ADVERTISEMENT

ಸಂಶೋಧನಾ ಪ್ರಬಂಧ ಇಲ್ಲಿದೆ ಅವಕಾಶ

ಕವಿತಾ ಕೆ.
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಬೆಂಗಳೂರಿನಲ್ಲಿರುವ ಭಾರತೀಯ ಮ್ಯಾನೇಜ್‌ಮೆಂಟ್ ಸಂಸ್ಥೆಯು (ಐಐಎಂಬಿ) ಏಪ್ರಿಲ್ 15 ರಿಂದ 17ರವರೆಗೆ ಎಐಬಿ ಭಾರತೀಯ ಶಾಖೆಯ ವಾರ್ಷಿಕ ಸಮ್ಮೇಳನ ಹಮ್ಮಿಕೊಂಡಿದೆ. ಇದರ ವಿಷಯ `ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆ'. ಈ ಸಮ್ಮೇಳನದ ಎರಡು ವಿಶಿಷ್ಟ ಅಂಶಗಳೆಂದರೆ ಸಂಶೋಧನಾ ಪ್ರಬಂಧ ಪ್ರಕಟಣೆ ಕಾರ್ಯಾಗಾರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ.

ಎಐಬಿ ಭಾರತೀಯ ಶಾಖೆಯ ಅಧ್ಯಕ್ಷ ಹಾಗೂ ಐಐಎಂಬಿಯಲ್ಲಿ ಕಾರ್ಪೊರೇಟ್ ಕಾರ್ಯತಂತ್ರ ಮತ್ತು ನೀತಿ ವಿಭಾಗದ ಪ್ರೊ. ಎಸ್.ರಘುನಾಥ್ ಸಮ್ಮೇಳನದ ಅಧ್ಯಕ್ಷರು. ಸಂಶೋಧನಾ ಪ್ರಬಂಧ ಪ್ರಕಟಿಸುವುದಕ್ಕೆ ಪ್ರಾಶಸ್ತ್ಯ ಕೊಡಬೇಕು ಎನ್ನುವುದು ಇವರ ಅಭಿಮತ. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ:

ಭಾರತದಲ್ಲಿ ಸಂಶೋಧನಾ ಪ್ರಬಂಧ ಪ್ರಕಟಣೆಯಲ್ಲಿ ಲೋಪ ಇದೆಯಾ? ಯಾವ ವಿಷಯ ಸುಧಾರಿಸಬೇಕಿದೆ?
ನಾನು ಹುಬ್ಬಳ್ಳಿ ಹಾಗೂ ಬೆಳಗಾವಿಯ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ವಿದ್ಯಾರ್ಥಿಗಳ ಜ್ಞಾನ ದಾಹ ಕಂಡು ಬೆರಗಾದೆ. ಅವರೆಲ್ಲ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆಗೆ ಹೆಚ್ಚು ತೆರೆದುಕೊಳ್ಳುವ ಅಗತ್ಯವಿದೆ ಎಂದುಕೊಂಡೆ. ಮ್ಯಾನೇಜ್‌ಮೆಂಟ್ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳು ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಸಂಶೋಧನಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಈ ಸಮ್ಮೇಳನ ನೆರವಾಗಲಿದೆ.

ಸಂಶೋಧನಾ ಪ್ರಬಂಧ ಪ್ರಕಟಿಸುವುದು ಅಧ್ಯಯನ ಕ್ಷೇತ್ರದಲ್ಲಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಕಾರ್ಯತಂತ್ರ ಮಾತ್ರವಲ್ಲ; ಭಾರತದ ಯುವ ಸಂಶೋಧಕರ ಹಾಗೂ ವಿದ್ವಾಂಸರ ತಕ್ಷಣದ ಕಾಳಜಿ ಕೂಡ ಹೌದು. ಸಂಶೋಧಕರು ತಮ್ಮ ಸಂಶೋಧನೆ ಹಾಗೂ ವಿಸ್ತರಿಸಿದ ಪರಿಕಲ್ಪನೆಗಳನ್ನು ಪ್ರಕಟಿಸದಿದ್ದರೆ ಅವರ ಸಂಶೋಧನಾ ಸಾಮರ್ಥ್ಯ ನಿರರ್ಥಕವಾಗಿಬಿಡುತ್ತದೆ. ಹೆಚ್ಚಿನವರಿಗೆ ಈ ಬಗ್ಗೆ ತಿಳಿವಳಿಕೆ ಇಲ್ಲದ ಕಾರಣ ಭಾರತದಲ್ಲಿ ಒಳ್ಳೆಯ ಸಂಶೋಧನಾ ಪ್ರಬಂಧ ಬೆಳಕಿಗೆ ಬರದಿರುವ ಸಂದರ್ಭಗಳೇ ಹೆಚ್ಚು.

