ಹೈಸ್ಕೂಲು ವಿದ್ಯಾರ್ಥಿಗಳನ್ನು `ಮುಂದೇನಾಗ್ತೀರಾ?' ಎಂದು ಕೇಳಿ ನೋಡಿ. ಬಹುತೇಕರಿಂದ `ಸಾಫ್ಟ್‌ವೇರ್ ಎಂಜಿನಿಯರ್' ಎನ್ನುವ ಉತ್ತರ ಕಟ್ಟಿಟ್ಟ ಬುತ್ತಿ. ಎಲ್ಲ ತಂದೆ ತಾಯಿಗೂ ತಮ್ಮ ಮಕ್ಕಳು ಐ.ಟಿ. ಕಂಪೆನಿ ಸೇರಿ ಕೈ ತುಂಬಾ ಸಂಬಳ ತರಲಿ, ವಿದೇಶಕ್ಕೆ ಹೋಗಲಿ, ಅವರ ನೆವದಲ್ಲಿ ತಾವೂ ವಿದೇಶಕ್ಕೆ ಹೋಗಿ ಬರಬಹುದು ಎನ್ನುವ ಆಸೆ. ಆದರೆ ಈಗ ಆ ಚಿತ್ರ ಸ್ವಲ್ಪ ಬದಲಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಾರಣ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸಿಗೆ ಕಟ್ಟಬೇಕಾದ ಶುಲ್ಕ ಇರಬಹುದು ಅಥವಾ ಅಮೆರಿಕದಲ್ಲಿನ ಆರ್ಥಿಕ ಹಿಂಜರಿಕೆ ಆಗಿರಬಹುದು. ಈಗ ಬಹಳಷ್ಟು ಮಕ್ಕಳು ಸಿ.ಎ. (ಚಾರ್ಟರ್ಡ್ ಅಕೌಂಟೆನ್ಸಿ) ಕೋರ್ಸಿನತ್ತ ಆಕರ್ಷಿತರಾಗುತ್ತಿದ್ದಾರೆ. ಸಿ.ಎ. ಮಾಡಿಕೊಂಡವರೂ ಐ.ಟಿ.ಯಷ್ಟೇ ಸಂಬಳ ಪಡೆಯಬಹುದು ಮತ್ತು ಅವರಂತೆ ಉದ್ಯೋಗ ಅವಕಾಶಗಳೂ ಇರುತ್ತವೆ ಎನ್ನುವ ಕಾರಣವೂ ಇರಬಹುದು.
`ಸಿ.ಎ. ಓದುವುದೆಂದರೆ ಕಬ್ಬಿಣದ ಕಡಲೆ, ಪಾಸು ಮಾಡುವುದು ತುಂಬಾ ಕಷ್ಟ ಎನ್ನುವ ಮಾತು ಮೊದಲಿನಿಂದಲೂ ಇದೆ. ಆದರೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಮುಂಬಯಿಯ ಆಟೊ ಚಾಲಕನ ಮಗಳು ಪ್ರೇಮಾ ಜಯಕುಮಾರ್ ಸಿ.ಎ.ಯಲ್ಲಿ ಮೊದಲ ರ‌್ಯಾಂಕ್ ಪಡೆದಿದ್ದಾಳೆ. ಅಂದರೆ, ಹೆಚ್ಚಿನ ಅನುಕೂಲವಿಲ್ಲದ ಆ ಹುಡುಗಿ ಮೊದಲ ರ‍್ಯಾಂಕ್ ಗಳಿಸಲು ಸಾಧ್ಯ ಎಂದಾದರೆ, ಜೀವನದಲ್ಲಿ ಅಸಾಧ್ಯವಾದುದು ಏನೂ ಇಲ್ಲ ಅಲ್ಲವೇ?' ಎಂದು ಕೇಳುತ್ತಾರೆ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ (ಐ.ಸಿ.ಎ.ಐ.) ಉಪಾಧ್ಯಕ್ಷರಾದ ಕರ್ನಾಟಕದ ಕೆ.ರಘು.
