ರಾಜ್ಯದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣದ ಜೊತೆಗೆ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣದೊಂದಿಗೆ ಕೌಶಲವನ್ನೂ ಸಂಪಾದಿಸಿಕೊಳ್ಳುತ್ತಿದ್ದಾರೆ.
ಬ್ರಿಟಿಷರು ಆರಂಭಿಸಿದ ಐಟಿಐಗಳಿಗೆ ಶಿಕ್ಷಕರನ್ನು ನೇಮಕ ಮಾಡಲು ಮುಂಬೈ ಸರ್ಕಾರ 1950ರಲ್ಲಿ ತಾಂತ್ರಿಕ ಶಾಲೆ ಸ್ಥಾಪಿಸಿ, ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿತು. ಹುಬ್ಬಳ್ಳಿ, ಭದ್ರಾವತಿ, ಕಲಬುರ್ಗಿ, ವಿಜಾಪುರ, ಬಳ್ಳಾರಿಗಳಲ್ಲಿ ಆರಂಭವಾದ ಈ ಶಾಲೆಗಳಲ್ಲಿ ಜೊತೆಗೆ ಸ್ಮಿತ್ (ಲೋಹದ ಕೆಲಸ) ಎಂಬ ಕೋರ್ಸ್ ಕೂಡ ಆರಂಭಿಸಿತು. 1965ರಲ್ಲಿ, ಈ ಶಾಲೆಗಳನ್ನು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಾಗಿ ಬದಲಾಯಿಸಿ, ಪ್ರೌಢ ಶಿಕ್ಷಣದ ಜೊತೆಗೆ ತಾಂತ್ರಿಕ ಶಿಕ್ಷಣದ ಪಠ್ಯಕ್ರಮ ರಚಿಸಲಾಯಿತು. ನಂತರ ಕಾರವಾರದಲ್ಲೂ ಒಂದು ಶಾಲೆ ತೆರೆದು, ಮುಂದೇ ಇದನ್ನು ಮಂಗಳೂರಿಗೆ ಸ್ಥಳಾಂತರಗೊಳಿಸಲಾಯಿತು. ವಿಜಯಪುರದ ಜೆಟಿಎಸ್ ಬಾಗಲಕೋಟೆಗೆ ಸ್ಥಳಾಂತರಗೊಂಡಿತು.
ಕಿರಿಯ ತಾಂತ್ರಿಕ ಶಾಲೆಗಳು ತಾಂತ್ರಿಕ ಶಿಕ್ಷಣ ಇಲಾಖೆಯ ಆಡಳಿತಕ್ಕೆ ಒಳಪಡುತ್ತವೆ. ಆದರೆ, ಪರೀಕ್ಷೆಯ ನಿರ್ವಹಣೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ವಹಿಸಿಕೊಂಡಿದೆ. ಈ ಶಾಲೆಗಳಲ್ಲಿ ಮೆಕಾನಿಕಲ್, ಎಲೆಕ್ಟ್ರಿಷಿಯನ್, ಎಂಜಿನಿಯರಿಂಗ್ ಡ್ರಾಯಿಂಗ್ ಜೊತೆಗೆ ಒಂದು ವಿಭಾಗದಲ್ಲಿ(ಟರ್ನಿಂಗ್, ಫಿಟ್ಟರ್, ಇಲೆಕ್ಟ್ರೀಷಿಯನ್, ಕಾರ್ಪೆಂಟರ್ ) ತಾಂತ್ರಿಕ ಶಿಕ್ಷಣದೊಡನೆ ಇತರೆ ಸಾಮಾನ್ಯ ಶಾಲೆಗಳಂತೆ ಆರು ವಿಷಯಗಳನ್ನು ಬೋಧಿಸಲಾಗುತ್ತದೆ.
ಎಂಟನೇ ತರಗತಿಗೆ ಸೇರಿದ ವಿದ್ಯಾರ್ಥಿ ಮೊದಲು ವರ್ಷ ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಒಳಗೊಂಡ ಆರು ವಿಷಯಗಳೊಂದಿಗೆ ತಾಂತ್ರಿಕ ಶಿಕ್ಷಣದ ಬುನಾದಿ ಹಾಕಲಾಗುತ್ತದೆ. 8ನೇ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕಾರ್ಪೆಂಟರ್ ಮತ್ತು ಫಿಟ್ಟಿಂಗ್, ಎಂಜಿನಿಯರಿಂಗ್ ಡ್ರಾಯಿಂಗ್, ಶಾಪ್ ಥಿಯರಿಯನ್ನು ಸಾರ್ವತ್ರಿಕವಾಗಿ ಬೋಧಿಸಲಾಗುತ್ತದೆ. ಒಂಭತ್ತನೆ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಟರ್ನಿಂಗ್, ಎಲೆಕ್ಟ್ರಿಷಿಯನ್, ಫಿಟ್ಟಿಂಗ್, ಕಾರ್ಪೆಂಟರಿ ಮುಂತಾದ ವಿಭಾಗಗಳಿಗೆ ವಿದ್ಯಾರ್ಥಿಗಳನ್ನು ವಿಂಗಡಣೆ ಮಾಡಲಾಗುತ್ತದೆ. ಎರಡು ವರ್ಷ ಒಂದೇ ವಿಷಯದಲ್ಲಿ ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ನ ಒಂದು ವಿಭಾಗದಲ್ಲಿ ಬುನಾದಿ ಹಾಕಿದಂತಾಗುತ್ತದೆ.
