ಸಂವಹನಕ್ಕಾಗಿ ಮಾತನ್ನು ಬಳಸಿಕೊಳ್ಳುವ ಮಾಧ್ಯಮಗಳು ಹಲವು. ಇವುಗಳನ್ನು ಸ್ಥೂಲವಾಗಿ ಶ್ರವ್ಯ ಮತ್ತು ದೃಶ್ಯ ಮಾಧ್ಯಮ ಎಂದು ಎರಡಾಗಿ ವಿಂಗಡಿಸಬಹುದು. ಈ ಎರಡು ಸಾಧ್ಯತೆಗಳನ್ನು ವೈವಿಧ್ಯಮಯವಾಗಿ ಬಳಸಿಕೊಂಡು ಕಥಾ ಕಾಲಕ್ಷೇಪ, ರಂಗನಾಟಕ, ರೇಡಿಯೊ, ಟೆಲಿವಿಷನ್ ಮತ್ತು ಇತ್ತೀಚೆಗಿನ ನವೀನ ಮಾಧ್ಯಮಗಳು - ಮೊದಲಾದ ಹತ್ತುಹಲವು ಸಂವಹನ ಪ್ರಕಾರಗಳು ಮೂಡಿ ಬಂದಿವೆ. ಮುದ್ರಣ ಮಾಧ್ಯಮವೂ ಮಾತನ್ನು ಬಳಸಿಯೇ ಸಂವಹನವನ್ನು ಸಾಧಿಸುವುದು. ಹಾಗಿದ್ದಲ್ಲಿ ಬರೆಹಕ್ಕೂ ಮಾತಿಗೂ ಏನಾದರೂ ವ್ಯತ್ಯಾಸ ವಿದೆಯೇ?- ಎನ್ನುವುದು ಮುಖ್ಯವಾದ ಪ್ರಶ್ನೆಯಾಗುತ್ತದೆ. ಸ್ಥೂಲವಾಗಿ ಇದನ್ನು ಹೀಗೆ ಉತ್ತರಿಸುವ ಪ್ರಯತ್ನ ಮಾಡಬಹುದು: ಯಾವ ಬರೆಹವನ್ನು ಓದಿದಾಗ ಅದು ಓದುವವರನ್ನು ಅರ್ಥಧಾರಣೆಯ ಪ್ರಕ್ರಿಯೆಯಲ್ಲಿ ಒಳಗೊಳ್ಳುತ್ತದೆಯೋ ಆಗ ಅದಕ್ಕೆ ಸಂವಾದದ ಸ್ವರೂಪ ಬರುತ್ತದೆ. ಪ್ರತಿಯೊಂದು ಬರೆಹವೂ ಯಾರು, ಏಕೆ, ಏನು, ಯಾವಾಗ, ಎಲ್ಲಿ, ಹೇಗೆ ಮೊದಲಾದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲೇ ಮೂಡಿಬರುವುದರಿಂದ ವಾಕ್ಯವೊಂದು ಈ ಪ್ರಶ್ನೆಗಳನ್ನು ಮೊದಲಿಗೇ ಗ್ರಹಿಸಿ ಅವುಗಳಿಗೆ ಉತ್ತರಗಳನ್ನು ಒದಗಿಸುತ್ತ ಹೋದಲ್ಲಿ ಹೇಳುಗ-ಕೇಳುಗ ಸಂಬಂಧದ ಸಂವಹನ ಮಾದರಿ ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲ ಬರೆಹಗಳಿಗೂ ಈ ಗುಣ ಇರುವುದು ಸಹಜ. ಆದರೆ, ಮಾತು ಎನ್ನುವುದು ಒಂದು ಬಗೆಯ ಆಪ್ತತೆಯನ್ನು ಹೊಂದಿರುತ್ತದೆ ಎನ್ನುವುದು ಒಂದು ಗ್ರಹಿಕೆ. ಆಪ್ತತೆಯೆನ್ನುವುದು ಮಾನವ ಸಂಬಂಧಗಳ ಹಾರ್ದಿಕ ನಿರ್ವಹಣೆಗೆ ಅಗತ್ಯವಾಗಿ ಬೇಕಾದ ಒಂದು ಅಂಶ. ಆದ್ದರಿಂದ ಮಾತು ಎನ್ನುವ ಪ್ರಕ್ರಿಯೆಯಲ್ಲಿ ಹೇಳುವವರಿಗೆ ಕೇಳುವವರೂ, ಕೇಳುವವರಿಗೆ ಹೇಳುವವರೂ ಪರಸ್ಪರ ಮುಖ್ಯರಾಗುತ್ತಾರೆ.