`ಕಷ್ಟಪಟ್ಟು ಓದುವವರಿಗೆ ಮತ್ತು ಓದಿನಲ್ಲಿ ಆಸಕ್ತಿ, ಶ್ರದ್ಧೆ ಇರುವವರಿಗಷ್ಟೇ ಈ ಕೋರ್ಸ್ ಮುಗಿಸಲು ಸಾಧ್ಯ' ಎಂದು ಹೇಳಲು ಅವರು ಮರೆಯುವುದಿಲ್ಲ.
ಪ್ರವೇಶ ಹೇಗೆ?
ಸಿ.ಎ. ಪದವಿ ಪಡೆಯಲು ಮೂರು ಹಂತಗಳನ್ನು ದಾಟಬೇಕಾಗುತ್ತದೆ.
1. ಪ್ರವೇಶ ಪರೀಕ್ಷೆ (ಸಿ.ಪಿ.ಟಿ.)
ಪಿ.ಯು.ಸಿ. ಮುಗಿಸಿದವರು ಈ ಪ್ರವೇಶ ಪರೀಕ್ಷೆ ಬರೆಯಲು ಅರ್ಹರು. ಮೊದಲಿಗೆ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯಲ್ಲಿ (ಐ.ಸಿ.ಎ.ಐ.- ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ) ನಿಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಈ ಪರೀಕ್ಷೆ ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿದೆ.
2. ಇಂಟರ್ ಮೀಡಿಯಟ್ ಕೋರ್ಸ್ (ಐ.ಐ.ಪಿ.ಸಿ.ಸಿ.)
ಸಿ.ಪಿ.ಟಿ.ಯಲ್ಲಿ ತೇರ್ಗಡೆ ಆದವರು ಅಥವಾ ಶೇಕಡಾ 55 ಅಂಕ ಪಡೆದ ಕಾಮರ್ಸ್ ಪದವೀಧರರು ಅಥವಾ ಶೇ 60 ಅಂಕ ಪಡೆದ ಇತರ ಪದವೀಧರರು ಅಥವಾ ಐ.ಸಿ.ಎಸ್.ಐ. ಮತ್ತು ಇನ್ಸ್‌ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟ್ಸ್ ಆಫ್ ಇಂಡಿಯಾದ ಇಂಟರ್‌ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ನೇರವಾಗಿ ತೆಗೆದುಕೊಳ್ಳಬಹುದು. ಜೊತೆಗೆ ವೃತ್ತಿ ಅರ್ಹತಾ ತರಬೇತಿ, ಅಂದರೆ ಯಾವುದಾದರೂ ಖಾಸಗಿ ಲೆಕ್ಕ ಪರಿಶೋಧಕ ಸಂಸ್ಥೆಯಲ್ಲಿ ಅಥವಾ ಬಹುರಾಷ್ಟ್ರೀಯ ಲೆಕ್ಕ ಪರಿಶೋಧಕ ಸಂಸ್ಥೆಯಲ್ಲಿ ಆರ್ಟಿಕಲ್ ಕ್ಲರ್ಕ್ ಆಗಿ ಕೆಲಸ ನಿರ್ವಹಿಸಿ ತರಬೇತಿ ಪಡೆಯಬೇಕು. ಈ ಸಮಯದಲ್ಲಿ 1500- 5000 ರೂಪಾಯಿಯವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಆದರೆ ಅದು ನೀವು ಆರಿಸಿಕೊಳ್ಳುವ ಸಂಸ್ಥೆಯನ್ನು ಅವಲಂಬಿಸಿರುತ್ತದೆ.
ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ನೀಡುವ ಮೊತ್ತ ಹೆಚ್ಚು. ಹಾಗೆಯೇ ತೆಗೆದುಕೊಳ್ಳುವ ಕೆಲಸವೂ ಹೆಚ್ಚಾಗಿರುವುದಲ್ಲದೆ, ನಿಮ್ಮ ಪ್ರತಿಭೆಯನ್ನು ಗುರುತಿಸಲಾಗುತ್ತದೆ. ವಿದೇಶ ಪ್ರವಾಸದ ಅವಕಾಶಗಳೂ ಲಭ್ಯವಿರುತ್ತವೆ. ಒಟ್ಟು ಮೂರು ವರ್ಷ ಈ `ಆರ್ಟಿಕಲ್‌ಶಿಪ್'ನ್ನು ಮಾಡಬೇಕಾಗುತ್ತದೆ. ಜೊತೆಗೆ ನೂರು ಗಂಟೆಗಳ ಮಾಹಿತಿ ತಂತ್ರಜ್ಞಾನದ ತರಬೇತಿಯನ್ನು ಪಡೆಯಬೇಕಾಗುತ್ತದೆ. ಪ್ರತಿ ದಿನ ಐದು ಗಂಟೆಗಳಂತೆ 20 ದಿನಗಳ ತರಬೇತಿ ಕಾರ್ಯಕ್ರಮ ಇದು. ಇದನ್ನು ಪ್ರಾಯೋಗಿಕ ತರಬೇತಿಯೆಂದೇ ಪರಿಗಣಿಸಲಾಗುತ್ತದೆ.
ಅಂತಿಮ ಹಂತ
ಎರಡನೆಯ ಹಂತದ ಎರಡೂ ವಿಭಾಗಗಳಲ್ಲಿ ತೇರ್ಗಡೆ ಹೊಂದಿದವರು ಅಂತಿಮ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಒಟ್ಟಾರೆ ಮೂರರಿಂದ ಮೂರೂವರೆ ವರ್ಷಗಳಲ್ಲಿ ಸಿ.ಎ. ಕೋರ್ಸ್ ಮುಗಿಸಬಹುದು. ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ನೀವು ವೃತ್ತಿನಿರತ ಲೆಕ್ಕ ಪರಿಶೋಧಕ ಸನ್ನದು ಪಡೆದ ಲೆಕ್ಕಿಗ (ಚಾರ್ಟರ್ಡ್ ಅಕೌಂಟೆಂಟ್) ಆದಿರೆಂದೇ ಅರ್ಥ. ಬಳಿಕ ಸಂಸ್ಥೆಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ತಗಲುವ ವೆಚ್ಚ
ಸಿ.ಎ. ಪೂರ್ಣಗೊಳಿಸಿದ ನಂತರ ನಮ್ಮ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಉದ್ಯೋಗಾವಕಾಶಗಳು ಲಭ್ಯ. ಸಿ.ಎ.ಕೋರ್ಸ್ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ಅದಕ್ಕೆ ತಗಲುವ ವೆಚ್ಚ ಕೇವಲ ಸುಮಾರು 45 ಸಾವಿರ ರೂಪಾಯಿ. ಆದರೆ ಈ ಹಣವನ್ನು ನೀವು ಪ್ರವೇಶ ಪರೀಕ್ಷೆಯ ನಂತರ ತೆಗೆದುಕೊಳ್ಳುವ ತರಬೇತಿ, ಅಂದರೆ `ಆರ್ಟಿಕಲ್‌ಶಿಪ್'ನ ಹಂತದಲ್ಲಿ ಸ್ಟೈಫಂಡ್ ರೂಪದಲ್ಲಿ ಪಡೆಯಲು ಸಾಧ್ಯವಿದೆ. ಪ್ರಾಯಶಃ ಇದೊಂದೇ ಕೋರ್ಸಿನಲ್ಲಿ, ಈ ರೀತಿ ಪದವಿ ಪಡೆಯುವ ಮೊದಲೇ ನೀವು ಖರ್ಚು ಮಾಡಿದ ಹಣದಷ್ಟೇ ಮೊತ್ತವನ್ನು ದುಡಿಯಲು ಸಾಧ್ಯ ಇರುವುದು.
ವಿದ್ಯಾರ್ಥಿಗಳಿಗೆ ಸಹಕಾರ
ಇ- ಲರ್ನಿಂಗ್ ಮೂಲಕ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳಿಗೂ ತಲುಪುವಂತಹ ಯೋಜನೆಯನ್ನು ಐ.ಸಿ.ಎ.ಐ. ಹಮ್ಮಿಕೊಂಡಿದೆ. ಎಲ್ಲ ಹಂತದ ಪರೀಕ್ಷೆಗಳಿಗೂ ಸಹಾಯವಾಗುವಂತೆ 127 ಗಂಟೆಗಳ ಉಪನ್ಯಾಸದ ಧ್ವನಿಮಾಲಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಅಗತ್ಯ ಮತ್ತು ಪ್ರತಿಭೆಗೆ ಅನುಗುಣವಾಗಿ ಸ್ಕಾಲರ್‌ಶಿಪ್ ಸಹಾ ನೀಡಲಾಗುತ್ತದೆ.
ಸಿ.ಎ.ಬಿ.ಎಫ್. ನಿಧಿಯ ಮೂಲಕ ಪ್ರತಿಭಾವಂತರಿಗೆ ವಿದ್ಯಾಭ್ಯಾಸದ ಸಲಕರಣೆಗಳಿಗಾಗಿ ಧನಸಹಾಯವೂ ದೊರೆಯುತ್ತದೆ. ಓದಿಗೆ ನೆರವಾಗುವಂತಹ ಮಾದರಿ ಪ್ರಶ್ನೆಪತ್ರಿಕೆಗಳು, ಉತ್ತರಗಳು ಮತ್ತು ಮಾದರಿ ಪರೀಕ್ಷೆಯನ್ನು ಯೋಜಿಸಲಾಗುತ್ತದೆ. ವಿಚಾರ ಸಂಕಿರಣಗಳು, ಸಮ್ಮೇಳನಗಳು, ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ.
ಉದ್ಯೋಗಾವಕಾಶ
ಪ್ರಸ್ತುತ ದೇಶದಲ್ಲಿ 2.20 ಲಕ್ಷ ಚಾರ್ಟರ್ಡ್ ಅಕೌಂಟೆಂಟ್‌ಗಳಿದ್ದಾರೆ. ಈ ವರ್ಷ 8,000 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅವರಿಗೆ 17 ಕೇಂದ್ರಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆಯುತ್ತದೆ. ಬೆಂಗಳೂರಿನಲ್ಲಿ ಇಂದಿನಿಂದ ನಿರಂತರವಾಗಿ (ಸೆಪ್ಟೆಂಬರ್ 9ರಿಂದ 13ರವರೆಗೆ) ಸಂದರ್ಶನಗಳನ್ನು ನಡೆಸಲಾಗುತ್ತದೆ.
25ಕ್ಕಿಂತ ಹೆಚ್ಚು ಕಂಪೆನಿಗಳು ಪಾಲ್ಗೊಳ್ಳಲಿವೆ. ಶೇಕಡಾ 80 ಪದವೀಧರರು ಉದ್ಯೋಗಗಳನ್ನು ಪಡೆಯುತ್ತಾರೆ ಮತ್ತು ಶೇಕಡಾ 20ರಷ್ಟು ಮಂದಿ ಸ್ವಂತ ಉದ್ಯಮ ನಡೆಸುತ್ತಾರೆ. ಹೀಗಾಗಿ ಉದ್ಯೋಗಕ್ಕಾಗಿ ಪರದಾಡಬೇಕಾಗಿಲ್ಲ. ವಿದೇಶಗಳಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ. ಪ್ರಸ್ತುತ 4000 ಸಿ.ಎ.ಗಳು ಕೊಲ್ಲಿ ರಾಷ್ಟ್ರಗಳಲ್ಲಿ ಮತ್ತು 500 ಮಂದಿ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರತಿ ಬಾರಿ ಸಿ.ಎ. ಪರೀಕ್ಷೆಯ ಫಲಿತಾಂಶ ಬಂದ ಮೇಲೆ ವರ್ಷಕ್ಕೆ ಎರಡು ಬಾರಿ ಕ್ಯಾಂಪಸ್ ಸಂದರ್ಶನಗಳನ್ನು ಏರ್ಪಡಿಸಲಾಗುತ್ತದೆ. ದೇಶದಲ್ಲಿನ ಉದ್ಯೋಗಗಳಿಗೆ ವರ್ಷಕ್ಕೆ 6- 15 ಲಕ್ಷ ಸಂಬಳ ಮತ್ತು ವಿದೇಶದಲ್ಲಾದರೆ ಇನ್ನೂ ಮೂರು ಪಟ್ಟು ಹೆಚ್ಚಿನ ಸಂಬಳ ದೊರೆಯುತ್ತದೆ.
