ಧಾರವಾಡ ಕಲ್ಯಾಣನಗರದ ಸಿದ್ಧರಾಮೇಶ್ವರ ಮಾರ್ಗದರ್ಶಿ ಸಂಸ್ಥೆ ಕಳೆದ ಎರಡು ದಶಕಗಳಿಂದ ಐಎಎಸ್, ಐಪಿಎಸ್, ಕೆಎಎಸ್ ಆಶಾವಾದಿಗಳಿಗೆ, ಸ್ಪಧಾರ್ತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಗರಡಿ ಮನೆಯಾಗಿ ನಿಂತಿದೆ.
ಹಲವಾರು ಪ್ರತಿಭೆಗಳನ್ನು ಸಾಣೆ ಹಿಡಿದು ರಾಷ್ಟ್ರಕ್ಕೆ ಸಮರ್ಪಿಸಿದ್ದಲ್ಲದೆ, ನೂರಾರು ಆಕಾಂಕ್ಷಿಗಳ ಸರ್ಕಾರಿ ಸೇವೆಯ ಕನಸನ್ನು ನನಸಾಗಿ ಮಾಡಲು ಸಹಾಯಕವಾಗಿದೆ ಎನ್ನುವುದಕ್ಕೆ ಇತ್ತೀಚೆಗೆ ಪ್ರಕಟವಾದ ಯುಪಿಎಸ್‌ಸಿ ಫಲಿತಾಂಶದಲ್ಲಿ 25ನೇ ರ್‍ಯಾಂಕ್್ ಪಡೆಯುವ ಮೂಲಕ ರಾಜ್ಯದಾದ್ಯಂತ ಹೆಸರು ಮಾಡಿರುವ ಗುರುದತ್ತ ಹೆಗೆಡೆ ಅವರ ಸಾಧನೆಯೇ ಸಾಕ್ಷಿ.
ಆರಂಭದಲ್ಲಿ ಈ ಸಂಸ್ಥೆ ಬೀದರ್‌ನಿಂದ ದಾವಣಗೆರೆವರೆಗಿನ ವಿದ್ಯಾರ್ಥಿಗಳನ್ನು ಮಾತ್ರ ಆಕರ್ಷಿಸುತ್ತಿತ್ತು. ಆದರೆ ಇತ್ತೀಚೆಗೆ ಬೆಂಗಳೂರು, ಚಾಮರಾಜನಗರದಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹೈ–ಕ ಮೀಸಲಾತಿ ದೊರಕಿದ ನಂತರವಂತೂ ಅವರ ಸಂಖ್ಯೆ ದುಪ್ಪಟ್ಟಾಗಿದೆ.
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಶಿವಬಸವ ಸ್ವಾಮೀಜಿ ಸಿದ್ಧರಾಮೇಶ್ವರ ಮಾರ್ಗದರ್ಶಿಯನ್ನು 1991ರಲ್ಲಿ ಆರಂಭಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್.ಸಿ. ಹಿರೇಮಠ ಉಪಾಧ್ಯಕ್ಷರಾಗಿ. ಕೇಂದ್ರ ಸರ್ಕಾರದ ಕಂದಾಯ ಇಲಾಖೆಯ ವಿಶ್ರಾಂತ ಹೆಚ್ಚುವರಿ ಕಾರ್ಯದರ್ಶಿ ಪ್ರೊ. ಎಂ. ಪಂಚಪ್ಪರಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿಗಳು ನಿರ್ದೇಶಕರಾಗಿ ಕಾರ್ಯ ಆರಂಭಿಸಿದರು. ಅಂದಿನಿಂದ ಪರೀಕ್ಷೆಗಳ ಮಾರ್ಗದರ್ಶನ, ತರಬೇತಿ, ಅಧ್ಯಯನ ಸಾಮಗ್ರಿ, ಪುರಸ್ಕಾರ ನೀಡಿಕೆ ಮೊದಲಾದ ಕಾರ್ಯಗಳು ಸತತವಾಗಿ ಜರುಗುತ್ತಿವೆ.
