ನಮ್ಮ ಸಂಭಾಷಣೆಯಲ್ಲಿ ಮಾತು ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯವಾದುದು ಮಾತನ್ನು ಉಪಯೋಗಿಸದೆ, ದೇಹ ಭಾಷೆಯ ಮುಖಾಂತರ ಭಾಷೆಯ ಅರ್ಥವನ್ನು ಹೊಮ್ಮಿಸುವುದು. ದೇಹಭಾಷೆ non-verbal communicationನ ಒಂದು ಬಹು ಮುಖ್ಯ ಭಾಗ.
ದೇಹಭಾಷೆಯಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶಗಳೆಂದರೆ: ಅಂಗವಿನ್ಯಾಸ (body posture) ಸನ್ನೆಗಳು (gestures), ಮುಖದಲ್ಲಿನ ಅಭಿವ್ಯಕ್ತಿ (facial expression) ಹಾಗೂ ಕಣ್ಣಿನ ಚಲನೆಗಳು (eye movements).
ನಮ್ಮಲ್ಲಿ ವಿವಿಧ ರೀತಿಯ ಸನ್ನೆಗಳನ್ನು ಮಾಡುವ ಕೆಲಸವಾಗಲೀ ಅಥವಾ ಅರ್ಥಮಾಡಿಕೊಳ್ಳುವ ಕೆಲಸವಾಗಲೀ ನಮಗರಿವಿಲ್ಲದಂತೆಯೇ ನಡೆಯುತ್ತಿರುತ್ತದೆ. ಸಂಶೋಧನೆಯ ಪ್ರಕಾರ ನಮ್ಮ ಸಂಭಾಷಣೆಯಲ್ಲಿ ಶೇಕಡ 70 ರಷ್ಟು ಸಂವಹನವನ್ನು ದೇಹಭಾಷೆಯ ಮುಖಾಂತರ ಮಾಡಿದರೆ, ಶೇಕಡ 30 ರಷ್ಟು ಸಂವಹನವನ್ನು ಮಾತಿನ ಮುಖಾಂತರ ಮಾಡುತ್ತಿರುತ್ತೇವೆ.
ಹಾಗಾಗಿ, ನಾವು ದೇಹಭಾಷೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಮ್ಮಲ್ಲಿನ ಭಾವನೆಗಳನ್ನು ದೇಹಭಾಷೆಯ ಮುಖಾಂತರ ಸೂಕ್ಷ್ಮವಾಗಿ ವ್ಯಕ್ತಪಡಿಸುತ್ತಿರುತ್ತೇವೆ. ಅಷ್ಟೇ ಅಲ್ಲದೆ, ಈ ಚೆಹ್ನೆಗಳ ಮುಖಾಂತರ ಇವುಗಳನ್ನು ಉಪಯೋಗಿಸುವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆಯೂ ಸ್ವಲ್ಪ ಮಟ್ಟಿಗೆ ತಿಳಿದುಬರುತ್ತದೆ.
ಕೆಲವು ಆಂಗಿಕ ಚಿಹ್ನೆಗಳು (gestures) ಮತ್ತು ಅವುಗಳ ಅರ್ಥವನ್ನು ಇಲ್ಲಿ ಗಮನಿಸಿ: ಕಣ್ಣುಗಳ ವಿವಿಧ ರೀತಿಯ ಚಲನೆಯಿಂದ ವ್ಯಕ್ತವಾಗುವ ಅರ್ಥಗಳನ್ನು ನೋಡೋಣ. ನಮ್ಮ ಕಣ್ಣುಗಳು ಬಲಗಡೆ ತಿರುಗಿದಾಗ ಅಥವಾ ಬಲಬದಿಯಿಂದ ಮೇಲೆ ನೋಡುವಾಗ, ನಾವು ಏನನ್ನಾದರೂ ಊಹಿಸುತ್ತಿರಬಹುದು ಅಥವಾ ಸುಳ್ಳು ಹೇಳುತ್ತಿರಬಹುದು ಅಥವಾ ಕಥೆ ಹೇಳುತ್ತಿರಬಹುದು.
