ADVERTISEMENT

ಆಗಾಗ ಮೌನವಾಗಿರಿ

ನುಡಿ ನಿದಾನ ಸರಣಿ -15

ಡಾ.ಎನ್.ರಘು
Published 13 ಜುಲೈ 2014, 19:30 IST
Last Updated 13 ಜುಲೈ 2014, 19:30 IST

ಮಾತು ಎನ್ನುವುದು ಮಾನಸಿಕ ಮತ್ತು ಆಂಗಿಕ ಪ್ರಕ್ರಿಯೆಗಳ ಒಂದು ಸಂಯೋಜಿತ ಕ್ರಿಯೆ ಎನ್ನುವುದನ್ನು ಗಮನಿಸಿದ್ದಾಗಿದೆ. ಮಾತು ಸ್ಪಷ್ಟವಾಗಿ ಮೂಡಿಬರಲು ಕಾರಣವಾದ ಧ್ವನ್ಯಂಗಗಳು ಆರೋಗ್ಯವಂತವಾಗಿ, ಸುಸ್ಥಿತಿಯಲ್ಲಿರಬೇಕಾದದ್ದು ಅತ್ಯಗತ್ಯ. ಹೀಗಾಗಿ, ನಮ್ಮ ಧ್ವನಿಯ ಆರೋಗ್ಯದ ಕಡೆಗೆ ವಿಶೇಷವಾಗಿ ಗಮನ ನೀಡಲೇಬೇಕು.

ವಿಶೇಷ ಸಂದರ್ಭಗಳಲ್ಲಿ ಧ್ವನಿಯ ಅಗತ್ಯಬಿದ್ದಾಗ ಮಾತ್ರ ಆರೈಕೆಯ ಬಗ್ಗೆ ಗಮನ ನೀಡುವುದಲ್ಲ.  ಜೀವನ ಪರ್ಯಂತ ಇದನ್ನು ಅಭ್ಯಾಸವನ್ನಾಗಿ ರೂಢಿಸಿಕೊಳ್ಳಬೇಕು. ತಿಂಗಳುಗಟ್ಟಲೆ ಉಪಯೋಗಿಸದೆ ನಿಂತ, ಕಾರು ಅಥವಾ ಸ್ಕೂಟರ್ ಮೊದಲಾದ ಯಂತ್ರಗಳನ್ನು ಇಂಧನ ಹಾಕಿದೊಡನೆಯೇ ಚಲಾಯಿಸಲಾಗುವುದಿಲ್ಲ. ಇದರಂತೆಯೇ ನಮ್ಮ ಕಂಠವೂ ಒಂದು ಅತ್ಯಂತ ಸೂಕ್ಷ್ಮ ಯಂತ್ರ ಎನ್ನುವುದು ನೆನಪಿರಲಿ.  ಧ್ವನಿತಜ್ಞ ರಿಚರ್ಡ್ ಪೇಯ್ನ್ ಹೇಳುವ ಈ ಕೆಳಗಿನ ಅಂಶಗಳನ್ನು ಮನನ ಮಾಡಿ ನಿರಂತರವಾಗಿ ಅಭ್ಯಾಸಮಾಡಿ:

* ಸ್ವರೋಚ್ಚಾರಣೆಯ ಸರಿಯಾದ ಕ್ರಮವನ್ನು ಅನುಸರಿಸಿ ಮಾತನಾಡಿ. ತಪ್ಪು ವಿಧಾನಗಳಿಂದಾಗಿ  ಧ್ವನಿಯ ಸಮಸ್ಯೆಗಳು ಉಂಟಾಗುತ್ತವೆ.

* ನಿಮ್ಮ ಧ್ವನಿಗೆ ದಣಿವು ಉಂಟಾಗಿದೆ ಎನಿಸಿದಲ್ಲಿ ಮುಂದಿನ 24 ಗಂಟೆಗಳ ಅವಧಿಗೆ ವಿಶ್ರಾಂತಿ ನೀಡಿ.

* ನಿಮಗೆ ನಿರಂತರವಾಗಿ ಒಣಕೆಮ್ಮಿನ ಸಮಸ್ಯೆಯಿದ್ದಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞರನ್ನು ಭೇಟಿಯಾಗಿ ಪರಿಹಾರ ಪಡೆದುಕೊಳ್ಳಿ.

