ದಕ್ಷಿಣ ಭಾರತದ ಮಟ್ಟಿಗೆ ಕನ್ನಡವೊಂದರಲ್ಲಿಯೇ ಈ ಪರಿಯ ಭಾಷಾ ಸ್ಖಾಲಿತ್ಯಗಳು ಉಂಟಾಗಿವೆ. ಆಡುನುಡಿಯೊಂದರ ಸ್ವರೂಪವನ್ನು ಹೊರತೋರಗೊಡುವುದು ಶ್ರವ್ಯ, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳೇ ಆಗಿರುವುದರಿಂದ, ಇಲ್ಲಿನ ಭಾಷಾ ಪ್ರಯೋಗ ಸುಧಾರಿತವಾದಲ್ಲಿ, ಸಮರ್ಪಕವಾದಲ್ಲಿ ಭಾಷೆ ತನ್ನತನವನ್ನು ಉಳಿಸಿಕೊಳ್ಳುವುದು ಸಾಧ್ಯ.
ಮಾತು ಪ್ರತಿ ವ್ಯಕ್ತಿಯ ವೈಯಕ್ತಿಕ ಅಗತ್ಯ. ವ್ಯಕ್ತಿಯ ವೃತ್ತಿ-ಪ್ರವೃತ್ತಿಗಳನ್ನವಲಂಬಿಸಿ ಅವನಾಡುವ ಮಾತಿನ ಸ್ವರೂಪದಲ್ಲಿ ವಿಶಿಷ್ಟ ನುಡಿರೂಢಿಗಳು ಕಂಡುಬರುತ್ತವೆ. ಒಬ್ಬ ತರಕಾರಿ ಮಾರುವನನ್ನೋ, ದರ್ಜಿಯನ್ನೋ, ಬಡಗಿಯನ್ನೋ, ಆಟೊ ಚಾಲಕನನ್ನೋ, ಮೆಕ್ಯಾನಿಕ್‌ನನ್ನೋ ಮಾತನಾಡಿಸುವಾಗ ಅವರು ತಮ್ಮ ಅಭಿವ್ಯಕ್ತಿಯನ್ನು ತಮ್ಮದೇ ಅನುಭವ ಪ್ರಪಂಚದಲ್ಲಿ ಗ್ರಹಿಸಿದ ಮತ್ತು ತಮ್ಮ ನಿತ್ಯ ಬಳಕೆಯ ನುಡಿಗಟ್ಟುಗಳನ್ನೇ ಬಳಸಿ ಮಾಡುತ್ತಾರೆ. ಇದೇ ರೀತಿ ವೈದ್ಯರು, ಎಂಜಿನಿಯರ್, ಹಣಕಾಸು ನಿರ್ವಹಣೆ ಈ ಮೊದಲಾದ ವಿಭಿನ್ನ ವೃತ್ತಿಗಳಲ್ಲಿರುವವರು ತಮ್ಮ ವೃತ್ತಿಗೆ ಸಂಬಂಧಿಸಿದ ಕೆಲವು ‘ಪಾರಿಭಾಷಿಕ’ವೆನ್ನಬಹುದಾದ ಪದಗಳನ್ನೂ ನಿತ್ಯದ ಬಳಕೆಯ ಮಾತುಗಳಲ್ಲಿ ತಂದುಬಿಡುವುದನ್ನು ಗಮನಿಸಬಹುದು. ಬಡಗಿಯೊಬ್ಬ ಹೇಳುವ ‘ಒಂದು ನೂಲಿನಷ್ಟು’ ಎನ್ನುವ ಮಾತು ಒಬ್ಬ ಎಂಜಿನಿಯರ್ ವಿವರಿಸುವ ‘ಸುಮಾರು ಒಂದು ಸೆಂಟಿಮೀಟರ್’ ಆಗಬಹುದು. ವಿವರಿಸಬೇಕಿರುವ ವಿಷಯ ಒಂದೇ ಆದರೂ, ಅಭಿವ್ಯಕ್ತಿಯ ವಿಧಾನ ಬೇರೆಯದ್ದಾಗಿರುತ್ತದೆ. ಆಡುನುಡಿಯೆನ್ನುವುದು ಸದಾಕಾಲಕ್ಕೂ ಬದಲಾಗುತ್ತ, ಹಿಗ್ಗುತ್ತಲೇ ಇರುತ್ತದೆ. ಹೀಗಾಗಿ ಮಾತಿಗೂ ನಮ್ಮ ಅನುಭವ ಪ್ರಪಂಚಕ್ಕೂ ನೇರವಾದ ಸಂಬಂಧವಿದೆ.