ಬಲಬದಿಯಿಂದ ಕೆಳಗೆ ನೋಡುತ್ತಿದ್ದರೆ, ನಮ್ಮ ಭಾವನೆಗಳ ಬಗ್ಗೆ ಯೋಚಿಸುತ್ತಿರಬಹುದು. ಎಡಬದಿಯಲ್ಲಿ ದೃಷ್ಟಿ ಹರಿಸಿದಾಗ ಅಥವಾ ಎಡಬದಿಯಿಂದ ಮೇಲೆ ನೋಡುವಾಗ, ನಾವು ಏನನ್ನಾದರೂ ನೆನಪಿಸಿಕೊಳ್ಳುತ್ತಿರಬಹುದು. ಎಡಬದಿಯಿಂದ ಕೆಳಗೆ ದೃಷ್ಟಿ ಹರಿಸುತ್ತಿದ್ದರೆ, ನಮ್ಮಲ್ಲೇ ನಾವು ಯಾವುದಾದರೊಂದು ವಿಷಯದ ಬಗ್ಗೆ ತರ್ಕ ಮಾಡಿಕೊಳ್ಳುತ್ತಿರುತ್ತೇವೆ.
ನಾವು ಇನ್ನೊಬ್ಬರ ಮಾತನ್ನು ಕೇಳಬೇಕಾದರೆ, ಅವರನ್ನು ನೇರದೃಷ್ಟಿಯಿಂದ ನೋಡುತ್ತಿದ್ದರೆ, ಬಹಳ ಆಸಕ್ತಿಯಿಂದ ಆಲಿಸುತ್ತಿದ್ದೇವೆ ಅಥವಾ ಅವರ ಗಮನವನ್ನು ನಮ್ಮ ಕಡೆ ಸಳೆಯಲು ಪ್ರಯತ್ನಿಸುತ್ತಿದ್ದೇವೆ ಎಂದರ್ಥ. ಹಾಗೆಯೇ, ಕಣ್ಣರಳಿಸಿ ನೋಡಿದಾಗ, ಅದು ನಮ್ಮಲ್ಲಿರುವ ಆಸಕ್ತಿ ಅಥವಾ ಆಶ್ಚರ್ಯ ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಇನ್ನೊಬ್ಬರಿಂದ ಸಂದರ್ಭಾನುಸಾರವಾಗಿ ಸಕಾರಾತ್ಮಕವಾದ ಪ್ರತಿಕ್ರಿಯೆಯನ್ನು ಆಹ್ವಾನಿಸುವಂತಹ ಸನ್ನೆಯಾಗಿರುತ್ತದೆ.
ಸಾಮಾನ್ಯವಾಗಿ, ಹೆಂಗಸರ ಕಣ್ಣರಳಿಸಿದ ನೋಟ, ವಾತ್ಸಲ್ಯದ ಸೂಚನೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ ನಾವು ಒಂದು ನಿಮಿಷದಲ್ಲಿ ಆರರಿಂದ ಇಪ್ಪತ್ತು ಬಾರಿ ಕಣ್ಣು ಮಿಟುಕಿಸುತ್ತೇವೆ. ಇದಕ್ಕಿಂತ ಹೆಚ್ಚು ಬಾರಿ (ಸುಮಾರು ನೂರು ಬಾರಿಯವರೆಗೆ) ನಾವು ಕಣ್ಣು ಮಿಟುಕಿಸುತ್ತಿದ್ದರೆ, ಅದು ನಮ್ಮಲ್ಲಿ ಮನೆ ಮಾಡಿರುವ ಉದ್ವಿಗ್ನತೆ ಅಥವಾ ಒತ್ತಡವನ್ನು ಸೂಚಿಸುತ್ತದೆ.
