ADVERTISEMENT

ಗುರು ಗೌರವಿಸೋಣ ಬನ್ನಿ

ಪರಮೇಶ್ವರಯ್ಯ ಸೊಪ್ಪಿಮಠ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

1957ರಲ್ಲಿ ರಷ್ಯವು ಅಂತರಿಕ್ಷ ನೌಕೆಯನ್ನು ಉಡಾಯಿಸಿದಾಗ, ಅಮೆರಿಕದ ನಾಗರಿಕರು ತಮ್ಮ ಶಿಕ್ಷಣ ಇಲಾಖೆಯನ್ನು ಚುರುಕುಗೊಳಿಸುವಲ್ಲಿ ಸರ್ಕಾರದ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದರು. ಇದರಿಂದ ಎಚ್ಚೆತ್ತ ಸರ್ಕಾರ, ವಿಜ್ಞಾನ ಶಿಕ್ಷಣಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿ ಪ್ರತಿ ಶಾಲಾ- ಕಾಲೇಜನ್ನೂ ವಿಜ್ಞಾನದ ಉಪಕರಣಗಳಿಂದ ಸಜ್ಜುಗೊಳಿಸಿತು. ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿತು.

ಇದರ ಪರಿಣಾಮವಾಗಿ ಅಮೆರಿಕವು ರಷ್ಯವನ್ನು ಹಿಂದಿಕ್ಕಿ ಚಂದ್ರನ ಮೇಲೆ ಪಾದಾರ್ಪಣೆ ಮಾಡಲು ಸಾಧ್ಯವಾಯಿತು. ನಮ್ಮ ದೇಶಕ್ಕಿಂತ ಅಮೆರಿಕನ್ನರಲ್ಲಿ ಇರುವ ಪ್ರಜ್ಞಾವಂತಿಕೆ ಮತ್ತು ಶಿಕ್ಷಣಕ್ಕೆ ಅವರು ನೀಡುವ ಆದ್ಯತೆಯನ್ನು ಈ ಉದಾಹರಣೆ ತಿಳಿಸುತ್ತದೆ. ಶಿಕ್ಷಣವು ವ್ಯಕ್ತಿ ಮತ್ತು ಶಕ್ತಿಯ ಪ್ರತೀಕ.

ದೇಶದ ಸಮಸ್ಯೆಗಳಿಗೆ ಈ ಕ್ಷೇತ್ರದಿಂದ ಮಾತ್ರ ಪರಿಹಾರ ಸಾಧ್ಯ. ಹೀಗಾಗಿ, ದೇಶ ಕಂಡ ಮೇಧಾವಿ, ಶಿಕ್ಷಕರ ಶಿಕ್ಷಕ ಡಾ. ಎಸ್.ರಾಧಾಕೃಷ್ಣನ್ ಅವರ 125ನೇ ಜನ್ಮದಿನದ ಈ ಸಂದರ್ಭದಲ್ಲಿ, ಉತ್ತಮ ಭವಿಷ್ಯದ ನಿರ್ಮಾತೃಗಳಾದ ಶಿಕ್ಷಕರನ್ನು ಗೌರವಿಸಲು ಇದು ಸುಸಮಯ.

