ADVERTISEMENT

ಯುಪಿಎಸ್‌ಸಿ ಒಂದು ಸುತ್ತು...

ಪರೀಕ್ಷೆ ಮುಂಗೋಳಿ: ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೊಂದು ಬೆಳಕಿಂಡಿ

ಜಿ.ಬಿ.ಹರೀಶ
Published 7 ಸೆಪ್ಟೆಂಬರ್ 2014, 19:30 IST
Last Updated 7 ಸೆಪ್ಟೆಂಬರ್ 2014, 19:30 IST

ಯುಪಿಎಸ್‌ಸಿ ಮೂಲಕ ವಿವಿಧ ಅಧಿಕಾರಿಗಳನ್ನು ಆಯ್ಕೆ ಮಾಡುವ ಪದ್ಧತಿ ಹಿಂದಿನಿಂದಲೂ ಇದೆ. ಇದು ಬಹಳ ಉತ್ತಮ ಪದ್ಧತಿ. ಏಕೆಂದರೆ ಇದರಿಂದ ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ವಿವಿಧ ಭಾಷೆ ಹಾಗೂ ಪ್ರದೇಶದ ಅಭ್ಯರ್ಥಿಗಳು ಒಂದು ಇಲಾಖೆಯಲ್ಲಿ ಒಟ್ಟಾಗಿ ಕೆಲಸ ಮಾಡುವ ಮಾರ್ಗ ಕಲ್ಪಿಸಲು ಸಾಧ್ಯವಾಗುತ್ತಿದೆ. ಅಲ್ಲದೆ ‘ವಿವಿಧತೆಯಲ್ಲಿ ಏಕತೆ’ ಎಂದು ಯಾವುದನ್ನು ಶಾಲಾ ಕಾಲೇಜುಗಳಲ್ಲಿ ಕಲಿತಿರುತ್ತಾರೋ ಅದನ್ನು ಜೀವನದ ವಾಸ್ತವದ ಮೂಸೆಯಲ್ಲಿ ಒರೆಗೆ ಹಚ್ಚಲೂ ಈ ದಾರಿ ಸಹಾಯಕ.

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಮುಂತಾದ ಪರೀಕ್ಷೆಗಳನ್ನು ಎದುರಿಸುವುದು, ಪಾಸು ಮಾಡುವುದು ಭಾರತದಲ್ಲಿ ಲಕ್ಷಾಂತರ ಅಭ್ಯರ್ಥಿಗಳ ಜೀವನದ ಹೆಗ್ಗುರಿಯಾಗಿದೆ. ಪರೀಕ್ಷೆ ಬರೆದು ಪಾಸಾಗಿ ದೇಶ ಸೇವೆ ಮಾಡಬೇಕು, ಬಡಜನರಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಬೇಕು ಎಂಬುದು ಅನೇಕ ಯುವಕ, ಯುವತಿಯರ ಕನಸು. ಈ ಕನಸು ನನಸಾಗಲು ಅವರು ಪರೀಕ್ಷೆಗೆ ಕೂರಬೇಕು, ಚೆನ್ನಾಗಿ ಓದಬೇಕು, ಸರಿಯಾದ ಉತ್ತರ ಬರೆಯಬೇಕು, ನಂತರ ಮುಂದಿನ ಹಂತಕ್ಕೆ ಹೋದರೆ ಸಂದರ್ಶನ ಎದುರಿಸಬೇಕು. ಕೊನೆಗೆ ಆಯ್ಕೆಯಾಗಿ ಅಧಿಕಾರಿಯಾಗುವ ಮೊದಲು ತರಬೇತಿ ಪಡೆಯಬೇಕು.