ಹಬ್ಬು ಹಾರಿಸುವುದನ್ನು eyebrow flash ಎಂದು ಕರೆಯುತ್ತೇವೆ. ಇದು ಸಾಮಾನ್ಯವಾಗಿ ಅಭಿನಂದನೆ ಮತ್ತು ಅಂಗೀಕಾರದ ಚಿಹ್ನೆಯಾಗಿದೆ. ಸಂಭಾಷಣೆ ಕಲೆಯಲ್ಲಿ ನಮ್ಮ ಮಾತು ಮತ್ತು ದೇಹಭಾಷೆ ಒಂದುಕ್ಕೊಂದು ಹೊಂದಿಕೊಂಡಿದ್ದರೆ ನಮ್ಮ ಸಂವಹನ ಯಶಸ್ವಿಯಾಗಿರುತ್ತದೆ.
ಸಂಭಾಷಣೆಯಲ್ಲಿ ಕೈಸನ್ನೆಗಳ ಪಾತ್ರ
ಕೈಗಳು ಸಾಮಾನ್ಯವಾಗಿ ನಮ್ಮ ಮನಃಸ್ಥಿತಿ ಹಾಗೂ ಭಾವನೆಗಳನ್ನು ಸೂಚಿಸುತ್ತವೆ. ನಮ್ಮ ದೇಹದಲ್ಲಿ ಮೆದುಳಿನ ಜೊತೆ ಹೆಚ್ಚು ನರಗಳ ಸಂಪರ್ಕವಿರುವುದು ಕೈಗಳಿಗೆ. ಆದ್ದರಿಂದ ನಮಗೆ ತಿಳಿದು ಹಾಗೂ ತಿಳಿಯದೆಯೂ ನಮ್ಮ ಕೈಗಳ ಚಲನೆಯಿಂದ ನಮ್ಮಲ್ಲಿರುವ ಭಾವನೆಗಳು ಹಾಗೂ ಯೋಚನೆಗಳು ಹೊರಹೊಮ್ಮುತ್ತವೆ. ಕೈಸನ್ನೆಗಳಿಂದ ವ್ಯಕ್ತವಾಗುವ ಕೆಲವು ಅರ್ಥಗಳನ್ನು ಇಲ್ಲಿ ಗಮನಿಸಿ:
ಕೈಕಟ್ಟಿ ನಿಲ್ಲುವ ಭಂಗಿ, ತಮ್ಮನ್ನು ತಾವು ಯಾವುದರಿಂದಲಾದರೂ ರಕ್ಷಿಸಿಕೊಳ್ಳುವಂತಹ ಅಥವಾ ದೂರವಿರಿಸಿಕೊಳ್ಳುವಂತಹ ಅರ್ಥವನ್ನು ಸುಚಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು- ಹಗೆತನ, ಬೇಸರ, ಆಸಕ್ತಿಯಿಲ್ಲದಿರುವುದು ಅಥವಾ ಭಯ.
ಮುಷ್ಟಿ ಬಿಗಿಹಿಡಿದು ಕೈಕಟ್ಟಿದ್ದರೆ, ಅದು ಹಟಮಾರಿತನ ಅಥವಾ ಹಗೆತನದ ಸೂಚನೆಯಿರಬಹುದು.
