೆ ನಿವೃತ್ತಿ’ ಎಂದು ಘೋಷಿಸಿದ. ಅವನನ್ನು ಒಂದೂವರೆ ನಿಮಿಷದಲ್ಲಿ ಮಣಿಸಿ ನಿವೃತ್ತಿ ಮಾಡಿಸಿದಳು. 1954ರಲ್ಲಿ ರಷ್ಯಾದ ವೆರಾ ಚಿಸ್ತಿಲಿನ್‌ಳನ್ನು ಒಂದೇ ನಿಮಿಷದಲ್ಲಿ ನೆಲಕ್ಕೊರಗಿಸಿದಳು. ಗೆಲುವಿನ ಸಂಭ್ರಮಕ್ಕೆ ಹುಕಿಗೊಂಡು ಯೂರೋಪನ್ನು ಸಂಚರಿಸುವುದಾಗಿ ಪ್ರಕಟಿಸಿಬಿಟ್ಟಳು.
ಅಷ್ಟೇ. ಅದಾದ ಮೇಲೆ ಇದ್ದಕ್ಕಿದ್ದಂತೆ ಕುಸ್ತಿಯ ರಂಗದಿಂದ ಕಾಣೆಯಾದಳು. ಏನಾದಳು, ಎಲ್ಲಿರುವಳೆಂದು ಯಾರಿಗೂ ತಿಳಿಯಲಿಲ್ಲ. ಈಗ ಅಷ್ಟಿಷ್ಟು ವಿಷಯ ಹೊರಬಂದಿದೆ.
ತನ್ನನ್ನು ಕೇಳದೇ ಯುರೋಪಿಗೆ ಹೋಗುವೆನೆಂದು ಪ್ರಕಟಿಸಿದ್ದಕ್ಕೆ ಕೋಪಗೊಂಡ ಸಲಾಂ ಕೈಕಾಲಿನ ಮೂಳೆ ಮುರಿಯುವಂತೆ ಅವಳಿಗೆ ಹೊಡೆದು ಮುಂಬಯಿಯ ಕಲ್ಯಾಣದಲ್ಲಿ ಬಿಟ್ಟು ಅಲಿಘರಕ್ಕೆ ಹೋಗಿಬಿಟ್ಟ. ಅವಳ ಕೈಕಾಲುಗಳ ಬಲಿಷ್ಠಗೊಳಿಸಿದ್ದ ಕಬ್ಬಿಣದ ಬಡಿಗೆಯೇ ಮೂಳೆಯನ್ನೂ ಮುರಿಯಿತು. ವರುಷಗಟ್ಟಲೆ ನಡೆಯಲಾಗಲಿಲ್ಲ. ಮತ್ತೆಂದೂ ಕುಸ್ತಿ ಮಾಡಲಿಲ್ಲ. ಹಮೀದಾ ಗಂಡುಮಗುವೊಂದನ್ನು ಸಾಕುತ್ತಿದ್ದಳು. ಬದುಕು ದುಸ್ತರವಾಯಿತು. ಹಾಲುಹೈನು, ರಸ್ತೆಬದಿ ತಿಂಡಿ ತಿನಿಸು ಮಾರಿ ಮಗನೊಡನೆ ಬದುಕಿದಳು. (ಹಮೀದಾ ಸಲಾಂನನ್ನು ಮದುವೆಯಾಗಿದ್ದಳೆಂಬ ಗಾಳಿಸುದ್ದಿಯಿತ್ತು. ಅವನ ಮಗಳ ಪ್ರಕಾರ ಅವರಿಬ್ಬರೂ ಮದುವೆಯಾಗಿದ್ದರು. ಮಗಳು ಹಮೀದಾಳನ್ನು ಚಿಕ್ಕಮ್ಮನೆಂದೇ ಕರೆಯುತ್ತಿದ್ದಳು. ಹಮೀದಾಳ ಸಾಕುಮಗನ ಪ್ರಕಾರ ಅವರು ಆಪ್ತವಾಗಿದ್ದರು, ಆದರೆ ಮದುವೆಯಾಗಿರಲಿಲ್ಲ. 1985ರ ಆಸುಪಾಸು ತೀರಿಕೊಂಡ ಅವಳ ಕೊನೆಯ ದಿನಗಳು ದಾರುಣವಾಗಿದ್ದವು.)
