ADVERTISEMENT

ಮೂಲೆ ಸೇರಿದ ಅಖಾಡದ ಮಣ್ಣು

ಸಿದ್ದೇಶ
Published 8 ಜನವರಿ 2017, 19:30 IST
Last Updated 8 ಜನವರಿ 2017, 19:30 IST
ಹೊಲದಲ್ಲೇ ಪೈಲ್ವಾನರ  ಕುಸ್ತಿ ಅಭ್ಯಾಸ ಚಿತ್ರ:  ಪ್ರಶಾಂತ್‌ ಎಚ್‌.ಜಿ.
ಹೊಲದಲ್ಲೇ ಪೈಲ್ವಾನರ ಕುಸ್ತಿ ಅಭ್ಯಾಸ ಚಿತ್ರ: ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನಾದ್ಯಂತ ಅನೇಕ ಮಂದಿ ಕುಸ್ತಿಪಟುಗಳಿದ್ದಾರೆ. ಅದರಲ್ಲೂ ಗಡಿಗ್ರಾಮ ಖಜೂರಿ ಪೈಲ್ವಾನರಿಗೆ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಲಾತೂರು ಹಾಗೂ ಸೊಲ್ಲಾಪುರ ಪ್ರದೇಶಗಳಲ್ಲಿ ಅಪಾರ ಮನ್ನಣೆ ಇದೆ. ಊರ ಜಾತ್ರೆ, ಉತ್ಸವಗಳ ನಿಮಿತ್ತ ಆಯೋಜಿಸಲಾಗುತ್ತಿದ್ದ ಕುಸ್ತಿ ಪಂದ್ಯಾವಳಿಗಳಲ್ಲಿ ಎದುರಾಳಿಗಳನ್ನು ಕೆಲವೇ ಕ್ಷಣಗಳಲ್ಲಿ ಚಿತ್‌ ಮಾಡುವ ಬಲಾಢ್ಯ ಹಾಗೂ ಚಾಣಾಕ್ಷ ಕುಸ್ತಿಪಟುಗಳಿಂದಾಗಿ ಖಜೂರಿ ಹೆಸರುವಾಸಿ.

ಖಜೂರಿಯಲ್ಲಿ ಬಳಸುವ ಅಖಾಡದ ಮಣ್ಣು ಎಲ್ಲರ ಗಮನ ಸೆಳೆಯುತ್ತಿತ್ತು. ಆದರೆ, ಶತಮಾನಕ್ಕೂ ಹಳೆಯದಾದ ಗರಡಿ ಮನೆಯು ಈಗ  ದೇವಸ್ಥಾನ ಒಂದರ ನಿರ್ಮಾಣ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರ ತಂಗುದಾಣವಾಗಿ ಬದಲಾಗಿದೆ. ಇಲ್ಲಿದ್ದ ಮಣ್ಣನ್ನು ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕೊಠಡಿಯೊಂದರ ನೆಲ ಬಗೆದು ಅದರಲ್ಲಿ ಸುರಿದು ಮೇಲೆ ಕಲ್ಲಿನ ಚಪ್ಪಡಿಗಳನ್ನು ಜೋಡಿಸಿ ಸಂರಕ್ಷಿಸಲಾಗಿದೆ!

ಮಹಾರಾಷ್ಟ್ರದ ತುಳಜಾಪುರ ತಾಲ್ಲೂಕಿನ ಗಂದೋರಾದಿಂದ 50 ವರ್ಷಗಳ ಹಿಂದೆ ಸುಮಾರು ಮೂರು ಲಾರಿಯಷ್ಟು ಕೆಂಪು ಮಣ್ಣು ತರಿಸಿ ಅಖಾಡ ನಿರ್ಮಿಸಲಾಗಿತ್ತು. ಈ ಮಣ್ಣಿಗೆ ಎರಡು ಬ್ಯಾರೆಲ್‌ ಮಜ್ಜಿಗೆ, 40 ಲೀಟರ್‌ ಕೊಬ್ಬರಿ ಎಣ್ಣೆ, ನೀರು ಹಾಕಿ ಹದಗೊಳಿಸಿ, ಎಂಟು ಅಡಿ ಆಳ ಹಾಗೂ 15x15 ಅಡಿ ವಿಸ್ತೀರ್ಣದ ಅಖಾಡ ಸಿದ್ಧಪಡಿಸಲಾಗಿತ್ತು.