`ನಮ್ಮ ದೇಶದಲ್ಲಿ ಒಬ್ಬ ಚಕ್ರವರ್ತಿ ಇದ್ದ. ಆತ ರಕ್ತಪಾತದಿಂದ ಕೂಡಿದ ಭಾರಿ ಯುದ್ಧದ ಮೂಲಕ ಸಾಮ್ರೋಜ್ಯವೊಂದನ್ನು ಗೆದ್ದ. ನಂತರ  ವಿರಕ್ತನಾಗಿ ಸಮರವನ್ನು ತ್ಯಜಿಸಿ ಸನ್ಯಾಸಿಯಾದ. ಅಹಿಂಸೆಯ ಮಹಾನ್ ಬೋಧಕನಾದ. ಅಂತೆಯೇ ಶಕ್ತಿ, ಸಾಹಸಗಳಿಂದ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಏರಿರುವ ನೀವು, ಮುಂದೆ ಏನಾಗುತ್ತೀರೋ ಯಾರು ಬಲ್ಲರು?'- 1949ರ ಅವಧಿಯಲ್ಲಿ ಪ್ರಪಂಚದ ಅತ್ಯಂತ ಶಕ್ತಿವಂತರು ಎನಿಸಿಕೊಂಡ ನಾಲ್ವರಲ್ಲಿ ಒಬ್ಬರಾದ, ತನ್ನ ಮಾತೇ ಅಂತಿಮ, ತಾನು ಮಾಡಿದ್ದೇ ಸರಿ ಎನ್ನುತ್ತಾ ಅಧಿಕಾರ ನಡೆಸಿದ ರಷ್ಯದ ಸರ್ವಾಧಿಕಾರಿ ಮಾರ್ಷಲ್ ಸ್ಟಾಲಿನ್ ಅವರನ್ನು ಉದ್ದೇಶಿಸಿ ಈ ಮಾತು ಹೇಳಿದ ಧೈರ್ಯಶಾಲಿ ಮತ್ತಾರೂ ಅಲ್ಲ, ಡಾ. ಸರ್ವಪಲ್ಲಿ ರಾಧಾಕೃಷ್ಣನ್.

ವಿಶ್ವವಿಖ್ಯಾತಿ, ಸ್ಥಾನಮಾನ, ಅಧಿಕಾರ, ಗೌರವ, ಮರ್ಯಾದೆ ಏನೆಲ್ಲಾ ಇದ್ದರೂ ಒಂದು ದಿನವೂ ಅಹಮಿಕೆಯ ದಾಸರಾಗದೆ, ದಾಸವರೇಣ್ಯರಂತೆ ಸರಳ, ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದವರು ಅವರು. `ಈಗ ಏನಾಗಿದ್ದರೂ, ಮೊದಲು ನಾನು ಶಿಕ್ಷಕ' ಎನ್ನುತ್ತಾ, ವೃತ್ತಿಯೆಡೆಗೆ ತಮಗಿದ್ದ ಅದಮ್ಯ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದ್ದರು. `ಜನ್ಮದಿನ ನನ್ನದೇಕೆ? ಆಚರಿಸುವುದಾದರೆ ಅದು ಶಿಕ್ಷಕರ ದಿನ ಆಗಬಾರದೇಕೆ?' ಎಂದು ಹೇಳಿ, ಶಿಕ್ಷಕರನ್ನು ಸ್ಮರಿಸಲು ನಮಗೆಲ್ಲ ಒಂದು ವೇದಿಕೆಯನ್ನು ಅವರು ನಿರ್ಮಿಸಿಕೊಟ್ಟರು.

ಕನ್ನಡದ ಮೇರು ಸಾಹಿತಿ ವಿ.ಸೀ. ಅವರು ರಾಧಾಕೃಷ್ಣನ್ ಕುರಿತು `ವಿದ್ಯಾರ್ಥಿಗಳಿಗೆ ಅವರ ತರಗತಿಗಳೆಂದರೆ ಹಬ್ಬ. ವಿದ್ಯಾರ್ಥಿಗಳನ್ನು  ಬೈದು-ಗದರಿಸಿ, ದರ್ಪ ತೋರುವ ಮನೋಭಾವ ಅವರದಲ್ಲ. ಅವರು ಹೇಳಿದ್ದನ್ನು ಕೇಳಿ, ಬರೆಸಿದ್ದನ್ನು ಬರೆದವರು ಎಷ್ಟು ಉನ್ನತ ತರಗತಿಯಾದರೂ ಸರಿ ತೇರ್ಗಡೆ ಹೊಂದಬಹುದಾಗಿತ್ತು. ಅವರು ಬೋಧಿಸುವ ವಿಷಯ ಮನದಟ್ಟಾಗುತ್ತಿತ್ತು. ಅವರ ವಾಗ್ಮಯತೆ, ವಿಲಾಸ, ಸ್ಫ್ಪುಟತೆ ಸ್ಮರಣೀಯ. ಅವರದು ನಿಸ್ಸಂಶಯವಾದ ತೀರ್ಮಾನ.

