ನವದೆಹಲಿ: ಭಾರತ ಮತ್ತು ವಿದೇಶಗಳ ಒಟ್ಟು ಒಂದು ಸಾವಿರ ಆಟಗಾರರು ಹಾಕಿ ಇಂಡಿಯಾ ಪ್ರೀಮಿಯರ್ ಲೀಗ್ (ಎಚ್‌ಐಎಲ್) ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಏಳು ವರ್ಷಗಳ ನಂತರ ಎಚ್‌ಐಎಲ್ ನಡೆಯಲಿದೆ. ಇದೇ ಮೊದಲ ಸಲ ಮಹಿಳೆಯರ ವಿಭಾಗದ ಟೂರ್ನಿಯೂ ನಡೆಯಲಿದೆ. ಪುರುಷರ ವಿಭಾಗದಲ್ಲಿ ಎಂಟು ತಂಡಗಳ ಆಟಗಾರರಿಗಾಗಿ ಅ.13 ಮತ್ತು 14ರಂದು ಬಿಡ್ ನಡೆಯಲಿದೆ. 15ರಂದು ಮಹಿಳೆಯರ ವಿಭಾಗದ ಬಿಡ್ ಆಯೋಜನೆಗೊಂಡಿದೆ.
‘ಈ ಹರಾಜು ಪ್ರಕ್ರಿಯೆಯು ಅತ್ಯಂತ ಮಹತ್ವದ ಹಾಕಿ ಟೂರ್ನಿಯೊಂದರ ಆರಂಭಕ್ಕೆ ಮುನ್ನುಡಿಯಾಗಿದೆ. ವಿಶ್ವದರ್ಜೆಯ ಈ ಲೀಗ್‌ನಲ್ಲಿ ಮಹಿಳಾ ಹಾಕಿ ಅಭಿವೃದ್ಧಿಗೂ ಒತ್ತು ಸಿಗಲಿದೆ’ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಟ್ಟು ಒಂದು ಸಾವಿರ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಪುರುಷರ ವಿಭಾಗದಲ್ಲಿ ಭಾರತದ 400, ವಿದೇಶಗಳ 150ಕ್ಕೂ ಹೆಚ್ಚು ಆಟಗಾರರಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸ್ಥಳೀಯ 250 ಮತ್ತು ವಿದೇಶಗಳ 70 ಆಟಗಾರ್ತಿಯರು ಇದ್ದಾರೆ.
ಆಟಗಾರರನ್ನು ಮೂರು ಮೌಲ್ಯ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ₹ 2 ಲಕ್ಷ, ₹ 5 ಲಕ್ಷ ಮತ್ತು ₹ 10 ಲಕ್ಷ ವಿಭಾಗಗಳಲ್ಲಿ ಬಿಡ್ ನಡೆಯಲಿದೆ.
ಪುರುಷರ ವಿಭಾಗದಲ್ಲಿ ಮೊದಲಿಗೆ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಕಂಚಿನ ಪದಕ ಜಯಿಸಿದ ಭಾರತ ತಂಡದ ಆಟಗಾರರ ಬಿಡ್ ನಡೆಯಲಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್, ಉಪನಾಯಕ ಹಾರ್ದಿಕ್ ಸಿಂಗ್, ಅನುಭವಿ ಆಟಗಾರರಾದ ಮನಪ್ರೀತ್ ಸಿಂಗ್, ಮನದೀಪ್ ಸಿಂಗ್ ಅವರು ಸ್ಪರ್ಧೆಯಲ್ಲಿದ್ದಾರೆ. ಮಾಜಿ ಆಟಗಾರರಾದ ರೂಪಿಂದರ್ ಪಾಲ್ ಸಿಂಗ್, ಬಿರೇಂದ್ರ ಲಕ್ರಾ ಮತ್ತು ಧರ್ಮವೀರ್ ಸಿಂಗ್ ಅವರೂ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶಗಳಿಂದ ಆರ್ಥರ್ ವ್ಯಾನ್ ಡೊರೆನ್, ಅಲೆಕ್ಸಾಂಡರ್ ಹೆನ್ರಿಕ್ಸ್, ಗೋಂನ್ಜಾಲೊ ಪೀಲಾಟ್, ಜಿಪ್ ಜ್ಯೆನ್ಸೆನ್, ಥೀರಿ ಬ್ರಿಂಕ್‌ಮ್ಯಾನ್ ಮತ್ತು ದಯಾನ್ ಕ್ಯಾಸಿಮ್ ಅವರೂ ಇದ್ದಾರೆ.
ಮಹಿಳೆಯರ ವಿಭಾಗದಲ್ಲಿ ಅನುಭವಿ ಗೋಲ್‌ಕೀಪರ್ ಸವಿತಾ, ನಾಯಕಿ ಸಲೀಮಾ ಟೆಟೆ, ಡ್ರ್ಯಾಗ್ ಫ್ಲಿಕರ್ ದೀಪಿಕಾ, ವಂದನಾ ಕಟಾರಿಯಾ ಮತ್ತು ಲಾಲ್‌ರೆಮ್ಸಿಯಾಮಿ ಮತ್ತಿತರರು ಇದ್ದಾರೆ. ಮಾಜಿ ಆಟಗಾರ್ತಿಯರಾದ ಯೋಗಿತಾ ಬಾಲಿ, ಲಿಲಿಮಾ ಮಿಂಜ್ ಮತ್ತು ನಮಿತಾ ಟೊಪೊ ಅವರೂ ಹೆಸರು ನೊಂದಾಯಿಸಿದ್ದಾರೆ. ವಿದೇಶಿ ಆಟಗಾರ್ತಿಯರಾದ ಡೆಲ್ಫಿನೊ ಮೆರಿನೊ, ಶಾರ್ಲೆಟ್ ಸ್ಟೆಫನ್‌ಹಾರ್ಸ್ಟ್, ಮರಿಯಾ ಗ್ರೆನಾಟೊ, ರಚೆಲ್ ಲಿಂಚ್ ಮತ್ತು ನೈಕಿ ಲಾರೆಂಙ್ ಅವರು ಕಣದಲ್ಲಿದ್ದಾರೆ.
ಪ್ರತಿಯೊಂದು ತಂಡದಲ್ಲಿ ಗರಿಷ್ಠ 24 ಆಟಗಾರರನ್ನು ಸೇರ್ಪಡೆ ಮಾಡಬಹುದು. ಅದರಲ್ಲಿ 16 ಮಂದಿ ಭಾರತೀಯ ಆಟಗಾರರು (ನಾಲ್ವರು ಜೂನಿಯರ್ ಆಟಗಾರರು ಸೇರಿ) ಇರುವುದು ಕಡ್ಡಾಯ. ಡಿಸೆಂಬರ್ 28ರಿಂದ ಟೂರ್ನಿ ಆರಂಭವಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.