ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಪ್ರಶ್ನೆ ಪತ್ರಿಕೆ, ದಿನಪತ್ರಿಕೆ ಓದಿರಿ

ರಮೇಶ ಕೆ
Published 27 ಜುಲೈ 2014, 19:30 IST
Last Updated 27 ಜುಲೈ 2014, 19:30 IST

ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಗಂಟೆಗಟ್ಟಲೇ ಮೊದಲ ಪುಟದಿಂದ ಕೊನೆಯ ಪುಟದ ವರೆಗೂ ದಿನಪತ್ರಿಕೆಗಳನ್ನು ಓದುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾರ್ಗದರ್ಶನದ ಕೊರತೆ ಇದೆ. ಕೇಂದ್ರ ಲೋಕಸೇವಾ ಆಯೋಗ ಆಯೋಜಿಸುವ ಐಎಎಸ್‌ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳು ಹೇಗೆ ಅಧ್ಯಯನ ವಸ್ತುವಾಗುತ್ತವೆ ಎಂಬುದರ ಬಗ್ಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಹಿಮಾಲಯ ಐ.ಎ.ಎಸ್‌. ತರಬೇತಿ ಕೇಂದ್ರದ ಉಪನ್ಯಾಸಕ ಕೇಶವ್‌ ಎಸ್‌. ಅವರು ಕೆಲವು ಮಾರ್ಗದರ್ಶನ ನೀಡಿದ್ದಾರೆ.

‘ಕನ್ನಡ ಮತ್ತು ಇಂಗ್ಲಿಷ್‌ ಸೇರಿದಂತೆ ಎರಡು ಭಾಷೆಯ ದಿನ ಪತ್ರಿಕೆಗಳನ್ನು ದಿನಕ್ಕೆ ಎರಡರಿಂದ ಮೂರು ಗಂಟೆ ಓದಬೇಕು. ಎರಡು ತಿಂಗಳ ನಂತರ ಒಂದು ಗಂಟೆಯೊಳಗೆ ಒಂದು ಪತ್ರಿಕೆಯನ್ನು ಓದಿ ಮುಗಿಸಬಹುದು. ಎಲ್ಲಾ ವಿಷಯವನ್ನು ಓದಬೇಕಾಗಿಲ್ಲ. ಪಠ್ಯಕ್ರಮಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರೀಕರಿಸಬೇಕು. ಆದರೆ ಕಡ್ಡಾಯವಾಗಿ ಒಂದು ಕನ್ನಡ, ಒಂದು ಇಂಗ್ಲಿಷ್‌ ಪತ್ರಿಕೆ ಓದಿದರೆ ಉತ್ತಮ.
ಮುಖ್ಯ ಪರೀಕ್ಷೆಯಲ್ಲಿ ಭಾಷಾ ಪತ್ರಿಕೆ ಇರುತ್ತದೆ. 300 ಅಂಕಗಳ ಈ ಪತ್ರಿಕೆ ಎದುರಿಸಲು ದಿನಪತ್ರಿಕೆ ಓದಲೇಬೇಕು. ಪತ್ರಿಕೆಗಳ ಸಂಪಾದಕೀಯ ಬರಹಗಳನ್ನು ಕತ್ತರಿಸಿಟ್ಟುಕೊಂಡು ಓದಿದರೆ ಪ್ರಬಂಧ ಬರೆಯಲು ಸಹಾಯವಾಗುತ್ತದೆ. ಸಾಮಾನ್ಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಚಲಿತ ವಿದ್ಯಮಾನಗಳನ್ನೇ ಕೇಳುವುದರಿಂದ ಪತ್ರಿಕೆಗಳಿಲ್ಲಿ ಸಹಾಯಕವಾಗುತ್ತವೆ. ಹೆಚ್ಚಾಗಿ ವಿವಿಧ ಆಯೋಗಗಳ ಅಧ್ಯಕ್ಷರ ಹೆಸರು, ರಾಯಭಾರಿಗಳ ನೇಮಕ, ಪ್ರಮುಖ ಘಟನೆಗಳು, ಅವುಗಳಿಗೆ ಸಂಬಂಧಿಸಿದಂತೆ ಟಿಪ್ಪಣಿಗಳನ್ನು ಮಾಡಿಕೊಳ್ಳಲು ಪತ್ರಿಕೆಗಳು ಉಪಯುಕ್ತ. ಯಾವುದೇ ಆಕರ ಗ್ರಂಥಗಳಲ್ಲಿಯೂ ಪ್ರಚಲಿತ ವಿದ್ಯಮಾನಗಳನ್ನು ದಾಖಲಿಸಲಾಗದು. ಹಾಗಾಗಿ ವೃತ್ತ ಪತ್ರಿಕೆಗಳೇ ಆಕರ ಗೃಂಥಗಳಾಗಿ ನಿಲ್ಲುತ್ತವೆ. ಇನ್ನು ಸಂದರ್ಶನದಲ್ಲಿ 275 ಅಂಕಗಳಿರುತ್ತವೆ. ಸಂದರ್ಶನ ಎದುರಿಸಲು, ಭಾಷೆಯ ಮೇಲೆ ಹಿಡಿತ ಸಾಧಿಸಲು, ಸಮರ್ಪಕ ಭಾಷಾ ಬಳಕೆಗೂ ಪತ್ರಿಕೆಯ ಓದು ಸಹಾಯಕವಾಗುತ್ತದೆ ಎನ್ನುವುದು ಮರೆಯಲಾಗದು’ ಎಂದು ಮಾಹಿತಿ ನೀಡುತ್ತಾರೆ ಕೇಶವ್‌.

ಪ್ರಶ್ನೆ ಪತ್ರಿಕೆಗಳೇ ಮಾರ್ಗದರ್ಶಕ: 1979ರಿಂದ 2013ರವರೆಗಿನ ಪ್ರಶ್ನೆ ಪತ್ರಿಕೆಗಳನ್ನು ಓದಬೇಕು, ಅಲ್ಲಿ ಕೇಳಿರುವ ವಿಷಯಗಳನ್ನು ಪಟ್ಟಿ ಮಾಡಿಕೊಂಡು ಅದೇ ವಿಷಯಗಳನ್ನು ಪತ್ರಿಕೆ ಓದುವಾಗ ಕೇಂದ್ರಿಕರಿ ಸಬೇಕು. ಪ್ರಶ್ನೆ ಪತ್ರಿಕೆಗಳನ್ನು ಓದಿ ಅರ್ಥ ಮಾಡಿಕೊಳ್ಳ ಬೇಕು, ಯಾವ ಕ್ಷೇತ್ರಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ಬಗ್ಗೆ ಗಮನವಿರಬೇಕು. ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆಯ ಸಮಸ್ಯೆಯಾಗುತ್ತದೆ. ಐ.ಎ.ಎಸ್‌. ಪ್ರಶ್ನೆ ಪತ್ರಿಕೆಗಳಲ್ಲಿ ‘ಸ್ಟ್ರಾಂಡರ್ಡ್‌ ವಕ್ಯಾಬಲರಿ’ ಇರುತ್ತದೆ. ಹಾಗಾಗಿ ಹಿಂದಿನ ಪ್ರಶ್ನೆ ಪತ್ರಿಕೆ ಗಳನ್ನೇ ಎರಡು, ಮೂರು ಬಾರಿ ಓದಿ ಅಭ್ಯಾಸ ಮಾಡಬೇಕಾಗುತ್ತದೆ. ಆಗ ಮಾತ್ರ ಪ್ರಶ್ನೆ ಪತ್ರಿಕೆಗಳಲ್ಲಿ ಬಳಸುವ ಇಂಗ್ಲಿಷ್‌ ಶೈಲಿ ಗೊತ್ತಾ ಗುತ್ತದೆ. ನ್ಯಾಷನಲ್‌ ಕೌನ್ಸಿಲ್‌ ಆಫ್ ಎಜುಕೇಷನಲ್‌ ರಿಸರ್ಚ್‌ ಆ್ಯಂಡ್‌ ಟ್ರೈನಿಂಗ್‌ನ ಸಿಬಿಎಸ್‌ಸಿ ಪಠ್ಯಗಳನ್ನು ಅಭ್ಯಾಸ ಮಾಡಿದರೆ ಒಳ್ಳೆಯದು, ವಿಕಿಪೀಡಿಯಾದಲ್ಲೂ ಕೆಲವು ಮಾಹಿತಿಗಳನ್ನು ಓದಿ ತಿಳಿದುಕೊಳ್ಳಬಹುದು.

ಪ್ರಶ್ನೆ ಪತ್ರಿಕೆಗಳಲ್ಲಿ ಕೊಟ್ಟಿರುವ ಪ್ರಶ್ನೆಗಳು ಯಾವ ವಿಷಯಕ್ಕೆ ಸಂಬಂಧಿಸಿವೆ ಎಂಬುದನ್ನು ಅರಿತು ಪತ್ರಿಕೆಗಳಲ್ಲೂ ಅದೇ ಸುದ್ದಿ, ಲೇಖನ ಗಳನ್ನು ವಿವರವಾಗಿ ಓದಬೇಕು. ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಪ್ರಶ್ನೆಗಳನ್ನು ಗಮನಿಸಿ, ಕನ್ನಡದಲ್ಲೂ ಅಭ್ಯಾಸ ಮಾಡಬಹುದು. ಮುಂದಿನ ತಿಂಗಳು ನಡೆಯುವ ಐ.ಎ.ಎಸ್. ಪೂರ್ವಭಾವಿ ಪರೀಕ್ಷೆಗೆ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಣಿಯಾಗುತ್ತಿ ದ್ದಾರೆ. ಮೊದಲ ಪ್ರಯತ್ನದಲ್ಲಿರುವವರು, ಈಗಾಗಲೇ ಎರಡು, ಮೂರು ಬಾರಿ ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳು ಐ.ಎ.ಎಸ್‌. ಕೈಗೆಟುಕದ ದ್ರಾಕ್ಷಿ ಎಂದು ಸುಮ್ಮನೇ ಕೂರದೇ ಸತತ ಪ್ರಯತ್ನ, ಪರಿಶ್ರಮವಹಿಸಿದರೆ ಯಶಸ್ಸು ಗಳಿಸಬಹುದು. ಇದುವರೆಗೂ ನಡೆದಿರುವ ಐ.ಎ.ಎಸ್‌., ಕೆ.ಎ.ಎಸ್‌., ಪ್ರಶ್ನೆ ಪತ್ರಿಕೆಗಳನ್ನು, ಆಯಾ ವಿಷಯವಾರು ನೋಡಬಯಸುವವರು teachflat.blogspot.in ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.