ADVERTISEMENT

ಒಲಿಂಪಿಕ್ಸ್‌ | ಕುಸ್ತಿ: ಈ ಬಾರಿಯೂ ಪದಕ ದೊರೆಯುವುದೇ?

ಮಹಮ್ಮದ್ ನೂಮಾನ್
Published 26 ಜುಲೈ 2024, 19:10 IST
Last Updated 26 ಜುಲೈ 2024, 19:10 IST
ವಿನೇಶಾ ಫೋಗಾಟ್‌
ವಿನೇಶಾ ಫೋಗಾಟ್‌   

ಎರಡು ಬೆಳ್ಳಿ ಹಾಗೂ ಐದು ಕಂಚು ಸೇರಿದಂತೆ ಒಟ್ಟು ಏಳು ಪದಕಗಳು... ಒಲಿಂಪಿಕ್‌ ಕೂಟದ ಕುಸ್ತಿಯಲ್ಲಿ ಭಾರತದ ಇದುವರೆಗಿನ ಸಾಧನೆ ಇದು. ಈ ಪಟ್ಟಿಗೆ ಪ್ಯಾರಿಸ್‌ನಲ್ಲಿ ಇನ್ನಷ್ಟು ಪದಕಗಳು ಸೇರ್ಪಡೆಯಾಗಬಹುದೇ?

***** 

ಒಲಿಂಪಿಕ್ಸ್‌ನಲ್ಲಿ ಹಾಕಿ ಕ್ರೀಡೆಯ ಬಳಿಕ ಭಾರತಕ್ಕೆ ಅತಿಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಗಿರುವುದು ಕುಸ್ತಿಯಲ್ಲಿ. ಅಧಿಕ ಪದಕಗಳನ್ನು ಗೆದ್ದುಕೊಟ್ಟ ಕ್ರೀಡೆಗಳ ಪಟ್ಟಿಯಲ್ಲಿ 12 ಪದಕಗಳೊಂದಿಗೆ ಹಾಕಿ ಕ್ರೀಡೆಯು ಅಗ್ರಸ್ಥಾನದಲ್ಲಿದ್ದರೆ, ಏಳು ಪದಕಗಳೊಂದಿಗೆ ಕುಸ್ತಿ ಎರಡನೇ ಸ್ಥಾನದಲ್ಲಿದೆ. 

ADVERTISEMENT

1952 ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕೆ.ಡಿ.ಜಾಧವ್‌ ಅವರು ಕುಸ್ತಿಯಲ್ಲಿ ಮೊದಲ ಪದಕ ಗೆದ್ದುಕೊಟ್ಟಿದ್ದರು. ಬಳಿಕದ ಪದಕಕ್ಕೆ ಐದೂವರೆ ದಶಕ ಕಾಯಬೇಕಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್‌ ಅವರು ಕಂಚು ಗೆದ್ದು ಪದಕದ ಬರ ನೀಗಿಸಿದ್ದರು. ಆ ಬಳಿಕದ ಎಲ್ಲ ಒಲಿಂಪಿಕ್ಸ್‌ಗಳಲ್ಲೂ ಕುಸ್ತಿಪಟುಗಳು ಪದಕಕ್ಕೆ ಕೊರಳೊಡ್ಡಿರುವುದು ವಿಶೇಷ.

ಈ ಬಾರಿ ಪದಕದ ನಿರೀಕ್ಷೆಯೊಂದಿಗೆ ಒಬ್ಬ ಪುರುಷ ಮತ್ತು ಐವರು ಮಹಿಳಾ ಕುಸ್ತಿಪಟುಗಳು ಒಳಗೊಂಡಂತೆ ಒಟ್ಟು ಆರು ಪೈಲ್ವಾನರು ಪ್ಯಾರಿಸ್‌ಗೆ ಪ್ರಯಾಣಿಸಿದ್ದಾರೆ. 

