ADVERTISEMENT

ಯೂತ್ ಒಲಿಂಪಿಕ್ಸ್: ಸೆಮಿಗೆ ಬೆಂಗಳೂರಿನ ಅರ್ಚನಾ

ಪಿಟಿಐ
Published 10 ಅಕ್ಟೋಬರ್ 2018, 19:12 IST
Last Updated 10 ಅಕ್ಟೋಬರ್ 2018, 19:12 IST
   

ಬ್ಯೂನಸ್ ಐರಿಸ್‌, ಅರ್ಜೆಂಟೀನಾ: ಅಮೋಘ ಸಾಮರ್ಥ್ಯ ತೋರಿದ ಭಾರತದ ಸೌರಭ್ ಚೌಧರಿ, ಇಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಚಿನ್ನ ಗೆದ್ದರು. ಪುರುಷರ 10 ಮೀಟರ್ಸ್ ಏರ್ ರೈಫಲ್ಸ್‌ನಲ್ಲಿ ಬುಧವಾರ ಅವರು ಈ ಸಾಧನೆ ಮಾಡಿದರು.

16 ವರ್ಷದ ಸೌರಭ್‌ ಅಂತಿಮ ಸ್ಪರ್ಧೆಯಲ್ಲಿ ಆರಂಭದಿಂದಲೇ ಆಧಿ ಪತ್ಯ ಸ್ಥಾಪಿಸಿದರು. ಹೀಗಾಗಿ ಒಟ್ಟು 244.2 ಸ್ಕೋರು ಸಂಪಾದಿಸಲು ಅವರಿಗೆ ಸಾಧ್ಯವಾಯಿತು. ದಕ್ಷಿಣ ಕೊರಿಯಾದ ಸಂಗ್‌ ಯುಮ್ಹೊ 236.7 ಸ್ಕೋರುಗಳೊಂದಿಗೆ ಬೆಳ್ಳಿ ಗೆದ್ದರು. ಸ್ವಿಟ್ಜರ್ಲೆಂಡ್‌ನ ಸೊಲಾರಿ ಜೇಸನ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಸೌರಭ್‌ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಸ್ಕೋರು ಗಳಿಸಿ ಅಗ್ರಸ್ಥಾನದಲ್ಲಿದ್ದರು. ಫೈನಲ್‌ನ ಆರಂಭದಲ್ಲಿ ಕೊಂಚ ಹಿನ್ನಡೆ ಕಂಡರೂ ನಂತರ ಚೇತರಿಸಿಕೊಂಡು ಚಿನ್ನಕ್ಕೆ ಗುರಿ ಇಟ್ಟರು.

ADVERTISEMENT

ಭಾರತ ಮಹಿಳಾ ಹಾಕಿ ತಂಡಕ್ಕೆ ಜಯ: ಮುಮ್ತಾಜ್ ಖಾನ್ ಮತ್ತು ಚೇತನಾ ಮಿಂಚಿನ ದಾಳಿಯ ಬಲದಿಂದ ಭಾರತ ಮಹಿಳಾ ತಂಡದವರು 5–ಎ ಸೈಡ್‌ ಹಾಕಿಯಲ್ಲಿ ವೆನೌತು (ದಕ್ಷಿಣ ಪೆಸಿಫಿಕ್‌ ಭಾಗದ ರಾಷ್ಟ್ರ) ವಿರುದ್ಧ 16–0ಯಿಂದ ಗೆದ್ದರು.

ಎರಡನೇ ನಿಮಿಷದಲ್ಲಿ ಲಾಲ್‌ ರೆನ್ಸಿಯಾಮಿ ಗಳಿಸಿದ ಗೋಲಿನ ಮೂಲಕ ಭಾರತ ಖಾತೆ ತೆರೆಯಿತು. ನಂತರದ ಒಂದೂವರೆ ನಿಮಿಷದ ಒಳಗೆ ರೀತ್ ಮತ್ತು ನಾಯಕಿ ಸಲೀಮಾ ಟೆಟೆ ಅವರು ತಲಾ ಒಂದೊದು ಗೋಲು ಗಳಿಸಿದರೆ, ಐದನೇ ನಿಮಿಷದಲ್ಲಿ ಬಲ್ಜೀತ್ ಕೌರ್‌ ಎರಡು ಗೋಲಿನೊಂದಿಗೆ ಮಿಂಚಿದರು.