ಎಲ್ಲರದ್ದೂ ಹೋರಾಟವೇ
ಕುಸ್ತಿ ಭಾರತದ ಜನಪ್ರಿಯ, ಪುರಾತನ ಕ್ರೀಡೆ. ಆದರೆ ಹೆಣ್ಣುಗಳು ಕುಸ್ತಿ ಆಡಿರುವ ಪೌರಾಣಿಕ, ಐತಿಹಾಸಿಕ ದಾಖಲೆಗಳಿಲ್ಲ. ಅಂತಹ ಗಂಡುಲೋಕದಲ್ಲಿ ಅಜೇಯಳಾಗಿ ಮೆರೆದದ್ದು; ದೇಹ ಮುಚ್ಚಿಕೊಳ್ಳದವರು ಹೆಂಗಸರೇ ಅಲ್ಲ ಅಂದುಕೊಳ್ಳುವ ಸಮಾಜದಲ್ಲಿ ಧಾರ್ಮಿಕ ಕಟ್ಟಲೆಗಳನ್ನು ಮೀರಿದ್ದು; ಮದುವೆಯ ಹಂಗಿಲ್ಲದೆ ಸಲಾಂನೊಡನೆ ಬದುಕಿದ್ದು; ಕಷ್ಟನಷ್ಟಗಳು ಬಂದೆರಗಿದಾಗಲೂ ಘನತೆಯ ಬದುಕು ಕಟ್ಟಿಕೊಂಡದ್ದು ಹಮೀದಾಳ ಛಲ, ಸ್ವಾಭಿಮಾನದ ಪ್ರತೀಕವಾಗಿವೆ. ಆದರೆ ಗಂಡು ಗೆಲ್ಲಲಾಗದ, ಗೆದ್ದವನನ್ನು ಮದುವೆಯಾಗುವೆನೆಂಬ ಅವಳ ಸವಾಲನ್ನು ಸಹಿಸದ ಗಂಡುಗರುವ ಕೈಕಾಲು ಮುರಿದು ಕೂರಿಸಿದ್ದು ಮಹಿಳೆಯರ ಸ್ವಾಯತ್ತ ಹಂಬಲದ ಗತಿಯನ್ನು ಸೂಚಿಸುವ ಸಂಕೇತವಾಗಿದೆ.
ಅಮೆರಿಕದ ಕುಸ್ತಿಪಟು ಮಿಲ್ಡ್ರೆಂಡ್ ಬರ್ಕಳದ್ದೂ ದಮನಿತ ಕಥನವೇ. ತಾನು ಮೊದಲು ನೋಡಿದ ಕುಸ್ತಿಪಟುವನ್ನು ಬೆನ್ನತ್ತಿ, ಕುಸ್ತಿ ಕಲಿತು, ಕೊನೆಗೆ ಅವನನ್ನೇ ಮದುವೆಯಾಗಿದ್ದ ಬರ್ಕ್, ವಿಶ್ವ ಕುಸ್ತಿಪಟುಗಳ ಒಕ್ಕೂಟದಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಜಾಗವಿಲ್ಲವೆಂದಾಗ 1954ರಲ್ಲಿ ವಿಶ್ವ ಮಹಿಳಾ ಕುಸ್ತಿಪಟುಗಳ ಸಂಘ ಕಟ್ಟಿದಳು. ಅವರ ಹಕ್ಕಿಗಾಗಿ ಹೋರಾಡಿದಳು. ಏಕಾಂಗಿಯಾಗಿ ಅಮೆರಿಕವನ್ನು, ವಿಶ್ವವನ್ನು ಸುತ್ತಿದಳು. ಆದರೆ ಅವಳೂ ಗಂಡ-ಗುರುವಿನಿAದ ಅನ್ಯಾಯಕ್ಕೆ ಒಳಗಾದಳು.
ಅಲ್ಲಿ ಅವಳು, ಇಲ್ಲಿವಳು. ಅಂದು ಅವರು, ಇಂದು ಇವರು. ಅಂತೂ ಲೋಕದ ಗಂಡುಗರುವ ಇಳಿಯದ ಹೊರತು ಹೆಣ್ಣು ನೆಮ್ಮದಿಯ ನಾಳೆಗೆ ಬೆಳಕು ಹರಿಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.