ಪ್ಯಾರಿಸ್: ವಿಶ್ವ ಮತ್ತು ಏಷ್ಯಾಮಟ್ಟದ ಹಲವು ಕ್ರೀಡಾಕೂಟಗಳಲ್ಲೆಲ್ಲಾ ಉನ್ನತ ಸಾಧನೆ ಮಾಡಿರುವ ವಿನೇಶ್ ಫೋಗಟ್ ಅವರಿಗೆ ಇದುವರೆಗೆ ಒಲಿಂಪಿಕ್ಸ್ ಮಾತ್ರ ಏನನ್ನೂ ಕೊಟ್ಟಿಲ್ಲ. ಆ ಕೊರತೆಯನ್ನು ನೀಗಿಸುವ ಅವಕಾಶ ಈ ಛಲಗಾತಿಗೆ ಪ್ಯಾರಿಸ್‌ನಲ್ಲಿ ಒದಗಿ ಬಂದಿತ್ತು. ಆದರೆ ಬುಧವಾರ ಇಲ್ಲಿಯ ಚಾಂಪ್ ಡಿ ಮಾರ್ಸ್ ಅರೇನಾದಲ್ಲಿ ವಿನೇಶ್ ಅವರು 50 ಕೆ.ಜಿ. ವಿಭಾಗದ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಲ್ಲಿ ಪದಕ ಜಯಿಸಿ ಸಂಭ್ರಮಿಸುವುದನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾದಿದ್ದ ಭಾರತೀಯರಿಗೆ ಸಿಕ್ಕಿದ್ದು ಮಾತ್ರ ಆಘಾತಕಾರಿ ಸುದ್ದಿ. ಅವರು ನಿಗದಿಯ ದೇಹ ತೂಕಕ್ಕಿಂತ 100 ಗ್ರಾಂ ಹೆಚ್ಚು ತೂಗಿದ ಸುದ್ದಿ ಕೇಳಿದ ಭಾರತದ ಅಸಂಖ್ಯಾತ ಕ್ರೀಡಾ ಪ್ರೇಮಿಗಳಿಗೆ ಕಾಲಡಿಯ ನೆಲ ಕುಸಿದ ಅನುಭವ.
ಮಂಗಳವಾರ ತಮಗೆ ಎದುರಾದ ಸವಾಲುಗಳನ್ನೆಲ್ಲ ಮೀರಿ ನಿಂತ ವಿನೇಶ್ ಫೈನಲ್ ಪ್ರವೇಶಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಅವರಾಗಿದ್ದರು. ಅಮೆರಿಕದ ಸಾರಾ ಆ್ಯನ್ ಹಿಲ್ಡ್‌ಬ್ರಾಂಟ್ ಅವರನ್ನು ಸೋಲಿಸಿ ಚಿನ್ನದ ಪದಕ ಜಯಿಸುವ ವಿನೇಶ್ ಕನಸು ನುಚ್ಚುನೂರಾಯಿತು. ಒಂದೊಮ್ಮೆ ಅವರು ಪರಾಭವಗೊಂಡಿದ್ದರೂ ಬೆಳ್ಳಿ ಪದಕ ಒಲಿಯುತ್ತಿತ್ತು. ಅದೂ ಐತಿಹಾಸಿಕ ಸಾಧನೆಯೇ ಆಗುತ್ತಿತ್ತು. 2016ರಲ್ಲಿ ರಿಯೊ ಡಿ ಜನೈರೊದಲ್ಲಿ ಮತ್ತು 2020ರ ಟೋಕಿಯೊ ಒಲಿಂಪಿಕ್ ಕೂಟಗಳಲ್ಲಿ ಆಗಿದ್ದ ನಿರಾಶೆಯ ನೋವು ಇಲ್ಲಿ ಶಮನವಾಗುವ ನಿರೀಕ್ಷೆ ಇತ್ತು. ಕಳೆದ ಎರಡು ವರ್ಷಗಳಲ್ಲಿ ಅವರು ಕುಸ್ತಿ ಕಣ ಮತ್ತು ಅದರಾಚೆ ಮಾಡಿದ್ದ ‘ಹೋರಾಟ’ಕ್ಕೆ ತಕ್ಕ ಫಲ ಲಭಿಸುತ್ತಿತ್ತು. ಅವರ ಯಶೋಗಾಥೆಯನ್ನು ಜಗತ್ತಿಗೆ ಬಿತ್ತರಿಸಲು ಮಾಧ್ಯಮಗಳು ಕಾದು ಕುಳಿತಿದ್ದವು.
