ADVERTISEMENT

ಪ್ಯಾರಾ ಬ್ಯಾಡ್ಮಿಂಟನ್: ಫೈನಲ್‌ಗೆ ಯತಿರಾಜ್, ಪ್ರಮೋದ್, ಕೃಷ್ಣ

ಪಿಟಿಐ
Published 24 ಫೆಬ್ರುವರಿ 2024, 16:10 IST
Last Updated 24 ಫೆಬ್ರುವರಿ 2024, 16:10 IST
ಸುಹಾಸ್ ಯತಿರಾಜ್
ಸುಹಾಸ್ ಯತಿರಾಜ್   

ಪಟ್ಟಾಯ (ಥ್ಲಾಯೆಂಡ್‌): ಭಾರತದ ಸುಹಾಸ್ ಯತಿರಾಜ್‌, ಪ್ರಮೋದ್ ಭಗತ್ ಮತ್ತು ಕೃಷ್ಣ ನಾಗರ್ ಅವರು ಪ್ಯಾರಾ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಶನಿವಾರ ಪುರುಷರ ಸಿಂಗಲ್ಸ್ ಫೈನಲ್‌ ಪ್ರವೇಶಿಸಿದ್ದಾರೆ.

ಪ್ಯಾರಾಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ವಿಶ್ವದ 3ನೇ ಶ್ರೇಯಾಂಕಿತ ಯತಿರಾಜ್ ಪುರುಷರ ಸಿಂಗಲ್ಸ್‌ ಎಸ್‌ಎಲ್ 4 ಸೆಮಿಫೈನಲ್‌ನಲ್ಲಿ ವಿಶ್ವದ ನಂ.1 ಫ್ರಾನ್ಸ್‌ನ ಲ್ಯೂಕಾಸ್‌ ಮಜೂರ್ ಅವರನ್ನು 21–16, 21–19 ಅಂತರದಿಂದ ಸೋಲಿಸಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಫೈನಲ್‌ಗೆ ತಲುಪಿದರು. 

ಲ್ಯೂಕಾಸ್ ಅವರು ಹಾಲಿ ವಿಶ್ವ ಚಾಂಪಿಯನ್ ಮತ್ತು ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ.

ADVERTISEMENT

ಉತ್ತರ ಪ್ರದೇಶ ಕೇಡರ್‌ನ 2007ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಗಿರುವ 40 ವರ್ಷದ ಕರ್ನಾಟಕದ ಸುಹಾಸ್, ಫೈನಲ್‌ನಲ್ಲಿ ಇಂಡೊನೇಷ್ಯಾದ ಫ್ರೆಡಿ ಸೆಟಿಯಾವಾನ್ ವಿರುದ್ಧ ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್‌ ಎಸ್‌ಎಲ್3 ಕ್ಲಾಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್‌ ಅವರು ಭಾರತದ ಮನೋಜ್‌ ಸರ್ಕಾರ್‌ ಅವರನ್ನು  23–21, 20–22,21–18 ರಿಂದ ಸೋಲಿಸಿ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಡೇನಿಯಲ್ ಬೆತೆಲ್ ಅವರನ್ನು ಎದುರಿಸಲಿದ್ದಾರೆ. 

ಮತ್ತೊಂದು ಸೆಮಿಫೈನಲ್‌ನಲ್ಲಿ ಬೆತೆಲ್ ಅವರು ಭಾರತದ ನಿತೇಶ್ ಕುಮಾರ್ ಅವರನ್ನು 21–18, 20–22, 21–14ರಿಂದ ಸೋಲಿಸಿದರು.  

ಎಸ್ಎಚ್ 6 ವಿಭಾಗದಲ್ಲಿ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಕೃಷ್ಣ ನಾಗರ್ ಅವರು ಬ್ರೆಜಿಲ್‌ನ ವಿಟರ್ ತಾವರೆಸ್ ಅವರನ್ನು 21-16, 21-17ರಿಂದ ಸೋಲಿಸಿದ್ದಾರೆ. 

ಪುರುಷರ ಡಬಲ್ಸ್ ಜೋಡಿ ಚಿರಾಗ್ ಬರೆತಾ ಮತ್ತು ರಾಜಕುಮಾರ್ ಮತ್ತು ಮಹಿಳಾ ಜೋಡಿ ಮಂದೀಪ್ ಕೌರ್ ಮತ್ತು ಮನೀಷಾ ರಾಮದಾಸ್ ಎಸ್‌ಯು 5 ಮತ್ತು ಎಸ್ಎಲ್3– ಎಸ್‌ಯು 5 ಕ್ಲಾಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತ ಪಡಿಸಿಕೊಂಡಿದೆ. 

ಮಹಿಳೆಯರ ಸಿಂಗಲ್ಸ್‌ನಲ್ಲಿ ನಿತ್ಯಾ ಶ್ರೀ, ಪಾಲಕ್ ಕೊಹ್ಲಿ ಮತ್ತು ಮನೀಷಾ ಗಿರಿಶ್ಚಂದ್ರ ಕ್ರಮವಾಗಿ ಎಸ್ಎಚ್ 6, ಎಸ್ಎಲ್ 4 ಮತ್ತು ಎಸ್ಎಲ್ 3 ಕ್ಲಾಸ್‌ನ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಎಸ್ಎಲ್ 3-ಎಸ್ಎಲ್ 4 ನಲ್ಲಿ ಪ್ರಮೋದ್ ಮತ್ತು ಸುಕಾಂತ್ ಜೋಡಿ ಥಾಯ್ಲೆಂಡ್‌ನ ಮೊಂಗ್ಖೋನ್ ಬುನ್ಸನ್ ಮತ್ತು ಸಿರಿಪೊಂಗ್ ಟೀಮಾರೊಮ್ ವಿರುದ್ಧ 16-21, 16-21 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.