ಅನುಭವ ಪ್ರಪಂಚ ವಿಸ್ತಾರವಾಗುತ್ತ ಬಂದಂತೆಲ್ಲ, ನಮ್ಮ ಮಾತಿನ ರೀತಿ, ಪದಗಳ ಬಳಕೆಯಲ್ಲಿ ಐಚ್ಛಿಕವಾದ ಬದಲಾವಣೆಗಳನ್ನು ತಂದುಕೊಂಡು ಮಾತನಾಡುವ, ಇತರರ ಮಾತಿನ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಗಳಿಸಿಕೊಳ್ಳಬಹುದು. ಆದರೆ ಭಾಷೆಯೊಂದಕ್ಕೆ ಅನನ್ಯತೆಯನ್ನು ಒದಗಿಸುವ ವ್ಯಾಕರಣದ ಮೂಲಸ್ವರೂಪ ಬದಲಾಗದು. ಆಡುನುಡಿ ವ್ಯಾಕರಣದ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರುವುದಿಲ್ಲವಾದರೂ, ಅಭಿವ್ಯಕ್ತಿಗಾಗಿ ಬಳಸುವ ಪದಗಳ ಆಯ್ಕೆಗಳನ್ನು ಹೆಚ್ಚಿಸುತ್ತದೆ ಅಥವಾ ಕುಗ್ಗಿಸುತ್ತದೆ.
ಉದಾಹರಣೆಗೆ, ಇತ್ತೀಚಿನ ಆಡುನುಡಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿರುವ ‘ಆಂಟಿ’ ಮತ್ತು ‘ಅಂಕಲ್’ ಎನ್ನುವ ಪದಗಳು ಸೋದರತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಸೋದರಮಾವ ಮೊದಲಾದ ನಿರ್ದಿಷ್ಟ ಸಂಬಂಧವಾಚಕಗಳ ಸ್ಥಾನವನ್ನು ಆಕ್ರಮಿಸಿವೆ. ಆದರೆ ಈ ನಿರ್ದಿಷ್ಟ ಸಂಬಂಧವಾಚಕಗಳ ಅಗತ್ಯವನ್ನು ಎಂದಿಗಾದರೂ ನಿವಾರಿಸಲಾದೀತೇ? ಸೋದರತ್ತೆಗೂ, ಅತ್ತೆಗೂ ಭಾರತೀಯ ಕೌಟುಂಬಿಕ ಸ್ತರದಲ್ಲಿ ಇರುವ ವ್ಯತ್ಯಾಸ ಮತ್ತು ಮಹತ್ವಗಳು ಬೇರೆಯೇ ಆಗುತ್ತವೆ ಎನ್ನುವುದನ್ನು ಗಮನಿಸದಿರಲಾಗುತ್ತದೆಯೇ? ಈ ವ್ಯತ್ಯಾಸ ಮತ್ತು ಮಹತ್ವಗಳು ಅಪ್ಪಟವಾಗಿ ಸಾಂಸ್ಕೃತಿಕವಾದವು. ಮನೆಗೆ ಬಂದ ಸೊಸೆಯೊಬ್ಬಳು ಅತ್ತೆಯನ್ನು ‘ಅಮ್ಮ’ ಎನ್ನುವುದು, ಮಾವನನ್ನು ‘ಅಪ’ ಎನ್ನುವುದು ಭಾರತೀಯ ಸಂದರ್ಭದಲ್ಲಿ ಅತ್ಯಂತ ಸಹಜವಾಗಿಯೇ ಸ್ವೀಕೃತವಾಗುತ್ತದೆ. ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ, ಐಚ್ಛಿಕವಾಗಿ ಆಗುವ ಈ ಪಲ್ಲಟಗಳಿಗೂ, ಇದೇ ಸಂಬಂಧಗಳಿಗೆ ಅನ್ಯ ಸಂಸ್ಕೃತಿಯಿಂದ ಗ್ರಹಿಸಿರುವ ‘ಆಂಟಿ’ ಮತ್ತು ‘ಅಂಕಲ್’ ಎನ್ನುವ ಭಾವನಾಶೂನ್ಯ, ಅನಿರ್ದಿಷ್ಟ ಸಂಬಂಧಸೂಚಕ ಪದಗಳನ್ನು ಬಳಸುವುದಕ್ಕೂ ಇರುವ ವ್ಯತ್ಯಾಸವೇನೋ ಕೇವಲ ಸಾಂಸ್ಕೃತಿಕವಾದದ್ದು, ನಿಜ. ಆದರೆ, ಪರಿಣಾಮ ದೂರಗಾಮಿಯಾದದ್ದು.
