ಚೆನ್ನೈ: ‘ಸುಂದರವಾದ ಜೀವನ ರೂಪಿಸಿಕೊಳ್ಳಲು ಎಂಜಿನಿಯರ್ ಅಥವಾ ವೈದ್ಯರಾಗಬೇಕಾಗಿಲ್ಲ. ಕ್ರೀಡೆಯ ಮೂಲಕವೂ ಸೊಗಸಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ’–
ಪ್ಯಾರಿಸ್ ಒಲಿಂಪಿಕ್ ಕೂಟದ ಮಹಿಳೆಯರ ಶೂಟಿಂಗ್ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕ ಗೆದ್ದಿರುವ ಮನು ಭಾಕರ್ ಅವರ ನುಡಿಗಳಿವು.
22 ವರ್ಷದ ಮನು ಅವರು ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯ ಸಮಾರಂಭದಲ್ಲಿ ಧ್ವಜಧಾರಿಯೂ ಆಗಿದ್ದರು. ತದನಂತರ ಸ್ವದೇಶಕ್ಕೆ ಮರಳಿದ ಮೇಲೆ ಅವರು ಹಲವು ಸನ್ಮಾನ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮಂಗಳವಾರ ಅವರು ಚೆನ್ನೈನ ವೇಲಮ್ಮಾಳ್ ನೆಕ್ಸಸ್ ಶಾಲೆಯಲ್ಲಿ ಸತ್ಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
‘ನನ್ನ ಪಯಣದಲ್ಲಿ ಟೋಕಿಯೊ ಒಲಿಂಪಿಕ್ಸ್ ಬಹುದೊಡ್ಡ ಸವಾಲಾಗಿತ್ತು. ಆಗ ಅನುಭವಿಸಿದ್ದ ವೈಫಲ್ಯದಿಂದ ಹೊರಬರಲು ಬಹಳಷ್ಟು ಕಷ್ಟಪಡಬೇಕಾಯಿತು. ಆ ಒಲಿಂಪಿಕ್ಸ್ ನಲ್ಲಿ ನಾನು ವಿಶ್ವದ ಎರಡನೇ ರ‍್ಯಾಂಕ್ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದೆ. ಆದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಸೋಲಿನ ನಂತರ ಮತ್ತೆ ಕಣಕ್ಕಿಳಿದು ಜಯಿಸುವುದೇ ಕ್ರೀಡೆಯ ನಿಜವಾದ ಸೌಂದರ್ಯವಾಗಿದೆ. ಒಂದು ಸ್ಪರ್ಧೆಯಲ್ಲಿ ಸೋಲಬಹುದು. ಆದರೆ ಮತ್ತೊಂದರಲ್ಲಿ ಜಯಿಸಬಹುದು. ಆದರೆ ಅದಕ್ಕಾಗಿ ಕಠಿಣ ಪರಿಶ್ರಮಪಡುವುದು ಮುಖ್ಯ’ ಎಂದು ಹರಿಯಾಣದ ಮನು ಹೇಳಿದರು.
‘ದೊಡ್ಡ ಕನಸು ಕಾಣಬೇಕು. ಅದನ್ನು ನನಸಾಗಿಸಿಕೊಳ್ಳಲು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕಾರ್ಯೋನ್ಮುಖರಾಗಬೇಕು. ಸೋಲಿರಲಿ, ಜಯವಿರಲೀ ಆತ್ಮವಿಶ್ವಾಸವು ಕುಂದಬಾರಾದು. ಯಾವಾಗಲೂ ಉನ್ನತ ಸಾಧನೆಯತ್ತ ಚಿತ್ತ ನೆಟ್ಟಿರಬೇಕೆಂದು ಎಷ್ಟೋ ಬಾರಿ ನನಗೇ ನಾನೇ ಹೇಳಿಕೊಳ್ಳುತ್ತೇನೆ. ಇದರಿಂದ ಸಾಧನೆಯ ಪಥ ಸುಲಭವಾಗುತ್ತದೆ’ ಎಂದರು.
‘ಜೀವನ ರೂಪಿಸಿಕೊಳ್ಳಲು ಬಹಳಷ್ಟು ಆಯ್ಕೆಗಳಿವೆ. ಬರೀ ವೈದ್ಯ ಅಥವಾ ಎಂಜಿನಿಯರ್ ಆಗಬೇಕೆಂದೇನೂ ಇಲ್ಲ. ಕ್ರೀಡಾ ಜೀವನವೂ ಸುಂದರವಾಗಿದೆ. ಧನಸಹಾಯ ಮತ್ತಿತತರ ಸೌಲಭ್ಯಗಳು ಸಿಗುತ್ತಿವೆ’ ಎಂದರು.
‘ತಾಯಿಯೇ ನನ್ನ ಪ್ರೇರಣೆ. ಇವತ್ತು ನಾನು ಏನೇ ಆಗಿದ್ದರೂ ಅವರೇ ಕಾರಣ. ಯಶಸ್ವಿ ವ್ಯಕ್ತಿಗಳ ಸಾಧನೆಯಿಂದ ಪ್ರೇರಣೆಗೊಳ್ಳುವುದು ತಪ್ಪಲ್ಲ. ಆದರೆ ಅವರಂತೆ ಆಗಬಾರದು. ಅವರಿಗಿಂತಲೂ ವಿಭಿನ್ನವಾದ ಉನ್ನತ ಸಾಧನೆ ಮಾಡಬೇಕೆಂದು ಹೇಳಿದ್ದರು. ಪಾಲಕರ ಪ್ರೋತ್ಸಾಹವಿಲ್ಲದೇ ಯಾವ ಮಗುವೂ ದೊಡ್ಡ ಸಾಧನೆ ಮಾಡಲಾಗುವುದಿಲ್ಲ. ಶಾಲೆಯ ದಿನಗಳಿಂದಲೇ ನಾನು ಶೂಟಿಂಗ್ ಕ್ರೀಡೆಯಲ್ಲಿ ಆಸಕ್ತಿ ವಹಿಸಿದೆ. ಪಾಲಕರು ಮತ್ತು ಶಿಕ್ಷಕರಿಂದ ಪ್ರೋತ್ಸಾಹ ದೊರೆಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.