ಮೋಟರ್ ಸ್ಪೋರ್ಟ್ಸ್ ನೋಡುಗರಲ್ಲಿ ರೋಮಾಂಚನ, ಆತಂಕ ಹುಟ್ಟಿಸುವಂತದ್ದು. ಮೈಕಲ್ ಶುಮಾಕರ್, ಸೆಬಾಸ್ಟಿಯನ್ ವೆಟೆಲ್ ಈ ಕ್ರೀಡೆಯಲ್ಲಿ ಖ್ಯಾತನಾಮರು. ಒಂಬತ್ತನೇ ವಯಸ್ಸಿನಲ್ಲೇ ಇಂತಹ ಸಾಹಸಮಯ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿರುವವರು ಬೆಂಗಳೂರಿನ ಪ್ರತಿಭೆ ಯಶ್ ಆರಾಧ್ಯ. ಸದ್ಯ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂರ್ಯನಂತೆ ಪ್ರಜ್ವಲಿಸುತ್ತಿದ್ದಾರೆ ಈ ಯುವ ರೇಸರ್. ಮೇ 12 ಹಾಗೂ 13ರಂದು ನಡೆಯುವ ಈಶಾನ್ಯ ಏಷ್ಯಾ ಅಂತರರಾಷ್ಟ್ರೀಯ ಫಾರ್ಮುಲಾ–4 ರೇಸಿಂಗ್ ಸರ್ಕೀಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಪ್ರವೇಶಿಸಲು ಅವರು ಸಜ್ಜಾಗಿದ್ದಾರೆ. ಥಾಯ್ಲೆಂಡ್‌ನ ಬುರಿರಮ್‌ನಲ್ಲಿ ಈ ರೇಸ್ ನಡೆಯಲಿದೆ.
2012ರಲ್ಲಿ ಗೋ–ಕಾರ್ಟಿಂಗ್ ಮೂಲಕ ರೇಸಿಂಗ್ ಕ್ರೀಡೆಗೆ ಕಾಲಿಟ್ಟ ಯಶ್ ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಏಳು ವರ್ಷಗಳ ಅವಧಿಯಲ್ಲಿ 100ಕ್ಕೂ ಅಧಿಕ ರೇಸ್‌ಗಳಲ್ಲಿ ಭಾಗವಹಿಸಿರುವ ಅವರು 13 ರಾಷ್ಟ್ರೀಯ ಚಾಂಪಿಯನ್‌ಷಿಪ್ ಟ್ರೋಫಿಗಳನ್ನು ಬಗಲಿಗೆ ಹಾಕಿಕೊಂಡಿದ್ದಾರೆ. 59 ರೇಸ್‌ಗಳಲ್ಲಿ ಜಯದ ತೋರಣ ಕಟ್ಟಿದ್ದಾರೆ. 11 ಇತರ ಪ್ರಶಸ್ತಿಗಳಿಗೂ ಮುತ್ತಿಕ್ಕಿದ್ದಾರೆ.
2017ರಲ್ಲಿ ಫಾರ್ಮುಲಾ–4 ಭಾರತದ ಸರಣಿಗಳಲ್ಲಿ ಮೊದಲ ಬಾರಿ ರೇಸಿಂಗ್ ವಾಹನ ಚಲಾಯಿಸಿದ ಯಶ್, ಅಂತರರಾಷ್ಟ್ರೀಯ ಸರ್ಕೀಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ರೇಸರ್ ಖ್ಯಾತಿಯ ಅಕ್ಬರ್ ಇಬ್ರಾಹಿಂ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ರ‍್ಯಾನ್ ಫರ್ನಾಂಡೊ, ಅವರ ನ್ಯೂಟ್ರಿಷನಿಸ್ಟ್.
ತಮ್ಮ ಸಾಧನೆಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಯಶ್ ಮಾತನಾಡಿದರು. ಯಶಸ್ಸಿಗೆ ತಂದೆ–ತಾಯಿಯ ಅಪಾರ ಪರಿಶ್ರಮ, ಪ್ರೋತ್ಸಾಹವನ್ನು ಸ್ಮರಿಸಿಕೊಂಡರು.
‘ನಿತ್ಯ ಅಭ್ಯಾಸವನ್ನೇನೂ ನಡೆಸುವುದಿಲ್ಲ. ರೇಸಿಂಗ್ ಟೂರ್ನಿ ಇರುವ ಎರಡು ದಿನಗಳ ಮುಂಚೆ ಒಂದಷ್ಟು ಹೊತ್ತು ಬೆವರು ಹರಿಸುತ್ತೇನೆ. ದೈಹಿಕ, ಮಾನಸಿಕ ಫಿಟ್‌ನೆಸ್ ಕಾಯ್ದುಕೊಳ್ಳಲು ಪ್ರತಿದಿನ ಜಿಮ್ ಅನಿವಾರ್ಯ’ ಎಂದು ಹೇಳಿದರು.
