ADVERTISEMENT

ಗೆರೆ ಬರೆಯುತ್ತ ಉತ್ತರ

ಡಾ.ವಸಂತ ಅ.ಕುಲಕರ್ಣಿ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಅದೇ ತಾನೇ ಮೆಡಿಕಲ್ ಕಾಲೇಜಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಕೆಲವರು ಬೆಚ್ಚಿ ಬೀಳುತ್ತಾರೆ.  ವೈದ್ಯಕೀಯ  ಓದಿನ ವ್ಯಾಪ್ತಿ -ಶವದ ರಾಶಿಗಳ ಮಧ್ಯೆದ ಓದು ಮತ್ತು ಆತಂಕದಿಂದಾಗಿ ಮನೊ ಖಿನ್ನತೆಗೆ ಒಳಗಾಗಿ ಏಕಾಂತವಾಸ ಅನುಭವಿಸಿ ನಿರಾಸಕ್ತಿಯ ತಾಳುತ್ತಾರೆ. ಕೆಲ ವರ್ಷಗಳ ಹಿಂದೆ ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದ. ಅವರ ಪಾಲಕರಿಗೆ ಅದೇ ಸಮಸ್ಯೆಯಾಗಿತ್ತು.

ಇದಕ್ಕೆ ಪರಿಹಾರ ಹುಡುಕಲೆಂದೇ ಆ ಹುಡುಗನನ್ನು ಕರೆಕಳುಹಿಸಿದೆ. ಉತ್ತರ ಬರೆಯುವುದೇ ಸವಾಲಾಗಿತ್ತು ಆ ಹುಡುಗನಿಗೆ. ಅದಕ್ಕೆ ಪ್ರತಿಯಾಗಿ ಆಸಕ್ತಿಯ ವಿಷಯಕ್ಕೆ ಅನುಸಾರವಾಗಿ  ಚಿತ್ರ ಬಿಡಿಸಲು ಹೇಳಿ ಮಾರ್ಗದರ್ಶನ ನೀಡಿದೆ. ಒಂದು ತಿಂಗಳಲ್ಲಿ ನೂರಾರು ಚಿತ್ರಗಳನ್ನು ಬಿಡಿಸಿ ನಗೆ ಬೀರಿದ, ಪಠ್ಯ ಆಧಾರಿತ ಆ ಚಿತ್ರಗಳಿಗೆ ಸಂಬಂಧಿಸಿದಂತೆ ಟಿಪ್ಪಣಿ ಬರೆಯಲು ಸೂಚಿಸಲಾಯಿತು. ತಾನು ಅರ್ಥ ಮಾಡಿಕೊಂಡಿದ್ದ ಪಠ್ಯವನ್ನು ಗೆರೆಗಳಲ್ಲಿ ವಿವರ ಬರೆದ. ನಂತರ ತರಗತಿಯಲ್ಲಿ ಆ ವಿದ್ಯಾರ್ಥಿಯಿಂದಲೇ ಒಂದು ಪ್ರದರ್ಶನವನ್ನು ಏರ್ಪಡಿಸಲಾಯಿತು.  

ಇದರಿಂದಾಗಿ ಆ ವಿದ್ಯಾರ್ಥಿಯಲ್ಲಿ ಹೊಸ ಆತ್ಮವಿಶ್ವಾಸ ಮೂಡಿತು. ಆತಂಕ ಮಾಯವಾಗಿ ಇನ್ನಷ್ಟು ಪ್ರಯೋಗಗಳಿಗೆ ಮುಂದಾದ. ಒಮ್ಮೆ ಆತನ ಆತ್ಮಸ್ಥೈರ್ಯ ಹೆಚ್ಚಿದ ನಂತರ ಕಲಿಕೆಯಲ್ಲಿ ಆಸಕ್ತಿಯನ್ನು ಪುನರ್‌ಸ್ಥಾಪಿಸಲಾಯಿತು.   ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ವಿಶೇಷ ಗುಣಗಳಿರುತ್ತವೆ. ಜೊತೆಗೆ ದೌರ್ಬಲ್ಯಗಳೂ. ಅವರಲ್ಲಿರುವ ಗುಣಗಳು ದೌರ್ಬಲ್ಯಗಳನ್ನು ಮೆಟ್ಟಿ ಆಚೆ ಬರುವಂತೆ ಮಾಡುವ ಕೆಲಸ ಶಿಕ್ಷಕನದ್ದಾಗಿರುತ್ತದೆ.

