ADVERTISEMENT

‘ಕಾಬೂಲಿವಾಲಾ’ ನ ಕ್ರಿಕೆಟ್ ಪ್ರೀತಿ

ಕ್ರಿಕೆಟಿಗ ಸಲೀಂ ದುರಾನಿಯೊಂದಿಗೆ ಮಾತುಕಥೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 12:53 IST
Last Updated 17 ಜೂನ್ 2018, 12:53 IST
ಸಲೀಂ ದುರಾನಿ (ಬಲ)
ಸಲೀಂ ದುರಾನಿ (ಬಲ)   

ಅಫ್ಗಾನಿಸ್ತಾನ ಕ್ರಿಕೆಟ್ ತಂಡ ಇದೀಗ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದೆ. ಆದರೆ 58 ವರ್ಷಗಳ ಹಿಂದೆಯೇ ಅಫ್ಗನ್ ಮೂಲದ ಆಟಗಾರ ಟೆಸ್ಟ್ ಆಡಿದ್ದರು. ಅದೂ ಭಾರತ ತಂಡದ ಪರವಾಗಿ!

ಹೌದು; ಅವರು ಸಲೀಂಭಾಯಿ ದುರಾನಿ. ಎಡಗೈ ಸ್ಪಿನ್ನರ್ ಮತ್ತು ಬ್ಯಾಟ್ಸ್‌ಮನ್ ಆಗಿ 13 ವರ್ಷಗಳ ಕಾಲ ಭಾರತ ತಂಡದಲ್ಲಿ ಮಿಂಚಿದವರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗುಜರಾತ್, ರಾಜಸ್ಥಾನ ಮತ್ತು ಸೌರಾಷ್ಟ್ರ ತಂಡಗಳ ಪರ ಆಡಿದ್ದರು. ಈ ದೇಶದ ಕ್ರಿಕೆಟ್ ರಂಗ ಕಂಡ ಉತ್ತಮ ಆಲ್‌ರೌಂಡರ್‌ಗಳಲ್ಲಿ ದುರಾನಿ ಕೂಡ ಒಬ್ಬರು.

ಟೈಗರ್ ಪಟೌಡಿ, ಫಾರೂಕ್  ಇಂಜಿನಿಯರ್‌ ಅವರೊಂದಿಗೆ ತಂಡದಲ್ಲಿದ್ದವರು ದುರಾನಿ. ಜೂನ್ 14ರಂದು ಬೆಂಗಳೂರಿಗೆ ಬಂದಿದ್ದರು. ಭಾರತ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವಣ ಟೆಸ್ಟ್‌ ಪಂದ್ಯದಲ್ಲಿ ಆಡಿದ ಅಫ್ಗನ್ ಆಟಗಾರರಿಗೆ ಶುಭ ಹಾರೈಸಿದರು. ಚೊಚ್ಚಲ ಟೆಸ್ಟ್ ಆಡಿದ ತಮ್ಮ ಪೂರ್ವಿಕರ ದೇಶದ ಆಟಗಾರರ ಆಟವನ್ನು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯ ಹೂರಣ ಇಲ್ಲಿದೆ.

ADVERTISEMENT

* ಅಫ್ಗಾನಿಸ್ತಾನ ತಂಡಕ್ಕೆ ಟೆಸ್ಟ್‌ ಮಾನ್ಯತೆ ದೊರೆತಿದೆ. ಇವತ್ತಿನ ಅಪಾರವಾದ ಸ್ಪರ್ಧೆಯಲ್ಲಿ ತಂಡವು ಉನ್ನತ ಮಟ್ಟಕ್ಕೆ ಬೆಳೆಯಬಹುದೇ?
ಮೊದಲ ಪಂದ್ಯ ಆಡುವಾಗ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳೂ ಬಲಿಷ್ಠವಾಗಿರಲಿಲ್ಲ. ಏಳು–ಬೀಳುಗಳನ್ನು ಕಾಣುತ್ತ ಬೆಳೆದು ನಿಂತಿವೆ. ಅಫ್ಗಾನಿಸ್ತಾನ ತಂಡಕ್ಕೂ ಅದೇ ರೀತಿ ಬೆಳೆಯುವ ಸಾಮರ್ಥ್ಯ ಖಂಡಿತವಾಗಿಯೂ ಇದೆ. ಆದರೆ, ಈ ತಂಡದ ಆಟಗಾರರು ಅಲ್ಪತೃಪ್ತರಾಗಬಾರದು. ಇಂದಿನ ಸ್ಪರ್ಧೆಯಲ್ಲಿ ಉಳಿದು ಬೆಳೆಯಬೇಕಾದರೆ ಅಪಾರ ಶ್ರಮಪಡಬೇಕು. ಆಟದ ಎಲ್ಲ ಮಜಲುಗಳನ್ನೂ ಕಲಿಯಬೇಕು. ಕಠಿಣ ಅಭ್ಯಾಸ, ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಮುಖ್ಯ. ಚೆನ್ನಾಗಿ ಆಡಿದರೆ ಉಳಿಯುತ್ತಾರೆ. ಇಲ್ಲದಿದ್ದರೆ ಮೂಲೆಗುಂಪಾಗುತ್ತಾರೆ.

