ಸಮಸ್ಯೆಯ ಸಂಕಟದಲ್ಲಿರುವವರಲ್ಲಿ, ಕೋಪ, ದು:ಖ, ಕೀಳರಿಮೆ ಇತ್ಯಾದಿ ನಕಾರಾತ್ಮಕ ಭಾವನೆಗಳು ಸುತ್ತುಗಟ್ಟುತ್ತವೆ. ಈ ಸ್ಥಿತಿಯಲ್ಲಿ ಮನ:ಪೂರ್ವಕವಾಗಿ ಸಮಾಧಾನ ಹೇಳುವವರು ಸಿಕ್ಕದಿದ್ದಲ್ಲಿ, ಒಂಟಿತನದಿಂದ ಪೇಚಾಡುತ್ತಾರೆ. ಅಂತಹ ಸಮಯದಲ್ಲಿ, ಸಮಾಧಾನದ ಹಿತವಚನಗಳು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಂಡಿರುವವರಿಗೆ ಸಂಜೀವಿನಿ. ಈ ಕಾರಣಗಳಿಂದಾಗಿ ಸಮಾಲೋಚನೆಗೆ ಆದ್ಯತೆ ಇದೆ. ಸಲಹೆ ಕೊಡುವವನ ಮತ್ತು ಸಲಹೆ ಕೇಳುವವನ ಆಶ್ರಿತರ ನಡುವೆ ಸಲಹೆಗಳನ್ನೊಳಗೊಂಡ ಸಂದರ್ಭೋಚಿತವಾದ ಹಿತನುಡಿಗಳೇ ಆಪ್ತ ಸಲಹೆ.
ಆಪ್ತ ಸಲಹೆಗಾರನು ತನ್ನ ಕಾರ್ಯನಿರ್ವಹಣೆಗೆ ಅಗತ್ಯವಾಗಿ ಕೌಶಲ್ಯವನ್ನು ಪಡೆದವನಾಗಿರಬೇಕು. ಮೊದಲನೆಯದಾಗಿ, ಸಲಹೆ ಕೇಳುವವನ ಮಾತುಗಳುನ್ನು ಏಕಾಗ್ರಚಿತ್ತದಿಂದ ಕೇಳಬೇಕು.
ಡಾ. ನಿಕೋಲಸ್ ಸಮೀಕ್ಷೆಯ ಪ್ರಕಾರ ಒಬ್ಬ ವ್ಯಕ್ತಿಯು ಮಾತನಾಡುವಾಗ, ಕೇಳುವವನು ನಾಲ್ಕರಷ್ಟು ವೇಗವಾಗಿ ಯೋಚನೆ ಮಾಡುತ್ತಿರುತ್ತಾನೆ. ಹೀಗಾಗಿ, ಆಲಿಸುತ್ತಿರುವವನಿಗೆ ಪ್ರತಿ ನಿಮಿಷದ ಮುಕ್ಕಾಲರಷ್ಟು ಸ್ವಂತ ಯೋಚನೆಗಳಿಂದ ಕೂಡಿರುತ್ತದೆ. ಕೇವಲ ಕಾಲು ನಿಮಿಷ ಮಾತ್ರ ಕೇಳುತ್ತಿರುತ್ತಾನೆ. ಇನ್ನೊಂದು ಸಮೀಕ್ಷೆಯ ಪ್ರಕಾರ ಒಂದು ದಿವಸದಲ್ಲಿ ಒಬ್ಬ ವ್ಯಕ್ತಿಯಲ್ಲಿ 70,000 ಯೋಚನೆಗಳು ಚಲಿಸುತ್ತವೆ. ಇವೆರಡು ಕಾರಣಗಳು ಏಕಾಗ್ರತೆಗೆ ಅಡ್ಡಿಯಾಗಿರುತ್ತವೆ.