ಯುಪಿಎಸ್‌ಸಿ ಪರೀಕ್ಷೆಗಳು ಶ್ರಮ, ಕಠಿಣ ಪರಿಶ್ರಮವನ್ನಲ್ಲದೇ ಅಭ್ಯರ್ಥಿಗಳಿಂದ ಬೇರೇನನ್ನೂ ಬಯಸುವುದಿಲ್ಲ. ದೇಹ, ಮನಸ್ಸು, ಆರೋಗ್ಯ, ಆಹಾರ ಮತ್ತು ದೃಢ ಸಂಕಲ್ಪಗಳ ಸಾಮರಸ್ಯದ ಪಂಚಾಗ್ನಿ ನಡುವೆ ಕೂತು ಅಭ್ಯರ್ಥಿ ಓದಬೇಕಾಗುತ್ತದೆ.
ಆದರೆ ಪರೀಕ್ಷೆಗೆ ಕೂರುವುದು,ಹೇಗೆ? ಅರ್ಹತೆಗಳು ಏನೇನು? ಪರೀಕ್ಷೆಗೆ ತಯಾರಿ ಮಾಡುವುದು ಹೇಗೆ? ಟಿಪ್ಪಣಿ ಮಾಡುವುದು, ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವುದು–ಸಂದರ್ಶನದಲ್ಲಿ ಯಶಸ್ವಿಯಾಗುವುದು ಈ ಎಲ್ಲಾ ಹಂತಗಳಿಗೆ ಸಮಾಲೋಚನೆ, ಸಲಹೆ ಸಿಕ್ಕರೆ ಎಷ್ಟು ಚೆನ್ನ ಅಲ್ಲವೇ?

ಈ ‘ಪರೀಕ್ಷೆ ಮುಂಗೋಳಿ’ ಅಂಕಣದ ಉದ್ದೇಶ ಕೂಡ ಅದೇ ಆಗಿದೆ. ಐಎಎಸ್‌ ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಅರ್ಹತೆಗಳು ಏನು ಎಂಬುದನ್ನು ತಿಳಿಯೋಣ:

ಭಾರತದಲ್ಲಿ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾನಿಲಯದಿಂದ ಅಭ್ಯರ್ಥಿಯಾಗ ಬಯಸುವರು ತೇರ್ಗಡೆಯಾಗಿರಬೇಕು. ಅವರು ಯಾವುದೇ ವಿಷಯದಲ್ಲಾದರೂ ಪದವಿ ಪಡೆದಿರಬಹುದು. ಉದಾ: ಬಿ.ಎ., ಬಿ.ಕಾಂ., ಬಿಎಸ್‌ಸಿ.,ಬಿಬಿಎಂ.,ಬಿಸಿಎ., ಎಲ್‌ಎಲ್‌ಬಿ.,ಇತ್ಯಾದಿ. ಅಂದರೆ ಕಲೆ, ವಾಣಿಜ್ಯ, ವಿಜ್ಞಾನ, ಕಾನೂನು,ಆಡಳಿತ ನಿರ್ವಹಣೆ ಮುಂತಾದ ಯಾವುದೇ ವಿಷಯದಲ್ಲಿ ಪದವಿ ಇದ್ದರೆ ಸಾಕು. ಅಥವಾ ಇದಕ್ಕೆ ಸಮಾನವೆನಿಸುವ ಬೇರೆ ಪರೀಕ್ಷೆಗಳಿದ್ದರೆ ಅದರಲ್ಲಿ ಪಾಸಾಗಿರಬೇಕು.

ಐ.ಎ.ಎಸ್‌. ಮುಂತಾದ ಪರೀಕ್ಷೆಗಳನ್ನು ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮಿಷನ್‌ ನಡೆಸುತ್ತದೆ. ಇದಕ್ಕೆ ಯು.ಪಿ.ಎಸ್‌.ಸಿ. ಎಂದು ಕರೆಯಲಾಗುತ್ತದೆ.

ಇದರಲ್ಲಿ ಪ್ರಿಲಿಮ್ಸ್‌ ಮತ್ತು ಮುಖ್ಯ ಪರೀಕ್ಷೆ (ಮೈನ್ಸ್‌) ಎಂಬ ಎರಡು ಹಂತದ ಪರೀಕ್ಷೆಗಳಿರುತ್ತವೆ. ಪದವಿ ಪರೀಕ್ಷೆಯ ಅಂತಿಮ ಹಂತದಲ್ಲಿರುವವರೂ ಕೂಡ ಪ್ರಿಲಿಮ್ಸ್‌  ಬರೆಯಬಹುದು.