ಸಿ.ಎ. ಓದಿದವರು ಸರ್ಕಾರಿ ಉದ್ಯೋಗಕ್ಕೆ ಸೇರಬಹುದು, ಸ್ವಂತವಾಗಿ ವೃತ್ತಿಯನ್ನೂ ನಡೆಸಬಹುದು. ಹೊರ ದೇಶದಲ್ಲಿ ಇರುವವರ ಲೆಕ್ಕಗಳನ್ನೂ ಬಿ.ಪಿ.ಒ. ಮತ್ತು ಕೆ.ಪಿ.ಒ. ಹೊರಗುತ್ತಿಗೆ ವಿಧಾನದ ಮೂಲಕ ಮಾಡಬಹುದು. ಚಾರ್ಟರ್ಡ್ ಅಕೌಂಟೆನ್ಸಿ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ವಿಪುಲವಾದ ಅವಕಾಶಗಳಿವೆ. ಬಳಸಿಕೊಳ್ಳಬೇಕು ಅಷ್ಟೆ.
ಹೀಗಿರುತ್ತದೆ ಪ್ರಶ್ನೆಪತ್ರಿಕೆ
ಸಿ.ಪಿ.ಟಿ. ಪರೀಕ್ಷೆಯಲ್ಲಿ ಬಹು ಆಯ್ಕೆಯ ವಿಧಾನ ಇರುತ್ತದೆ. ಬಹುಮಟ್ಟಿಗೆ ಬ್ಯಾಂಕಿನ ಪರೀಕ್ಷೆಗಳಂತೆಯೇ ಇರುತ್ತದೆ. ಆದರೆ ತಪ್ಪಾದ ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ. ಇಂಟರ್ ಮೀಡಿಯಟ್‌ನಲ್ಲಿ ನೀವು ಕೆಲಸ ಮಾಡುವ ರೀತಿ, ಅಂತಿಮ ಹಂತದಲ್ಲಿ ನಿಮ್ಮ ಕೆಲಸದ ನೈಪುಣ್ಯ ಹಾಗೂ ಚಾತುರ್ಯವನ್ನು ಅಳೆಯಲಾಗುತ್ತದೆ.
ಸಿ.ಎ. ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯ ಮತ್ತು ನೀವು `ಆರ್ಟಿಕಲ್‌ಶಿಪ್'ನಲ್ಲಿ ಕಲಿತದ್ದು ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಒಟ್ಟಾರೆ ಇದು ಬರಿಯ ಪ್ರಶ್ನೋತ್ತರವಲ್ಲ, ನಿಮ್ಮ ಪ್ರಯೋಗಶೀಲತೆಯನ್ನೂ ಒರೆಗೆ ಹಚ್ಚುತ್ತದೆ.
ಸಕಾರಾತ್ಮಕ ಚಿಂತನೆ, ವಿಷಯವನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುವಿಕೆ, ಓದುವುದರಲ್ಲಿ ಸರಿಯಾದ ಶಿಸ್ತು ಪಾಲನೆ, `ಆರ್ಟಿಕಲ್‌ಶಿಪ್'ನಲ್ಲಿ ಸರಿಯಾಗಿ ಕೆಲಸ ಕಲಿಯುವುದು ಮತ್ತು ಈ ಎಲ್ಲದರ ಜೊತೆಗೆ ವಿಷಯ ನಿರೂಪಣೆಯಲ್ಲಿನ ಪ್ರಾವೀಣ್ಯ ನಿಮ್ಮ ಗುರಿ ತಲುಪಲು ಖಂಡಿತಾ ನೆರವಾಗುತ್ತವೆ.
ಯಾರನ್ನು ಸಂಪರ್ಕಿಸಬೇಕು?
ಐ.ಸಿ.ಎ.ಐ. ಬೆಂಗಳೂರು ಕಚೇರಿಯ ದೂರವಾಣಿ- 080- 30563541/ 42
dcobangalore@icai.org or you can visit www.icai.org
ಬಳ್ಳಾರಿ, ಉಡುಪಿ, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲೂ ವಿಭಾಗಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.