ಉತ್ತಮ ಅಂಕಗಳೊಂದಿಗೆ ವೈದ್ಯಕೀಯ ಶಾಸ್ತ್ರಕ್ಕೆ ಪ್ರವೇಶ ಪಡೆದಿರುತ್ತಾರೆ. ಆದರೆ ವೈದ್ಯಕೀಯ ಭಾಷೆ ಹಾಗೂ ಪಾರಿಭಾಷಿಕ ಶಬ್ದಗಳಿಂದಾಗಿ ಗೊಂದಲಕ್ಕೆ ಈಡಾಗಿರುತ್ತಾರೆ. ಮೊದಲ ವೈಫಲ್ಯ ಅವರ ಆತ್ಮವಿಶ್ವಾಸವನ್ನೇ ಹಾಳುಗೆಡುವಬಹುದು. ಸರಳವಾಗಿ ತಿಳಿಯುವ ಮತ್ತು ತಿಳಿಸುವ ವಿಧಾನದಲ್ಲಿ ಚಿತ್ರಗಳನ್ನು ಬರೆಯುವುದು ಅತಿ ಪರಿಣಾಮಕಾರಿ ವಿಧಾನವಾಗಿದೆ. ಇದು ಮುಂದಿನ  ವರ್ಷಗಳಿಗೂ ಅನ್ವಯಿಸುತ್ತದೆ. 

ವೈದ್ಯಕೀಯ ಚಿತ್ರದ ಮಹತ್ವ 
ವೈದ್ಯಕೀಯ ವಿವಿಧ ನಮೂನೆಯ ಚಿತ್ರಗಳನ್ನು ತೋರಿಸಿ- ಅವುಗಳನ್ನು ಉತ್ತರ ಪತ್ರಿಕೆಯಲ್ಲಿ ಬಳಸುವ ಬಗೆಯನ್ನು ವಿವರಿಸಬೇಕು. 
ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಹಾಗೂ ನೆನಪಿಡಲು ಸುಲಭ ಎಂಬ ವಿಷಯ ಒತ್ತಿ ಹೇಳಬೇಕು ಕಡಿಮೆ ಸಮಯದಲ್ಲಿ ಉತ್ತರವನ್ನು ಚಿತ್ರ ಬಿಡಿಸುವುದರಿಂದ ಅದು ಆಕರ್ಷಣೀಯವಾಗುತ್ತದೆ. ಹೆಚ್ಚು ಅಂಕ ಪಡೆಯಲು ಸಹಾಯಕವಾಗುತ್ತದೆ.  ಮೌಲ್ಯಮಾಪಕರಿಗೂ  ಸುಲಭ.

ಉತ್ತರಿಸುವಾಗ ಸಮಯ ನಿರ್ವಹಣೆ ಮಾಡಲು ಸಹಾಯಕವಾಗುವದು. ಆತಂಕ ಕಡಿಮೆಗೊಳ್ಳುವುದು. ಈ ಅಂಶಗಳನ್ನು ಗಮನದಲ್ಲಿರಿಸಿ ವೈದ್ಯಕೀಯ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳೊಂದಿಗೆ ಪ್ರಯೋಗವನ್ನೂ ಕೈಗೊಳ್ಳಲಾಯಿತು. ಪ್ರತಿದಿನವೂ 25 ವಿದ್ಯಾರ್ಥಿಗಳ ಗುಂಪನ್ನು ತರಬೇತಿಗೆ ಒಳಪಡಿಸಲಾಗುತ್ತಿತ್ತು. ಪ್ರತಿ ಗುಂಪಿಗೂ  ಪಠ್ಯಕ್ರಮದ 5 ವಿವಿಧ ಅಂಶಗಳನ್ನು ಚಿತ್ರಕ್ಕಿಳಿಸಿ, ವಿವರ ಬರೆಯಲು ಸೂಚಿಸಲಾಯಿತು.  ವಿದ್ಯಾರ್ಥಿಗಳು ವೈವಿಧ್ಯಮಯ ಚಿತ್ರಗಳನ್ನು ಬಿಡಿಸಿದ್ದರು. ಇಳಿಕೆಯ ಕ್ರಮದಲ್ಲಿ ಮತ್ತು ಏರಿಕೆಯ ಕ್ರಮದಲ್ಲಿ ಫ್ಲೋ ಚಾರ್ಟ್‌ ಬಿಡಿಸಿದ್ದರು.