ಅಲ್ಲದೇ, ಪ್ರತಿ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಮೇಲ್ಪದರದ ಮಣ್ಣನ್ನು ಮಜ್ಜಿಗೆ, ಕೊಬ್ಬರಿ ಎಣ್ಣೆಯಿಂದ ಹದಗೊಳಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕುಸ್ತಿ ಮೇಲಿನ ಒಲವು ಕ್ಷೀಣಿಸಿದ್ದು, ಕಳೆದ ಎರಡು ವರ್ಷಗಳಿಂದ ಈ ಚಟುವಟಿಕೆ ನಿಂತುಹೋಗಿದೆ. ‘ಕುಸ್ತಿ ಆಡುವವರಿಲ್ಲ ಎಂಬ ಕಾರಣದಿಂದ ಮಣ್ಣನ್ನು ಒಂದೆಡೆ ಸಂಗ್ರಹಿಸಿಟ್ಟಿದ್ದೇವೆ. ದೇವಸ್ಥಾನ ಕಾರ್ಯ ಮುಗಿದ ಮೇಲೆ ಗರಡಿ ಮನೆ ಆರಂಭಿಸುವ ಕುರಿತು ಚಿಂತಿಸಲಾಗುವುದು’ ಎನ್ನುತ್ತಾರೆ 58 ವರ್ಷದ ಸಿದ್ರಾಮಪ್ಪ ವಾನೆಗಾಂವ.

‘ನನಗೆ ತಿಳಿದಿರುವ ಮಟ್ಟಿಗೆ ನಮ್ಮಲ್ಲಿರುವ ಮಣ್ಣು ಜಿಲ್ಲೆಯ ಯಾವುದೇ ಗರಡಿ ಮನೆಯಲ್ಲಿಲ್ಲ. ತಾಲೀಮು ಅಥವಾ ಆಟವಾಡುವಾಗ ಕೆಲವೊಮ್ಮೆ ಮಣ್ಣು ಬಾಯಿ, ಕಣ್ಣಿಗೆ ಹೋಗುತ್ತದೆ. ಆದರೆ, ಇದರಿಂದ ಯಾವುದೇ ಹಾನಿಯಿಲ್ಲ. ಪೈಲ್ವಾನರು ಎಷ್ಟೇ ಬೆವರಿದರೂ ಚರ್ಮಕ್ಕೆ ಅಂಟುವುದಿಲ್ಲ’ ಎನ್ನುತ್ತಾರೆ ಸಿದ್ರಾಮಪ್ಪ. ಇವರು 35 ವರ್ಷಗಳ ಹಿಂದೆ ಬೆಳಗಾವಿ, ಹೊಸಪೇಟೆಯಲ್ಲಿ ನಡೆದಿದ್ದ ಕುಸ್ತಿಯಲ್ಲಿ ನಗದು ಬಹುಮಾನ ಗೆದ್ದಿದ್ದರು.