ಈ ರೀತಿ, ಪ್ರತಿ ವ್ಯಕ್ತಿಯೂ ವೈಯಕ್ತಿಕ ನೆಲೆಯಲ್ಲಿ ಮಾಧ್ಯಮಗಳಿಗೆ ಮುಖಾಮುಖಿಯಾಗುತ್ತಾನೆ. ಮಾಧ್ಯಮಗಳು ‘ಹೇಳುವ ವ್ಯಕ್ತಿ’ ಯಾದರೆ, ಓದುಗ, ಕೇಳುಗ ಮತ್ತು ನೋಡುಗರು ಆ ಹೇಳಿಕೆಯನ್ನು ‘ಸ್ವೀಕರಿಸುವ ವ್ಯಕ್ತಿ’ಗಳು. ಈ ದೃಷ್ಟಿಯಿಂದ ಪ್ರತಿಯೊಂದು ಮಾಧ್ಯಮವೂ ತನ್ನದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿರುತ್ತದೆ ಎನ್ನಬಹುದು. ಮಾಧ್ಯಮಗಳ ಈ ವ್ಯಕ್ತಿತ್ವ ಬಹುಪಾಲು ಅವು ಬಳಸುವ ಭಾಷೆಯ ಮಾದರಿಗಳಿಂದ ಪ್ರಕಟಗೊಳ್ಳುತ್ತದೆ. ಈ ಮೊದಲು ಗಮನಿಸಿರುವಂತೆ ಭಾಷೆ-ಭಾವ ಸ್ಫುಟಗೊಳ್ಳುವುದು ವೈಯಕ್ತಿಕ ಗ್ರಹಿಕೆ ಮತ್ತು ತಾತ್ವಿಕ ನಿಲುವುಗಳಿಂದ ಉಂಟಾಗುವ ಪ್ರಜ್ಞೆಯಿಂದಾಗಿ. ಈ ಜಾಡು ಹಿಡಿದು ಪ್ರತಿ ಮಾಧ್ಯಮದಲ್ಲೂ ಒಂದೇ ಮಾತು ಹೇಗೆ ಬಗೆ ಬಗೆಯ ರೂಪಾಂತರಗಳಿಗೆ ಒಳಗಾಗುತ್ತದೆ ಎನ್ನುವುದನ್ನೂ ಅಭ್ಯಾಸ ಮಾಡಬಹುದು. ಒಂದೇ ಸಾಲಿನ ಸುದ್ದಿಯೊಂದು, ವಿಶ್ಲೇಷಣೆಗೆ ಒಳಪಟ್ಟಾಗ ಸಾವಿರಾರು ಪದಗಳ ದೀರ್ಘ ಲೇಖನವಾಗಬಲ್ಲದು. ಅಂದರೆ, ಅಷ್ಟು ಮಾಹಿತಿಯನ್ನು ಆ ವಾಕ್ಯ ಗರ್ಭೀಕರಿಸಿಕೊಂಡಿದೆ ಎನ್ನಬಹುದಲ್ಲವೇ? ಹೀಗಾಗಿಯೇ, ಮಾಧ್ಯಮಗಳ ಅಭಿವ್ಯಕ್ತಿಯ ಸ್ವರೂಪವನ್ನು ಹಿಡಿದೇ ಅವುಗಳ ವ್ಯಕ್ತಿತ್ವವನ್ನು ಗ್ರಹಿಸಲಾಗುತ್ತದೆ.