ಆದರೆ ‘ಪ್ರೇಮ ನಗರಿ’ ಪ್ಯಾರಿಸ್ ಭಾರತದ ಕುಸ್ತಿಪಟುವನ್ನು ದುಃಖದ ಮಡುವಿಗೆ ತಳ್ಳಿತು. ಹರಿಯಾಣದ 29 ವರ್ಷದ ವಿನೇಶ್, ಸ್ಪರ್ಧೆಯ ದಿನದಂದು ನಡೆಯುವ ತೂಕ ಪರೀಕ್ಷೆಯಲ್ಲಿ ನೂರು ಗ್ರಾಂ ಹೆಚ್ಚು ತೂಗಿದರು. ಬೌಟ್ ಇರುವ ದಿನದಂದು ತೂಕ ಪರೀಕ್ಷೆಗೊಳಗಾಗುವುದು ಕಡ್ಡಾಯ ನಿಯಮ.
‘ಸ್ಪರ್ಧೆಯ ಎರಡನೇ ದಿನದ ತೂಕ ಪರೀಕ್ಷೆಯಲ್ಲಿ ವಿನೇಶ್ ಅನುತ್ತೀರ್ಣರಾಗಿದ್ದಾರೆ. ಅಂತರರಾಷ್ಟ್ರೀಯ ಕುಸ್ತಿ ನಿಯಮಾವಳಿಯ ಆರ್ಟಿಕಲ್ 11ರ ಪ್ರಕಾರ ಅವರೊಂದಿಗೆ ಸೆಮಿಫೈನಲ್‌ನಲ್ಲಿ ಸೆಣಸಿ ಸೋತ ಕ್ಯೂಬಾದ ಗುಜ್ಮನ್ ಲೊಪೆಜ್ ಯುಸ್ನೆಯಿಲಿಸ್ ಅವರು ಫೈನಲ್‌ಗೆ ಪ್ರವೇಶಿಸುವರು. ಜಪಾನ್ ದೇಶದ ಯುಯಿ ಸುಸಾಕಿ ಮತ್ತು ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರು ಕಂಚಿನ ಪದಕಕ್ಕಾಗಿ ರೆಪೆಷಾಜ್‌ನಲ್ಲಿ ಸೆಣಸುವರು’ ಎಂದು ಪ್ಯಾರಿಸ್ 2024 ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿನೇಶ್, ನೀವು ಚಾಂಪಿಯನ್ನರಲ್ಲಿ ಚಾಂಪಿಯನ್ನರು. ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿ . ಇಂದಿನ ಹಿನ್ನಡೆ ನೋವು ತಂದಿದೆ. ಮತ್ತೆ ಪುಟಿದೆದ್ದು ಬಲಿಷ್ಠರಾಗಿ ಬನ್ನಿ. ನಾವೆಲ್ಲಾ ನಿಮ್ಮೊಂದಿಗಿದ್ದೇವೆನರೇಂದ್ರ ಮೋದಿ, ಪ್ರಧಾನಿ
ವಿನೇಶ್‌ಗೆ ಆಗಿರುವ ನಿರಾಶೆಯನ್ನು ನಾವೆಲ್ಲಾ ಹಂಚಿಕೊಳ್ಳುತ್ತೇವೆ. 140 ಕೋಟಿ ಜನರ ಹೃದಯದಲ್ಲಿ ಅವರು ಚಾಂಪಿಯನ್ ಆಗಿಯೇ ಉಳಿಯುತ್ತಾರೆ. ಭಾರತದ ಮಹಿಳೆಯರ ದಣಿವರಿಯದ ಸ್ಫೂರ್ತಿಯನ್ನು ಅವರು ಮೈಗೂಡಿಸಿಕೊಂಡಿದ್ದಾರೆದ್ರೌಪದಿ ಮುರ್ಮು, ರಾಷ್ಟ್ರಪತಿ