ಎರಡನೆಯದಾಗಿ, ವರ್ತನೆಯ ವಿಜ್ಞಾನ ಪ್ರಕಾರ ಆಂಗಿಕ ಭಾಷೆ ಆಡುವ ಮಾತಿನ 7% ಭಾಗ ಮಾತ್ರ ಸಂವಹನದಲ್ಲಿ ತಿಳಿದು ಬರುತ್ತದೆ; ಮಾತನಾಡುವ
ಧಾಟಿಯಿಂದ - ತಡವರಿಸುವುದು, ಉಚ್ಚಾರಣೆ 38% ಭಾಗ ಮಾತ್ರ ಮತ್ತು 55% ಗೋಚರವಾಗುವ ನಡಿಗೆ, ಹಸ್ತದ ಚಲನೆ, ಮುಖಭಾವ, ದೃಷ್ಟಿಯ ನೇರ ಸಂಕಲ್ಪಗಳಿಂದ ತಿಳಿದು ಬರುತ್ತದೆ. ಬಾಹ್ಯ ಪ್ರಕಟಿತ ನೆರವಾಗುವ ಚಿಹ್ನೆಗಳನ್ನೊಳಗೊಂಡ ಹಿತನುಡಿಗಳಿಂದ, ಅಪರಿಚಿತ ಆಶ್ರಿತನೂ ನಂಬಿಕೆಯಿಂದ, ಸಹಕರಿಸುವ ಸಾಧ್ಯತೆ ಇದೆ.
ಮೂರನೆಯದಾಗಿ ಆಶ್ರಿತನ ಭಾವನೆಗಳು, ಸಂಕಲ್ಪಗಳು, ವ್ಯಕ್ತಿಯ ದೈಹಿಕ ಚಲನೆಗಳನ್ನು ಅನುಕರಿಸುವ ಮಟ್ಟಿಗೆ ತನ್ನಲ್ಲೆ ಅದನ್ನು ತನ್ನದಾಗಿ ಅನುಭವಿಸುವ ಶಕ್ತಿ. ತಾದಾತ್ಮಕ ಭೂತಿಯನ್ನು ಆಶ್ರಿತನಿಗೆ ನೇರವಾಗಿ ಬಾಯಿಮಾತಿನಿಂದ, ಮೌಖಿಕವಾಗಿ ಅಥವಾ ನೇರ ದೃಷ್ಟಿಕೋನದ ಮೂಲಕವಾಗಲಿ ಮೂಡಿಸಬೇಕು.
ನಾಲ್ಕನೆಯದಾಗಿ ಗುಣ ವಾಚನಗಳಿಂದ ಆಶ್ರಿತನಲ್ಲಿ ಹುರಿದುಂಬಿಸಬೇಕು. ಇದರಿಂದಾಗಿ ಆಶ್ರಿತನ ಮತ್ತು ಸಮಾಲೋಚಕ ಇಬ್ಬರ ನಡುವೆ ನಂಬಿಕೆ, ವಿಶ್ವಾಸ ಇಮ್ಮಡಿಯಾಗುವ ಸಾಧ್ಯತೆ ಇದೆ.
ಈ ರೀತಿಯ ನೆರವನ್ನು ಪಡೆಯುತ್ತಿರುವ ಆಶ್ರಿತನು ತನ್ನ ಹಿನ್ನೆಲೆಯನ್ನು ಮುಚ್ಚು ಮರೆಯಿರದೆ ತಿಳಿಸುವ ಸಾಧ್ಯತೆ ಇದೆ.
ತಾದಾತ್ಮಕ ಭಾವನೆ, ಏಕಾಗ್ರತೆ ಮತ್ತು ಪ್ರೀತಿ ನೀಡುವುದರಿಂದ ಆಶ್ರಿತನಿಗೆ 30% ಸಮಸ್ಯೆಯು ಕಡಿಮೆಯಾಗುತ್ತದೆ ಎಂಬುದು ಒಂದು ಸಿದ್ಧಾಂತ.
ಸಮಾಲೋಚನೆಯಲ್ಲಿ ಇರಬೇಕಾದ ಈ ನಾಲ್ಕು ಕೌಶಲಗಳ ಲಕ್ಷಣಗಳನ್ನು ಜಗತಾತ್ಮಾನಂದರ ಲೇಖನ ಮತ್ತು ಒಂದು ಘಟನೆಯಲ್ಲಿ ಕಾಣಬಹುದು.