ಶ್ರವ್ಯ ಮಾಧ್ಯಮದಲ್ಲಿನ ಮಾತಿಗೆ ಸೂಕ್ಷ್ಮತಮ ಆಯಾಮಗಳುಂಟು. ಮುದ್ರಣ ಮಾಧ್ಯಮದಲ್ಲಿ ಒಂದು ಸಾಧಾರಣೀಕೃತ ಭಾಷೆಯ ಮಾದರಿಯನ್ನು ಉಪಯೋಗಿಸಲಾಗುತ್ತದೆ. ಆದರೆ, ಶ್ರವ್ಯ ಮಾಧ್ಯಮದಲ್ಲಿ ಈ ರೀತಿಯ ಸಾಧಾರಣೀಕೃತ ಭಾಷೆಯನ್ನು ಬಳಸುವ ಪ್ರಯತ್ನ ಮಾಡಿದರೂ, ಮಾತನಾಡುವ ವ್ಯಕ್ತಿಗೆ ಸಂಬಂಧಿಸಿದ ಕೆಲವು ವೈಯಕ್ತಿಕ ಸಂಗತಿಗಳು ಹೇಗೆ ಆ ಮಾತನ್ನು ಪ್ರಭಾವಿಸುತ್ತವೆ ಎನ್ನುವುದನ್ನು ಇದೇ ಅಂಕಣದಲ್ಲಿ ಗಮನಿಸಿದ್ದೇವೆ. ಶ್ರವ್ಯ ಮಾಧ್ಯಮದಲ್ಲಿನ ಮಾತು ಆ ಮಾಧ್ಯಮದ ನಿಲುವುಗಳೆಂದೇ ಭಾಸವಾಗಿ ಬಿಡುವುದರಿಂದ ಅಲ್ಲಿ, ಮಾತನಾಡುವ ವ್ಯಕ್ತಿ ಅತ್ಯಂತ ಜಾಗರೂಕತೆಯಿಂದ ಇರಬೇಕಾದದ್ದು ಅತ್ಯಗತ್ಯ. ಮುದ್ರಣ ಮಾಧ್ಯಮದಲ್ಲಿ, ‘ಇದು ಲೇಖಕರ ವೈಯಕ್ತಿಕ ಅಭಿಪ್ರಾಯ’ ಎಂದು ಷರಾ ಬರೆಯುವ ಸಾಧ್ಯತೆಯಿದೆ. ರೇಡಿಯೊದಂಥ ಶ್ರವ್ಯ ಮಾಧ್ಯಮದಲ್ಲಿ ಇಂತಹ ಸಂಪ್ರದಾ ಯವಿಲ್ಲದಿರುವುದರಿಂದ ಇದು ತಕ್ಷಣಕ್ಕೆ ಸಾಧ್ಯವಾಗದ ವಿಷಯ. ಏಕೆಂದರೆ, ಇಲ್ಲಿ ಮಾಧ್ಯಮ ಮತ್ತು ಅದನ್ನು ಸಂವಹನಕ್ಕಾಗಿ ಬಳಸು ತ್ತಿರುವ ವ್ಯಕ್ತಿಯ ನಡುವೆ ಒಂದು ಅವಿನಾಭಾವ ಸಂಬಂಧ ಉಂಟಾದಂತೆ ಕೇಳುಗರು ಭಾವಿಸುವುದುಂಟು. ಹೀಗಾಗಿ ಮಾತನಾಡುತ್ತಿರುವ ವ್ಯಕ್ತಿಯ ಅಭಿಪ್ರಾಯಗಳೆಲ್ಲವೂ ಮಾಧ್ಯಮದ ಅಭಿಪ್ರಾಯಗಳೇ ಎನ್ನಿಸುವುದು ಅತ್ಯಂತ ಸುಲಭ ಮತ್ತು ಸಹಜ. ಸಾರ್ವಜನಿಕ ಪ್ರಸಾರ ಕ್ಷೇತ್ರದಲ್ಲಿ ಇಂತಹ ತೊಡಕನ್ನು ನಿರ್ವಹಿಸುವುದು ಅತ್ಯಂತ ದೊಡ್ಡ ಸವಾಲು. ಈ ಕಾರಣಕ್ಕಾಗಿಯೇ ಸಾರ್ವಜನಿಕ ಪ್ರಸಾರದ ನೀತಿ ಸಂಹಿತೆಯನ್ನು ಪ್ರತಿಬಾರಿಯೂ ಅದರಲ್ಲಿ ಭಾಗವಹಿಸುವವರಿಗೆ ಮನದಟ್ಟು ಮಾಡಿಕೊಡಬೇಕಾಗಿ ಬಂದೀತು.