* ಶ್ಲೇಷ್ಮ (ಮ್ಯೂಕಸ್) ಹೆಚ್ಚಾಗಿ ಉತ್ಪತ್ತಿಯಾಗುತ್ತಿದ್ದರೆ,   ತಜ್ಞ ವೈದ್ಯರನ್ನು ಭೇಟಿಯಾಗಿ ಅವರಿಂದ ಸೂಕ್ತ ಔಷಧೋಪಚಾರ ಪಡೆದುಕೊಳ್ಳಿ. ಉಳಿದಂತೆ, ಧ್ವನಿ ಪೆಟ್ಟಿಗೆಯ ಆರೋಗ್ಯಕ್ಕೆ ಶ್ಲೇಷ್ಮದ ಪದರ (ಮ್ಯೂಕಸ್ ಲೇಯರ್) ಪೂರಕವಾಗಿರುವಂಥದ್ದು.

* ಧೂಮಪಾನ ನಿಮ್ಮ ಧ್ವನಿಗೆ ಹಾನಿಕರ. ದೀರ್ಘಕಾಲೀನ ಧೂಮಪಾನದಿಂದಾಗಿ ನಿಮ್ಮ ಧ್ವನಿಪೆಟ್ಟಿಗೆ ಹಾಳಾಗುತ್ತದೆ. ಧೂಮಪಾನದಿಂದಾಗಿ ನಿಮ್ಮ ಉಸಿರಿನ ಮೇಲಿನ ನಿಯಂತ್ರಣ ತಪ್ಪುವುದರಿಂದ ಸ್ವರೋಚ್ಚಾರಣೆಗೆ ಹಾನಿಯುಂಟಾಗುತ್ತದೆ. ಆದ್ದರಿಂದ ಅದನ್ನು ಸಂಪೂರ್ಣ ತ್ಯಜಿಸುವುದೇ ಉತ್ತಮ.

* ಹಾಲಿನ ಉತ್ಪನ್ನಗಳು ನಿಮ್ಮ ಶ್ಲೇಷ್ಮ (ಕಫ)ದ ಉತ್ಪತ್ತಿಯನ್ನು ಹೆಚ್ಚಾಗಿಸುವ ಸಾಧ್ಯತೆಗಳಿರುವುದರಿಂದ, ವೃತ್ತಿಪರವಾಗಿ ಧ್ವನಿಯನ್ನು ಬಳಸುವ ಸಂದರ್ಭಗಳಲ್ಲಿ ಇವುಗಳ ಬಳಕೆಯನ್ನು ಕಡಿಮೆಮಾಡುವುದು ಅಥವಾ ನಿಲ್ಲಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು.

* ಹೊಗೆಯಿರುವ ವಾತಾವರಣದಿಂದ ದೂರವಿರಿ.

* ಮದ್ಯಸೇವನೆಯ ಕಾರಣ ಧ್ವನಿ ಪೆಟ್ಟಿಗೆಗೆ ರಕ್ತದ ಪೂರೈಕೆ ಕಡಿಮೆಯಾಗುವುದರಿಂದ ಮಾತಿನ ಮೇಲೆ ಹತೋಟಿ ತಪ್ಪುತ್ತದೆ. ವೃತ್ತಿಪರವಾಗಿ ಧ್ವನಿಯ ಬಳಕೆಯ ಸಂದರ್ಭಗಳಿಗೆ ಮೊದಲು ಮದ್ಯಸೇವನೆಯನ್ನು ವರ್ಜಿಸುವುದು ಕ್ಷೇಮ.

* ಗದ್ದಲದ ಸಮಾರಂಭಗಳಲ್ಲಿ ನೀವು ಮಾತನಾಡಲು ಹೆಚ್ಚಿನ ಒತ್ತಡ ಹಾಕಬೇಕಾಗುತ್ತವೆ. ಈ  ಸಂದರ್ಭಗಳಲ್ಲಿ ಧ್ವನಿಯ ಆರೋಗ್ಯದೆಡೆ ಗಮನವಿಡಿ. ಮೆಲ್ಲಗೆ ಮಾತನಾಡಿ.

* ಮಾತನಾಡುವಾಗ ನಿಮ್ಮ ಗಂಟಲು ಒಣಗುತ್ತಿದ್ದರೆ ಮೇಲಿಂದ ಮೇಲೆ ತುಸು ನೀರು ಕುಡಿಯಿರಿ.

* ಸೋಡಾ ಮಿಶ್ರಿತ ಪಾನೀಯಗಳು ‘ತೇಗು’ ಉತ್ಪತ್ತಿಯಾಗಿಸುವುದರಿಂದ ಅವುಗಳನ್ನೂ ಉಪಯೋಗಿಸದೆ ಇರುವುದು ಸೂಕ್ತ.

