ADVERTISEMENT

ಸಂಶೋಧನಾ ವಿದ್ಯಾರ್ಥಿಗಳಿಗೆ ಇತಿಹಾಸ ಫೆಲೋಶಿಪ್‌

ವಿದ್ಯಾಧನ

ಪ್ರಜಾವಾಣಿ ವಿಶೇಷ
Published 23 ನವೆಂಬರ್ 2014, 19:30 IST
Last Updated 23 ನವೆಂಬರ್ 2014, 19:30 IST
ಸಂಶೋಧನಾ ವಿದ್ಯಾರ್ಥಿಗಳಿಗೆ ಇತಿಹಾಸ ಫೆಲೋಶಿಪ್‌
ಸಂಶೋಧನಾ ವಿದ್ಯಾರ್ಥಿಗಳಿಗೆ ಇತಿಹಾಸ ಫೆಲೋಶಿಪ್‌   

ಮಾನವಿಕ ಶಾಸ್ತ್ರ ಅಧ್ಯಯನಗಳಲ್ಲಿ ಇತಿಹಾಸಕ್ಕೆ ಮಹತ್ವದ ಪ್ರಾಮುಖ್ಯತೆ ಇದೆ. ಮಾನವನ ನಾಗರಿಕತೆ ಇತಿಹಾಸ ತಿಳಿಯಲು ಸಂಶೋಧನೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಇತಿಹಾಸ ವಿದ್ಯಾರ್ಥಿಗಳಿಗೆ ಸಂಶೋಧನೆ ಕೈಗೊಳ್ಳಲು ಪ್ರೇರಣೆ ನೀಡುವ ಸಲುವಾಗಿ ಇಂಡಿಯನ್‌ ಕೌನ್ಸಿಲ್‌ ಫಾರ್‌ ಹಿಸ್ಟಾರಿಕಲ್‌ ರಿಸರ್ಚ್‌ (ಐಸಿಎಚ್‌ಆರ್‌) ಸಂಸ್ಥೆಯು ಪ್ರತಿವರ್ಷ ಜೂನಿಯರ್‌ ಮತ್ತು ಡಾಕ್ಟರಲ್‌ ಫೆಲೋಶಿಪ್‌ಗಳನ್ನು ನೀಡುತ್ತ ಬರುತ್ತಿದೆ. ಐಸಿಎಚ್‌ಆರ್‌ ಭಾರತ ಸರ್ಕಾರದ ಧನಸಹಾಯದೊಂದಿಗೆ ನಡೆಯುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ.

2014–15ನೇ ಸಾಲಿನ ಸಂಶೋಧನೆಗಾಗಿ ಜೂನಿಯರ್‌ ಫೆಲೋಶಿಪ್‌ ಮತ್ತು ಪೋಸ್ಟ್‌–ಡಾಕ್ಟರಲ್‌ ಫೆಲೋಶಿಪ್‌ಗಾಗಿ ಐಸಿಎಚ್‌ಆರ್‌ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕಿರಿಯ ಸಂಶೋಧನಾ ಫೆಲೋಶಿಪ್‌ (ಜೆಆರ್‌ಎಫ್‌)...
ಆಸಕ್ತ ಇತಿಹಾಸ ವಿದ್ಯಾರ್ಥಿಗಳಿಂದ ಕಿರಿಯ ಸಂಶೋಧನಾ ಫೆಲೋಶಿಪ್‌ (ಜೆಆರ್‌ಎಫ್‌)ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹತೆಗಳು: ಈ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಇತಿಹಾಸ ಅಥವಾ ಅದರ ಸಂಬಂಧಿತ ವಿಷಯಗಳಲ್ಲಿ ಪಿಎಚ್‌.ಡಿಗೆ ನೋಂದಣಿ ಮಾಡಿರಬೇಕು. ಅಥವಾ ಇತಿಹಾಸ ಸಂಬಂಧಿತ ವಿಷಯಗಳಲ್ಲಿ ಎಂ.ಫಿಲ್‌ಗೆ ನೋಂದಣಿ ಮಾಡಿರಬೇಕು ಅಥವಾ ಎಂ.ಎ, ಎಂ.ಫಿಲ್‌ ಸಂಯೋಜನಾ ಕೋರ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರಬೇಕು.

ಅರ್ಜಿಶುಲ್ಕ: ಈ ಫೆಲೋಶಿಪ್‌ ಪಡೆಯಬಯಸುವ  ವಿದ್ಯಾರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂಪಾಯಿ ಅರ್ಜಿ ಶುಲ್ಕ ಇದೆ. ಎಸ್‌ಸಿ, ಎಸ್‌ಟಿ, ಅಂಗವಿಕಲ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ಇದೆ. ಫೆಲೋಶಿಪ್‌ ಪರೀಕ್ಷೆಗೆ ಹಾಜರಾಗುವ  ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ರೈಲು ಅಥವಾ ಬಸ್‌ ಪ್ರಯಾಣ ದರವನ್ನು ನೀಡಲಾಗುವುದು.
ಅರ್ಜಿ ಶುಲ್ಕವನ್ನು ಡಿಡಿ ಮುಖಾಂತರ ‘Deputy Director (Accounts) ICHR, Delhi ಇವರ ಹೆಸರಿಗೆ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಲಿಖಿತ ಪರೀಕ್ಷೆ: ಲಿಖಿತ ಪರೀಕ್ಷೆ ಮುಖಾಂತರ ಆಯ್ಕೆ ನಡೆಯಲಿದೆ. ನೂರು ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. 30 ಅಂಕಗಳ ಬಹು ಆಯ್ಕೆ ಪ್ರಶ್ನೆಗಳು, 50 ಅಂಕಗಳ ಎರಡು ಪ್ರಬಂಧ ರಚನೆ, 20 ಅಂಕಗಳ ಐದು ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಪರೀಕ್ಷಾ ಅವಧಿ ಮೂರು ಗಂಟೆ. ಲಿಖಿತ ಪರೀಕ್ಷೆಯ ಪಠ್ಯಕ್ರಮವನ್ನು ಐಸಿಎಚ್‌ಆರ್‌ ವೆಬ್‌ಸೈಟ್‌ನಲ್ಲಿ ನೋಡಬಹುದು. ಇದರಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. 100 ಅಂಕಗಳಿಗೆ ಸಂದರ್ಶನ ನಡೆಸಲಾಗುವುದು.

ವೇತನ ಮತ್ತು ಫೆಲೋಶಿಪ್‌ ಸಂಖ್ಯೆ: ಲಿಖಿತ ಪರೀಕ್ಷೆ ಮೂಲಕ 80 ಸಂಶೋಧಕರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಮಾಸಿಕ 16,000 ರೂಪಾಯಿ ಸಂಭಾವನೆ ಹಾಗೂ ಇತರೆ ವೆಚ್ಚಗಳಿಗಾಗಿ ವರ್ಷಕ್ಕೆ 15,000 ರೂಪಾಯಿ ಭತ್ಯೆ ನೀಡಲಾಗುವುದು. ಫೆಲೋಶಿಪ್‌ ಅವಧಿ ಎರಡು ವರ್ಷಗಳು ಮಾತ್ರ. ಒಂದು ವೇಳೆ ಸಂಶೋಧನಾ ವರದಿಯನ್ನು ಎರಡು ವರ್ಷಗಳಲ್ಲಿ ಸಲ್ಲಿಸಲು ಸಾಧ್ಯವಾಗದಿದ್ದರೆ ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗುವುದು. ಇದು ಸಂಶೋಧನೆ ಯೋಜನಾ ಸಮಿತಿಯ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. www.ichr.ac.in   ಈ  ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರಿಂಟೌಟ್‌  ತೆಗೆದಿರಿಸಿಕೊಂಡು ಅದಕ್ಕೆ ಸಹಿ ಮಾಡಿ ಅರ್ಜಿ ಶುಲ್ಕ ಮತ್ತು ಅಗತ್ಯ ದಾಖಲೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ ‘Member Secretary, Indian Council of Historical Research, 35 Ferozeshah Road, New Delhi – 110001 ಈ ವಿಳಾಸಕ್ಕೆ ಕಳುಹಿಸಬೇಕು.