ಎಲ್ಲ ಪ್ರೌಢ ಶಾಲೆಯ ವಿದ್ಯಾರ್ಥಿಗಳು 625 ಅಂಕಗಳಿಗೆ ಪರೀಕ್ಷೆ ಬರೆದರೆ, ಈ ಶಾಲೆಯ ವಿದ್ಯಾರ್ಥಿಗಳು 825 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ತಾಂತ್ರಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ₨500 ಸ್ಟೈಫಂಡ್ ನೀಡುತ್ತದೆ. ಈ ಶಾಲೆಯ 8ನೇ ತರಗತಿ ಪ್ರವೇಶಕ್ಕೆ 60 ಸೀಟುಗಳಿರುತ್ತವೆ. ಅಂದರೆ, ಒಟ್ಟು 180 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುತ್ತಾರೆ.
‘ಈ ಶಾಲೆಯ ವಿದ್ಯಾರ್ಥಿಗಳು ಮೆಕಾನಿಕಲ್ ಮತ್ತು ಎಲೆಕ್ಟ್ರಿಷಿಯನ್ ವಿಷಯದಲ್ಲಿ ಅನ್ವಯಿಕ ಗಣಿತದ ಸಮಸ್ಯೆಗಳನ್ನು ಬಿಡಿಸುವುದರಿಂದ ಪಿಯುಸಿ ವಿಜ್ಞಾನ ವಿಭಾಗ ಮತ್ತು ಡಿಪ್ಲೊಮಾ ಕಠಿಣವೆನಿಸುವುದಿಲ್ಲ. ಇಲ್ಲಿ ಕಲಿತ ವಿದ್ಯಾರ್ಥಗಳು ಎಂಜಿನಿಯರಿಂಗ್ ಅಥವಾ ಮೆಡಿಕಲ್ ಸೇರುತ್ತಾರೆ’ ಎಂದು ಇಲ್ಲಿಯ ಶಿಕ್ಷಕರು ಅನಿಸಿಕೆ ಹೇಳುತ್ತಾರೆ.
ಮೀಸಲಾತಿ: ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಐಟಿಐ ಮತ್ತು ಡಿಪ್ಲೊಮಾ ಪ್ರವೇಶದಲ್ಲಿ ಶೇ 5ರಷ್ಟು ಮೀಸಲಾತಿ ಕಲ್ಪಿಸಿದೆ. ಈ ವಿದ್ಯಾರ್ಥಿಗಳಲ್ಲಿ ಶೇ 80ರಷ್ಟು ಜನ ಡಿಪ್ಲೊಮಾ ಅಥವಾ ಎಂಜಿನಿಯರಿಂಗ್ ಸೇರುತ್ತಾರೆ. ಹೈಸ್ಕೂಲ್ ಹಂತದಲ್ಲಿ ತಾಂತ್ರಿಕ ಶಿಕ್ಷಣದ ಅರಿವು ಹೊಂದಿರುವುದರಿಂದ ಅವರಿಗೆ ಉನ್ನತ ಹಂತದ ತಾಂತ್ರಿಕ ಶಿಕ್ಷಣ ಕಠಿಣವಾಗುವುದಿಲ್ಲ. ಇನ್ನು ಕೆಲವರು ವಿದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ್ದರಿಂದ ಶಾಲೆಗೆ ವಿಶೇಷ ಮಾನ್ಯತೆ ಇದೆ.
ಏಷ್ಯಾದಲ್ಲಿ ಪ್ರತಿಷ್ಠಿತ ಕಂಪೆನಿ ಎನಿಸಿಕೊಂಡ ಕ್ವೆಸ್ಟ್ ಗ್ಲೋಬಲ್ ಎಂಜಿನಿಯರ್‍ಸ್‌ನ ಸಿಇಓ ಅಜಿತ್‌ಪ್ರಭು ಈ ಶಾಲೆಯ ವಿದ್ಯಾರ್ಥಿಯಾಗಿದ್ದರು. ಈ ಶಾಲೆಗೆ ಸರ್ಕಾರ ಅನುದಾನ ನೀಡದ ಕಾರಣ, ವಿದ್ಯಾರ್ಥಿಗಳು ವರ್ಕ್‌ಶಾಪ್‌ನಲ್ಲಿ ಕೌಶಲ ಕರಗತ ಮಾಡಿಕೊಳ್ಳದಿರುವುದನ್ನು ಮನಗಂಡಿದ್ದ ಇವರು ಹುಬ್ಬಳ್ಳಿಯ ಜೆಟಿಎಸ್ ಶಾಲೆಯ ವೆಚ್ಚ ನಿರ್ವಹಣೆಗೆ ಧನಸಹಾಯ ಮಾಡುತ್ತಿದ್ದಾರೆ.