ವಿದ್ಯಾಬೋಧನೆಯ ಚಾತುರ‌ಯವಲ್ಲದೆ ಮಾನವತೆ- ಔದಾರ‌ಯ- ವಾತ್ಸಲ್ಯವೂ ಅವರ ಜೊತೆಗಿದ್ದವು' ಎಂದು ಹೇಳಿರುವ ಮಾತುಗಳು ನಮ್ಮ ಶಿಕ್ಷಕರಿಗೆ ಸ್ಫೂರ್ತಿದಾಯಕವಾಗಿವೆ. ದೆ ಗುರು-ಶಿಷ್ಯರ ನಡುವೆ ಅಪಾರವಾದ ವ್ಯತ್ಯಾಸ ಇತ್ತು. ಏಕೆಂದರೆ ಜ್ಞಾನವನ್ನು ಅನುಭವದಿಂದಲೇ ಪಡೆಯಬೇಕಾಗಿತ್ತು. ಜೊತೆಗೆ ಜ್ಞಾನವು ಒಂದೇ ತೆರನಾಗಿತ್ತು.

ADVERTISEMENT

ಸಾವಿರಾರು ವರ್ಷಗಳವರೆಗೆ ಅದರಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ. ಆದರೆ ಇಂದಿನ ನೂರು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇಂದು ಶಿಕ್ಷಕ- ವಿದ್ಯಾರ್ಥಿ ನಡುವಿನ ಅಂತರ ಕೇವಲ ತರಗತಿಯ ಅವಧಿಯಾದ 45 ನಿಮಿಷಕ್ಕೆ ಬಂದು ನಿಂತಿದೆ. ಈ ನಿಟ್ಟಿನಲ್ಲಿ, ತಾನು ಬೋಧಿಸುವ ವಿಷಯವನ್ನು, ವಿದ್ಯಾರ್ಥಿಗಳನ್ನು ಹಾಗೂ ವೃತ್ತಿಯನ್ನು ಪ್ರೀತಿಸುವುದು ಶಿಕ್ಷಕರಿಗೆ ಇರಬೇಕಾದ ಅರ್ಹತೆ ಎಂಬ ರಾಧಾಕೃಷ್ಣನ್ ಅವರ ಮಾತುಗಳು ಅರ್ಥಗರ್ಭಿತವಾಗಿವೆ.

ಕನ್‌ಪ್ಯೂಷಿಯಸ್ ಹೇಳುವಂತೆ, ದೇಶದ ನರ ನಾಡಿಗಳನ್ನು ಶಾಲಾ ಕೊಠಡಿಯಲ್ಲಿ ಸಿದ್ಧಗೊಳಿಸುವಾಗ ಶಿಕ್ಷಕ ಮಾದರಿಯಾಗಿ ಇರಲೇಬೇಕು. ಶಿಕ್ಷಕರು ಪ್ರತಿ ಕ್ಷೇತ್ರಕ್ಕೂ ಕೊಡುಗೆ ನೀಡದಿದ್ದರೂ ಎಲ್ಲ ಕ್ಷೇತ್ರಗಳ ಉತ್ತಮರನ್ನು ಹುಟ್ಟು ಹಾಕುವ ಶಕ್ತಿ ಅವರಲ್ಲಿ ಇರುವುದರಿಂದ ಸಮಾಜ ಅವರನ್ನು ಗೌರವಿಸಲೇಬೇಕು.