ಪ್ರಮುಖ ಜರ್ನಲ್‌ಗಳಲ್ಲಿ ಸಂಶೋಧನೆಯನ್ನು ಪ್ರಕಟಿಸುವ ವಿಷಯದಲ್ಲಿ ಜಗತ್ತಿನ ವಿದ್ವಾಂಸರಲ್ಲಿ ಭಾರಿ ಪೈಪೋಟಿ ಇದೆ. ಇಲ್ಲಿ ಸಂಶೋಧನಾ ಪ್ರಬಂಧವನ್ನು ಪ್ರಕಟಿಸುವುದು ಭಯಾನಕ ಅನುಭವ ಕೂಡ ಆಗಬಹುದು. ಸಮಾನ ಮನಸ್ಕರಿಂದ ಪುನರ್ ವಿಮರ್ಶೆಗೊಳಪಟ್ಟ ಪ್ರಕಟಣೆ ಪ್ರಕ್ರಿಯೆ ಕೌಶಲ ಕೆಲವು ವಿದ್ವಾಂಸರಿಗೆ ನಿಜವಾಗಿಯೂ ಅರ್ಥವಾಗುವುದಿಲ್ಲ. ಸಮ್ಮೇಳನ ಈ ಬಗ್ಗೆ ಬೆಳಕು ಚೆಲ್ಲುತ್ತದೆ. ಅಂತರ ರಾಷ್ಟ್ರೀಯ ಜರ್ನಲ್ ಸಂಪಾದಕರು ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.

ಸಂಶೋಧನೆ ಪ್ರಕಟಣೆಯಲ್ಲಿ ಯಶಸ್ವಿಯಾಗುವುದು ಭಾರತೀಯ ಸಂಶೋಧಕರಿಗೆ ಬಹು ಮುಖ್ಯವಾಗುತ್ತದೆ. ಈ ಸಮ್ಮೇಳನದಲ್ಲಿ ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆ ಅಧ್ಯಯನ ಪತ್ರಿಕೆ ಸಂಪಾದಕರು ಪ್ರಬಂಧ ವಿಸ್ತರಣೆ ಕಾರ್ಯಾಗಾರವನ್ನು ಯಶಸ್ವಿಗೊಳಿಸಲಿದ್ದಾರೆ.

ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಎಂದರೆ ಏನು?
ಸಮ್ಮೇಳನದ ಭಾಗವಾಗಿರುವ ಒಕ್ಕೂಟವು, ಉಪಯುಕ್ತ ಮಾಹಿತಿ ಮೂಲಕ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಸ್ತಾವನೆಯನ್ನು ಸುಧಾರಿಸಲು ನೆರವು ನೀಡಲಿದೆ. ಅಲ್ಲದೆ ಸಂಶೋಧನಾ ಕಾರ್ಯಸೂಚಿಗೆ ಮಾರ್ಗದರ್ಶನ ನೀಡಲಿದೆ. ಸಂಶೋಧನಾ ವಿದ್ಯಾರ್ಥಿಗಳ ಮೇಲ್ವಿಚಾರಣೆಯಲ್ಲಿ ಬಹುಮಟ್ಟಿಗೆ ಅನುಭವ ಇರುವ ವಿದ್ವಾಂಸರು ಒಕ್ಕೂಟದ ಬೋಧಕ ತಂಡದಲ್ಲಿ ಇರುತ್ತಾರೆ.

ADVERTISEMENT

ಸ್ವರ್ಧಾತ್ಮಕ ಹಾಗೂ ವಿಷಯಾಧಾರಿತ ಪ್ರಬಂಧಗಳ ನಡುವಿನ ವ್ಯತ್ಯಾಸವೇನು?
ಸ್ವರ್ಧಾತ್ಮಕ ಪ್ರಬಂಧಗಳು ಸಂಪೂರ್ಣವಾಗಿ ವಿಸ್ತರಿಸಿದ ಪ್ರಬಂಧಗಳು. ಇನ್ನು ವಿಷಯಾಧಾರಿತ ಪ್ರಬಂಧಗಳು ಇತರ ಸಮಾನ ಮನಸ್ಕ ಸಂಶೋಧಕರ ಜತೆ ದುಂಡು ಮೇಜಿನ ಸ್ವರೂಪದ ಚರ್ಚೆಯ ಮೂಲಕ ಮಾಹಿತಿ ಪಡೆದು ರೂಪಿಸಲಾದ ಪ್ರಬಂಧಗಳು. ಅಧ್ಯಯನ ಕ್ಷೇತ್ರಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಇರುವ, ಆದರೆ ಇನ್ನಷ್ಟು ವಿಸ್ತರಿಸಬೇಕಾದ ಪ್ರಬಂಧವನ್ನು ವಿಷಯಾಧಾರಿತ ಪ್ರಬಂಧ ಎಂದು ಅಂಗೀಕರಿಸಲಾಗುತ್ತದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳ ಸಾಂಸ್ಥಿಕ ಭವಿಷ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ.
ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆ ಚಟುವಟಿಕೆಯಲ್ಲಿ ಸಂಸ್ಥೆಗಳು ಹೇಗೆ ಮುಖ್ಯವಾಗುತ್ತವೆ ಎಂಬ ಪ್ರಶ್ನೆ ಆಗಾಗ ಕೇಳಿ ಬರುತ್ತದೆ.

ಒಂದು ದೇಶದ ಸಂಸ್ಥೆಗಳು ದೇಶೀಯ ಸಂಸ್ಥೆಯ ಕಾರ್ಯತಂತ್ರ, ಸ್ವರೂಪ ಹಾಗೂ ಪ್ರಕ್ರಿಯೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಮತ್ತು ಅವು ಬಹುರಾಷ್ಟ್ರೀಯ ಕಂಪೆನಿಗಳ ಕಾರ್ಯಚಟುವಟಿಕೆಗೆ ಹೇಗೆ ಅಷ್ಟೇ ಮುಖ್ಯವಾಗುತ್ತವೆ ಎಂಬ ಬಗ್ಗೆ ಸಮ್ಮೇಳನಲ್ಲಿ ಭಾಗವಹಿಸುವವರು ವಿವರಣೆ ನೀಡಲಿದ್ದಾರೆ.

ಈ ಸಮ್ಮೇಳನದ ಮೂಲಕ ನೀವು ಏನನ್ನು ಸಾಧಿಸುವ ಗುರಿ ಇಟ್ಟುಕೊಂಡಿದ್ದೀರಿ?
ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆ ಸಂಶೋಧನೆಯಲ್ಲಿನ ಇತ್ತೀಚಿನ ವಿದ್ಯಮಾನಗಳನ್ನು ವಿದ್ವಾಂಸರು ಹಾಗೂ ಯುವ ಸಂಶೋಧಕರು ಇಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆಯಲ್ಲಿ, ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆ ಹೊಂದಿರುವ ಭಾರತದಂಥ ದೇಶಗಳ ಪಾತ್ರವನ್ನು ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಜ್ಞಾನದ ಪುನರ್ ಅನುಸಂಧಾನಕ್ಕೆ ಇದು ವೇದಿಕೆಯಾಗಲಿದೆ.

ಪ್ರಮುಖ ಸಂಶೋಧಕರ ಕೃತಿಗಳನ್ನು ಈ ಸಮ್ಮೇಳನವು ಒಂದೇ ವೇದಿಕೆಯಡಿ ತರಲಿದೆ. ಮಹತ್ವಾಕಾಂಕ್ಷೆಯ ಸಂಶೋಧನಾ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ವಿಶ್ವದರ್ಜೆ ಪ್ರದರ್ಶನದ ಪ್ರಯೋಜನ ಪಡೆಯುವುದಕ್ಕೆ ಇಲ್ಲಿ ಅವಕಾಶವಿದೆ. ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆಯ ಇತ್ತೀಚಿನ ಸ್ವರೂಪ ಏನು ಎನ್ನುವುದನ್ನು ತಿಳಿಯಲು ಹಂಬಲಿಸುವ ವ್ಯವಸ್ಥಾಪಕರಿಗೆ ಹಾಗೂ ಸಂಶೋಧಕರಿಗೂ ಈ ಸಮ್ಮೇಳನ ನೆರವಾಗಲಿದೆ. 

ಏನಿದು ಎಐಬಿ?

ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆ ಸಂಸ್ಥೆ (ಅಕಾಡೆಮಿ ಆಫ್ ಇಂಟರ್‌ನ್ಯಾಷನಲ್ ಬಿಸಿನೆಸ್ -ಎಐಬಿ), ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆ ಕ್ಷೇತ್ರದ ವಿದ್ವಾಂಸರು ಹಾಗೂ ಪರಿಣತರನ್ನು ಒಳಗೊಂಡ ಪ್ರಮುಖ ಸಂಘವಾಗಿದೆ. ವಿಶ್ವದಾದ್ಯಂತ 81 ದೇಶಗಳಲ್ಲಿ ಎಐಬಿ ಇದೆ. ಅಂತರ ರಾಷ್ಟ್ರೀಯ ವ್ಯವಹಾರ ನಿರ್ವಹಣೆಯಲ್ಲಿ ಆಸಕ್ತಿ ಹೊಂದಿರುವ ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ವಿದ್ವಾಂಸರು, ಸಮಾಲೋಚಕರು ಹಾಗೂ ಸಂಶೋಧಕರು ಇದರ ಸದಸ್ಯರಾಗಿರುತ್ತಾರೆ. ಸಂಸ್ಥೆಯು ವಿಶ್ವದಾದ್ಯಂತ 16 ಶಾಖೆಗಳನ್ನು ಹೊಂದಿದೆ.

ನೋಂದಣಿ ವಿವರ website:http://hrm.iimb.ernet.in/iimb/Aib_India_Conference/index.htm  ಇಲ್ಲಿ ಲಭ್ಯ. ಈ ಕ್ಷೇತ್ರದ ಅಧ್ಯಯನದಲ್ಲಿ ಆಸಕ್ತಿ ಹೊಂದಿರುವ ಎಲ್ಲ ಸಂಸ್ಥೆಗಳ ವಿದ್ಯಾರ್ಥಿಗಳು ಈ ಸಮ್ಮೇಳನದ ಉಪಯೋಗ ಪಡೆದುಕೊಳ್ಳಲು ಸಾಧ್ಯವಾಗುವಂತೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.