ಇಂತಹ ಅನಗತ್ಯ ಗ್ರಹೀತ ನುಡಿರೂಢಿಗಳು ಭಾಷೆಯೊಂದರ ಆರ್ದ್ರತೆಯನ್ನು ನಾಶಮಾಡಿ ಅದನ್ನು ಕೃತಕಗೊಳಿಸಿಬಿಡುವ ಸಾಧ್ಯತೆಗಳಿವೆ. ತತ್ಪರಿಣಾಮವಾಗಿ ಮಾನವ ಸಂಬಂಧಗಳೂ ವಾಸ್ತವದಲ್ಲಿ ಸೊರಗುವುದು ಮುಂದಿನ ಹಂತ. ಆಡುನುಡಿಯನ್ನು ಸಾಧ್ಯವಾದ ಮಟ್ಟಿಗೆ ಸಹಜ ರೂಪದಲ್ಲಿ ಉಳಿಸಿಕೊಳ್ಳುವುದು ಈ ಕಾರಣಕ್ಕಾಗಿ ಅಗತ್ಯವೆನ್ನಿಸುತ್ತದೆ.
ದಕ್ಷಿಣ ಭಾರತದ ಮಟ್ಟಿಗೆ ಕನ್ನಡವೊಂದರಲ್ಲಿಯೇ ಈ ಪರಿಯ ಭಾಷಾ ಸ್ಖಾಲಿತ್ಯಗಳು ಉಂಟಾಗಿರುವುದು ಎಂದು ಕೆಲವು ಪ್ರಾಜ್ಞರು ಹೇಳುವುದುಂಟು. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಆಡುನುಡಿಗಳಲ್ಲಿ ಈ ಪರಿಯ ಸ್ಖಾಲಿತ್ಯಗಳು, ಸಾಂಕರ್ಯಗಳು ಉಂಟಾಗಿಲ್ಲ ಎಂತಲೂ ಹೇಳುತ್ತಾರೆ. ಈ ಮಾತು ನಿಜವೇ ಆಗಿದ್ದಲ್ಲಿ, ಹೀಗೇಕೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹೊಣೆಗಾರಿಕೆ ಕನ್ನಡಿಗರಾದ ನಮ್ಮದೇ. ಆಡುನುಡಿಯೊಂದರ ಸ್ವರೂಪವನ್ನು ಹೊರತೋರಗೊಡುವುದು ಶ್ರವ್ಯ, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳೇ ಆಗಿರುವುದರಿಂದ, ಇಲ್ಲಿನ ಭಾಷಾ ಪ್ರಯೋಗ ಸುಧಾರಿತವಾದಲ್ಲಿ, ಸಮರ್ಪಕವಾದಲ್ಲಿ ಭಾಷೆ ತನ್ನತನವನ್ನು ಉಳಿಸಿಕೊಳ್ಳುವುದು ಸಾಧ್ಯ. ಇದು ಎಲ್ಲ ಮಾಧ್ಯಮಗಳ ಜವಾಬ್ದಾರಿಯೂ ಹೌದು.
ಕಚೇರಿಯ ಸಹೋದ್ಯೋಗಿಯೊಬ್ಬರನ್ನು ಒಮ್ಮೆ ‘ಒಂದು ಹಾಳೆ ಕೊಡಿ’ ಎಂದು ಕೇಳಿದಾಗ, ಅವರು ಅಪ್ರತಿಭರಾದರು. ‘ಕಿವಿಯ ಕೆಳಭಾಗವನ್ನು (ಹಾಲೆ ಅಥವಾ ಹಲ್ಲೆ) ಕೊಡುವುದು ಹೇಗೆ?’ ಎನ್ನುವುದು ಅವರಿಗೆ ಉಂಟಾದ ಜಿಜ್ಞಾಸೆ. ಇಲ್ಲಿನ ಸಮಸ್ಯೆಗೆ ವಿವಿಧ ಕಾರಣಗಳಿವೆ. ಮೊದಲನೆಯದು, ಪ್ರಶ್ನೆಯ ಸಂದರ್ಭವನ್ನು ಅವರು ಗ್ರಹಿಸದೆ ಹೋದದ್ದು. ಎರಡನೆಯದು ‘ಹಾಳೆ’ ಎನ್ನುವುದನ್ನು ‘ಹಾಲೆ’ ಎಂದು ಗ್ರಹಿಸಿದ್ದು. ಮೂರನೆಯದು, ಯಾರಾದರೂ ಕಿವಿಯ ‘ಹಾಲೆ’ಯನ್ನು ಕೇಳಿಯಾರೇ ಎನ್ನುವುದನ್ನು ವಿವೇಚಿಸದೆ ಹೋದದ್ದು.