‘ನನಗೆ ದೆಹಲಿಯಲ್ಲಿ ವಸತಿನಿಲಯದ ವ್ಯವಸ್ಥೆ ಕಲ್ಪಿಸಿದ ಈ ಸಂಸ್ಥೆಗೆ ನಾನು ಚಿರಋಣಿಯಾಗಿರುತ್ತೇನೆ, ಇಂತಹ ಸಂಸ್ಥೆಯನ್ನು ನಾನು ದೆಹಲಿಯಲ್ಲೂ ಕಂಡಿಲ್ಲ, ಯಾವುದೇ ಸ್ವಾಮೀಜಿ ಮಾಡದ ಸೇವೆಯನ್ನು ಇವರು ಮಾಡುತ್ತಿದ್ದಾರೆ’. ಗುರುದತ್ತ ಹೆಗಡೆ, 2014ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 25ನೇ ರ್‍ಯಾಂಕ್ ಪಡೆದ ಅಭ್ಯರ್ಥಿ, ಧಾರವಾಡ |
‘ಉಚಿತವಾಗಿ ತರಬೇತಿ, ಗ್ರಂಥಾಲಯ ವ್ಯವಸ್ಥೆ, ಓದುಗರಿಗೆ ಪುಸ್ತಕಗಳನ್ನು ತರಿಸಿ ಕೊಡುವ ಸಂಸ್ಥೆಯನ್ನು ನಾನು ನೋಡಿಲ್ಲ, ಇಲ್ಲಿ ಓದಿಯೇ ಯುಪಿಎಸ್‌ಸಿಯಲ್ಲಿ 315ನೇ ರ್‍ಯಾಂಕ್ ಪಡೆದು ಪಾಸಾಗಿದ್ದೇನೆ, ಈಗಲು ಕೂಡ ಇಲ್ಲಿಗೆ ಓದಲು ಬರುತ್ತಿದ್ದೇನೆ’ |
‘ನಾನು ನನ್ನ ಜೀವನದ 10ವರ್ಷಗಳಷ್ಟೂ ಅವಧಿಯನ್ನು ಗ್ರಂಥಾಲಯದಲ್ಲಿಯೆ ಕಳೆದಿದ್ದೇನೆ, ಅಲ್ಲಿಯೇ ಓದಿ ಅಲ್ಲಿಯೇ ಮಲಗುತ್ತಿದ್ದೆವು. ಆ ಗಳಿಗೆ ಕಳೆದುಕೊಂಡೆವಲ್ಲ ಎಂದು ಇಂದು ಬೇಸರವಾಗಿ, ಅವಕಾಶ ಸಿಕ್ಕಾಗಲೆಲ್ಲ ಹೋಗಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತೇನೆ.‘ ಗೋವಿಂದರಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ, ಗುಲ್ಬರ್ಗ |
‘ವೃತ್ತಿಯಿಂದ ವೈದ್ಯನಾದ ನನಗೆ ಪರೀಕ್ಷೆ ಕಡೆ ಗಮನಹರಿಸಲು ಆಗುತ್ತಿರಲಿಲ್ಲ ಆದ್ದರಿಂದ ಕೆಲಸದಿಂದ ನೇರವಾಗಿ ಈ ಗ್ರಂಥಾಲಯಕ್ಕೆ ಹೋಗುತ್ತಿದ್ದೆ. ಅಂಥಹ ವಾತವಾರಣ ಮತ್ತು 24 ತಾಸೂ ತೆಗೆದ ಲೈಬ್ರರಿ ಬೇರೆ ಎಲ್ಲಿಯು ಸಿಗಲಿಲ್ಲ.’ |
‘ಈ ರೀತಿ ಸೇವೆಯನ್ನು ನಾನು ನಮ್ಮ ಬೆಂಗಳೂರು ಮತ್ತು ದೆಹಲಿಯಲ್ಲಿ ಕೂಡ ಕಂಡಿಲ್ಲ, ಏಕೆಂದರೆ ದೆಹಲಿಯಲ್ಲಿ ತಿಂಗಳ ಲೈಬ್ರರಿ ಫೀ ₨ 2000 ಇದೆ. ಇಂತಹ ಉಚಿತ, ಒಳ್ಳೆಯ ವಾತಾವರಣ ಮತ್ತು ಸಿಬ್ಬಂದಿ ಮತ್ತು ಓದುಗರ ಸಹಕಾರ ನೋಡಿಲ್ಲ’ ಪ್ರದೀಪ ಸಿಂಹ(ಮೂಲ ಬೆಂಗಳೂರು) ಪ್ರೊಬೆಷನರಿ ಆಫೀಸರ್, ಕಾರ್ಪೊರೇಷನ್ ಬ್ಯಾಂಕ್ ‘ನಮ್ಮ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಆಯ್ಕೆಯಾದರೆ ಅದೇ ನಮಗೆ ಅವರು ಕೊಡುವ ದೊಡ್ಡ ಕೊಡುಗೆ. ಎಲ್ಲ ಕಡೆ ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಬರುತ್ತಾರೆ, ಆದರೆ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳೇ ಬರುವುದಿಲ್ಲ.’ |
24x7 ವಾಚನಾಲಯ
ಇಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್‌ನಂತಹ ಉನ್ನತ ಪರೀಕ್ಷೆಗಳಲ್ಲಿ ಯಶಸ್ಸು ಪಡೆದಿದ್ದಾರೆ. ಈ ಗ್ರಂಥಾಲಯದಲ್ಲಿ ಕೆಲವರು ದಿನಪೂರ್ತಿ ಓದಿ ರಾತ್ರಿ ರೂಮಿಗೆ ಹೋದರೆ, ಕೆಲವರಿಗೆ ಸಂಜೆ ಬೆಳಗಾಗುತ್ತದೆ ಆಗ ಲೈಬ್ರರಿಗೆ ಆಗಮಿಸಿ ಓದಿ, ಬೆಳಿಗ್ಗೆ ರೂಮಿಗೆ ಹೋಗುತ್ತಾರೆ. ಬುತ್ತಿ ಕಟ್ಟಿಕೊಂಡು ಬಂದು ಓದುವವರೂ ಇದ್ದಾರೆ.
ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಾಚನಾಲಯದಲ್ಲಿ ಯುಪಿಎಸ್ ವಿದ್ಯುತ್ ವ್ಯವಸ್ಥೆ ಸಹ ಇದೆ. ವಿದ್ಯಾರ್ಥಿಗಳು ಬಯಸಿದ ಯಾವುದೇ ಪುಸ್ತಕವನ್ನು ಕೊಂಡು ಇಲ್ಲವೇ ಹೊರಗಿನಿಂದ ತರಿಸಿಯಾದರೂ ಓದುಗರಿಗೆ ನೀಡುವ ಮೂಲಕ ವಿದ್ಯಾರ್ಥಿಗಳ ಕಾಳಜಿ ಮಾಡಲಾಗುತ್ತದೆ. ಪರೀಕ್ಷೆಗಳಿಗೆ ಬೇಕಾಗುವ ಎಲ್ಲ ನಿಯತಕಾಲಿಕೆಗಳನ್ನು ಮಾರ್ಗದರ್ಶಿಯ ಗ್ರಂಥಾಲಯದಲ್ಲಿ ಕಾಣಬಹುದಾಗಿದೆ. ಗ್ರಂಥಾಲಯದಲ್ಲಿ ವ್ಯಾಸಂಗಕ್ಕಾಗಿ ಪ್ರಸಕ್ತ ವರ್ಷದಲ್ಲಿಯೇ 400ಕ್ಕೂ ಹೆಚ್ಚು ಜನ ನೋಂದಣಿ ಮಾಡಿಸಿದ್ದಾರೆ. ಯಶಸ್ವಿಯಾದ ವಿದ್ಯಾರ್ಥಿಗಳು ತಾವು ಓದಿದ ಪುಸ್ತಕ, ನೋಟ್ಸ್, ಬಳಸಿದ ಪೀಠೋಪಕರಣವನ್ನೆಲ್ಲ ಗ್ರಂಥಾಲಯಕ್ಕೆ ಕಾಣಿಕೆಯಾಗಿ ನೀಡುತ್ತಾರೆ ಮತ್ತು ಓದುಗರು ತಮ್ಮದೇ ಆದ ಗುಂಪುಗಳನ್ನು ಮಾಡಿಕೊಂಡು ಹಲವಾರು ಪುಸ್ತಕಗಳನ್ನು ಹರವಿಕೊಂಡು ನಿರಂತರವಾಗಿ ಅಭ್ಯಾಸ ಮಗ್ನರಾಗಿರುವುದನ್ನು ಸದಾಕಾಲ ಕಾಣಬಹುದು.