ತಮ್ಮ ತೋಳುಗಳನ್ನು ತಾವೇ ಗಟ್ಟಿಯಾಗಿ ಹಿಡಿದು ಕೊಂಡಿದ್ದರೆ (ತಮ್ಮನ್ನು ತಾವೇ ಅಪ್ಪಿಕೊಂಡಂತೆ), ಸಾಮಾನ್ಯವಾಗಿ ಅದು ಅಭದ್ರತೆಯ ಅಥವಾ ದುಃಖದ ಸನ್ನೆಯಾಗಿರುತ್ತದೆ. ಹಿಂದೆ ಕೈಕಟ್ಟಿದ್ದರೆ, ಅದು ಆತ್ಮವಿಶ್ವಾಸ ಅಥವಾ ಅಧಿಕಾರದ ಚಿಹ್ನೆಯಾಗಿರುತ್ತದೆ. ಪುಸ್ತಕ/ಫೈಲ್/ಪೇಪರ್‌ಗಳನ್ನು ಅಪ್ಪಿ ಹಿಡಿದುಕೊಳ್ಳುವುದು, ತಮ್ಮ ಅಂಗಿಯ ಕಾಲರ್ ಅಥವಾ ಕೈಯಲ್ಲಿನ ಗಡಿಯಾರವನ್ನು ಸರಿಮಾಡಿಕೊಳ್ಳುತ್ತಾ ಇರುವುದು, ಯಾವುದೇ ಪಾನೀಯವನ್ನು ತಮ್ಮ ಮುಂದೆ ಎರಡೂ ಕೈಗಳಲ್ಲಿ ಹಿಡಿದುಕೊಳ್ಳುವುದು, ತಮ್ಮ ತೋಳನ್ನು ಮುಟ್ಟಿಕೊಳ್ಳುತ್ತಾ ಅಥವಾ ಕೆರೆದುಕೊಳ್ಳುತ್ತಾ ಇರುವುದು- ಇವೆಲ್ಲವೂ ಆತಂಕದ ಲಕ್ಷಣಗಳು.
ನಾವು ಮಾತನಾಡುವಾಗ ನಮ್ಮ ಹಸ್ತ ಮೇಲ್ಮುಖವಾಗಿದ್ದು ತೆರೆದಿದ್ದರೆ, ಅದು ಬಿಚ್ಚು ಮನಸ್ಸಿನ ಅಥವಾ ಪ್ರಾಮಾಣಿಕತೆ ಹಾಗೂ ವಿನಮ್ರತೆಯ ಚಿಹ್ನೆಯೂ ಆಗಿರಬಹುದು. ಕೆಳಮುಖವಾಗಿದ್ದರೆ, ಅದು ಅಧಿಕಾರ ಅಥವಾ ಸಾಮರ್ಥ್ಯದ ದ್ಯೋತಕವಾಗಿರುತ್ತದೆ.
ಸಂಭಾಷಣೆಯ ಸಮಯದಲ್ಲಿ ಕೈಯನ್ನು ಎದೆಯ ಎಡಭಾಗದ ಮೇಲಿಟ್ಟುಕೊಂಡು ಮಾತನಾಡುತ್ತಿದ್ದರೆ, ಅದು ತಮ್ಮನ್ನು ತಾವು ನಂಬಿಕಾರ್ಹ ಅಥವಾ ಪ್ರಾಮಾಣಿಕ ವ್ಯಕ್ತಿ ಎಂದು ಸೂಚಿಸುವಂತದ್ದಾಗಿರುತ್ತದೆ.
ತೋರುಬೆರಳನ್ನು ಮೇಲೆ, ಕೆಳಗೆ ಆಡಿಸುತ್ತಿದ್ದರೆ, ಅದು ಎಚ್ಚರಿಕೆಯನ್ನು ಕೊಡುವ ಸೂಚನೆ. ಕೈಯನ್ನು ಏನನ್ನಾದರೂ ಕತ್ತರಿಸುವ ರೀತಿಯಲ್ಲಿ ಮೇಲೆ, ಕೆಳಗೆ ಆಡಿಸುತ್ತಾ ಮಾತನಾಡುತ್ತಿದ್ದರೆ, ತಮ್ಮ ಮಾತುಗಳನ್ನು ಒತ್ತಿಹೇಳುವ ಪ್ರಯತ್ನವನ್ನು ಸೂಚಿಸುತ್ತದೆ. ಒಂದು ಕೈನ ಬೆರಳ ತುದಿಗಳಿಂದ ಇನ್ನೊಂದು ಕೈನ ಬೆರಳ ತುದಿಗಳನ್ನು ಸ್ಪರ್ಶಿಸುತ್ತಾ ಮಾತನಾಡುತ್ತಿದ್ದರೆ, ಅದು ಸಾಮಾನ್ಯವಾಗಿ ಆಲೋಚಿಸುತ್ತಾ ಮಾತನಾಡುವವರ ಲಕ್ಷಣ.