ಪುರುಷರ ವಿಭಾಗದಲ್ಲಿ ಅಮನ್‌ ಸೆಹ್ರಾವತ್ (57 ಕೆ.ಜಿ ವಿಭಾಗ) ಮಾತ್ರ ಅರ್ಹತೆ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ವಿನೇಶಾ ಫೋಗಾಟ್‌ (50 ಕೆ.ಜಿ), ಅಂತಿಮ್ ಪಂಘಲ್ (53 ಕೆ.ಜಿ), ಅನ್ಶು ಮಲಿಕ್ (57 ಕೆ.ಜಿ), ನಿಶಾ ದಹಿಯಾ (68 ಕೆ.ಜಿ) ಮತ್ತು ರೀತಿಕಾ ಹೂಡಾ (76 ಕೆ.ಜಿ) ಅವರು ಪದಕಕ್ಕಾಗಿ ಪೈಪೋಟಿ ನಡೆಸುವರು. ರೀತಿಕಾ ಅವರು ಹೆವಿವೇಟ್‌ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಕುಸ್ತಿಪಟುವೂ ಹೌದು. 

ಕಳೆದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ರವಿ ದಹಿಯಾ ಅವರನ್ನು ಹಿಂದಿಕ್ಕಿ ಪ್ಯಾರಿಸ್‌ಗೆ ಅರ್ಹತೆ ಪಡೆದಿರುವ ಅಮನ್‌, ಪದಕದ ಭರವಸೆ ಮೂಡಿಸಿದ್ದಾರೆ. ಆದರೆ ತಂತ್ರಗಾರಿಕೆ ಮತ್ತು ಕೌಶಲದಲ್ಲಿ ಇನ್ನಷ್ಟು ಚುರುಕುತನ ತೋರುವುದು ಅಗತ್ಯ. ಅಮನ್‌ ಅವರ ಪದಕದೆಡೆಗಿನ ಹಾದಿಯಲ್ಲಿ ಹಂಗರಿಯ ರೆಯು ಹಿಗುಚಿ ಮತ್ತು ಉಜ್ಬೆಕಿಸ್ತಾನದ ಗುಲಾಮ್‌ಜಾನ್ ಅಬ್ದುಲ್ಲಯೇವ್‌ ಅವರು ಅಡ್ಡಿಯಾಗುವ ಸಾಧ್ಯತೆಯಿದೆ.

ಕಳೆದ ಒಂದೂವರೆ ವರ್ಷದಲ್ಲಿ ಭಾರತದಲ್ಲಿ ಕುಸ್ತಿ ಕ್ರೀಡೆಯು ಕೆಟ್ಟ ಕಾರಣಗಳಿಂದಾಗಿಯೇ ಸುದ್ದಿಯಲ್ಲಿತ್ತು. ಭಾರತ ಕುಸ್ತಿ ಫೆಡರೇಷನ್‌ನ ಹಿಂದಿನ ಅಧ್ಯಕ್ಷರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕೇಳಿಬಂದಿತ್ತು. ಹಲವು ಖ್ಯಾತನಾಮ ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಕುಸ್ತಿ ಫೆಡರೇಷನ್‌ ಚುನಾವಣೆ ಕೂಡಾ ಸಾಕಷ್ಟು ಸದ್ದು ಮಾಡಿತ್ತು.

ಈ ಎಲ್ಲಾ ಅಡ್ಡಿಗಳ ನಡುವೆಯೂ ಪ್ಯಾರಿಸ್‌ ಕೂಟಕ್ಕೆ ಆರು ಕುಸ್ತಿಪಟುಗಳು ಅರ್ಹತೆ ಸಂಪಾದಿಸಿರುವುದೇ ದೊಡ್ಡ ಸಾಧನೆ. ಅನುಕೂಲಕರ ‘ಡ್ರಾ’ ದೊರೆತರೆ ಪ್ಯಾರಿಸ್‌ನಲ್ಲಿ ಭಾರತದ ಕುಸ್ತಿಪಟುಗಳು ಒಂದಕ್ಕಿಂತ ಹೆಚ್ಚು ಪದಕ ಗೆಲ್ಲಬಹುದು ಎಂದು ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಯೋಗೇಶ್ವರ್‌ ದತ್‌ ಹೇಳಿದ್ದಾರೆ. ಅವರ ಮಾತು ನಿಜವಾಗುವುದೇ ಎಂಬುದನ್ನು ಕಾದುನೋಡಬೇಕು.

ಅಂತಿಮ್ ಪಂಘಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.