ಟೆಲಿವಿಷನ್‌ನಂತಹ ದೃಶ್ಯ ಮಾಧ್ಯಮಗಳಲ್ಲಿ, ದೃಶ್ಯಕ್ಕೆ ಪೂರಕವಾಗಿ ಮಾತು ಮೂಡಿಬರುವುದು ಅಪೇಕ್ಷಿತ. ಆದರೆ, ಇಂದು ಅಲ್ಲಿ ಮಾತಿಗೆ ಪೂರಕವಾಗಿ (ಕೆಲವೊಮ್ಮೆ ಅಸಂಬದ್ಧವಾಗಿಯೂ) ದೃಶ್ಯಗಳನ್ನು ಬಳಸುತ್ತಿರು ವುದನ್ನು ಜನ ಗಮನಿಸಿದ್ದಾರೆ. ಇದರಿಂದಾಗಿ ದೃಶ್ಯ ಮಾಧ್ಯಮದ ಕಲಾತ್ಮಕ ಸಂವಹನದ ಸಾಧ್ಯತೆಗಳು ಕಡೆಗಣಿಸಲ್ಪಟ್ಟಿವೆ ಎಂದು ಎನ್ನಿಸದೇ ಇರದು. ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳು ನಿರೂಪಕರನ್ನು ಅವಲಂಬಿಸಲೇ ಬೇಕು. ಹೀಗಾಗಿ, ತಾವು ಕೆಲಸ ನಿರ್ವಹಿಸುವ ಮಾಧ್ಯಮದ ವ್ಯಕ್ತಿತ್ವದ ಗೌರವವನ್ನು ಕಾಪಾಡುವುದು ನಿರೂಪಕರ ಜವಾಬ್ದಾರಿ. ಮಾಧ್ಯಮಗಳಿಗಾಗಿ ರೂಪಿಸಿರುವ ನೀತಿಸಂಹಿತೆಯ ಆಂತರ್ಯವನ್ನು ಅರ್ಥಮಾಡಿಕೊಳ್ಳದೆ, ತಾನು, ತನ್ನ ಮಾತು, ತನ್ನ ಅಭಿಪ್ರಾಯ, ತನ್ನ ಧೋರಣೆ, ತನ್ನ ಆಸಕ್ತಿ, ತನ್ನ ಅಭಿವ್ಯಕ್ತಿ, ತನ್ನ ಹೆಸರು, ತನ್ನ ಪ್ರಚಾರ ಎಂದು ಸ್ವಕೇಂದ್ರಿತವಾಗಿ ಮಾತ್ರ ಚಿಂತಿಸುವ ನಿರೂಪಕರು ತಾವು ಕೆಲಸ ನಿರ್ವಹಿಸುವ ಮಾಧ್ಯಮಕ್ಕೆ ಹಾನಿಯುಂಟು ಮಾಡುವುದೇ ಹೆಚ್ಚು.