ಪ್ರಿಲಿಮ್ಸ್‌ನಲ್ಲಿ ತೇರ್ಗಡೆಯಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದರೆ ಆಗ ಪದವಿ ತೇರ್ಗಡೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು.

ಯುಪಿಎಸ್‌ಸಿಯ ದೃಷ್ಟಿಯಲ್ಲಿ ವಿ.ವಿ.ಗಳ ಪರೀಕ್ಷೆಗೆ ತತ್ಸಮಾನ ಎನಿಸುವ ಬೇರೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳೂ ಐಎಎಸ್‌ ಪರೀಕ್ಷೆಗೆ ಅರ್ಹರಾಗುತ್ತಾರೆ. ಆದರೆ ಇದು ಸಂಪೂರ್ಣವಾಗಿ ಯುಪಿಎಸ್‌ಸಿ ವಿವೇಚನೆಗೆ ಬಿಟ್ಟ ವಿಚಾರ.

ತಾಂತ್ರಿಕ ಪದವೀಧರರು:ಬಿಇ., ಎಂ.ಬಿ.ಬಿಎಸ್‌ ಪದವೀಧರರು ಐಎಎಸ್‌ ಬರೆಯಲು ಅರ್ಹರು. ಯಾವುದೇ ಒಂದು ವಿಷಯದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುವುದು ಕಡ್ಡಾಯ. ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರೆ ಅಂತಿಮ ವರ್ಷದ ಪರೀಕ್ಷೆ ಪಾಸಾಗಿರಬೇಕು, ಇಂಟರ್ನ್‌ಶಿಪ್‌ ಮುಗಿಸಿರದಿದ್ದರೂ ಪರೀಕ್ಷೆ ತೆಗೆದುಕೊಳ್ಳಬಹುದು. ಈ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಕೂಡ ಬರೆಯಬಹುದು. ಅದಕ್ಕೆ ಸಂಬಂಧಿಸಿದ ಅರ್ಜಿ ತುಂಬಿಸಿ ಕಳಿಸುವಾಗ ಅವರು ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದನ್ನು ದೃಢೀಕರಣ ಮಾಡಿರಬೇಕು.

ಸಂದರ್ಶನದ ವೇಳೆಗೆ ಅವರು ಅಂತಿಮ ಪರೀಕ್ಷೆಯೊಂದಿಗೆ ಇಂಟರ್ನ್‌ಶಿಪ್‌ ಕೂಡ ತೇರ್ಗಡೆಯಾಗಿದ್ದು ಸಂಬಂಧಿಸಿದ ಪ್ರಮಾಣಪತ್ರ ಹೊಂದಿರಬೇಕು.

ಶಿಕ್ಷಣದ ನಂತರ/ಜತೆಗೆ ಹೊಂದಿರಬೇಕಾದ ಇತರೆ ಅರ್ಹತೆಗಳು: (1):ರಾಷ್ಟ್ರಿಯತೆ: ಐಎಎಸ್‌ ಮತ್ತು ಐಪಿಎಸ್‌ ಹುದ್ದೆಗಳಿಗೆ ಭಾರತದ ನಾಗರಿಕರಿಗೆ ಮಾತ್ರ ಪ್ರವೇಶಾವಕಾಶ. ಯುಪಿಎಸ್‌ಸಿ ನಡೆಸುವ ಬೇರೆ ಪರೀಕ್ಷೆಗಳಿಗೆ ಭಾರತದ ನಾಗರಿಕರೊಡನೆ ನೇಪಾಳ, ಭೂತಾನ್‌ ಪ್ರಜೆಗಳೂ ಭಾಗ ವಹಿಸಬಹುದು. ಜನವರಿ 1, 1962ಕ್ಕಿಂತ ಮೊದಲೇ ಭಾರತದಲ್ಲಿ ನೆಲೆಸಲು ಆಶ್ರಯ ಕೋರಿಬಂದಿರುವ ಟಿಬೆಟ್ಟಿನವರು ಸಹ ಇದೇ ರೀತಿ ಅರ್ಹರಾಗಿರುತ್ತಾರೆ.

