ADVERTISEMENT

ಯೂತ್‌ ಒಲಿಂಪಿಕ್ಸ್‌: ಬೆಳ್ಳಿಗೆ ಕೊರಳೊಡ್ಡಿದ ಪನ್ವಾರ್‌

ಬಾಕ್ಸಿಂಗ್‌ನಲ್ಲಿ ಭಾರತದ ಸವಾಲು ಅಂತ್ಯ

ಪಿಟಿಐ
Published 16 ಅಕ್ಟೋಬರ್ 2018, 14:04 IST
Last Updated 16 ಅಕ್ಟೋಬರ್ 2018, 14:04 IST
ಬೆಳ್ಳಿಯ ಪದಕದೊಂದಿಗೆ ಸಂಭ್ರಮಿಸಿದ ಸೂರಜ್‌ ಪನ್ವಾರ್‌ –ಟ್ವಿಟರ್‌ ಚಿತ್ರ
ಬೆಳ್ಳಿಯ ಪದಕದೊಂದಿಗೆ ಸಂಭ್ರಮಿಸಿದ ಸೂರಜ್‌ ಪನ್ವಾರ್‌ –ಟ್ವಿಟರ್‌ ಚಿತ್ರ   

ಬ್ಯೂನಸ್‌ ಐರಿಸ್‌: ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಸೂರಜ್‌ ಪನ್ವಾರ್‌, ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸೋಮವಾರ ರಾತ್ರಿ ನಡೆದ ಪುರುಷರ 5000 ಮೀಟರ್ಸ್‌ ನಡಿಗೆ ಸ್ಪರ್ಧೆಯಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ. ಪನ್ವಾರ್‌ ಒಟ್ಟು 40 ನಿಮಿಷ 59.17 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

17 ವರ್ಷದ ಭಾರತದ ಅಥ್ಲೀಟ್‌ ಮೊದಲ ಹಂತದಲ್ಲಿ 20 ನಿಮಿಷ 23.30 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಎರಡನೇ ಹಂತದಲ್ಲೂ ಉತ್ತಮ ಸಾಮರ್ಥ್ಯ ತೋರಿದ ಅವರು 20 ನಿಮಿಷ 35.87 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿ ಬೆಳ್ಳಿಯ ಪದಕ ಜಯಿಸಿದರು.

ADVERTISEMENT

ಈಕ್ವೆಡರ್‌ನ ಪ್ಯಾಟಿನ್‌ ಆಸ್ಕರ್‌ (40ನಿಮಿಷ, 51.86 ಸೆಕೆಂಡು) ಈ ವಿಭಾಗದ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಮೊದಲ ಹಂತದ ಸ್ಪರ್ಧೆಯನ್ನು 20 ನಿಮಿಷ 13. 69 ಸೆಕೆಂಡುಗಳಲ್ಲಿ ಪೂರೈಸಿದ್ದ ಅವರು ಎರಡನೇ ಹಂತದಲ್ಲಿ 20 ನಿಮಿಷ 38.17 ಸೆಕೆಂಡುಗಳಲ್ಲಿ ಗುರಿ ತಲುಪಿ ಸಂಭ್ರಮಿಸಿದರು.

ಪೋರ್ಟೊರಿಕಾದ ಜಾನ್‌ ಮೊರೆವು ಈ ವಿಭಾಗದ ಕಂಚಿನ ಪದಕ ಪಡೆದರು.

ಯೂತ್‌ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತ ಗೆದ್ದ ಒಟ್ಟಾರೆ ಮೂರನೇ ಪದಕ ಇದಾಗಿದೆ. 2010ರಲ್ಲಿ ಅರ್ಜುನ್‌ (ಡಿಸ್ಕಸ್‌ ಥ್ರೋ) ಮತ್ತು ದುರ್ಗೇಶ್‌ ಕುಮಾರ್‌ (400 ಮೀಟರ್ಸ್‌ ಹರ್ಡಲ್ಸ್‌) ಅವರು ಬೆಳ್ಳಿಯ ಸಾಧನೆ ಮಾಡಿದ್ದರು.

‘ಯೂತ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದು ಅತೀವ ಖುಷಿ ನೀಡಿದೆ. ಕೂಟಕ್ಕೂ ಮುನ್ನ ಕಠಿಣ ತಾಲೀಮು ನಡೆಸಿದ್ದೆ. ಹೀಗಾಗಿ ಯಶಸ್ಸು ಗಳಿಸಲು ಸಾಧ್ಯವಾಯಿತು. ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಸೀನಿಯರ್‌ ಹಂತದಲ್ಲೂ ಪದಕ ಜಯಿಸುವುದು ನನ್ನ ಗುರಿ. ಅದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಂಡು ಸಾಗುತ್ತೇನೆ’ ಎಂದು ಪನ್ವಾರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಗುಲಿಯಾಗೆ ನಿರಾಸೆ: ಮಹಿಳೆಯರ ಬಾಕ್ಸಿಂಗ್‌ನಲ್ಲಿ ಭಾರತದ ಭರವಸೆಯಾಗಿದ್ದ ಜ್ಯೋತಿ ಗುಲಿಯಾ ಕ್ವಾರ್ಟರ್‌ ಫೈನಲ್‌ನಲ್ಲಿ ನಿರಾಸೆ ಕಂಡರು.

51 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಜ್ಯೋತಿ 0–5 ಪಾಯಿಂಟ್ಸ್‌ನಿಂದ ಇಟಲಿಯ ಮಾರ್ಟಿನಾ ಲಾ ಪಿಯಾನ ಎದುರು ಮಣಿದರು.

ಹೋದ ತಿಂಗಳು ಪೋಲೆಂಡ್‌ನಲ್ಲಿ ನಡೆದಿದ್ದ ಸಿಲೇಸಿಯನ್‌ ಓಪನ್‌ನಲ್ಲಿ ಚಿನ್ನ ಗೆದ್ದಿದ್ದ ಹರಿಯಾಣದ ಜ್ಯೋತಿ, ಮಾರ್ಟಿನಾ ಎದುರಿನ ಪೈಪೋಟಿಯಲ್ಲಿ ಕಿಂಚಿತ್ತೂ ಹೋರಾಟ ತೋರದೆ ಸೋಲೊಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.