* ಯಾವುದಾದರೂ ವೃತ್ತಿಪರ ಪ್ರಸ್ತುತೀಕರಣ ಸಂದರ್ಭಗಳಲ್ಲಿ ನಿಮ್ಮ ಧ್ವನಿ ಹಾಳಾದಲ್ಲಿ, ಆ ಸಂದರ್ಭವನ್ನು ನಿಭಾಯಿಸಲು ಪಿಸುಗುಟ್ಟುವಂತೆ ಮಾತನಾಡುವುದರಿಂದ ನಿಮ್ಮ ಧ್ವನಿಯ ಆರೋಗ್ಯ ಮತ್ತಷ್ಟು ಕೆಡುವ ಸಾಧ್ಯತೆಗಳೇ ಹೆಚ್ಚು.

* ಹೆಚ್ಚು ಅವಧಿಗೆ ನಿಮ್ಮ ಧ್ವನಿಯನ್ನು ಬಳಸುವ ಅಗತ್ಯವಿರುವ ಸಂದರ್ಭಗಳಲ್ಲಿ ನಿಮ್ಮ ದೂರವಾಣಿ ಕರೆಗಳನ್ನು ಸ್ವೀಕರಿಸಲು ಬೇರೆಯವರನ್ನು ನಿಯೋಜಿಸಿ. ದೊಡ್ಡದಾಗಿ ಹರ್ಷೋದ್ಗಾರ ಬೇಡ. ಗದ್ದಲದ ವಾತಾವರಣದಲ್ಲಿ ಮಾತನಾಡಬೇಡಿ.

* ಅಧ್ಯಾಪಕರು ತರಗತಿಯ ಅವಧಿಯ ಉದ್ದಕ್ಕೂ ಮಾತನಾಡುವುದು ಕಡಿಮೆಮಾಡಿ. ನಡುನಡುವೆ ವಿದ್ಯಾರ್ಥಿಗಳು ಸಮಸ್ಯೆ ಬಿಡಿಸುವಂತೆ ನಿಯೋಜಿಸಿ ಆ ಅವಧಿಯಲ್ಲಿ ಧ್ವನಿಗೆ ವಿಶ್ರಾಂತಿ ನೀಡಿ.

* ಅವಕಾಶ ಸಿಕ್ಕಾಗಲೆಲ್ಲ ಧ್ವನಿಗೆ ವಿಶ್ರಾಂತಿ ನೀಡುವುದು, ಮೌನವನ್ನು ಪಾಲಿಸುವುದನ್ನು ಅಭ್ಯಾಸ ಮಾಡಿ. ಐದೇ ನಿಮಿಷದಷ್ಟು ಸಣ್ಣ ಅವಧಿಯ ಮೌನವೂ ನಿಮ್ಮ ಮನಸ್ಸಿನ ಮತ್ತು ಧ್ವನಿಯ ವಿಶ್ರಾಂತಿಗೆ ಸಹಾಯಕವಾಗಬಲ್ಲದು.

* ಪಾಠದ ನಡುವೆ ಪೂರಕವಾಗಿ ಬಹುಮಾಧ್ಯಮ ಉಪಕರಣಗಳನ್ನು ಬಳಸುವುದರಿಂದ ಮೌನಕ್ಕೆ ಅವಕಾಶ ದೊರಕುವುದರಿಂದ ಧ್ವನಿಗೆ ವಿಶ್ರಾಂತಿ ದೊರೆಯುತ್ತದೆ.

* ಆಟದ ಮೈದಾನದ ವಾತಾವರಣದಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸಬೇಕಾದ ಸಂದರ್ಭದಲ್ಲಿ, ದೂರದಲ್ಲಿರುವ ವಿದ್ಯಾರ್ಥಿಗಳನ್ನು ಕೂಗಿ ಕರೆಯುವುದು ಬೇಡ. ಸನ್ನೆಗಳ ಮೂಲಕ ಹತ್ತಿರ ಕರೆದು ಮಾತನಾಡಿಸಿ. ಹೀಗೆ ಮಾಡುವುದು ಒಂದು ಆದರ್ಶ ಸ್ಥಿತಿಯೇ ಹೊರತು ಸಾಮಾನ್ಯ ಸಂದರ್ಭಗಳು ಇದಕ್ಕೆ ಹೊರತಾಗಿರುತ್ತವೆ. ಆದ್ದರಿಂದ, ವಿದ್ಯಾರ್ಥಿಯನ್ನು ಹತ್ತಿರ ಕರೆದು ಅಥವಾ ನೀವೇ ಅವರ ಬಳಿ ಹೋಗಿ ಮೆಲ್ಲಗೆ ಮಾತನಾಡಿಸುವಷ್ಟನ್ನಾದರೂ ರೂಢಿಸಿಕೊಳ್ಳಬಹುದು.