ಜಗತಾತ್ಮಾನಂದರ ಲೇಖನಿಯ ಸಾರಾಂಶ: ಸಮಾಲೋಚಕನು ಆಶ್ರಿತನ ಕೌಟುಂಬಿಕ ಹಾಗೂ ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಆತನ ನಂಬಿಕೆ, ದೃಷ್ಟಿಕೋನ, ಬಾಲ್ಯದ ಅನುಭವಗಳು, ವಿದ್ಯಾಭ್ಯಾಸ, ಮಿತ್ರರು, ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಅವನಿಗೆ ಅರ್ಥವಾಗುವ ರೀತಿಯಲ್ಲಿ ಸದ್ಯದ ಪರಿಸ್ಥಿತಿಗೆ ಕಾರಣ ತಿಳಿಹೇಳ ಬೇಕು. ದೀರ್ಘಕಾಲದಿಂದ ಬೆಳಸಿಕೊಂಡು ಬಂದ ನಿಷೇಧಾತ್ಮಕ ಭಾವನಾ ವೈಪರೀತ್ಯಗಳನ್ನು ದೂರಮಾಡಲು ರಚನಾತ್ಮಕವಾದ ಭಾವನೆಗಳನ್ನು ಹೇಗೆ ರೂಪಿಸಕೊಳ್ಳಬೇಕೆಂಬುದನ್ನು ಹೇಳಬೇಕು. ಇದು ಸೂಕ್ತ ಚಿಕಿತ್ಸೆ. ಆ ವಿಧಾನವನ್ನು ಅನುಸರಿಸಲು, ಒಬ್ಬ ಮನೋರೋಗಿಯನ್ನು ಪರಿಶೀಲಿಸಿ, ಚಿಕಿತ್ಸೆ ನೀಡಲು, ಸುಮಾರು ಇಪ್ಪತ್ತು ಗಂಟೆಗಳ ಕಾಲ ಬೇಕು. ಅಮೆರಿಕದಲ್ಲಿ ಪ್ರತಿದಿನ ಸಾಮಾನ್ಯ ವೈದ್ಯರೊಬ್ಬರು ಸರಾಸರಿ ಇಪ್ಪತ್ಮೂರು ಮನೋರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ.
ಸಮಾಲೋಚನೆಯ ಮೂಲ ಮನಸ್ಸು. ಮನಸ್ಸಿನ ಚಲನವಲನಗಳ ರೀತಿ ಸಮಾಲೋಚನೆಯ ಗುಣಮಟ್ಟವನ್ನು ನಿರ್ಧರಿಸುತ್ತವೆ. ಮನಸ್ಸು ಚಂಚಲವಾಗಿರದೆ ಶಾಂತಿಯಿಂದ ಇರಬೇಕು. ಚಿಂತೆ, ಭಯ, ಉದ್ವೇಗಳಿಂದ ಕೂಡಿದ ನಕಾರಾತ್ಮಕ ಭಾವನೆಗಳನ್ನು ಬಿತ್ತಿದಾಗ, ರೋಗಾಣುಗಳಿಂದ ನಮ್ಮನ್ನು ರಕ್ಷಿಸುವ ಸಾವಿರದ ಆರುನೂರು ಬಿಳಿ ರಕ್ತಕಣಗಳು ನಿರ್ಧಿಷ್ಟಾವಧಿಯಲ್ಲಿ ನಾಶವಾಗುತ್ತವೆ. ಉತ್ಸಾಹ, ಧೈರ್ಯ, ಸಂತೋಷಗಳನ್ನುಂಟು ಮಾಡುವ ಸಕಾರಾತ್ಮಕ ಭಾವನೆಗಳನ್ನು ಹರಿಯಗೊಟ್ಟಾಗ ಸಾವಿರದ ಐನೂರು ಬಿಳಿ ರಕ್ತಕಣಗಳು ವೃದ್ಧಿಯಾಗುತ್ತವೆ.
ನಕಾರಾತ್ಮಕ ಅನಿಷ್ಟಗಳನ್ನು ತಡೆಗಟ್ಟಲು ನಮ್ಮ ಪೂರ್ವಿಕರು ಒಂದು ಪ್ರಬಲ ಮತ್ತು ಅಮೂಲ್ಯವಾದ ಶಸ್ತ್ರವನ್ನು ತಿಳಿಸಿಕೊಟ್ಟಿದ್ದಾರೆ. ಅದೇ ಯೋಗ.