ಭಾರತದ ಹೆಮ್ಮೆ ವಿನೇಶ್ ಫೋಗಟ್ ತಾಂತ್ರಿಕ ಆಧಾರದಲ್ಲಿ ಅನರ್ಹಗೊಂಡಿರುವುದು ದುರದೃಷ್ಟಕರ. ವಿನೇಶ್ ಯಾವುದನ್ನೂ ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಪುಟಿದೆದ್ದು ಮತ್ತೆ ಆಖಾಡಕ್ಕೆ ಮರಳುವ ವಿಶ್ವಾಸವಿದೆರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅನರ್ಹಗೊಂಡಿರುವುದು ದುರದೃಷ್ಟಕರ. ಅವರ ಶಕ್ತಿ, ಸ್ಥೈರ್ಯ ಮತ್ತು ಸಮರ್ಪಣೆ ರಾಷ್ಟ್ರವನ್ನು ಯಾವಾಗಲೂ ಪ್ರೇರೇಪಿಸುತ್ತದೆ. ನೀವು ಸದಾ ನಮ್ಮ ಚಾಂಪಿಯನ್ಸಿದ್ದರಾಮಯ್ಯ, ಮುಖ್ಯಮಂತ್ರಿ
ವಿನೇಶ್ ಅವರಿಗೆ ಒಂದೇ ರಾತ್ರಿಯಲ್ಲಿ ಹೆಚ್ಚುವರಿ ತೂಕ ಏರಿದ್ದು ಹೇಗೆ? ಸಮರ ಕಲೆಗಳಾಧ ಕುಸ್ತಿ, ಬಾಕ್ಸಿಂಗ್ ಮತ್ತು ಜುಡೊ ಕ್ರೀಡೆಗಳಿಗೆ ತಮ್ಮ ದೇಹತೂಕ ನಿರ್ವಹಣೆ ಮಾಡಿಕೊಳ್ಳುವುದು ಪ್ರತಿನಿತ್ಯದ ಸವಾಲಾಗಿದೆ. ಕುಸ್ತಿಯಲ್ಲಿ ಕೆಲವೊಮ್ಮೆ ಪೈಲ್ವಾನರು ಒಂದೇ ದಿನದಲ್ಲಿ ಎರಡಕ್ಕಿಂತ ಹೆಚ್ಚು ಬೌಟ್‌ಗಳಲ್ಲಿ ಸೆಣಸುವ ಸಾಧ್ಯತೆ ಇರುತ್ತದೆ. ವಿನೇಶ್ ಮಂಗಳವಾರ ಮೂರು ಬೌಟ್‌ಗಳಲ್ಲಿ ಸೆಣಸಿದ್ದರು. ಇದರಿಂದಾಗಿ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ಹೆಚ್ಚು ಕ್ಯಾಲೊರಿಗಳ ಆಹಾರ ಪದ್ಧತಿಯನ್ನು ಅನುಸರಿಸಿದ್ದರು. ಇದರಲ್ಲಿ ಪ್ರೋಟಿನ್ ಪೇಯಗಳು ಮತ್ತು ಕ್ಯಾಲೊರಿ ಹೆಚ್ಚಾಗಿರುವ ಬಾಳೆಹಣ್ಣಿನಂತಹ ಫಲಗಳು ಸೇರಿರುತ್ತವೆ.