* ಅಫ್ಗನ್ ತಂಡವು ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಮಾದರಿಗಳಲ್ಲಿ ಉತ್ತಮವಾಗಿ ಆಡಿದೆ. ಆದರೆ ಅವರ ದೇಶದಲ್ಲಿ ಇನ್ನೂ ಮೂಲಸೌಲಭ್ಯಗಳು ಅಭಿವೃದ್ಧಿಯಾಗಿಲ್ಲ. ಈ ಪರಿಸ್ಥಿತಿಯಲ್ಲಿ ತಂಡದ ಬೆಳವಣಿಗೆ ಸಾಧ್ಯವೇ?
ಅಫ್ಗನ್ ದೇಶದಲ್ಲಿ ಭಯೋತ್ಪಾದನೆಯ ಕರಾಳತೆ ಮರೆಯಲು ಕ್ರಿಕೆಟ್‌ ನೆರವಾಗುತ್ತಿದೆ. ಅಲ್ಲಿಯ ಯುವಜನರು ಕ್ರೀಡೆಯತ್ತ ಮನಸ್ಸು ಮಾಡುತ್ತಿದ್ದಾರೆ. ಇದೀಗ ದೇಶಕ್ಕೆ ಟೆಸ್ಟ್‌ ಮಾನ್ಯತೆ ದೊರಕಿರುವುದು ಉತ್ತೇಜನಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಅಲ್ಲಿಯ ಸರ್ಕಾರವೂ ಹೆಚ್ಚಿನ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಬಹುದು.

* ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ್ದ ಅಫ್ಗನ್ ಆಟಗಾರ ರಶೀದ್ ಖಾನ್ ಕುರಿತು ನಿಮ್ಮ ಅನಿಸಿಕೆ ಏನು?
ರಶೀದ್ ಖಾನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡಬಲ್ಲರು. ವಿಭಿನ್ನ ರೀತಿಯ ಎಸೆತಗಳನ್ನು ಪ್ರಯೋಗಿಸುವ ಕೌಶಲ್ಯ ಇದೆ.  ಗೂಗ್ಲಿಯನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರೇಷ್ಠ ಬೌಲಿಂಗ್ ಮಾಡುವ ಸಾಮರ್ಥ್ಯ ಅವರಿಗೆ ಇದೆ. ಟ್ವೆಂಟಿ–20, ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದು ಬೇರೆ. ಟೆಸ್ಟ್‌ ಪಂದ್ಯಗಳಲ್ಲಿ ಆಡುವ ರೀತಿಯೇ ಬೇರೆ. ಅವರಿಗೆ ಅದರ ಪಾಠ ಈಗ ಶುರುವಾಗಿದೆ. ತಂಡದಲ್ಲಿರುವ  ಮುಜೀಬ್ ಉರ್ ರೆಹಮಾನ್ ಕೂಡ ಒಳ್ಳೆಯ ಬೌಲರ್.

* ಅಫ್ಗನ್ ಕ್ರಿಕೆಟ್ ಬೆಳವಣಿಗೆಗೆ ಭಾರತ ನೀಡುತ್ತಿರುವ ನೆರವು ತೃಪ್ತಿಕರವಾಗಿದೆಯೇ?
ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಷಯದಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದೆ. ಅಫ್ಗನ್ ತಂಡಕ್ಕೆ ಟೆಸ್ಟ್‌ ಆಡಲು ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ. ಅಷ್ಟೇ ಅಲ್ಲ. ಭಾರತದಲ್ಲಿಯೂ ಕೂಡ ಹಾಲಿ ಮತ್ತು ಮಾಜಿ ಆಟಗಾರರೆಲ್ಲರಿಗೂ ಧನಸಹಾಯ ನೀಡುತ್ತಿದೆ. ಇಂತಹ ಕ್ರಮಗಳಿಂದಲೇ ಕ್ರಿಕೆಟ್‌ ಬೆಳೆಯುತ್ತಿದೆ. ಈ ಕ್ರೀಡೆಯತ್ತ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