‘ಮಹಾರಾಷ್ಟ್ರದ ಅಣಮರ್ಗ ದಲ್ಲಿರುವ ಸಂಬಂಧಿಗಳ ಸಲಹೆಯಂತೆ ನಮ್ಮ ತಂದೆ ಶಿವಲಾಲ್‌ ವಾನೆಗಾಂವ ಹಾಗೂ ಅವರ ಸ್ನೇಹಿತರಾದ ರಾಮಪ್ಪ ಕುಂಬಾರ, ಹಣಮಂತ ಕಂದಗುಳಿ ಅವರು ಸಾಕಷ್ಟು ಕಷ್ಟಪಟ್ಟು ಗಂದೋರಾದಿಂದ ಮಣ್ಣು ತಂದು ಅಖಾಡ ಸಿದ್ಧಪಡಿಸಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

‘ಇಂದಿನ ಮಕ್ಕಳು ಹಾಗೂ ಯುವಕರು ಮೊಬೈಲ್‌, ಟಿ.ವಿ ಲೋಕದಲ್ಲೇ ಮುಳುಗಿದ್ದಾರೆ. ಈ ಹೊಸ ಪೀಳಿಗೆಗೆ ಕುಸ್ತಿಯಲ್ಲಿ ಆಸಕ್ತಿ ಅಷ್ಟಕಷ್ಟೇ. ಇದಲ್ಲದೇ ಪೈಲ್ವಾನನೊಬ್ಬನ ಆಹಾರಕ್ಕಾಗಿಯೇ ದಿನವೊಂದಕ್ಕೆ ಕನಿಷ್ಠ ₹200 ಬೇಕು. ಆರ್ಥಿಕವಾಗಿ ಅಷ್ಟು ಸದೃಢರಲ್ಲದವರು ಮಕ್ಕಳನ್ನು ಕುಸ್ತಿ ಆಡಲು ಬಿಡುತ್ತಿಲ್ಲ, ಕುಸ್ತಿ ಆಡಿದರೆ ಏನು ಸಿಗುತ್ತದೆ ಎಂಬ ಮನಸ್ಥಿತಿ ಇಂದಿನವರಲ್ಲಿದೆ’ ಎನ್ನುವ ವಾದವನ್ನೂ ಅವರು ಮುಂದಿರಿಸುತ್ತಾರೆ.

‘ಗ್ರಾಮದಲ್ಲಿ ಈಚಿನ ದಶಕಗಳಲ್ಲಿ ಆರಂಭವಾದ ಮತ್ತೊಂದು ಗರಡಿ ಮನೆಯೂ ಆಸಕ್ತರ ಕೊರತೆಯಿಂದ ಪಾಳು ಬಿದ್ದಿದೆ. 80–90ರ ದಶಕದಲ್ಲಿ ಇಲ್ಲಿ 30 ಕುಸ್ತಿಪಟುಗಳು ಪ್ರತಿನಿತ್ಯ ತಾಲೀಮು ನಡೆಸುತ್ತಿದ್ದರು. ಇಂದು ಈ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.  15 ಸಾವಿರ ಜನಸಂಖ್ಯೆ ಹೊಂದಿರುವ ನಮ್ಮೂರಿನಲ್ಲಿ ಇವತ್ತು 50ಕ್ಕೂ ಹೆಚ್ಚು ಮಾಜಿ ಮತ್ತು ಕೆಲವು ಹಾಲಿ ಪೈಲ್ವಾನರು ಸಿಗುತ್ತಾರೆ. ಕೆಲವು ವರ್ಷಗಳ ಹಿಂದೆ ನಮ್ಮೂರಿನ ಕುಸ್ತಿಪಟುವೊಬ್ಬ ಅಖಾಡದಲ್ಲೇ ಕತ್ತು ಮುರಿದು ಮೃತಪಟ್ಟರು. ಅಂದಿನಿಂದ ಚಟುವಟಿಕೆಗಳು ಕಡಿಮೆಯಾಗಿವೆ’ ಎನ್ನುತ್ತಾರೆ ಮಾಜಿ ಕುಸ್ತಿಪಟು ಚಂದ್ರಕಾಂತ ಹಾಳಂಗೇರಿ.