ಶಿಕ್ಷಕ ತನಗೆ ಗೌರವ ಸಿಗಬೇಕೆಂದು ಬಯಸುವುದಾದರೆ ಆ ಗೌರವಕ್ಕೆ ಆತ ಅರ್ಹನಾಗಿರಬೇಕು ಎಂದು ಅರವಿಂದ ಘೋಷ್ ಹೇಳಿದ್ದಾರೆ.   ಇದನ್ನು ಕೆಲವೊಮ್ಮೆ ವಾಸ್ತವ ಬದುಕಿನಲ್ಲೂ ಕಾಣುತ್ತೇವೆ. ಬಿಜಾಪುರದ ಇಂಡಿ ಮಾರ್ಗದಲ್ಲಿ ಬರುವ ಅಥರ್ಗಾ ಗ್ರಾಮದಲ್ಲಿ ಶ್ರೀ ರೇವಣಸಿದ್ಧಪ್ಪ ಮಾಸ್ತರರಿಗೆ ದೇವಾಲಯವನ್ನು ನಿರ್ಮಿಸಿ ಪ್ರತಿ ದಿನ ಪೂಜೆ ಸಲ್ಲಿಸಲಾಗುತ್ತದೆ. ಪಲ್ಲಕ್ಕಿ ಉತ್ಸವ, ಜಾತ್ರೆ, ಮಾದರಿ ಗ್ರಂಥಾಲಯವನ್ನು ನಡೆಸುತ್ತಿರುವುದು, ಜೊತೆಗೆ ಬಳ್ಳಾರಿಯ ಶ್ರೀ ಎಚ್.ಎಂ.ಕೊಟ್ರಬಸಯ್ಯ ಎಂಬ ಶಿಕ್ಷಕರ ಹೆಸರಿನಲ್ಲಿ ರಂಗವೇದಿಕೆಯನ್ನು ನಿರ್ಮಿಸಿರುವಂತಹ ಅನೇಕ ಉದಾಹರಣೆಗಳು ಶಿಕ್ಷಕರಿಗೆ ನಮ್ಮ ಸಮಾಜ ನೀಡುವ ಗೌರವವನ್ನು ಸೂಚಿಸುತ್ತವೆ.

ಶ್ರೇಷ್ಠ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದಕ್ಕೆ ಪೂರಕವಾಗಿ ಇಂದು ಮಾನವ ಸಂಪನ್ಮೂಲದ ವಿಪುಲ ವಿಕಾಸಕ್ಕೆ ಎಲ್ಲೆಡೆ ಚಿಂತನೆ, ಯೋಜನೆ ನಡೆಯುತ್ತಿರುವುದನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ನಿರ್ಜೀವ ಕಡತಗಳೊಂದಿಗೆ ವ್ಯವಹರಿಸಿ, ಬಹುಬೇಗ ವಿಲೇವಾರಿ ಮಾಡಿ ಭೇಷ್ ಎನ್ನಿಸಿಕೊಳ್ಳುವುದು ಸುಲಭ. ಆದರೆ ಜೀವಂತ ಮಕ್ಕಳ ಬದುಕನ್ನು ಕಟ್ಟುವ, ಆ ಮೂಲಕ ನೆಮ್ಮದಿಯ ನಾಳೆಗಳನ್ನು ಹೊಂದಲು ಬೇಕಾದುದನ್ನು ಸೃಷ್ಟಿಸುವ ದೊಡ್ಡ ಆಶಯ ಶಿಕ್ಷಕರನ್ನು ಅವಲಂಬಿಸಿದೆ.

ಶಿಕ್ಷಕರು ಇಂದಿನ ವಿದ್ಯಮಾನಗಳಿಗೆ ತಕ್ಕಂತೆ ನವೀಕರಣಗೊಂಡು, ಸಮರ್ಪಕವಾದ ಹೊಸ ಪರಿಕಲ್ಪನೆಗಳನ್ನು ಅಳವಡಿಸಿಕೊಂಡರೆ ಸಹಜವಾಗಿಯೇ ಸಮಾಜದಲ್ಲಿ ಅವರ ಮೇಲಿನ ಗೌರವ ಹೆಚ್ಚಾಗುತ್ತದೆ. ಜ್ಞಾನ, ತಂತ್ರಜ್ಞಾನದಲ್ಲಿ ನಾವು ಸಾಕಷ್ಟು ಮುಂದುವರಿದಿದ್ದರೂ ಸಾಮಾಜಿಕ- ನೈತಿಕ ಮೌಲ್ಯಗಳ ಸಾಧನೆಯಲ್ಲಿ ಹಿಂದೆ ಬಿದ್ದಿದ್ದೇವೆ. ಇದಕ್ಕೆ ಮಾಧ್ಯಮಗಳಲ್ಲಿ ಬರುತ್ತಿರುವ ವಿವಿಧ ಘಟನೆಗಳೇ ಸಾಕ್ಷಿ.

