ಬ್ಯೂನಸ್ ಐರಿಸ್: ಭಾರತದ ಕುಸ್ತಿಪಟು ಸಿಮ್ರನ್ ಅವರು ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.
ಶನಿವಾರ ರಾತ್ರಿ ನಡೆದ ಮಹಿಳೆಯರ 43 ಕೆ.ಜಿ.ಫ್ರೀಸ್ಟೈಲ್ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ.
ಫೈನಲ್‌ನಲ್ಲಿ ಸಿಮ್ರನ್ 6–11 ಪಾಯಿಂಟ್ಸ್‌ನಿಂದ ಅಮೆರಿಕದ ಎಮಿಲಿ ಶಿಲ್ಸನ್ ವಿರುದ್ಧ ಪರಾಭವಗೊಂಡರು.
ಮೊದಲ ಅವಧಿಯಲ್ಲಿ ಶಿಲ್ಸನ್ ಪ್ರಾಬಲ್ಯ ಮೆರೆದರು. ಬಿಗಿಪಟ್ಟುಗಳ ಮೂಲಕ ಭಾರತದ ಜಟ್ಟಿಯನ್ನು ಮ್ಯಾಟ್ ಮೇಲೆ ಉರುಳಿಸಿದ ಅವರು 9–2ರ ಮುನ್ನಡೆ ಗಳಿಸಿದರು.
ಎರಡನೇ ಅವಧಿಯಲ್ಲಿ ಸಿಮ್ರನ್ ಉತ್ತಮ ಸಾಮರ್ಥ್ಯ ತೋರಿದರು. ನಾಲ್ಕು ಪಾಯಿಂಟ್ಸ್ ಗಳಿಸಿದ ಅವರು ಹಿನ್ನಡೆ ತಗ್ಗಿಸಿಕೊಳ್ಳಲಷ್ಟೇ ಶಕ್ತರಾದರು.
ಸಿಮ್ರನ್ ಅವರು 2017ರ ಕೆಡೆಟ್ ವಿಶ್ವ ಚಾಂಪಿಯನ್‌ಷಿಪ್‌ನ 40 ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಶಿಲ್ಸನ್ 2018ರ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಮಾನಸಿ ಅವರು ಎಂಟನೇ ಸ್ಥಾನ ಪಡೆದರು. 57 ಕೆ.ಜಿ.ವಿಭಾಗದ ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಮಾನಸಿ, ಈಜಿಪ್ಟ್‌ನ ಇಮಬಾಬಿ ಅಹ್ಮದ್ ವಿರುದ್ಧ ಸೋತರು.
ಫೈನಲ್‌ಗೆ ಭಾರತ ತಂಡಗಳು: 5 ಎ ಸೈಡ್ ಹಾಕಿಯಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡದವರು ಫೈನಲ್ ಪ್ರವೇಶಿಸಿದರು.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಪುರುಷರ ತಂಡ 3–1 ಗೋಲುಗಳಿಂದ ಅರ್ಜೆಂಟೀನಾವನ್ನು ಮಣಿಸಿತು.
ರಾಹುಲ್ ಕುಮಾರ್ ರಾಜಭರ್ ಮೂರನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ನಂತರ ಸುದೀಪ್ ಚಿರಮಾಕೊ ಕೈಚಳಕ ತೋರಿದರು. ಅವರು 12 ಮತ್ತು 18ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.
ಮಹಿಳಾ ವಿಭಾಗದ ನಾಲ್ಕರ ಘಟ್ಟದ ಹೋರಾಟದಲ್ಲಿ ಭಾರತ 3–0 ಗೋಲುಗಳಿಂದ ಚೀನಾ ಎದುರು ಗೆದ್ದಿತು.
ಮುಮ್ತಾಜ್ ಖಾನ್ ಮೊದಲ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ರೀತ್ ಮತ್ತು ಲಾಲ್ರೆಮ್‌ಸಿಯಾಮಿ ಕ್ರಮವಾಗಿ 5 ಮತ್ತು 13ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು.
ಫೈನಲ್‌ನಲ್ಲಿ ಪುರುಷರ ತಂಡ ಮಲೇಷ್ಯಾ ಎದುರೂ, ಮಹಿಳಾ ತಂಡ ಅರ್ಜೆಂಟೀನಾ ವಿರುದ್ಧವೂ ಸೆಣಸಲಿವೆ.
ಪ್ಯಾಟ್ರಿಕ್ ನಿಧನ: ಯೂತ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ನ (ಫಿಬಾ) ಮಹಾಕಾರ್ಯದರ್ಶಿ ಪ್ಯಾಟ್ರಿಕ್ ಬವುಮನ್ (51) ಭಾನುವಾರ ಹೃದಯಸ್ತಂಭನದಿಂದ ನಿಧನರಾದರು.
1994ರಲ್ಲಿ ಫಿಬಾ ವಕೀಲರಾಗಿ ಕೆಲಸ ಮಾಡಿದ್ದ ಸ್ವಿಟ್ಜರ್‌ಲೆಂಡ್‌ನ ಪ್ಯಾಟ್ರಿಕ್ ಅವರನ್ನು 2002ರಲ್ಲಿ ಮಹಾಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.