ಆಲೇಖಗಳು,  ಸಂಕೀರ್ಣ ಚಿತ್ರಗಳು - ಒಂದು ಕ್ರಿಯೆಯ ಸುತ್ತಲು ಜರಗುವ ಘಟನೆಗಳು ಅಂಕಣ ಚಿತ್ರಗಳು,-- ದೇಹದ ವಿವಿಧ ಸಂಭಂಧ ಕಲ್ಪಿಸುವ ಏಕಚಿತ್ರ, ಉದಹರಿಸುವ ಚಿತ್ರ -ಕ್ರಿಯಾರೂಪದ ಚಿತ್ರ ಮುಂತಾದವುಗಳೆಲ್ಲವೂ ವಿದ್ಯಾರ್ಥಿಗಳು ತಯಾರಿಸಿದ ಚಿತ್ರಗಳಲ್ಲಿದ್ದವು.
ಈ ತರಬೇತಿಯಲ್ಲಿ ಭಾಗವಹಿಸುವ ಮೊದಲು ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನೀಡಲಾಗುತ್ತಿತ್ತು. ತರಬೇತಿಯ ನಂತರ  ವಿದ್ಯಾರ್ಥಿಗಳ ಚಿತ್ರಗಳನ್ನು ನೋಡಿ, ಮೂವರು ಪ್ರಾಧ್ಯಾಪಕರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದಕ್ಕಾಗಿ ಅವರಿಗೆ ಅಂಕಗಳನ್ನೂ ನೀಡಲಾಗುತ್ತಿತ್ತು.

ಮುಖ್ಯ ವಿಷಯದ ವಿವರ, ಗ್ರಹಿಕೆ, ಅಭಿವ್ಯಕ್ತಿ, ಪ್ರಸ್ತುತಿ ಈ ಎಲ್ಲ ಅಂಶಗಳನ್ನು ಚರ್ಚಿಸಲಾಗುತ್ತಿತ್ತು. ಈಗ ಮತ್ತೆ ಮೌಲ್ಯಮಾಪನ ಹಾಗೂ ಉತ್ತರ ಪತ್ರಿಕೆಗಳಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ಅವುಗಳನ್ನು ಅಳವಡಿಸಿದ ಬಗ್ಗೆ ಅಂಕಿ ಸಂಖ್ಯೆ ಕಲೆ ಹಾಕಲಾಯಿತು. ನಂತರ ನಡೆದ ಎರಡನೆಯ ಪರೀಕ್ಷೆಯಲ್ಲಿ ಗುಣಾಂಕಗಳ ಪ್ರಗತಿ ತೃಪ್ತಿದಾಯಕವಾಗಿತ್ತು. ಯಾವುದೇ ವಿಜ್ಞಾನಗಳ ಕಲಿಕೆಯಲ್ಲಿ ಚಿತ್ರಗಳ ಪಾತ್ರ ಮಹತ್ತರವಾದುದು. ಗೆರೆಗಳ ನಡುವಿನ ಕಲಿಕೆಯು ವಿಷಯದ ಅಂಶಗಳನ್ನು ಮನದಟ್ಟು ಮಾಡಿಕೊಡುತ್ತವೆ. ಭಾಷೆಯ ಹಂಗಿಲ್ಲದಂತೆ ಪರಿಣಾಮಕಾರಿಯಾಗಿ ವಿಷಯವನ್ನು ಪ್ರಸ್ತುತಪಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.