* ಸಂಜೆ ಮತ್ತು ವಾರಾಂತ್ಯಗಳಲ್ಲಿ ಅತಿ ಕಡಿಮೆ ಮಾತನಾಡುವುದನ್ನು ಮತ್ತು ಆದಷ್ಟೂ ಮೌನವನ್ನು ಪಾಲಿಸಿ. ಧ್ವನಿಗೆ ವಿಶ್ರಾಂತಿ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

* ನೆಗಡಿಯಾಗಿ ಮೂಗು ಕಟ್ಟಿಕೊಂಡಿದ್ದರೂ ವೃತ್ತಿಪರವಾಗಿ ಮಾತನಾಡಲೇಬೇಕಾಗಿ ಬಂದಾಗ, ಬಿಸಿನೀರಿನ ಹಬೆಯನ್ನು ಆಘ್ರಾಣಿಸುವುದು ಸೂಕ್ತ. ಕುದಿವ ನೀರು ಬಳಸುವುದು ಬೇಡ. ಜೊತೆಗೆ ಇದಕ್ಕೆ ಇನ್ನಾವುದೇ ಹೊಗೆ ಬಂದರೆ ಗಂಟಲ ಶ್ಲೇಷ್ಮ ಪದರ ಒಣಗುವುದರಿಂದ, ಹಾನಿಯೇ ಹೆಚ್ಚು.

* ನಮ್ಮ ಧ್ವನಿಯ ಕುರಿತು ನಾವೇ ಸಂಪೂರ್ಣ ಕಾಳಜಿವಹಿಸುವುದು ಅಗತ್ಯವಾದರೂ, ಕೆಲವೊಂದು ಸಂದರ್ಭಗಳಲ್ಲಿ ವೈದ್ಯಕೀಯ ಸಹಾಯವನ್ನೂ ಬಳಸಲೇಬೇಕು. ನಿಮ್ಮ ತುಟಿ, ಹಲ್ಲು, ಬಾಯಿ ಮತ್ತು ಗಂಟಲ ಸಮಸ್ಯೆಗಳಿಗೆ, ಅಸಿಡಿಟಿಯ ತೊಂದರೆಗಳಿಗೆ ಕೂಡಲೇ ನುರಿತ ವೈದ್ಯರನ್ನು ಸಂಪರ್ಕಿಸುವುದು ಉಚಿತ.

* ಕೃತಕ ದಂತ ಬಳಸುತ್ತಿದ್ದರೆ, ಅವು ನಿಮ್ಮ ತಲೆ, ಕತ್ತು ಮತ್ತು ಬೆನ್ನಿನ ಭಾಗದ ಚಲನೆಯಿಂದ ಎಷ್ಟು ಪ್ರಭಾವಿತವಾಗುತ್ತಿವೆ ಗಮನಿಸಿ ಅದಕ್ಕೆ ತಕ್ಕಂತೆ ಮರು ವಿನ್ಯಾಸ ಮಾಡಬೇಕಾದ ಅಗತ್ಯವಿರುತ್ತದೆ. ಇದನ್ನು ದಂತವೈದ್ಯರೇ ಮಾಡಬೇಕಾದೀತು. ಇಲ್ಲವಾದಲ್ಲಿ ಮಾತನಾಡುವ ಸಂದರ್ಭಗಳಲ್ಲಿ ಕೆಳಭಾಗದ ಹಲ್ಲಿನ ಪಂಕ್ತಿಯ ಚಲನೆಗೂ ಮೇಲ್ಭಾಗದ ಹಲ್ಲಿನ ಪಂಕ್ತಿಯ ಚಲನೆಗೂ ಸಮನ್ವಯವುಂಟಾಗದೆ ಮಾತಿನ ಸ್ವರೂಪ ಅಂದಗೆಡಬಹುದು.