ನಾಲ್ಕನೆಯದು, ‘ಹಾಳೆ’ ಎನ್ನುವ ಪದದ ಅರ್ಥ ಅವರಿಗೆ ತಿಳಿದಿರಲಿಲ್ಲ ಎನ್ನುವುದು. ಈ ಕೊನೆಯ ಕಾರಣವೇ ಅತ್ಯಂತ ಖೇದವನ್ನುಂಟುಮಾಡುವ ಸಂಗತಿ. ‘ಹಾಳೆ’ ಎನ್ನುವ ಸಾಮಾನ್ಯ ಕನ್ನಡ ಪದದ ಅರ್ಥ ಏನೆಂಬುದು ತಿಳಿಯದೆ ಹೋದಲ್ಲಿ ಅವರ ಆಡುನುಡಿಯ ಪದಸಂಪತ್ತು ಎಷ್ಟು ಎನ್ನುವುದನ್ನು ಗ್ರಹಿಸಬಹುದು. ಜೊತೆಗೇ, ‘ಹಾಳೆ’ ಎನ್ನುವ ಪದದ ಬಳಕೆ ಕಡಿಮೆಯಾಗಿ ‘ಪೇಪರ್’ ಅಥವಾ ‘ಶೀಟ್’ ಎನ್ನುವ ಪರ್ಯಾಯಗಳೇ ವಿಜೃಂಭಿಸತೊಡಗಿದಾಗ ಈ ಪರ್ಯಾಯಗಳನ್ನೇ (ಕೆಲವು ಪ್ರಾಜ್ಞರು ಹೇಳುವಂತೆ) ಕನ್ನಡ ಪದಗಳೆಂದೇ ಗ್ರಹಿಸಬೇಕೇ ಎನ್ನುವ ಗೊಂದಲ ಹುಟ್ಟುತ್ತದೆ. ಹಾಗೆ ನೋಡಿದರೆ ಇಂತಹ ಅಸಂಖ್ಯ ಪರ್ಯಾಯಗಳು ಈಗಾಗಲೇ ಕನ್ನಡದಲ್ಲಿ ಬಳಕೆಗೆ ಬಂದುಬಿಟ್ಟಿವೆ. ಇವು ಆಡುನುಡಿಗೆ ಅಗತ್ಯವಾದ ಹಲವಾರು ಮೂಲ ಕನ್ನಡಪದಗಳನ್ನು ‘ಪದಚ್ಯುತ’ಗೊಳಿಸಿವೆ. ಈ ಪ್ರಕ್ರಿಯೆಯ ಮುಂದುವರಿಕೆಯಾಗಿ ಕನ್ನಡ ಭಾಷೆ ತನ್ನ ಸಹಜ ಸ್ವರೂಪವನ್ನೇ ಕಳೆದುಕೊಳ್ಳುವ ಕಾಲವೂ ಬಂದೀತು. ಭಾಷೆ ಮತ್ತು ಸಂಸ್ಕೃತಿಯ ನಡುವೆ ಇರುವ ಸಾವಯವ ಸಂಬಂಧ ಕಳೆದುಹೋಗಿ ಕನ್ನಡಿಗರನ್ನು ಅನಾಥ ಪ್ರಜ್ಞೆ ಕಾಡುವ ದಿನ ಬಂದೀತು ಎನ್ನುವುದು ಆತಂಕದ ಸಂಗತಿ. ಈ ಆತಂಕ ವಾಸ್ತವವಾಗದಿರಲಿ.