ನವದೆಹಲಿಯಲ್ಲಿ ವಸತಿ ನಿಲಯ
ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯಲು ನವದೆಹಲಿಗೆ ಹೋಗುವ ಕರ್ನಾಟಕದ ಬಡ ವಿದ್ಯಾರ್ಥಿಗಳಿಗಾಗಿ ನವದೆಹಲಿಯ ಕೇಂದ್ರಭಾಗದಲ್ಲಿ ಒಂದು ಮನೆಯನ್ನು ಖರೀದಿಸಲಾಗಿದೆ. ಅಲ್ಲಿ ಅಭ್ಯರ್ಥಿಗಳ ವ್ಯಾಸಂಗಕ್ಕಾಗಿ ಮತ್ತು ಪರೀಕ್ಷೆ ಮುಗಿಯುವವರೆಗೆ ಉಚಿತ ವಸತಿ ವ್ಯವಸ್ಥೆಯನ್ನು ಮಾಡಿದ್ದಾರೆ. 2014ರ ಐಎಎಸ್ ಬ್ಯಾಚ್‌ನಲ್ಲಿ 25ನೇ ರ್‍ಯಾಂಕ್ ಪಡೆದ ಗುರುದತ್ತ ಹೆಗಡೆ ಮತ್ತು ಕಳೆದ ಸಾರಿ ಯುಪಿಎಸ್‌ಸಿ ಪಾಸ್ ಮಾಡಿ ಮಸ್ಸೂರಿಯಲ್ಲಿ ತರಬೇತಿ ಪಡೆಯುತ್ತಿರುವ ವಿಕ್ರಾಂತ್ ಪಾಟೀಲ, ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವಾನಂದ ಕಾಪಸೆ ಈ ಸಂಸ್ಥೆಯ ಉಚಿತ ವಸತಿ ನಿಲಯದ ಪ್ರಯೋಜನ ಪಡೆದು ಆರು ತಿಂಗಳು ಕಾಲ ಅಭ್ಯಾಸ ಮಾಡಿದ್ದಾರೆ. ‘ಕರ್ನಾಟಕದ ಬೇರೆ ಬೇರೆ ಭಾಗಗದ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ, ಆದರೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳೇ ಅದರ ಪ್ರಯೋಜನವನ್ನು ಸರಿಯಾಗಿ ಪಡೆಯುತ್ತಿಲ್ಲ’ ಎಂದು ಸಂಸ್ಥೆಯ ಅಧ್ಯಕ್ಷರಾದ ನಾಗನೂರಮಠದ ಡಾ. ಸಿದ್ಧರಾಮ ಸ್ವಾಮೀಜಿ ತಮ್ಮ ನೋವು ವ್ಯಕ್ತಪಡಿಸುತ್ತಾರೆ.
ಇಲ್ಲಿಯ ವಿದ್ಯಾರ್ಥಿಗಳು ಎಲ್ಲರೂ ಒಂದೇ ಗುರಿ ಹೊಂದಿರುವುದಿಲ್ಲ. ಕೆಲವರು ಪೊಲೀಸ್ ಕಾನ್‌ಸ್ಟೆಬಲ್ ಆಗುವ, ಕೆಲವರು ಐಎಎಸ್ ಮಾಡುವ ಗುರಿ ಹೊಂದಿರುತ್ತಾರೆ. ಹಾಗೆಂದು ಯಾವುದೇ ಭೇದಭಾವವಿಲ್ಲ. ಅವರು ಒಬ್ಬರಿಗೊಬ್ಬರು ಸಹಕರಿಸುತ್ತಾ ಒಂದೇ ಮನೆಯವರಂತೆ ಇರುತ್ತಾರೆ. ಪ್ರತಿ ಶುಕ್ರವಾರ ಸರಸ್ವತಿ ಪೂಜೆ ಆಚರಿಸುವ ಮೂಲಕ ಸಭೆ ಸೇರುತ್ತಾರೆ, ಪರೀಕ್ಷೆಗಳ ಕುರಿತು ಇಲ್ಲಿಯ ವಿದ್ಯಾರ್ಥಿಗಳೇ ಕಾರ್ಯಗಾರಗಳನ್ನು ಆಯೋಜಿಸುತ್ತಾರೆ. ಯಶಸ್ವಿಯಾದವರು ಹೊಸಬರಿಗೆ ಉಚಿತವಾಗಿ ಉಪನ್ಯಾಸ ನೀಡುತ್ತಾರೆ. ಇದು ವ್ಯಕ್ತಿತ್ವ ಬೆಳವಣಿಗೆಗೂ ಸಹಾಯಕವಾಗಿದೆ. ಮಾರ್ಗದರ್ಶಿಯ ಹಳೆ ವಿದ್ಯಾರ್ಥಿಗಳು ಪ್ರತಿವರ್ಷ ಡಿಸೆಂಬರ್ 3ನೇ ಭಾನುವಾರ ವಾರ್ಷಿಕ ಸಮಾವೇಶವನ್ನು ಏರ್ಪಡಿಸುತ್ತಾರೆ. ಈ ಸಂದರ್ಭದಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳಿಂದ ವಿಚಾರ ವಿನಿಮಯ ಕಾರ್ಯಕ್ರಮ ನಡೆಯುತ್ತದೆ ಮತ್ತು ಪರೀಕ್ಷೆ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಗ್ರಂಥಾಲಯದಲ್ಲಿ ಓದಿ ಯಶಸ್ಸು ಪಡೆದ ಎಲ್ಲ ಅಧಿಕಾರಿಗಳೂ ಪ್ರತಿ ವರ್ಷ ಸೇರುತ್ತಾರೆ.