ಪ್ರಿಂಟೌಟ್‌ ಅರ್ಜಿಯೊಂದಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಶೈಕ್ಷಣಿಕ ವಿದ್ಯಾರ್ಹತೆ ಅಂಕಪಟ್ಟಿಗಳು, ಎಂ.ಫಿಲ್‌, ಪಿಎಚ್‌.ಡಿಗೆ ದಾಖಲಾಗಿರುವ ಬಗ್ಗೆ ಪ್ರಮಾಣ ಪತ್ರ, ಶುಲ್ಕ ಪಾವತಿಸಿರುವ ಡಿಡಿ, ಸಂಬಂಧಿತ ಕ್ಷೇತ್ರದಲ್ಲಿನ ಅನುಭವ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಡಿಸೆಂಬರ್‌ 10 ಕೊನೆಯ ದಿನವಾಗಿದೆ. ಪ್ರಿಟೌಂಟ್‌ ಅರ್ಜಿಯನ್ನು ಡಿಸೆಂಬರ್‌ 22ನೇ ದಿನಾಂಕದೊಳಗೆ ಕಳುಹಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗೆ www.ichr.ac.in ಈ ವೆಬ್‌ಸೈಟ್‌ ನೋಡಬಹುದು. 

ಡಾಕ್ಟರಲ್‌ ಫೆಲೋಶಿಪ್‌...
ಇತಿಹಾಸ ವಿಷಯಗಳಲ್ಲಿ ಪಿಎಚ್‌.ಡಿ ಪಡೆದಿರುವ ಅಭ್ಯರ್ಥಿಗಳಿಂದ ಪೊಸ್ಟ್‌–ಡಾಕ್ಟರಲ್‌ ಫೆಲೋಶಿಪ್‌ (ಸಾಮಾನ್ಯ) ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪಿಎಚ್‌.ಡಿ ಪಡೆದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ನವದೆಹಲಿ, ಗುವಾಹಟಿ, ಬೆಂಗಳೂರಿನಲ್ಲಿ ಪರೀಕ್ಷೆ ನಡೆಯಲಿದೆ. 

ಈ ಫೆಲೋಶಿಪ್‌ ಅವಧಿ ಎರಡು ವರ್ಷ. ಆದಾಗ್ಯೂ ಮತ್ತೊಂದು ವರ್ಷಕ್ಕೆ ವಿಸ್ತರಿಸಿಕೊಳ್ಳಬಹುದು. ಮಾಸಿಕ 28,000 ರೂಪಾಯಿ ಶಿಷ್ಯವೇತನ ನೀಡಲಾಗುವುದು. ವರ್ಷಕ್ಕೆ 2 ಲಕ್ಷ ರೂಪಾಯಿ ಭತ್ಯೆ (ವಿವಿಧ ವೆಚ್ಚಗಳಿಗೆ) ಕೊಡಲಾಗುವುದು. 10 ಅಭ್ಯರ್ಥಿಗಳನ್ನು ಮಾತ್ರ ಸಂಶೋಧನಾ ಫೆಲೋಶಿಪ್‌ಗೆ ಆಯ್ಕೆ ಮಾಡಲಾಗುವುದು. ಸಾಮಾನ್ಯ ಅಭ್ಯರ್ಥಿಗಳು 300 ರೂಪಾಯಿ ಅರ್ಜಿ ಶುಲ್ಕವನ್ನು ಡಿಡಿ ಮುಖಾಂತರ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಅಂಗವಿಕಲ ವಿದ್ಯಾರ್ಥಿಗಳು ಶುಲ್ಕ ಪಾವತಿಸುವಂತಿಲ್ಲ.

ಅರ್ಜಿಯನ್ನು ಆನ್‌ಲೈನ್‌ ಮುಖಾಂತರ ಸಲ್ಲಿಸಬೇಕು. ಅರ್ಜಿಯ ಪ್ರಿಂಟೌಟ್‌ಗೆ ಅಗತ್ಯ ದಾಖಲೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ Member Secretary, Indian Council of Historical Research, 35 Ferozeshah Road, New Delhi ಈ ವಿಳಾಸಕ್ಕೆ ಕಳುಹಿಸಬೇಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್‌ 10 ಕಡೆಯ ದಿನ. ಪ್ರಿಂಟೌಟ್‌ ಅರ್ಜಿಗಳನ್ನು ಡಿಸೆಂಬರ್‌ 22ರ ಒಳಗೆ ಕಳುಹಿಸಬೇಕು.
ಆನ್‌ಲೈನ್‌ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ  www.ichr.ac.in ಈ ವೆಬ್‌ಸೈಟ್‌ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.