ಕರ್ನಾಟಕದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ಮೂಲಕ ಡಿಗ್ರಿ ಮಾಡಿರುವವರು ಈ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು. ಈಗ ಯುಪಿಎಸ್‌ಸಿ ಹೇಗಿದೆ ಎಂದು ಸ್ವಲ್ಪ ಪರಿಚಯ ಮಾಡಿಕೊಳ್ಳೋಣ.

ಯುಪಿಎಸ್‌ಸಿಯ ಆಡಳಿತ ಮತ್ತು ನಿಯಂತ್ರಣ
ಪರೀಕ್ಷೆ ಬರೆಯುವ ಅಭ್ಯರ್ಥಿಗೆ ಇದರ ಸಂಪೂರ್ಣ ವಿವರ ತಿಳಿದಿದ್ದರೆ ಒಳ್ಳೆಯದು. ಯುಪಿಎಸ್‌ಸಿಯಲ್ಲಿ ಅಧ್ಯಕ್ಷರು ಮತ್ತು ಅವರೊಂದಿಗೆ ಹತ್ತು ಮಂದಿ ಸದಸ್ಯರಿರುತ್ತಾರೆ. ಇವರ ಸೇವೆಗೆ ಸಂಬಂಧಿಸಿದ ನಿಯಮವು, ಯುಪಿಎಸ್‌ಸಿ (ಸದಸ್ಯರ) ನಿಯಮಾವಳಿ (1969) ಇದಕ್ಕೆ  ಅಧೀನವಾಗಿರುತ್ತದೆ. ಯುಪಿಎಸ್‌ಸಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಸದಸ್ಯರಲ್ಲಿ ಕನಿಷ್ಠ ಅರ್ಧದಷ್ಟು ಮಂದಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಸೇವೆ ಸಲ್ಲಿಸಿದವರು (ನಿವೃತ್ತ) ಅಥವಾ ಸಲ್ಲಿಸುತ್ತಿರುವವರು ಆಗಿರುತ್ತಾರೆ(ಹಾಲಿ). ಅವರು ಕಡೇ ಪಕ್ಷ ಹತ್ತು ವರ್ಷಗಳ ಸೇವಾ ಅನುಭವ ಪಡೆದಿರ ಬೇಕು ಎಂಬ ನಿಯಮವಿದೆ. ಇದರಿಂದ ಪರೀಕ್ಷೆಗಳನ್ನು ನಡೆಸುವವರು ಅನುಭವಿಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಯುಪಿಎಸ್‌ಸಿ ಅಧ್ಯಕ್ಷರು–ಸದಸ್ಯರಿಗೆ ಸಹಾಯಮಾಡಲು ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ. ಒಬ್ಬರು ಕಾರ್ಯದರ್ಶಿ, ಇವರಗೆ ಸಹಾಯಕರಾಗಿ ಇಬ್ಬರು ಹೆಚ್ಚುವರಿ ಕಾರ್ಯದರ್ಶಿಗಳು, ಅನೇಕ ಜಂಟಿ ಕಾಯದರ್ಶಿಗಳು, ಉಪಕಾರ್ಯದರ್ಶಿಗಳು ಹಾಗೂ ಸಹಾಯಕ ಸಿಬ್ಬಂದಿ ಇರುತ್ತಾರೆ.
ಉತ್ತಮ ಗುಣಮಟ್ಟದ ಪರೀಕ್ಷೆ, ನೇಮಕಾತಿ ನಡೆಸುವಲ್ಲಿ ಇಂದಿಗೂ ಯುಪಿಎಸ್‌ಸಿ ಭರವಸೆ ಉಳಿಸಿಕೊಂಡಿದೆ.             
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.