ADVERTISEMENT

ಟಿ–20ಯಲ್ಲಿ ದಾಖಲೆ: 344 ರನ್‌ ಸೂರೆಗೈದ ಜಿಂಬಾಬ್ವೆ

ಏಜೆನ್ಸೀಸ್
Published 23 ಅಕ್ಟೋಬರ್ 2024, 15:52 IST
Last Updated 23 ಅಕ್ಟೋಬರ್ 2024, 15:52 IST
<div class="paragraphs"><p>ಶತಕ ದಾಖಲಿಸಿದ ಸಂಭ್ರಮದಲ್ಲಿ ಸಿಕಂದರ್ ರಝಾ </p></div>

ಶತಕ ದಾಖಲಿಸಿದ ಸಂಭ್ರಮದಲ್ಲಿ ಸಿಕಂದರ್ ರಝಾ

   

–ಎಕ್ಸ್‌ ಚಿತ್ರ

ಪ್ಯಾರಿಸ್‌: ಸಿಕಂದರ್ ರಝಾ (ಔಟಾಗದೇ 133; 43ಎ) ಅವರ ಸಿಡಿಲಬ್ಬರ ಬ್ಯಾಟಿಂಗ್‌ ನೆರವಿನಿಂದ ಜಿಂಬಾಬ್ವೆ ತಂಡವು ಟಿ20 ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ ನಾಲ್ಕು ವಿಕೆಟ್‌ಗೆ ದಾಖಲೆಯ 344 ರನ್‌ ಗಳಿಸಿತು. ಇದು ಅಂತರರಾಷ್ಟ್ರಿಯ ಟಿ20 ಕ್ರಿಕೆಟ್‌ ಮಾದರಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ.

ADVERTISEMENT

ಟಿ20 ವಿಶ್ವಕಪ್‌ನ ಆಫ್ರಿಕಾದ ಉಪ ವಿಭಾಗದ ಕ್ವಾಲಿಫೈಯರ್‌ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ದಾಖಲೆಯ ರನ್‌ ಸೇರಿಸಿದ್ದು, ಈ ಮೂಲಕ ಕಳೆದ ವರ್ಷ ಹಾಂಗ್‌ಝೌನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡ (3ಕ್ಕೆ 314) ನಿರ್ಮಿಸಿದ್ದ ದಾಖಲೆಯನ್ನು ಮುರಿಯಿತು.

ಏಳನೇ ಓವರ್‌ನಲ್ಲಿ ಎರಡನೇ ವಿಕೆಟ್‌ ಪತನದ ನಂತರ ಕ್ರೀಸ್‌ಗೆ ಬಂದ ರಝಾ, ಏಳು ಬೌಂಡರಿ ಮತ್ತು 15 ಭರ್ಜರಿ ಸಿಕ್ಸರ್‌ ಸಿಡಿಸಿ ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 33 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಟಿ20 ಮಾದರಿಯಲ್ಲಿ ಎರಡನೇ ಅತಿ ವೇಗದ ಶತಕ ಗಳಿಸಿದ ದಾಖಲೆಯನ್ನು ಹಂಚಿಕೊಂಡರು. ನಮೀಬಿಯಾದ ನಿಕೋಲ್ ಲೋಫ್ಟಿ ಈಟನ್ ಇಷ್ಟೇ ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಎಸ್ಟೋನಿಯಾದ ಜಾನ್ ನಿಕೋಲ್ (27ಎಸೆತ) ಅತಿವೇಗದ ಶತಕದ ದಾಖಲೆ ಹೊಂದಿದ್ದಾರೆ.

ಬೃಹತ್‌ ಮೊತ್ತವನ್ನು ಬೆನ್ನತ್ತಿದ ಗ್ಯಾಂಬಿಯಾ ತಂಡವು 14.4 ಓವರ್‌ಗಳಲ್ಲಿ 54 ರನ್‌ಗೆ ಕುಸಿಯಿತು. ಈ ಮೂಲಕ ಜಿಂಬಾಬ್ವೆ ತಂಡವು ದಾಖಲೆಯ 290 ರನ್‌ಗಳಿಂದ ಗೆದ್ದಿತು. ಇದು ಕೂಡ ರನ್‌ ಆಧಾರದಲ್ಲಿ ಅತಿದೊಡ್ಡ ಅಂತರದ ಗೆಲುವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.