ಶಿಕ್ಷಕ ವೃತ್ತಿಯ ಘನತೆಯನ್ನು ಅರಿಯುವಲ್ಲಿ ಇಂದಿನ ಸಮಾಜ ವಿಫಲವಾಗಿರುವುದು ಈ ಕ್ಷೇತ್ರದ ಅಪಮೌಲ್ಯಕ್ಕೆ ಕಾರಣವಾಗಿದೆ. ನಾವು ಅಕ್ಷರಸ್ಥರಾದರಷ್ಟೇ ಸಾಲದು, ವಿದ್ಯಾವಂತರಾಗಬೇಕಿದೆ. ಅದಕ್ಕಾಗಿ, ಶಾಲೆಗೆ ಬರುವ ಮಕ್ಕಳನ್ನು ಅರಳುವ ಮೊಗ್ಗುಗಳಾಗಿ ಬದಲಾಯಿಸಬೇಕಾದ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಒಬ್ಬ ತಂದೆ 100 ಶಿಕ್ಷಕರಿಗೆ ಸಮಾನ. ಒಬ್ಬ ತಾಯಿ 1000 ಶಿಕ್ಷಕರಿಗೆ ಸಮಾನ. ಹಾಗಾಗಿ ಒಬ್ಬ ಶಿಕ್ಷಕ ತಂದೆ, ತಾಯಿ ಮತ್ತು ಗುರುವಾಗಿ, ಅಂದರೆ 1101 (100+1000+1) ಶಿಕ್ಷಕರಿಗೆ ಸಮನಾಗಿ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಈ ಉದ್ಯೋಗಕ್ಕೆ ಸೇರುವಾಗ ಮನೋಭಿಲಾಷೆ ಒಂದಿದ್ದರೆ ಸಾಲದು, ಪ್ರೀತಿಯೂ ಇರಬೇಕು. ಮುಖ್ಯವಾಗಿ ತಾನೊಬ್ಬ ಜೀವಂತ ಶಿಲ್ಪವನ್ನು ನಿರ್ಮಿಸುತ್ತಿರುವ ಅಪರೂಪದ ರೂವಾರಿ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೇ ರಾಧಾಕೃಷ್ಣನ್ ಅವರಿಗೆ ಶಿಕ್ಷಕ ವೃಂದ ನೀಡಬಹುದಾದ ಬಹು ದೊಡ್ಡ ಉಡುಗೊರೆ.

ಅರಿಯಲಾರದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದಷ್ಟೇ ಶಿಕ್ಷಣವಲ್ಲ. ತಮ್ಮ ತಪ್ಪು ವರ್ತನೆಗಳನ್ನು ತ್ಯಜಿಸಿ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಕಲಿಸಿಕೊಡುವುದು ನಿಜವಾದ ಶಿಕ್ಷಣ.
-ಮಹಾತ್ಮ ಗಾಂಧಿ.

ಅನಕ್ಷರಸ್ಥರ ನಾಡಿನಲ್ಲಿ ಪ್ರಜಾಪ್ರಭುತ್ವ ಕೇವಲ ಒಂದು ಅಣಕವಾಗಿ ಅವಹೇಳನಕ್ಕೆ ಒಳಪಡುತ್ತದೆ.
-ಬರ್ಟಂಡ್ ರಸೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.