ADVERTISEMENT

ಹುಳಿ ತೇಗು ನಿವಾರಿಸುವ ಜಠರ ಪರಿವರ್ತನಾಸನ

ಯೋಗಾ ಯೋಗ

ಜಿ.ಎನ್.ಶಿವಕುಮಾರ
Published 29 ಸೆಪ್ಟೆಂಬರ್ 2019, 19:30 IST
Last Updated 29 ಸೆಪ್ಟೆಂಬರ್ 2019, 19:30 IST
ಜಠರ ಪರಿವರ್ತನಾಸನ
ಜಠರ ಪರಿವರ್ತನಾಸನ   

ಹುಳಿ ತೇಗು ಏಕೆ ಬರುತ್ತದೆ? ಇದರ ನಿವಾರಣೆಗೆ ಪರಿಹಾರೋಪಾಯ ಏನು ಎಂಬುದು ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆಗಳು. ಇವುಗಳ ಹಿಂದಿರುವ ಸತ್ಯವನ್ನು ಅರಿತರೆ ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ.

ಅಜೀರ್ಣದಿಂದ ಅಥವಾ ಆಹಾರ ಹಳಸಿದ್ದರೆ ಇಲ್ಲವೇ ಕಲುಷಿತವಾಗಿದ್ದರೆ ಜಠರದಲ್ಲಿ ಆಮ್ಲ ಉತ್ಪತ್ತಿಯಾಗುತ್ತದೆ. ಆಗ ಹುಳಿ ತೇಗು ಹೊರಬರುತ್ತದೆ.

ಹುಳಿ ತೇಗು ನಿವಾರಣೆಗೆ ಮೊದಲನೆಯದಾಗಿ ನಿತ್ಯಕರ್ಮಗಳನ್ನು (ಮಲ, ಮೂತ್ರ ವಿಸರ್ಜನೆ) ಸರಿಯಾಗಿ ಪೂರೈಸಬೇಕು. ಬೆಳಿಗ್ಗೆ ಬರಿದಾದ ಹೊಟ್ಟೆಗೆ ಒಂದೆರೆಡು ಲೋಟ ನೀರು ಸೇವಿಸಬೇಕು. ಅಗತ್ಯ ಎನಿಸಿದರೆ ಉಗುರು ಬೆಚ್ಚಗಿನ (ತುಸು ಬಿಸಿಯಾದ) ನೀರು ಸೇವಿಸಬೇಕು. ಮೇಲಿಂದ ಮೇಲೆ ಸಿಕ್ಕ ಸಿಕ್ಕ ಆಹಾರ ಸೇವಿಸುವುದನ್ನು ನಿಲ್ಲಿಸಬೇಕು. ಒಂದು ಹೊತ್ತು ಆಹಾರ ಸೇವಿಸುವುದನ್ನು ನಿಲ್ಲಿಸಿ ಹೊಟ್ಟೆಯನ್ನು ಖಾಲಿ ಬಿಟ್ಟು ಆಗಿಂದಾಗ್ಗೆ ನೀರು ಕುಡಿಯುತ್ತಿರಬೇಕು.

ADVERTISEMENT

ಈ ಕ್ರಮಗಳ ಜತೆಗೆ, ಹೊಟ್ಟೆಯೊಳಗಿನ ಅಂಗಾಂಗಗಳಿಗೆ ವ್ಯಾಯಾಮ ಒದಗಿಸುವ ಯೋಗಾಸನಗಳನ್ನು ಅಭ್ಯಸಿಸಬೇಕು. ಜಠರ ಮತ್ತು ಕರುಳುಗಳಿಗೆ ಉತ್ತಮ ವ್ಯಾಯಾಮ ಒದಗಿಸಿ ಸುಸ್ಥಿತಿಯಲ್ಲಿಡಲು ಯೋಗ ಅಭ್ಯಾಸದಲ್ಲಿ ಹೇಳಿರುವ ಜಠರ ಪರಿವರ್ತನಾಸನ ನೆರವಾಗುತ್ತದೆ.

ಜಠರದ ಮೇಲಿನ ಹೊಟ್ಟೆಯ ಭಾಗವು ಪರಿವರ್ತನಾಕಾರವಾಗಿ (ಸುತ್ತುವ) ನಡೆಯುವ ಅಭ್ಯಾಸ ಇದಾಗಿದೆ.