ಶ್ರವ್ಯ ಮಾಧ್ಯಮವಂತೂ ಅತ್ಯಂತ ಆಪ್ತವಾದದ್ದು. ಪ್ರತಿ ಕೇಳುಗನೂ ತನ್ನನ್ನೇ ನಿರೂಪಕನ ಸ್ಥಾನದಲ್ಲಿ ಕಲ್ಪಿಸಿಕೊಳ್ಳುವಂಥ ವಿಶಿಷ್ಟ ಮಾಧ್ಯಮವದು. ಹೀಗಾಗಿ ಯಾವುದೇ ಅಭಿಪ್ರಾಯವನ್ನು ‘ಹೇರುವಂಥ’ ನಿರೂಪಕರ ಮಾತುಗಳು ಅಲ್ಲಿ ಸಂಪೂರ್ಣ ಅಪ್ರಸ್ತುತವಾಗು ತ್ತವೆ. ವಿಷಯವೊಂದನ್ನು ಅದರ ಸಹಜ ಅರ್ಥದಲ್ಲಿ ಕೇಳುಗರಿಗೆ ತಲುಪಿಸುವುದೇ ಇಲ್ಲಿನ ಪ್ರಮುಖ ಉದ್ದೇಶ. ಹಾಸ್ಯ-ಮನರಂಜನೆಗೆ ಸಂಬಂಧಿಸಿದ ವಿಷಯಗಳಲ್ಲಿ ರೋಚಕತೆಯನ್ನು ತರಲು ಅವಕಾಶಗಳು ಹೇರಳವಾಗಿರುತ್ತವೆ. ಆದರೆ, ಪ್ರಸಾರದ ಎಲ್ಲವೂ ರೋಚಕವಾ ಗಿರಲೇಬೇಕು ಎನ್ನುವಂತಹ ನಿರ್ಬಂಧವೇನೂ ಇಲ್ಲ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅದು ಸಾಧ್ಯವೂ ಇಲ್ಲ. ಶ್ರವ್ಯ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವವರಿಗೆ ಭಾಷೆಯ ಮೇಲೆ ಉತ್ತಮ ಪ್ರಭುತ್ವವಿರಬೇಕಾದದ್ದು ಅಪೇಕ್ಷಣೀಯ. ಆಡುಮಾತಿನ ಗತ್ತು, ಇತರ ಪ್ರಾದೇಶಿಕ ಭಾಷೆಗಳ ಅರಿವು ಹೆಚ್ಚಿನ ಸಾಮರ್ಥ್ಯವಾಗಿ ಒದಗಿ ಬರುತ್ತದೆ. ಭಾಷೆಯಷ್ಟೇ ಭಾವನೆಯೂ ಮುಖ್ಯ. ಪ್ರಸ್ತಾಪಿತವಾಗುತ್ತಿರುವ ವಿಷಯದ ಸಾಂದರ್ಭಿಕ ಮಹತ್ವವನ್ನು, ಸಂವೇದನೆಯನ್ನು ಅರಿಯದೆ ಆಡುವ ಮಾತುಗಳು ಕಟ್ಟುವುದಕ್ಕಿಂತಲೂ ಕೆಡವುವ ಕೆಲಸ ಮಾಡುತ್ತವೆ ಎನ್ನುವುದನ್ನು ಮೇಲಿಂದ ಮೇಲೆ ಮನಸ್ಸಿಗೆ ತಂದುಕೊಳ್ಳಬೇಕು. ಹೀಗಾಗದಿರಲು, ವಿಸ್ತೃತವಾದ ಓದಿನ ಅಗತ್ಯ ಉಂಟು.ನಿರರ್ಗಳವಾಗಿ, ನಿರಂತರವಾಗಿ ಮಾತನಾಡಬಲ್ಲವರೆಲ್ಲರೂ ನಿರೂಪಕರಾಗುವುದು ಸಾಧ್ಯವಿಲ್ಲ. ಆಡುವ ಮಾತಿನ ಹೂರಣ ಏನಿದೆಯೆಂಬುದು ಮುಖ್ಯ.