ಆಟಗೊಂದಿಗೆ ಪಾಠಕ್ಕೂ ಆದ್ಯತೆ ನೀಡಿರುವ ಯಶ್, ಇವೆರಡಕ್ಕೂ ಸಮಯ ಹೊಂದಿಸಿಕೊಳ್ಳುವುದು ಕಷ್ಟದ ಕೆಲಸ ಎನ್ನುತ್ತಾರೆ. ಆದರೂ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯೊಂದಿಗೆ (ಶೇ.74) ತೇರ್ಗಡೆ ಹೊಂದಿದ್ದಾರೆ. ಅಲ್ಪ ಶ್ರಮವಹಿಸಿದರೆ ಆಟ–ಓದಿನ ನಡುವೆ ಸಮತೋಲನ ಕಾಯ್ದುಕೊಳ್ಳಬಹುದು ಎಂಬುದು ಅವರ ಅಭಿಪ್ರಾಯ.
ರೋಲ್ ಮಾಡೆಲ್‌ಗಳು: ರೆಡ್ ಬುಲ್ ರೇಸಿಂಗ್ ತಂಡದ ಬೆಲ್ಜಿಯಂನ ಮ್ಯಾಕ್ಸ್ ವೆಸ್ಟಾಪನ್ ಹಾಗೂ ಸ್ಕಡೆರಿಯಾ ಫೆರಾರಿ ತಂಡದ ಮೊನಾಕೊ ದೇಶದ ಚಾರ್ಲ್ಸ್ ಲೆಕ್ಲಾರ್ಕ್ ಅವರನ್ನು ಮಾದರಿಯಾಗಿಸಿಕೊಂಡಿದ್ದೇನೆ ಎನ್ನುತ್ತಾರೆ ಯಶ್.
ಎಫ್‌ಐಎ ಫಾರ್ಮುಲಾ–4 ಈಶಾನ್ಯ ಏಷ್ಯಾ ಟೂರ್ನಿ ನಡೆಯುವ ರೀತಿ
ಎಫ್‌ಐಎ ಫಾರ್ಮುಲಾ–4 ಈಶಾನ್ಯ ಏಷ್ಯಾ ಟೂರ್ನಿಯು ತಲಾ ನಾಲ್ಕು ರೇಸ್‌ಗಳ 10 ಸುತ್ತುಗಳನ್ನು ಒಳಗೊಂಡಿದ್ದು, ಒಟ್ಟು 40 ರೇಸ್‌ಗಳಿವೆ. ಥಾಯ್ಲೆಂಡ್,ಮಲೇಷ್ಯಾ, ಭಾರತ ಹಾಗೂ ಫಿಲಿಪ್ಪೀನ್ಸ್ ದೇಶಗಳಾದ್ಯಂತ ಆಯೋಜಿತವಾಗಿದೆ. 10ರ ಪೈಕಿ ಎಂಟು ಸುತ್ತುಗಳ ಅಂಕಗಳನ್ನು ಚಾಂಪಿಯನ್‌ಶಿಪ್‌ಗೆ ಲೆಕ್ಕಹಾಕಲಾಗುತ್ತದೆ.
ಯಶ್ ಪ್ರಮುಖ ಸಾಧನೆಗಳು
*2014ರಲ್ಲಿ ಭಾರತದ ವರ್ಷದ ಅತ್ಯುತ್ತಮ ಕಾರ್ಟರ್
* ಮೋಟರ್‌ಸ್ಪೋರ್ಟ್ಸ್ ತೋರಿದ ಅಮೋಘ ಪ್ರದರ್ಶನಕ್ಕೆ 2014, 2015 ಹಾಗೂ 2015ರ ಎಫ್‌ಎಮ್‌ಎಸ್‌ಸಿಐ ಪ್ರಶಸ್ತಿ
* ಯುರೋಪ್‌ನ ಸ್ಪೇನ್, ಫ್ರಾನ್ಸ್, ಬೆಲ್ಜಿಯಂ ದೇಶಗಳಲ್ಲಿ ನಡೆದ ಸಿಐಕೆ ಎಫ್‌ಐಎ ಅಕಾಡೆಮಿ ಟ್ರೋಫಿಯ ಗೋ–ಕಾರ್ಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ನಾಮನಿರ್ದೇಶನ
*ಪೋರ್ಚುಗಲ್‌ನಲ್ಲಿ 2017ರಲ್ಲಿ ನಡೆದ ಗೋ–ಕಾರ್ಟಿಂಗ್ ಸ್ಪರ್ಧೆಯ ವಿಶ್ವ ಫೈನಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.