ಭಾಷೆಯೊಂದು ಸಂಪೂರ್ಣ ಸೌಷ್ಟವದಿಂದ ಬಳಕೆಯಲ್ಲಿರಬೇಕಾದರೆ ಅದು ನಿತ್ಯದ ಅಭಿವ್ಯಕ್ತಿಯ ಎಲ್ಲ ಅಗತ್ಯಗಳನ್ನೂ ಪೂರೈಸುವಂತಿರಬೇಕು. ಹೀಗಾಗಬೇಕಾದಲ್ಲಿ ನಾವು ನಮ್ಮ ಅಭಿವ್ಯಕ್ತಿಯ ಅಗತ್ಯಗಳಿಗೆ ಪರ್ಯಾಯಗಳನ್ನು ಬಳಸುವುದನ್ನು ಮಿತಗೊಳಿಸಿಕೊಂಡು ಮೂಲಪದಗಳನ್ನೇ ಬಳಸುವ ನಿರ್ಧಾರ ಮಾಡಬೇಕು. ಕನ್ನಡದ ಮಟ್ಟಿಗೆ ಈ ನಿರ್ಧಾರ ಗಟ್ಟಿಯಾಗಬೇಕು. ಇಂದು ಹೆಚ್ಚಿನ ಮನೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಮಕ್ಕಳಿರುವುದು ವಾಸ್ತವ. ಲೌಕಿಕ ವ್ಯವಹಾರದ, ಪ್ರಯೋಜನದ ದೃಷ್ಟಿಯಿಂದ ಇದು ಹಲವರಿಗೆ ಅನುಕೂಲಕರವಾಗಿರುವುದು ನಿಜವೇ. ಆದರೆ, ಮುಂದೆಂದೂ ಅವರನ್ನು ಸಾಂಸ್ಕೃತಿಕ ಅನಾಥ ಪ್ರಜ್ಞೆ ಕಾಡದಂತೆ ಮಾತೃಭಾಷೆಯಾದ ಕನ್ನಡದ ನುಡಿರೂಢಿಗಳನ್ನು, ನುಡಿಗಟ್ಟುಗಳನ್ನು, ಲಿಪಿಯನ್ನೂ ಗ್ರಹಿಸಲು ಎಳೆಯರಿಗೆ ಕಲಿಸುವುದು ಹಿರಿಯರ ಕರ್ತವ್ಯ. ಏನೆಂದರೂ ಇದು ವೈಯಕ್ತಿಕ ಅಗತ್ಯದ ಮತ್ತು ಆಯ್ಕೆಯ ಸಂಗತಿ. ಕನ್ನಡ ಸಂಸ್ಕೃತಿಯಲ್ಲಿಯೇ ಇರಬೇಕೆಂದುಕೊಳ್ಳುವವರು ಮಾತ್ರ ಇದನ್ನು ಗಂಭೀರವಾಗಿ ಗ್ರಹಿಸಿಯಾರು.
‘ನುಡಿನಿದಾನ’ ಅಂಕಣ ಪ್ರಾರಂಭವಾದ ಉದ್ದೇಶ, ಮಾತನ್ನೇ ವೃತ್ತ್ತಿಯಾಗಿಸಿಕೊಂಡ ಮಾಧ್ಯಮ ಆಸಕ್ತರಿಗೆ ಕೆಲವು ಉಪಯುಕ್ತ ಸಂಗ್ರಹಿತ ಮಾಹಿತಿಯನ್ನು ನೀಡುವ ಸಲುವಾಗಿ. ಓದುಗರು ಇದನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಪ್ರತಿವಾರವೂ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನೂ ನೀಡಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿನ ಭಾಷಾ ಸ್ಖಾಲಿತ್ಯಗಳ ಕುರಿತು ವೈಯಕ್ತಿಕ ಆಕ್ರೋಶವನ್ನು, ಕನ್ನಡದ ಭಾಷಾ ಸೌಂದರ್ಯವನ್ನು ಕಾಪಾಡಬೇಕಾದ ಕುರಿತು ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಈ ಅಂಕಣದಲ್ಲಿ ಪ್ರಸ್ತಾಪಿತವಾಗಿರುವ ಸಲಹೆಗಳನ್ನು ಸ್ವೀಕರಿಸಿ ಕೆಲವರು ಅದರ ಪ್ರಯೋಗ ಸಾಧ್ಯತೆಯನ್ನೂ ಪರೀಕ್ಷಿಸಿದ್ದಾರೆ. ಪ್ರಯೋಜನ ಪಡೆದವರು ಕರೆಮಾಡಿ ಹೇಳಿದ್ದಾರೆ. ‘ಉಗ್ಗು’ ತೊಂದರೆಯಿಂದ ಬಳಲುತ್ತಿರುವ ಹಲವರು ಪರಿಹಾರ ನಿರೀಕ್ಷಿಸಿ ಕರೆಮಾಡಿದ್ದಾರೆ. ಅಂತಹವರು ವಾಕ್‌ಶ್ರವಣ ತಜ್ಞರನ್ನು ಸಂಪರ್ಕಿಸುವುದು ಸೂಕ್ತ. ಇಂಗ್ಲಿಷ್ ಭಾಷೆಯಲ್ಲಿ ದೊರೆಯುವಂತಹ ನಿರ್ದಿಷ್ಟ ಧ್ವನಿ ವ್ಯಾಯಾಮಗಳನ್ನು ಕನ್ನಡದ ಸ್ವನವ್ಯವಸ್ಥೆಯಲ್ಲಿ ರೂಪಿಸುವ ಪ್ರಾಥಮಿಕ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡಲಾಗಿತ್ತು. ಈ ಕುರಿತು ಹೆಚ್ಚಿನ ಅನುಸಂಧಾನ ಮತ್ತು ಅಭಿವೃದ್ಧಿಯ ಅಗತ್ಯವಿದೆ.