ಶ್ರವ್ಯ-ದೃಶ್ಯ ಮಾಧ್ಯಮ ಸ್ಫೋಟದ ಇಂದಿನ ಸಂದರ್ಭದಲ್ಲಿ ರೇಡಿಯೊ ಜಾಕಿ, ವಿಡಿಯೊ ಜಾಕಿಗಳೇ ಆಯಾ ಮಾಧ್ಯಮಗಳ ಮುಖಗಳಾಗು ತ್ತಿದ್ದಾರೆ. ಆದರೆ, ಅವರು ಕೇವಲ ‘ಮುಖವಾಡ’ಗಳಾಗದೆ ಮಾಧ್ಯಮಗಳ ಹೃದಯದ ಬಡಿತವಾಗಬೇಕು ಎನ್ನುವುದು ವೃತ್ತಿಪರತೆ.ಎರಡೂ ಮಾಧ್ಯಮಗಳ ವಾಹಿನಿಗಳಲ್ಲಿ ಆರ್.ಜೆ ಮತ್ತು ವಿ.ಜೆ ಗಳು ಬಳಸುತ್ತಿರುವ ಕನ್ನಡ ಮಾತಿನ ಧಾಟಿಯ ಬಗ್ಗೆ ಹಲವು ಆಕ್ಷೇಪಗಳು ಇಲ್ಲದಿಲ್ಲ. ವಾಣಿಜ್ಯೋದ್ದೇಶದಿಂದ ಪ್ರಾರಂಭಗೊಂಡ ಈ ವಾಹಿನಿಗಳು ಮೂಲಭೂತವಾಗಿ ಪಶ್ಚಿಮದ ವಾಣಿಜ್ಯೋದ್ದೇಶ ಪ್ರಸಾರ ಮಾದರಿಗಳನ್ನು ಅನುಸರಿಸಿ ಪ್ರಾರಭಗೊಂಡವು ಎನ್ನುವುದು ಅಗತ್ಯವಾಗಿ ಗಮನಿಸಬೇಕಾದ ಸಂಗತಿ. ಇದು ವಾಹಿನಿಗಳಲ್ಲಿ ಬಳಸಲಾಗುತ್ತಿರುವ ಭಾಷೆಯ ಮೇಲೂ ಪ್ರಭಾವ ಬೀರಿದೆ. ಶ್ರವ್ಯ-ದೃಶ್ಯ ಮಾಧ್ಯಮಗಳು ತಕ್ಕ ಮಟ್ಟಿಗೆ ಇಂದಿನ ಜೀವನ ಶೈಲಿಯ (ಲೈಫ್ ಸ್ಟೈಲ್) ಮಾಧ್ಯಮಗಳು. ಇವು ಭಾರತೀಯ ಜೀವನ ಶೈಲಿ ಮತ್ತು ಮನೋಧರ್ಮಕ್ಕೆ ಹೊಂದಿಕೊಳ್ಳುವಂತೆ ಇದ್ದಾಗ ಮಾತ್ರ ಬಹುಜನರಿಂದ ಸ್ವೀಕೃತವಾಗುತ್ತವೆ ಎನ್ನುವುದೂ ಒಂದು ಸಾಮಾನ್ಯವಾದ ಅಭಿಪ್ರಾಯ. ಇಲ್ಲವಾದಲ್ಲಿ ಮಾಧ್ಯಮ-ಕೇಳುಗರ ನಡುವಿನ ಅಂತರ ದೊಡ್ಡದಾಗುತ್ತಲೇ ಹೋಗು ತ್ತದೆ. ಆದರೆ, ಈ ಮಾಧ್ಯಮಗಳು ಕೇಳುಗರನ್ನು ‘ಗ್ರಾಹಕ’ರನ್ನಾಗಿಸುವ ಪ್ರಯತ್ನಗಳನ್ನು ಮಾಡುತ್ತಿರುವುದೂ ಮಾಧ್ಯಮ ಕ್ಷೇತ್ರದಲ್ಲಿನ ಒಂದು ಪ್ರಮುಖ ಬೆಳವಣಿಗೆ. ಇದು ಮಾಧ್ಯಮಗಳ ಮಾತಿನ ಶೈಲಿಯನ್ನು ಉದ್ದೇಶ ಪೂರ್ವಕವಾಗಿಯೇ ಪ್ರಭಾವಿಸಿದೆ ಎನ್ನಬೇಕು. ಇಂತಹ ಸೀಮಿತ ಉದ್ದೇಶಗಳು ಭಾಷೆಯೊಂದರ ಮಾತಿನ ಸೊಗಡು-ಸೊಬಗುಗಳಿಗೇ ಸಂಚಕಾರ ತಂದೊಡ್ಡುವಂತಾಗುವುದು ಸರಿಯೇ? ಇದು ನಮ್ಮೆಲ್ಲರ ಎದುರಿಗಿರುವ ಪ್ರಶ್ನೆ.
99860 01369
ಮುಂದಿನವಾರ: ನಿರೂಪಕರ ಮಾತು - ಇನ್ನಷ್ಟು ಚಿಂತನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.