ಶಿವರಾತ್ರಿ ನಂತರ ಕುಸ್ತಿ ಜೋರು
ಈಗಾಗಲೇ ಬೀದರ್‌, ಕಲಬುರ್ಗಿ ಹಾಗೂ ಮಹಾರಾಷ್ಟ್ರಗಡಿ ಜಿಲ್ಲೆಗಳಲ್ಲಿ ಜಾತ್ರೆ ಹಾಗೂ ಉತ್ಸವಗಳ ನಿಮಿತ್ತ ಕುಸ್ತಿ ಪಂದ್ಯಾವಳಿಗಳು ಆರಂಭವಾಗಲಿವೆ. ಶಿವರಾತ್ರಿ ನಂತರ ಇವುಗಳ ಸಂಖ್ಯೆ ಹೆಚ್ಚಾಗಲಿವೆ. ಈ ಸಂದರ್ಭಕ್ಕೆ ಜಿಲ್ಲೆಯ ಬೆಳಮಗಿ, ಕೋತನ ಹಿಪ್ಪರಗಾ, ಮಾದನ ಹಿಪ್ಪರಗಾ, ಚಿತಲಿ, ಖಂಡೋಳ, ಕಿಣ್ಣಿ ಸುಲ್ತಾನ, ಬೆಣ್ಣೆ ಶಿರೂರ, ಸರಸಂಬಾ, ಹಿರೋಳಿ ಮತ್ತಿತರ ಗ್ರಾಮಗಳ ಹಳೆಯ ಪೈಲ್ವಾನರು ಬಂಗಾರ ಮತ್ತು ಬೆಳ್ಳಿ ಪದಕ ಹಾಗೂ ನಗದು ಬಹುಮಾನ ಬಾಚಿಕೊಳ್ಳಲು ಸಜ್ಜಾಗುತ್ತಾರೆ.

‘ಕುಸ್ತಿ ಸಂಘಟಿಸುವವರು ಪ್ರಮುಖ ಗ್ರಾಮಗಳಲ್ಲಿ ಪೋಸ್ಟರ್‌ ಹಾಕುತ್ತಾರೆ. ಅದರ ಅನುಸಾರ ಹೊರಟರೆ ಕೆಲವೊಮ್ಮೆ ವಾರಗಳೆರಡು ಉರುಳಿದರೂ ಊರಿಗೆ ಹಿಂತಿರುಗಲಾಗದು. ಅಷ್ಟರ ಮಟ್ಟಿಗೆ ಚಟುವಟಿಕೆಯಿಂದಿರುತ್ತೇವೆ’ ಎನ್ನುತ್ತಾರೆ ಯವರಾಜ ಢಗೆ ಹಾಗೂ ದೇವಾನಂದ ಸುಲ್ತಾನಪುರೆ.

***
ಹೊಲದಲ್ಲೇ ಐದು ಮಂದಿಗೆ ಕುಸ್ತಿ ಹೇಳಿಕೊಡುತ್ತಿದ್ದೇನೆ. ಅವರಲ್ಲಿ ಒಬ್ಬ ಪ್ರಥಮ ಬಿಎಸ್ಸಿ ಮತ್ತೊಬ್ಬ 9ನೇ ತರಗತಿ ವಿದ್ಯಾರ್ಥಿ. ಜಿಲ್ಲೆಯಲ್ಲಿ ಪ್ರತಿಭೆಗಳಿಲ್ಲ ಎಂದು ಅಧಿಕಾರಿಗಳು ಹೇಳುವುದನ್ನು ಕೇಳಿದ್ದೇನೆ. ಅವರು ನಮಗೆ ಕನಿಷ್ಠ ಸೌಕರ್ಯ ಕಲ್ಪಿಸಿದರೆ ಅತ್ಯುತ್ತಮ ಸ್ಪರ್ಧಾಳುಗಳನ್ನು ರೂಪಿಸಿಕೊಡುತ್ತೇನೆ
–ಕಾಶೀನಾಥ ಹೆಬಳೆ, ಕುಸ್ತಿಪಟು, ಖಜೂರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT