ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಬೇಕು ಎಂದು ಬಯಸುವ ಕನ್ನಡಿಗರಿಗೆ ಇದೊಂದು ಸಿಹಿ ಸುದ್ದಿ. ಇಲಾಖೆಯಲ್ಲಿ ಪ್ರತಿ ವರ್ಷ ತೆರವಾಗುವ ಸಾವಿರಾರು ಹುದ್ದೆಗಳ ಭರ್ತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೇವಲ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಅಷ್ಟೇ ಅಲ್ಲದೆ ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇದುವರೆಗೆ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ಇತ್ತು. ಆದರೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಷ್ಟೊಂದು ಸಾಮರ್ಥ್ಯ ಹೊಂದಿಲ್ಲದ ಕನ್ನಡಿಗರಿಗೆ ರೈಲ್ವೆ ಇಲಾಖೆಯ ಉದ್ಯೋಗ ಗಗನಕುಸುಮವಾಗಿತ್ತು.
ಬಹುತೇಕ ಕರ್ನಾಟಕದ ವ್ಯಾಪ್ತಿಯನ್ನು ಹೊಂದಿರುವ ನೈರುತ್ಯ ರೈಲ್ವೆ ವಲಯದಲ್ಲಿ ಲಭ್ಯವಿರುವ ಹುದ್ದೆಗಳಿಗೂ ಹೊರ ರಾಜ್ಯಗಳ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದರು. ಕರ್ನಾಟಕದ ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಅಲ್ಲೊಂದು, ಇಲ್ಲೊಂದು ಹುದ್ದೆಗಳಲ್ಲಿ ಇರುವುದು ಬಿಟ್ಟರೆ ಹೊರ ರಾಜ್ಯದವರೇ ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಹಿಂದೆ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ, ಪಶ್ಚಿಮ ಬಂಗಾಳದ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಶೇಷ ಕಾಳಜಿಯಿಂದಾಗಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ರೈಲ್ವೆ ನೇಮಕಾತಿ ಮಂಡಳಿಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ನಲ್ಲಿ ಅಷ್ಟೇ ಅಲ್ಲದೆ ಆಯಾ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಬದಲಾದ ಈ ವ್ಯವಸ್ಥೆ 2011ರಿಂದ ಜಾರಿಯಾಗಿದ್ದು, ರೈಲ್ವೆ ಇಲಾಖೆಯಲ್ಲಿ ತೆರವಾಗುವ `ಸಿ~ ಮತ್ತು `ಡಿ~ ವರ್ಗದ ಸಾವಿರಾರು ಹುದ್ದೆಗಳ ಭರ್ತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ತಮಗೆ ಇಷ್ಟವಾದ ಭಾಷೆಯಲ್ಲಿ ಬರೆಯಬಹುದಾಗಿದೆ. ಇದರಿಂದಾಗಿ ಅಭ್ಯರ್ಥಿಗಳು ಭಾಷೆ ತೊಡಕಿನ ಸಮಸ್ಯೆಯಿಂದ ಪಾರಾಗಿದ್ದಾರೆ.
ನೈರುತ್ಯ ರೈಲ್ವೆ ವಲಯ ಸೇರಿದಂತೆ ದೇಶದಲ್ಲಿ ಸುಮಾರು 20 ರೈಲ್ವೆ ವಲಯಗಳಿವೆ. ಪ್ರತಿಯೊಂದು ವಲಯದಲ್ಲೂ ಪ್ರತ್ಯೇಕವಾದ ರೈಲ್ವೆ ನೇಮಕಾತಿ ಮಂಡಳಿ ಇದೆ. ಆಯಾ ವಲಯದಲ್ಲಿ ತೆರವಾಗುವ ಹುದ್ದೆಗಳನ್ನು ಪ್ರತಿ ವರ್ಷ ಭರ್ತಿ ಮಾಡುವ ಜವಾಬ್ದಾರಿಯನ್ನು ಮಂಡಳಿಗೆ ವಹಿಸಲಾಗಿದೆ.
