ADVERTISEMENT

ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ: ಜುಗರಾಜ್‌ ಹ್ಯಾಟ್ರಿಕ್ ಮೋಡಿ

ಭಾರತಕ್ಕೆ ಮಣಿದ ದಕ್ಷಿಣ ಆಫ್ರಿಕಾ

ಪಿಟಿಐ
Published 10 ಫೆಬ್ರುವರಿ 2022, 13:18 IST
Last Updated 10 ಫೆಬ್ರುವರಿ 2022, 13:18 IST
ಗೋಲು ಗಳಿಸಿದ ಭಾರತದ ಜುಗರಾಜ್ ಸಿಂಗ್‌ (ಎಡದಿಂದ ಎರಡನೆಯವರು) ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಟ್ವಿಟರ್‌ ಚಿತ್ರ
ಗೋಲು ಗಳಿಸಿದ ಭಾರತದ ಜುಗರಾಜ್ ಸಿಂಗ್‌ (ಎಡದಿಂದ ಎರಡನೆಯವರು) ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಟ್ವಿಟರ್‌ ಚಿತ್ರ   

ಪೊಚೆಫ್‌ಸ್ಟ್ರೂಮ್‌, ದಕ್ಷಿಣ ಆಫ್ರಿಕಾ: ಯುವ ಡ್ರ್ಯಾಗ್‌ಫ್ಲಿಕರ್‌ ಜುಗರಾಜ್ ಸಿಂಗ್‌ ತಾವಾಡಿದ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲೇ ಮೋಡಿ ಮಾಡಿದರು. ಅವರು ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತ ತಂಡವು ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ 10–2ರಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು.

ಬುಧವಾರ ತಡರಾತ್ರಿ ನಡೆದ ಹಣಾಹಣಿಯಲ್ಲಿ ಜುಗರಾಜ್‌, ನಾಲ್ಕು, ಆರು ಮತ್ತು 23ನೇ ನಿಮಿಷಗಳಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಿನಲ್ಲಿ ಪರಿವರ್ತಿಸಿದರು. ಗುರುಸಾಹಿಬ್‌ಜೀತ್ ಸಿಂಗ್‌ (24, 36ನೇ ನಿಮಿಷ), ದಿಲ್‌ಪ್ರೀತ್ ಸಿಂಗ್‌ (25, 58ನೇ ನಿ.), ಹರ್ಮನ್‌ಪ್ರೀತ್ ಸಿಂಗ್‌ (2ನೇ ನಿ.), ಅಭಿಷೇಕ್ (12ನೇ ನಿ.)ಮತ್ತು ಮನದೀಪ್ ಸಿಂಗ್‌ (27ನೇ ನಿ.) ಭಾರತದ ‍ಪರ ಮಿಂಚಿದರು.

ಆತಿಥೇಯ ತಂಡದ ಡೇನಿಯಲ್‌ ಬೆಲ್‌ (44ನೇ ನಿ.) ಮತ್ತು ರಿಚರ್ಡ್‌ ಪೌಟ್ಜ್‌ (45ನೇ ನಿ.) ಗೋಲು ಹೊಡೆದರು.

ADVERTISEMENT

ಪಂದ್ಯದಲ್ಲಿ ಭಾರತ ತಂಡ ಒಟ್ಟು 12 ಪೆನಾಲ್ಟಿ ಕಾರ್ನರ್‌ ಗಳಿಸಿದ್ದು ತಂಡದ ಪಾರಮ್ಯಕ್ಕೆ ಸಾಕ್ಷಿಯಾಗಿತ್ತು. ಮೊದಲು ಎರಡು ಕ್ವಾರ್ಟರ್‌ಗಳಲ್ಲೇ ತಂಡವು 8–0ಯಿಂದ ಮುಂದಿತ್ತು. ಮೂರನೇ ಕ್ವಾರ್ಟರ್‌ನ ಅಂತ್ಯದ ವೇಳೆಗೆ ಎದುರಾಳಿ ತಂಡವು ಸ್ವಲ್ಪ ಪ್ರತಿರೋಧ ತೋರಿ ಹಿನ್ನಡೆಯನ್ನು 2–9ಕ್ಕೆ ತಂದಿತ್ತು.

ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ತಂಡವು ಹೆಚ್ಚು ರಕ್ಷಣಾತ್ಮಕ ತಂತ್ರದ ಮೊರೆಹೊಕ್ಕಿತು. ಅಷ್ಟೇ ಪ್ರಮಾಣದಲ್ಲಿ ದಾಳಿಗೂ ಒತ್ತು ನೀಡಿ ದಕ್ಷಿಣ ಆಫ್ರಿಕಾ ತಂಡವನ್ನು ಅಚ್ಚರಿಗೆ ತಳ್ಳಿತು.

ಮಂಗಳವಾರ ಭಾರತ 5–0ಯಿಂದ ಫ್ರಾನ್ಸ್ ತಂಡವನ್ನು ಸೋಲಿಸಿತ್ತು. ಎರಡು ಲೆಗ್‌ನ ಎರಡನೇ ಪಂದ್ಯದಲ್ಲಿ ಮತ್ತೊಮ್ಮೆ ಫ್ರಾನ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.