ಅನುಭವಿ ಕುಸ್ತಿಪಟುಗಳು ತಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಪ್ರಮಾಣದ ಬಗ್ಗೆ ತಿಳಿದುಕೊಂಡಿರುತ್ತಾರೆ. ದೇಹದಲ್ಲಿ ನಿರ್ಜಲೀಕರಣವಾಗದಂತೆ ಮತ್ತು ತೂಕವೂ ಹೆಚ್ಚದಂತೆ ಕಾಪಾಡಿಕೊಳ್ಳುತ್ತಾರೆ. ಅವರ ನೆರವು ಸಿಬ್ಬಂದಿ ಕೂಡ ಆಹಾರ ಸೇವನೆಯ ಪಟ್ಟಿಯನ್ನು ನಿರ್ವಹಿಸುತ್ತಾರೆ. ಇದೆಲ್ಲವೂ ವೈಜ್ಞಾನಿಕವಾಗಿರುತ್ತದೆ. ಅದರಿಂದಾಗಿ ಕುಸ್ತಿಪಟುಗಳು ತೂಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು ಅಪರೂಪ. ವಾಸ್ತವವಾಗಿ ಕುಸ್ತಿಪಟುಗಳು ದೊಡ್ಡ ಸ್ಪರ್ಧೆಗಳಿಗೂ ಮುನ್ನ ಅತ್ಯಂತ ಕಠಿಣವಾದ ತಾಲೀಮು ನಡೆಸುತ್ತಾರೆ.
ಕೆಲವೊಮ್ಮೆ ಕಡುಕಠಿಣ ರೀತಿಯ ತಾಲೀಮು ನಡೆಸುತ್ತಾರೆ. ಅದರಲ್ಲಿ ಆಹಾರ ಮತ್ತು ನೀರನ್ನೂ ಸೇವಿಸುವುದಿಲ್ಲ. ಕೆಲವರು ಗಂಟೆಗಟ್ಟಲೇ ಹಬೆ ಸ್ನಾನ ಮಾಡುತ್ತಾರೆ. ದೇಹದೊಳಗೆ ಶೇಖರಣೆಯಾಗಿರುವ ದ್ರವಗಳನ್ನು ಹೊರಹಾಕಲು ಇದು ನೆರವಾಗುತ್ತದೆ. ಇನ್ನೂ ಕೆಲವರು ಓಟ, ಸೈಕ್ಲಿಂಗ್, ಹಗ್ಗಗಳನ್ನು ಮಾಡುತ್ತಾರೆ. ವಿನೇಶ್ ಕೂಡ ತಮಗಿದ್ದ ಕಡಿಮೆ ಅವಧಿಯಲ್ಲಿ ಇದರಲ್ಲಿ ಸಾಧ್ಯವಿದ್ದ ಸ್ಕಿಪ್ಪಿಂಗ್‌ಗಳನ್ನು ಮಾಡಿದ್ದಾರೆ. ಇಡೀ ರಾತ್ರಿ ಅವರು ಓಟ ಮತ್ತು ಹಬೆ ಸ್ನಾನಗಳನ್ನು ಹೆಚ್ಚು ಮಾಡಿ ಎರಡು ಕಿಲೋ ತೂಕ ಕರಗಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ರಿಯೊ ಒಲಿಂಪಿಕ್ಸ್‌ನಲ್ಲಿ ಬೌಟ್‌ನಲ್ಲಿಯೇ ಗಾಯಗೊಂಡಿದ್ದ ವಿನೇಶ್ ಅವರನ್ನು ನೆರವು ಸಿಬ್ಬಂದಿಯು ಸ್ಟ್ರೆಚರ್‌ನಲ್ಲಿ ಚಿಕಿತ್ಸೆಗಾಗಿ ಕರೆದೊಯ್ದಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಆರಂಭಿಕ ಸುತ್ತಿನಲ್ಲಿಯೇ ಸೋತಿದ್ದರು. ಆದರೆ ಪ್ಯಾರಿಸ್‌ನಲ್ಲಿ ಅವರಿಗೆ ಪದಕ ಜಯದ ಹೊಸ್ತಿಲಲ್ಲಿ 100 ಗ್ರಾಂ ಕಂಟಕ ಬರಸಿಡಿಲಿನಂತೆ ಎರಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.