ದಕ್ಷತೆಯಿಂದ ಸಮಾಲೋಚಕನು ಸೇವೆ ಸಲ್ಲಿಸಲು ಶಿಕ್ಷಣ ಅತ್ಯಗತ್ಯ. ಬೆಂಗಳೂರಿನಲ್ಲಿ ಹೆಸರಾಂತ ಎರಡು ಶಿಕ್ಷಣ ಕೇಂದ್ರಗಳು ಆ ಅವಶ್ಯಕತೆಯನ್ನು ಪೂರೈಸುತ್ತಿವೆ. ಒಂದು, ಹಿಂದೂ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಸ್ಥಾಪಿತವಾಗಿರುವ, ಪ್ರಸನ್ನ ಆಪ್ತ ಸಲಹಾ ಕೇಂದ್ರ. ಈ ಸಂಸ್ಥೆಯು ನಾಲ್ಕು ದಶಕಗಳಿಂದ ಉಚಿತ ವೈದ್ಯಕೀಯ ಸಲಹೆ ಮತ್ತು ಆಪ್ತ ಸಲಹೆ ತರಬೇತಿಯ ಕೇಂದ್ರವನ್ನು ಸ್ಥಾಪಿಸಿದೆ. ಇದರಿಂದ ಸಾವಿರಾರು ಜನರು ಪ್ರಯೋಜನ ಪಡೆದಿದ್ದಾರೆ. ಈ ಸಂಸ್ಥೆಯ ಒಂದು ಶಾಖೆಯು ಮಲ್ಲೇಶ್ವರದಲ್ಲಿ ದಕ್ಷ ಸಮಾಲೋಚಕರಿಂದ ಸೇವೆ ಸಲ್ಲಿಸುತ್ತಿದೆ. ಎರಡನೆಯದು ಬಂಜಾರ ಅಕಾಡಮಿ. ಇಲ್ಲಿ ಇನ್ನೂರಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ ಉಚಿತ ಸಲಹೆಯ ಜೊತೆಗೆ ಈ ತರಬೇತಿ ಕೇಂದ್ರ ‘ಸಹಾಯ ಹಸ್ತ’ ಎಂಬ ಹೆಸರಿನಲ್ಲಿ ಸೇವಾಕಾರ್ಯವನ್ನು ನೆರವೇರಿಸುತ್ತಿದೆ.
ದಕ್ಷ ಆಪ್ತಸಲಹೆಯಿಂದ ಜೀವನ ಚಕ್ರದ ವಿವಿಧ ಹಂತಗಳಲ್ಲಿ ಬದುಕಿನ ಶೈಲಿಯನ್ನು ಉತ್ತುಂಗ ಸ್ಥಾನಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ. ಆದರೆ ಮನೋವೈದ್ಯರ ಸಲಹೆಯನ್ನು ಪಡೆಯುವುದೇ ಅವಮಾನವೆಂದು ಭಾವಿಸಲಾಗುತ್ತದೆ. ಆಪ್ತ ಸಲಹಾ ಕ್ರಮವು ನಮ್ಮ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಚೌಕಟ್ಟಿಗೆ ಹೊಂದುವಂತೆ ಮಾರ್ಪಾಡಾಗಬೇಕು. ಮನೋರೋಗವೂ ದೈಹಿಕ ರೋಗದಂತೆ ಎಂಬ ಅರಿವನ್ನು ಸಾಮಾನ್ಯ ಜನರಿಗೆ ತಿಳಿಯಪಡಿಸಬೇಕು.
ಆಪ್ತ ಸಲಹೆಗೆ ಸಂಬಂಧಿಸಿದಂತೆ ಜುಲೈ 20ರಿಂದ ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ತರಬೇತಿ ಆರಂಭಿಸಲಾಗುತ್ತಿದೆ.
(ಮಾಹಿತಿಗೆ: 95352 79608, 99864 37960)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.