* ನೀವು ಆಡುವಾಗಿನ ಕ್ರಿಕೆಟ್‌ಗೂ ಇಂದಿನ ಆಟಕ್ಕೂ ಇರುವ ವ್ಯತ್ಯಾಸವೇನು?
(ನಗು) ಅದನ್ನು ಶಬ್ದಗಳಲ್ಲಿ ಹೇಳುವುದು ಹೇಗೆ ಎಂದು ಅರ್ಥವಾಗುತ್ತಿಲ್ಲ. ಇವತ್ತಿನ ಕ್ರಿಕೆಟ್‌ ಅಗಾಧವಾಗಿ ಬೆಳೆದಿದೆ. ಆಗ ಬರೀ ಟೆಸ್ಟ್ ಕ್ರಿಕೆಟ್ ಮಾತ್ರ ಇತ್ತು. ಈಗ ಟ್ವೆಂಟಿ–20 ಹೆಚ್ಚು ಅಬ್ಬರಿಸುತ್ತಿದೆ. ಆದರೆ ಟೆಸ್ಟ್‌ ಕ್ರಿಕೆಟ್‌ ತನ್ನ ಮಹತ್ವವನ್ನು ಇಂದಿಗೂ ಉಳಿಸಿಕೊಂಡಿದೆ. ಆಟದಲ್ಲಿ ವೇಗ ಹೆಚ್ಚಿದೆ. ತಂತ್ರಜ್ಞಾನದ ಪ್ರವೇಶದಿಂದ ಫಿಟ್‌ನೆಸ್‌ ಮಟ್ಟ ಹೆಚ್ಚಿದೆ. ಆಟಗಾರರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಇದು ಹೀಗೆ ಮುಂದುವರಿಯಲಿ.

* ಭಾರತ ತಂಡವು ಈ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ. ಅಲ್ಲಿ  ಭಾರತವು ಸರಣಿ ಗೆಲ್ಲಬಹುದೇ?
ಈಗ ಇರುವ ತಂಡವು ಅತ್ಯುತ್ತಮವಾಗಿದೆ. ವಿರಾಟ್ ಕೊಹ್ಲಿ ಉತ್ತಮ ನಾಯಕ. ಸಮತೋಲನವಾಗಿರುವ ತಂಡವು ಇಂಗ್ಲೆಂಡ್‌ ನೆಲದಲ್ಲಿ ಜಯ ದಾಖಲಿಸುವ ಸಾಮರ್ಥ್ಯ ಹೊಂದಿದೆ.

* ಬೆಂಗಳೂರಿನ ನೆನಪುಗಳ ಬಗ್ಗೆ.
ನಾನು ಬೇರೆ ಬೇರೆ ರಾಜ್ಯಗಳ ತಂಡಕ್ಕೆ ಆಡಿದ್ದೇನೆ. ಆದರೆ ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ. ಇಲ್ಲಿ ನನ್ನ ಆತ್ಮೀಯ ಸ್ನೇಹಿತರಾದ ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಪ್ರಸನ್ನ ಇದ್ದಾರೆ. ಅವರೆಲ್ಲ ಭಾರತದ ಕ್ರಿಕೆಟ್‌ಗೆ ನೀಡಿದ ಅಮೂಲ್ಯ ಕಾಣಿಕೆ ಮರೆಯಲು ಸಾಧ್ಯವೇ?

**

ಸಲೀಂ ದುರಾನಿ ಬಗ್ಗೆ...

1934ರಲ್ಲಿ ಅಫ್ಗಾನಿಸ್ತಾನದ ಕಾಬೂಲಿನಲ್ಲಿ ಸಲೀಂ ಜನಿಸಿದ್ದರು. ನಂತರದ ದಿನಗಳಲ್ಲಿ ಅವರ ಕುಟುಂಬವು ಭಾರತಕ್ಕೆ ಬಂದು ನೆಲೆಸಿತ್ತು. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗುಜರಾತ್, ರಾಜಸ್ಥಾನ ಮತ್ತು ಸೌರಾಷ್ಟ್ರ ತಂಡಗಳನ್ನು ಪ್ರತಿನಿಧಿಸಿದ್ದರು. ಎಡಗೈ  ಆಲ್‌ರೌಂಡರ್ ಆಗಿದ್ದ ಸಲೀಂ ಅವರು 170 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದರು. 1960 ರಿಂದ 1973ರ ಅವಧಿಯಲ್ಲಿ ಭಾರತ ತಂಡದಲ್ಲಿ 29 ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.