ಹಸ್ತಗಳನ್ನು ಒಂದಕ್ಕೊಂದು ಉಜ್ಜುತ್ತಾ ಮಾತನಾಡುತ್ತಿದ್ದರೆ, ಅದು ನಿರೀಕ್ಷಣೆಯ ಅಥವಾ ಯಾವುದಾದರೂ ಖುಷಿಕೊಡುವ ಕಾರ್ಯಕ್ಕೆ ಕೈಹಾಕುತ್ತಿರುವುದರ ಸಂಕೇತ. ಮೂಗನ್ನು ಮುಟ್ಟಿಕೊಳ್ಳುತ್ತಾ ಅಥವಾ ಕೆರೆದುಕೊಳ್ಳುತ್ತಾ ಮಾತನಾಡುತ್ತಿದ್ದರೆ, ಅದು ಸುಳ್ಳು ಹೇಳುತ್ತಿರುವ ಅಥವಾ ಅತಿಶಯೋಕ್ತಿಯ ಅಥವಾ ಅನುಮಾನದ ಚಿಹ್ನೆ ಆಗಿರಬಹುದು. ಗಲ್ಲವನ್ನು ಮುಟ್ಟಿಕೊಳ್ಳುತ್ತಾ ಮಾತನಾಡುತ್ತಿದ್ದರೆ, ಆಲೋಚನಾಪರರಾಗಿ ಮಾತನಾಡುತ್ತಿರಬಹುದು ಎಂದರ್ಥ.
ಕತ್ತನ್ನು ಕೆರೆದುಕೊಳ್ಳುತ್ತಾ ಮಾತನಾಡುವವರನ್ನು ನೋಡಿದಾಗ, ಅವರ ಮಾತುಗಳಲ್ಲಿನ ಅನುಮಾನ ಅಥವಾ ಅಪನಂಬಿಕೆ ವ್ಯಕ್ತವಾಗುತ್ತದೆ. ಕೈಕುಲುಕುವವರ ಹಸ್ತ ಕೆಳಮುಖವಾಗಿದ್ದರೆ, ಅದು ಅಧಿಕಾರದ ಸೂಚಕ, ಮೇಲ್ಮುಖವಾಗಿದ್ದರೆ, ಅದು ದಾಕ್ಷಿಣ್ಯಪರತೆಯ ಚಿಹ್ನೆ. ಕೈಕುಲುಕುವಾಗ ಎರಡೂ ಕೈಗಳನ್ನು ಉಪಯೋಗಿಸಿದರೆ, ಅದು ಅಪ್ಯಾಯತೆಯ/ ಪ್ರಾಮಾಣಿಕತೆಯ ಪ್ರತೀಕವಾಗಿರ ಬಹುದು.
ಕೈ ಕುಲುಕುವಾಗ ಇನ್ನೋಬ್ಬರ ಹಸ್ತವನ್ನು ಭದ್ರವಾಗಿ ಹಿಡಿದರೆ, ಅದು ಆತ್ಮವಿಶ್ವಾಸದ ಚಿಹ್ನೆ, ಇಲ್ಲದಿದ್ದರೆ, ಅದು ನಿರಾಸಕ್ತಿ ಅಥವಾ ಬೇಸರದ ದ್ಯೋತಕವಾಗಿರಬಹುದು. ಬಾಡಿ ಲ್ಯಾಂಗ್ವೇಜ್ ಸತತವಾಗಿ ವಿಕಾಸಗೊಳ್ಳುತ್ತಿರುವ ಒಂದು ಅಧ್ಯಯನಶಾಸ್ತ್ರ. ಇದರ ಸಾಮಾನ್ಯ ನಿಯಮಗಳನ್ನು ಅಳವಡಿಸಿಕೊಂಡಾಗ, ನಮ್ಮ ಭಾಷೆಗೆ ಹಾಗೂ ಸಂಭಾಷಣೆಗೆ ಹೊಸ ಕಸುವು ದೊರೆಯುತ್ತದೆ.
ಮಾಹಿತಿಗೆ: 98452 13417
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.