ಪ್ರತಿಯೊಂದು ವಲಯಕ್ಕೂ ಪ್ರತ್ಯೇಕವಾದ ನೇಮಕಾತಿ ಮಂಡಳಿ ಇದ್ದರೂ, ಎಲ್ಲ ಮಂಡಳಿಗಳು ಏಕ ಕಾಲಕ್ಕೆ ನೇಮಕಾತಿಯ ಅಧಿಸೂಚನೆ ಹೊರಡಿಸಿ ಒಂದೇ ದಿನ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತವೆ.
ಹೀಗಾಗಿ ಅಭ್ಯರ್ಥಿಗಳು ತಮಗೆ ಇಷ್ಟವಾದ ಒಂದು ಕಡೆ ಮಾತ್ರ ಪರೀಕ್ಷೆ ಬರೆಯಲು ಸಾಧ್ಯ. ಆದ್ದರಿಂದ ಅರ್ಜಿ ಸಲ್ಲಿಸುವಾಗಲೇ ಈ ಬಗ್ಗೆ ಎಚ್ಚರಿಕೆ ವಹಿಸಿ ಯಾವುದಾದರೂ ಒಂದು ಮಂಡಳಿಗೆ ಮಾತ್ರ ಅರ್ಜಿ ಸಲ್ಲಿಸುವುದು ಒಳ್ಳೆಯದು.
ಜನವರಿಯಿಂದ ಏಪ್ರಿಲ್‌ವರೆಗೆ
ನೈರುತ್ಯ ರೈಲ್ವೆ ವಲಯದ ನೇಮಕಾತಿ ಮಂಡಳಿ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿದ್ದು, ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ಒಳಗೆ 9 ವಿವಿಧ ಶ್ರೇಣಿಯ `ಸಿ~ ದರ್ಜೆ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಪ್ರತಿಯೊಂದು ಹುದ್ದೆಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಬಹುತೇಕ ಆಯಾ ವರ್ಷದ ಡಿಸೆಂಬರ್ ಅಂತ್ಯದ ಒಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
ಚಾಲಕ, ಗುಮಾಸ್ತ (ಕ್ಲಕ್), ಟೆಕೆಟ್ ಕಲೆಕ್ಟರ್, ಸ್ಟೇಷನ್ ಮಾಸ್ಟರ್, ಸೆಕ್ಷನ್ ಎಂಜಿನಿಯರ್, ನರ್ಸ್, ಫಾರ್ಮಸಿ, ಸ್ಟೆನೊಗ್ರಾಫರ್, ಕಾನೂನು ಸಹಾಯಕರು, ಶಿಕ್ಷಕರು, ಟೆಕ್ನಿಷಿಯನ್ಸ್ ಇತ್ಯಾದಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಹಿರಿಯ ಶ್ರೇಣಿಯ ಕ್ಲಕ್ ಹುದ್ದೆಗಳಿಗೆ ಪದವೀಧರರು, ಕಿರಿಯ ಶ್ರೇಣಿಯ ಕ್ಲಕ್ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅದೇ ರೀತಿ ಸೆಕ್ಷನ್ ಎಂಜಿನಿಯರ್ ಹುದ್ದೆಗಳಿಗೆ ಬಿ.ಇ ಪದವೀಧರರು, ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಇದೇ ರೀತಿ ಪ್ರತಿಯೊಂದು ಹುದ್ದೆಗೂ ಬೇರೆ ಬೇರೆ ವಿದ್ಯಾರ್ಹತೆ ನಿಗದಿಪಡಿಸಲಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯು ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪರೀಕ್ಷಾ ಕೇಂದ್ರಗಳಿರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಮೀಸಲಾತಿಗೆ ಅನುಗುಣವಾಗಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಯಾವುದೇ ರೀತಿಯ ಸಂದರ್ಶನ ಇರುವುದಿಲ್ಲ. ಆಯ್ಕೆಗೊಂಡ ನಂತರ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ಮೂರು ತಪ್ಪು ಉತ್ತರಗಳಿಗೆ ಒಂದು ಅಂಕವನ್ನು ಕಳೆಯಲಾಗುತ್ತದೆ. ಹುದ್ದೆಗಳಿಗೆ ಅನುಗುಣವಾಗಿ ಪ್ರಶ್ನೆಪತ್ರಿಕೆ ಮತ್ತು ಒಟ್ಟು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಎಲ್ಲ ಹುದ್ದೆಗಳಿಗೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಕನ್ನಡದಲ್ಲೇ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ.
