ನವದೆಹಲಿ: ಭಾರತದ ಪೈಲ್ವಾನರು ಒಲಿಂಪಿಕ್ ಕ್ರೀಡೆಗಳಲ್ಲಿ ಮತ್ತೆ ದೇಶಕ್ಕೆ ಪದಕಗಳನ್ನು ಗೆದ್ದುಕೊಡಲಿದ್ದಾರೆ. ಈ ಬಾರಿ ಅನುಕೂಲಕರ ‘ಡ್ರಾ’ ದೊರೆತರೆ ಪದಕಗಳು ಒಂದಕ್ಕಿಂತ ಹೆಚ್ಚಾಗಬಲ್ಲದು ಎಂದು ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಯೋಗೇಶ್ವರ ದತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದ ಆರು ಮಂದಿ ಪೈಲ್ವಾನರು ಪ್ಯಾರಿಸ್ ಕ್ರೀಡೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಕುಸ್ತಿ ಸ್ಪರ್ಧೆಗಳು ಆಗಸ್ಟ್ 5ರಂದು ಆರಂಭವಾಗಲಿವೆ.
ಪುರುಷರ ವಿಭಾಗದಲ್ಲಿ ಒಬ್ಬರು – ಅಮನ್ ಸೆಹ್ರಾವತ್ಗ್ (57 ಕೆ.ಜಿ) ಮಾತ್ರ ಅರ್ಹತೆ ಪಡೆದಿದ್ದಾರೆ. ಮಹಿಳಾ ವಿಭಾಗದ ಆರು ತೂಕ ವಿಭಾಗಗಳಲ್ಲಿ ಭಾರತದ ಐವರ ತಂಡ ಕಣಕ್ಕಿಳಿಯಲಿದೆ. 62 ಕೆ.ಜಿ. ವಿಭಾಗದಲ್ಲಿ ಮಾತ್ರ ಭಾರತದ ಸ್ಪರ್ಧಿಗಳಿಲ್ಲ.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಕಂಚಿನ ಪದಕ ಗೆದ್ದ ನಂತರ ಪ್ರತಿ ಒಲಿಂಪಿಕ್ಸ್‌ಗಳಲ್ಲಿ ಪೈಲ್ವಾರು ಪದಕ ತಂದುಕೊಟ್ಟಿದ್ದಾರೆ.
‘ಎಲ್ಲವೂ ಡ್ರಾ (ಮುಖಾಮುಖಿ ಪಟ್ಟಿ) ಮೇಲೆ ಅವಲಂಬಿತವಾಗಿದೆ. ಭಾರತದ ಕುಸ್ತಿಸ್ಪರ್ಧಿಗಳು ಅನುಕೂಲಕರ ಡ್ರಾ ಪಡೆದಲ್ಲಿ ಮೂರು ಪದಕಗಳು ಬರಬಹುದೆಂಬುದು ನನ್ನ ನಿರೀಕ್ಷೆ’ ಎಂದು ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಪಿಟಿಐ ವಿಡಿಯೊಗೆ ತಿಳಿಸಿದರು.
ಕಳೆದ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಭಾರತ ಕುಸ್ತಿಯಲ್ಲಿ ಸತತವಾಗಿ ಪದಕಗಳನ್ನು ಗೆಲ್ಲುತ್ತಿದೆ. ನಾವು ಸತತ ಐದನೇ ಬಾರಿಯೂ ದೇಶಕ್ಕೆ ಕುಸ್ತಿಯಿಂದ ಪದಕ ಬರಬಹುದೆಂದು ವಿಶ್ವಾಸ ವ್ಯಕ್ತಪಡಿಸೋಣ. ನಾನು ಶುಭ ಹಾರೈಸುವೆ. ಪೈಲ್ವಾನರು ಸಾಕಷ್ಟು ಸಿದ್ಧತೆ ನಡೆಸಿದ್ದಾರೆ’ ಎಂದರು.
‘ಒಲಿಂಪಿಕ್ಸ್‌ನಲ್ಲಿ ಹಾಕಿಯ ನಂತರ ಅತಿ ಹೆಚ್ಚು ಪದಕಗಳು ಬಂದಿರುವುದು ಕುಸ್ತಿಯಲ್ಲಿ’ ಎಂದರು.
ಭಾರತ ತಂಡ ಈ ಬಾರಿ 10 ಪದಕಗಳನ್ನು ಗೆಲ್ಲಬಹುದೆಂಬುದು ನನ್ನ ನಿರೀಕ್ಷೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.