* ವಿನಾಕಾರಣ ನಿಮ್ಮ ಧ್ವನಿಯಲ್ಲಿ ಏರುಪೇರು ಉಂಟಾಗಿದ್ದರೆ ಅಥವಾ ಧ್ವನಿ ನಷ್ಟವಾಗಿದ್ದರೆ, ಸಾಕಷ್ಟು ವಿಶ್ರಾಂತಿಯನ್ನು ನೀಡಿಯೂ ನಿಮ್ಮ ಧ್ವನಿ ಉತ್ತಮಗೊಂಡಿರದಿದ್ದರೆ, ನಿಮ್ಮ ಉಸಿರಾಟದಲ್ಲಿ ಏರುಪೇರಾಗಿದ್ದು ವೃತ್ತಿಪರವಾಗಿ ನಿಮ್ಮ ಧ್ವನಿಯನ್ನು ಬಳಸಲು ಸಾಧ್ಯವಾಗದೆ ಹೋದಲ್ಲಿ  ವೈದ್ಯರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳುವುದೇ ಸೂಕ್ತ.

ಧ್ವನಿಯನ್ನು ಉತ್ತಮಪಡಿಸಿಕೊಳ್ಳಲು ಈ ಕೆಳಗಿನ ಕೆಲವು ವಿಧಾನಗಳನ್ನು ಅನುಸರಿಸಿದರೆ ಅನುಕೂಲವಾದೀತು:
* ಪ್ರತಿದಿನ ಕನಿಷ್ಟ 20 ನಿಮಿಷದಷ್ಟು ಕಾಲ ನಿಮ್ಮ ಧ್ವನಿಗೆ ಬೇಕಾದ ವ್ಯಾಯಾಮಕ್ಕಾಗಿ ಸಮಯವನ್ನು ಮೀಸಲಿಡಿ. ನಿರಂತರವಾಗಿ ಅಭ್ಯಾಸಮಾಡಿ.

* ಯೋಗಾಸನಗಳ ಅಭ್ಯಾಸದಿಂದ ನಿಮ್ಮ ನಿಲುವು ಮತ್ತು ಉಸಿರಾಟ ಕ್ರಮಬದ್ಧವಾಗುವುದರಿಂದ ಇವುಗಳು ಧ್ವನಿಯ ಆರೋಗ್ಯಕ್ಕೆ ಪೂರಕವಾಗುತ್ತವೆ.

* ವಾರಕ್ಕೊಮ್ಮೆಯಾದರೂ ಆಯ್ದ ಕೆಲವು ಪುಟಗಳನ್ನು ಸಶಬ್ದವಾಗಿ ಓದಿ, ನಿಮ್ಮ ಉಚ್ಚಾರಣಾ ದೋಷಗಳನ್ನು ಗಮನಿಸಿಕೊಂಡು ಅವುಗಳ ನಿವಾರಣೆಯ ಕುರಿತು ಆಲೋಚಿಸಿ ಕಾರ್ಯಪ್ರವೃತ್ತರಾಗಿ.

* ಧ್ವನಿಯಲ್ಲಿ ಜೀವಂತಿಕೆ ತರಲು, ಮಕ್ಕಳ ಕಥೆಗಳನ್ನು ನಾಟಕೀಯವಾಗಿ ನಿರೂಪಿಸಲು ಯತ್ನಿಸಿ.

* ನೀವು ಇಷ್ಟಪಡುವ ಮಾದರಿ ಧ್ವನಿಯ ವ್ಯಕ್ತಿಗಳ ಪ್ರಸ್ತುತೀಕರಣವನ್ನು ಆಳವಾಗಿ ಗಮನಿಸಿ ಅದನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಅಭ್ಯಾಸಮಾಡಿ.

* ಅಗತ್ಯವೆನಿಸಿದರೆ ನುರಿತ ಧ್ವನಿಶಿಕ್ಷಕರಿಂದ, ಕ್ರಮಬದ್ಧ ತರಬೇತಿಯನ್ನು ಪಡೆದುಕೊಳ್ಳಿ. ಇವೆಲ್ಲ ಕೇವಲ ಮಾರ್ಗದರ್ಶಿ ಸೂತ್ರಗಳಷ್ಟೇ. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಬಗ್ಗೆ ವಾಕ್‌ಶ್ರವಣ ತಜ್ಞರನ್ನು ಸಂಪರ್ಕಿಸುವುದು ಕ್ಷೇಮ. ಏನೇ ಆದರೂ ಧ್ವನಿಯ ಅಭ್ಯಾಸದಲ್ಲಿ ನಿಯಮಬದ್ಧತೆ ಇರಬೇಕಾದದ್ದು ಅಗತ್ಯ. ಅದಕ್ಕಾಗಿ ದೃಢ ಸಂಕಲ್ಪ ಮಾಡಬೇಕಾದದ್ದು ನೀವೇ.

  99860 01369
ಮುಂದಿನವಾರ (ಧ್ವನಿ ಮತ್ತು ನಾಟಕೀಯತೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.