ಅಭ್ಯಾಸಕ್ರಮ

ಕಾಲುಗಳನ್ನು ನೇರವಾಗಿ ಚಾಚಿ ಬೆನ್ನನ್ನು ನೆಲಕ್ಕೊರಗಿಸಿ ಮುಖ ಮೇಲೆ ಮಾಡಿ ಅಂಗಾತ ಮಲಗಿ. ಎರಡೂ ಕೈಗಳನ್ನು ಪಕ್ಕಕ್ಕೆ ವಿಸ್ತರಿಸಿ, ಭುಜಕ್ಕೆ ಸಮಾನಾಂತರವಾಗಿ ನೇರವಾಗಿರಿಸಿ. ಅಂಗೈಗಳು ಮೇಲ್ಮುಖವಾಗಿರಲಿ. ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿ. ಬಳಿಕ ಎರಡೂ ಕಾಲುಗಳನ್ನು ಜೋಡಿಸಿ, ಮಂಡಿಗಳನ್ನು ತುಸು ಬಿಗಿಗೊಳಿಸಿ, ಪಾದಗಳನ್ನು ಚೂಪಾಗಿಸಿ ಉಸಿರನ್ನು ಹೊರ ಹಾಕುತ್ತಾ ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ 90 ಡಿಗ್ರಿ ಲಂಬವಾಗಿ ನಿಲ್ಲಿಸಿ. ಮತ್ತೆ ಉಸಿರನ್ನು ತೆಗೆದುಕೊಳ್ಳಿ. ಬಳಿಕ ಉಸಿರನ್ನು ಹೊರಹಾಕುತ್ತಾ ಕಾಲುಗಳನ್ನು ಬಲ ಪಕ್ಕಕ್ಕೆ ಮೆಲ್ಲಗೆ ಕೆಳಗಿಳಿಸಿ. ಸೊಂಟವನ್ನು ಬಲಕ್ಕೆ ಹೊರಳಿಸಿ. ಮುಂಡ ಭಾಗ ಸರಿದಾಡದಂತೆ ಇರಿಸಿ. ಈ ಹಂತದಲ್ಲಿ ಪೃಷ್ಠ ಸೊಂಟ ಹಾಗೂ ಸೊಂಟದ ಮೇಲಿನ ಸ್ವಲ್ಪ ಬೆನ್ನಿನ ಭಾಗ ನೆಲದಿಂದ ಮೇಲೆದ್ದಿರುತ್ತದೆ. ಎದೆಯ ಹಿಂಭಾಗದ ಬೆನ್ನು ನೆಲದಿಂದ ಮೇಲೇಳದಂತೆ ನೋಡಿಕೊಂಡು ನೆಲಕ್ಕೊರಗಿಸಿಡಿ. ಅಂತಿಮ ಹಂತದಲ್ಲಿ ಒಂದೆರೆಡು ಸುತ್ತು ಸರಳವಾದ ಉಸಿರಾಟ ನಡೆಸಿ.

ಬಳಿಕ, ಕಾಲುಗಳನ್ನು ಮೇಲೆತ್ತಿ 90 ಡಿಗ್ರಿ ಲಂಬ ಕೋನದಲ್ಲಿ ನಿಲ್ಲಿಸಿ. ಈ ಮೊದಲು ಅಭ್ಯಾಸ ನಡೆಸಿದಂತೆ ವಿರುದ್ಧ ದಿಕ್ಕಿನಲ್ಲಿ ಎಡ ಭಾಗಕ್ಕೆ ಕಾಲುಗಳನ್ನು ಮೆಲ್ಲಗೆ ಕೆಳಗಿಳಿಸಿ. ಇಲ್ಲಿಯೂ ಅಂತಿಮ ಸ್ಥಿತಿಯಲ್ಲಿ ಒಂದೆರೆಡು ಸುತ್ತು ಸರಳವಾಗಿ ಉಸಿರಾಟ ನಡೆಸಿ.

ಸೂಚನೆ: ಕಾಲುಗಳನ್ನು ಪಕ್ಕಕ್ಕೆ ಕೆಳಗೆ ಇಳಿಸುವಾಗ ಮತ್ತು ಮೇಲಕ್ಕೆ ಎತ್ತುವಾಗ ಮಂಡಿಗಳನ್ನು ಮಡಚದಂತೆ, ಕಾಲು ನೇರವಾಗಿರುವಂತೆ ನೋಡಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.