‘ಜೆಟಿಎಸ್‌ಗೆ ಪ್ರವೇಶ ಸಿಕ್ಕರೇ ಅದೃಷ್ಟ ಎಂಬ ಕಾಲವಿತ್ತು, ಆದರೆ ಇತ್ತೀಚೆಗೆ ಜೆಟಿಎಸ್ ಕಡೆ ವಿದ್ಯಾರ್ಥಿಗಳ ಒಲವು ಕಡಿಮೆಯಾಗುತ್ತಿದೆ. 1965ರಲ್ಲಿ ಜೆಟಿಎಸ್ ಆರಂಭವಾದಗಿನಿಂದ ಇಲ್ಲಿಯ ತಾಂತ್ರಿಕ ವಿಷಯಗಳ ಪಠ್ಯಕ್ರಮ ಒಮ್ಮೆಯು ಪುನಾರಚನೆಯಾಗಿಲ್ಲ. ವಿದ್ಯಾರ್ಥಿಗಳು ಹಳೆಯ ತಾಂತ್ರಿಕ ಕೌಶಲ ಕಲೆಯುತ್ತಿರುವುದರಿಂದ ಉನ್ನತ ಅಭ್ಯಾಸಕ್ಕೆ ಸಹಾಯಕವಾಗುತ್ತಿಲ್ಲ. ಪಠ್ಯಕ್ರಮ ಪುನಾರಚನೆ ಮಾಡಿ ಹೊಸ ತಂತ್ರಜ್ಞಾನಗಳಾದ ಕಂಪ್ಯೂಟರ್ ವಿಜ್ಞಾನ, ಮಾಹಿತಿ ತಂತ್ರಜ್ಞಾನದಂತಹ ವಿಷಯಗಳನ್ನು ಪರಿಚಯಿಸಬೇಕು. ಜೆಟಿಎಸ್ ಮುಚ್ಚುವ ಹಂತ ತಲುಪಿವೆ. ಇಲ್ಲಿ ತಾಂತ್ರಿಕ ವಿಷಯಗಳ ಪುನರ್‌ರಚನೆ ಮಾಡದ ಹೊರತು ಮುಚ್ಚುವುದು ಉತ್ತಮ’ ಎಂದು ಶಾಲೆಯ ನಿವೃತ್ತ ಶಿಕ್ಷಕ ಶ್ರೀಧರ್ ಚಕ್ರವರ್ತಿ ಹೇಳುತ್ತಾರೆ.
‘ಉತ್ತಮ ಶಾಲೆಯನ್ನು ಇಲಾಖೆ ಮುಚ್ಚುವ ಹಂತಕ್ಕೆ ತಂದಿದೆ. ಇಲಾಖೆ ಹಿಂದೆ ಮುಚ್ಚಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇಲ್ಲಿಗೆ ಪ್ರತಿಭಾವಂತರು ಬರುವುದರಿಂದ ಶಾಲೆ ನವೀಕೃತಗೊಳಿಸಬೇಕು’ ಎಂದು ಹುಬ್ಬಳ್ಳಿ ಜೆಟಿಎಸ್‌ನ ನಿವೃತ್ತ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸರ್ಕಾರದ ನಿರ್ಲಕ್ಷ್ಯ
ತಾಂತ್ರಿಕ ಇಲಾಖೆಯ ಸುಪರ್ದಿಗೆ ಬರುವ ಈ ಶಾಲೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಲಕ್ಷಿಸುತ್ತಿರುವುದರಿಂದ ಸೌಲಭ್ಯ ವಂಚಿತವಾಗಿದೆ. ಸರ್ಕಾರದಿಂದ ಶಿಫಾರಸು ಆದ 229 ಸಿಬ್ಬಂದಿಯಲ್ಲಿ 141 ಹುದ್ದೆಗಳು 2009ರಿಂದ ಖಾಲಿ ಇವೆ. ಉಳಿದ ಸಿಬ್ಬಂದಿ ಕೂಡ ಬರುವ ಐದು ವರ್ಷದೊಳಗೆ ನಿವೃತ್ತಿ ಹೊಂದಲಿದೆ. ಮೂಲ ಸೌಲಭ್ಯ ಕಲ್ಪಿಸಲು ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿದ್ಯಾರ್ಥಿಗಳನ್ನು ಆಕರ್ಷಿಸಲು ಹಿಂದೆ ಬೀಳುತ್ತಿದೆ. ಈ ಶಾಲೆಯನ್ನು ಜನ ಸಾಮಾನ್ಯರಿಗೆ ಪರಿಚಯಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಪಾಲಿಟೆಕ್ನಿಕ್ ಆರಂಭ
ಕಳೆದ ಮೂರು ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಇಲಾಖೆ ಡಿಪ್ಲೊಮಾ ಕೋರ್ಸ್ ಆರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದ ಇಲ್ಲಿಯ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ, ಕ್ರೀಡಾಕೋಣೆ ಇಲ್ಲದಂತಾಗಿದೆ ಮತ್ತು ಶಾಲೆಯ ವೇಳಾಪಟ್ಟಿ ಬದಲಾಗಿ ತೊಂದರೆ ಅನಿಭವಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ನೋವು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.