ಕೆ–ಸೆಟ್, ನೆಟ್, ಇಂಗ್ಲಿಷ್ ಸಂವಹನ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಟ್ರ್ಯಾಕ್ ಕೋರ್ಸ್‌ಗಳನ್ನು ಇಲ್ಲಿ ಉಚಿತವಾಗಿ ಹಮ್ಮಿಕೊಳ್ಳಲಾಗುತ್ತದೆ. ‘ಅರ್ಹ ಮತ್ತು ಹಣಕಾಸಿನ ಬೆಂಬಲ ಅವಶ್ಯವಾದ ಐಎಎಸ್ ಆಕಾಂಕ್ಷಿಗಳಿಗೆ ಹಾಗೂ ವಿದೇಶಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವ ವಿದ್ವಾಂಸರಿಗೆ ಧನಸಹಾಯ ಕೂಡ ನೀಡಲಾಗಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಶಂಕರ ಹಿರೇಮಠ ಹೇಳುತ್ತಾರೆ.
ಕೆಲವರು ಐದಾರು ವರ್ಷಗಳಾದರೂ ಗುರಿಯಿಂದ ವಿಚಲಿತರಾಗದೇ ತಮ್ಮ ಅಧ್ಯಯನ ನಡೆಸಿದ್ದಾರೆ. ‘ನಮ್ಮ ಪ್ರಯತ್ನಕ್ಕೆ ಒಂದಿಲ್ಲೊಂದು ದಿನ ಯಶಸ್ಸು ಸಿಕ್ಕೇ ಸಿಗುತ್ತದೆ, ಗುರಿ ಮುಟ್ಟುವವರೆಗೆ ಲೈಬ್ರರಿಯೇ ಸರ್ವಸ್ವ’ ಎಂದು ಲೈಬ್ರರಿಯ ಸಖ್ಯವನ್ನು ಬಿಟ್ಟುಕೊಡದ ಯಾದಗಿರಿಯ ಅನೀಲ ಬಿರಾದಾರ ಹೇಳುತ್ತಾರೆ.
ಐಎಎಸ್‌ಗೆ ಆಯ್ಕೆಯಾಗಿರುವ ರವಿ ಸುರಪುರ, ಐಪಿಎಸ್ ಆಗಿರುವ ಫಕ್ಕೀರಪ್ಪ ಕಾಗಿನೆಲೆ, ಧಾರವಾಡ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ ಸಿದ್ಧಲಿಂಗಯ್ಯ ಹಿರೇಮಠ, ಗುಲ್ಬರ್ಗದ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರಡ್ಡಿ, ವಿಜಾಪುರದ ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮನ್ವೇಕರ್ ಸೇರಿದಂತೆ 25ಕ್ಕೂ ಹೆಚ್ಚು ಜನರು ಐಎಎಸ್ ಅಧಿಕಾರಿಗಳಾಗಿ, 150ಕ್ಕೂ ಹೆಚ್ಚು ಮಂದಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಪಿಎಸ್‌ಐ ಸೇರಿದಂತೆ ಬಿ ಮತ್ತು ಸಿ ವರ್ಗದ ನೌಕರಿ ಪಡೆದವರಿಗಂತೂ ಲೆಕ್ಕವಿಲ್ಲ. ಈ ಸೇವೆಯನ್ನು ಮೆಚ್ಚಿ ಪುಸ್ತಕ ಹಾಗೂ ಪಿಠೋಪಕರಣ ನೀಡಿದ ದಾನಿಗಳೂ ಕಮ್ಮಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.