ಆರನೇ ನಿಮಿಷದಿಂದ ಚೇತನಾ ಮತ್ತು ಮುಮ್ತಾಜ್ ಅವರ ಆಟದ ವೈಭವಕ್ಕೆ ಅಂಗಣ ಸಾಕ್ಷಿಯಾಯಿತು. ಭಾರತಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ಎಂಟನೇ ನಿಮಿಷದಲ್ಲಿ ಮುಮ್ತಾಜ್ ಕೂಡ ಗೋಲು ತಂದುಕೊಟ್ಟರು.

11,12ನೇ ನಿಮಿಷದಲ್ಲೂ ಗೋಲು ಗಳಿಸಿದ ಮುಮ್ತಾಜ್ ಹ್ಯಾಟ್ರಿಕ್‌ ಸಾಧನೆ ಮಾಡಿದರು. 15ನೇ ನಿಮಿಷದಲ್ಲಿ ಮತ್ತೊಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಚೇತನಾ ಅವರು 14 ಮತ್ತು 17ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಹ್ಯಾಟ್ರಿಕ್ ಪೂರ್ತಿಗೊಳಿಸಿದರು. ಲಾಲ್‌ರೆನ್ಸಿಯಾಮಿ 10ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದರು. 13ನೇ ನಿಮಿಷದಲ್ಲಿ ಸಲೀಮಾ ಮತ್ತು ಕೊನೆಯ ಅವಧಿಯಲ್ಲಿ ಇಶಿಕಾ ಚೌಧರಿ ಕೂಡ ಗೋಲು ಗಳಿಸಿದರು.

ಅರ್ಚನಾ ಕಾಮತ್ ಸವಾಲು ಅಂತ್ಯ

ಟೇಬಲ್‌ ಟೆನಿಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಬೆಂಗಳೂರಿನ ಅರ್ಚನಾ ಕಾಮತ್ ಅವರ ಸವಾಲು ಬುಧವಾರ ಅಂತ್ಯಗೊಂಡಿತು. ಸೆಮಿಫೈನಲ್‌ನಲ್ಲಿ ಅವರು ಚೀನಾದ ಯೀಂಗ್ ಶಾ ಸೂನ್‌ ವಿರುದ್ಧ 1–4ಗೇಮ್‌ಗಳಿಂದ ಸೋತರು. ಆದರೂ ಅವರಿಗೆ ಕಂಚು ಗೆಲ್ಲುವ ಸಾಧ್ಯತೆ ಇದೆ. ಕಂಚಿನ ಪದಕಕ್ಕಾಗಿ ಅವರು ರೊಮೇನಿಯಾದ ಆ್ಯಂಡ್ರಿ ಡ್ರಗೊಮ್ಯಾನ್ ಅವರ ವಿರುದ್ಧ ಸೆಣಸಬೇಕಾಗಿದೆ.

ಬೆಳಿಗ್ಗೆ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೆದ್ದು ಅವರು ಕೂಟದ ಸಮಿಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದರು. ಅಜರ್ ಬೈಜಾನ್‌ನ ನಿನ್ ಜಿಂಗ್ ವಿರುದ್ಧ ಅರ್ಚನಾ 13–11, 8–11, 6–11, 11–3, 6–11, 11–3, 6–11, 12–10, 11–7ರಿಂದ ಗೆದ್ದಿದ್ದರು. ಮೊದಲ ಗೇಮ್‌ನಲ್ಲಿ ಪ್ರಯಾಸದಿಂದ ಗೆದ್ದ ಅವರು ನಂತರದ ಎರಡು ಗೇಮ್‌ಗಳನ್ನು ಸೋತರು. ಆದರೆ ಮರು ಹೋರಾಟ ನಡೆಸಿ ಎದುರಾಳಿಯನ್ನು ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.