ಅಖಿಲ ಭಾರತಮಟ್ಟದಲ್ಲಿ ಒಂದೇ ದಿನ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಮಾತ್ರ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ. ಬೇರೆ ವಲಯಕ್ಕೆ ಹೋಗಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಪ್ರತಿಯೊಂದು ವಲಯದಲ್ಲಿ ಆಯಾ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುತ್ತದೆಯೇ ಹೊರತು, ಸ್ಥಳೀಯ ಭಾಷೆಯನ್ನು ಬಿಟ್ಟು ಮತ್ತೊಂದು ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ.
ನೈರುತ್ಯ ರೈಲ್ವೆ ವಲಯದಲ್ಲಿ ಪ್ರತಿ ವರ್ಷ ಸುಮಾರು ಎರಡು ಸಾವಿರ `ಸಿ~ ದರ್ಜೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇನ್ನು ಹುಬ್ಬಳ್ಳಿಯಲ್ಲಿರುವ ರೈಲ್ವೆ ನೇಮಕಾತಿ ಘಟಕವು `ಡಿ~ ದರ್ಜೆಯ ನಾಲ್ಕು ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅಟೆಂಡರ್, ಪ್ಲಾಟ್‌ಫಾರಂನಲ್ಲಿ ಕೆಲಸ ಮಾಡುವ ವ್ಯಾಗನರ್ ಇತ್ಯಾದಿ ಹುದ್ದೆಗಳು `ಡಿ~ ದರ್ಜೆಯಲ್ಲಿ ಬರುತ್ತವೆ.
ಪದವೀಧರ ಅಭ್ಯರ್ಥಿಗಳಿಗೆ 18ರಿಂದ 33, ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ 18ರಿಂದ 35, ಪದವಿ ಹೊಂದಿಲ್ಲದ ಅಭ್ಯರ್ಥಿಗಳಿಗೆ 18ರಿಂದ 30 ವರ್ಷ ವಯೋಮಿತಿ ನಿಗದಿ ಮಾಡಲಾಗುತ್ತದೆ. ಪರಿಶಿಷ್ಟಜಾತಿ/ಪಂಗಡ, ಹಿಂದುಳಿದ ವರ್ಗದವರು, ಮಾಜಿ ಸೈನಿಕರು ಇತ್ಯಾದಿ ಕೋಟಾದಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ರಿಯಾಯಿತಿ ನೀಡಲಾಗುತ್ತದೆ.
2012ರಲ್ಲಿ ಸುಮಾರು ಎರಡು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಜನವರಿಯಲ್ಲಿ ಕೆಲವೊಂದು ಹುದ್ದೆಗಳಿಗೆ ನೇಮಕಾತಿ ಮಂಡಳಿ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಅಭ್ಯರ್ಥಿಗಳು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದರೆ ಮುಂದೆ ಪರೀಕ್ಷೆ ಎದುರಿಸಲು ಅನುಕೂಲವಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ: ರೈಲ್ವೆ ನೇಮಕಾತಿ ಮಂಡಳಿ, ನಂ.18, ಮಿಲ್ಲರ್ಸ್ ರಸ್ತೆ, ಬೆಂಗಳೂರು-46. ವೆಬ್‌ಸೈಟ್ ವಿಳಾಸ: ಡಿಡಿಡಿ.್ಟ್ಟಚಿಚ್ಞ್ಚಿ.ಜಟ.ಜ್ಞಿ. ದೂರವಾಣಿ ಸಂಖ್ಯೆ: 23330378
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.