‘ನುಡಿನಿದಾನ’ ಅಂಕಣ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ. ಹಲವು ಅಗತ್ಯಗಳ ಮನವರಿಕೆ ಮಾಡಿಕೊಟ್ಟಿದೆ. ವಿಶೇಷವಾಗಿ, ವೃತ್ತಿಪರ (ಕನ್ನಡ) ಮಾತುಗಾರರಿಗಾಗಿ ಅಗತ್ಯವಾಗಿ ಬೇಕಾಗಿರುವ ತರಬೇತಿಯ ಉಪಕ್ರಮಗಳ ಕುರಿತು ಚಿಂತನೆ-ಕಾರ್ಯಾಗಾರ ನಡೆಸಬೇಕಾದ ಅನಿವಾರ್ಯತೆಯನ್ನು ಓದುಗರು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಮಾಧ್ಯಮಗಳ ‘ಮಾತು’ ಕೇಳುಗ/ ನೋಡುಗರ ಮೇಲೆ ಎಂತಹ ಪ್ರಭಾವ ಬೀರುತ್ತಿದೆ ಎನ್ನುವುದನ್ನು ಹಂಚಿಕೊಂಡಿದ್ದಾರೆ. ‘ನುಡಿಪ್ರೀತಿ’ಯಿಂದ ಮೂಡಿಬಂದ ಈ ಅಂಕಣಕ್ಕೆ ಸ್ಪಂದಿಸಿದ ಎಲ್ಲ ಓದುಗರಿಗೂ ಕೃತಜ್ಞತೆಗಳು.
‘ನುಡಿದರೆ ಮುತ್ತಿನ ಹಾರದಂತಿರಬೇಕು / ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು / ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು / ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು’ - ಇದು ನುಡಿಯ ವಿಧಾನದ ಅತ್ಯಂತ ಸರಳ ಮೀಮಾಂಸೆ. ಎದೆಯಾಳದ ಮಾತು, ಪರಾಮೌನದ ಚಿಪ್ಪು ತೊರೆದು ವೈಖರೀ ನುಡಿಯಾಗುವ ಕುರಿತು ಕವಯಿತ್ರಿ ಅ.ನಾ. ಪೂರ್ಣಿಮಾರ ಈ ಸಾಲುಗಳು ಅತ್ಯಂತ ಆಪ್ತ - ಯಾರ ಎದೆ ಕದವನ್ನು ನೀನು ತಟ್ಟುವೆಯೋ/ ದೊರೆತರಷ್ಟೇ ಸಾಕು ನಗೆಯ ಸ್ವಾಗತವು/ ಮತ್ತೆ ಮತ್ತೊಮ್ಮೆಂದು ಮಿಡಿದರಂತಃಕರಣ/ ಮೌನ ಚಿಪ್ಪನು ತೊರೆದ ಮಾತು ಸಾರ್ಥಕವು. ‘ನುಡಿನಿದಾನ’ದ ಕುರಿತಾಗಿ ನಿಮ್ಮ ಅನಿಸಿಕೆಗಳನ್ನು ಮತ್ತು ಅಗತ್ಯಗಳನ್ನು raghu.medhavee@gmail.com ಇ-ಮೇಲ್ ಗೆ ಕಳುಹಿಸಿದರೆ ಪ್ರತಿಕ್ರಿಯಿಸಲು ಅನುಕೂಲ. ಅದು ಮುಗಿಯದ ಮಾತು. ನಮಸ್ಕಾರ.
ಸಂಪರ್ಕ: 99860 01369
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.