ಅಷ್ಟಾವಧಾನ, ಶತಾವಧಾನ ನಮಗೆ ಹೊಸದಲ್ಲ. ವಿದ್ಯಾರ್ಥಿಗಳಲ್ಲಿ ಸ್ಮರಣ ಶಕ್ತಿಯ ವೃದ್ಧಿಗೂ ಇಂತಹ ಅವಧಾನ ಹಮ್ಮಿಕೊಂಡರೆ ಹೇಗಿದ್ದೀತು ಎಂಬ ಪ್ರಶ್ನೆಯೊಂದು ಮೂಡಿದ್ದೇ ತಡ, ಅದು ಕಾರ್ಯರೂಪಕ್ಕೆ ಬರಲು ಹೆಚ್ಚು ಸಮಯ ಬೇಕಾಗಲಿಲ್ಲ.
ಕಳೆದ 18 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಮರ್ಥ್ಯವನ್ನು ಉದ್ದೀಪಿಸುವ ಹೊಸ ಹೊಸ ಸಾಧ್ಯತೆಗಳನ್ನು ಸಂಶೋಧಿಸುತ್ತಾ, ಪ್ರಯೋಗಿಸುತ್ತಾ ಬಂದಿರುವ ಮತ್ತು ಅದರಲ್ಲಿ ಭಾರಿ ಯಶಸ್ಸನ್ನೂ ಕಂಡಿರುವ ಮಂಗಳೂರಿನ ಗೋಪಾಡ್ಕರ್ ಅವರು ದ್ವಾದಶ ಅವಧಾನವನ್ನು ವಿದ್ಯಾರ್ಥಿಗಳಿಂದ ಮಾಡಿಸಿ ಭೇಷ್ ಎನಿಸಿದ್ದಾರೆ. ದ್ವಾದಶ ಅವಧಾನದ ಜತೆಗೆ ಇತರ ಪ್ರಯೋಗಗಳನ್ನು ರಾಜ್ಯದುದ್ದಕ್ಕೂ ತೋರಿಸಲು ವಿದ್ಯಾರ್ಥಿಗಳ ತಂಡದೊಂದಿಗೆ ಇದೀಗ ಪ್ರವಾಸ ಹೊರಟಿದ್ದಾರೆ.
12 ಬಗೆಯ ಪ್ರಶ್ನೆಗಳು, ಸವಾಲುಗಳನ್ನು ಎದುರಿಸುವ ವಿದ್ಯಾರ್ಥಿಗಳು, ಅವುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಮರುಕ್ಷಣದಲ್ಲಿ ತಪ್ಪಿಲ್ಲದೆ ಹೇಳಬೇಕಿರುವುದೇ ಈ ಅವಧಾನದ ಲಕ್ಷಣ. ಇದೆಲ್ಲ ನಡೆಯುವುದು ಪ್ರೇಕ್ಷಕರ ಮುಂಭಾಗದಲ್ಲಿ. ಪ್ರೇಕ್ಷಕರೇ ನೀಡುವ ಪ್ರಶ್ನೆಗಳು ಇವು. ಪ್ರೇಕ್ಷಕರೇ ತೀರ್ಪುಗಾರರು.
ಮೊದಲಿಗೆ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಹಾಳೆ ಕೊಟ್ಟು ಸ್ಥಳದಲ್ಲೇ ಕೊಡುವ ವಿಷಯದ ಮೇಲೆ ಎಡಗೈಯಲ್ಲಿ ಚಿತ್ರ ಬರೆಯಲು ತಿಳಿಸಲಾಗುತ್ತದೆ. ಬಲಗೈಗೆ ಕಡಲೆ ಕಾಳು ಕೊಟ್ಟು ಅವುಗಳನ್ನು ಎಣಿಸಲು ತಿಳಿಸಲಾಗುತ್ತದೆ. ಈ ಹಂತದಲ್ಲಿ ಒಬ್ಬರು ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾರೆ, ಮತ್ತೊಬ್ಬರು ವಸ್ತುಗಳ ಹೆಸರು ಹೇಳುತ್ತಾ ಹೋಗುತ್ತಾರೆ. ಇನ್ನೊಬ್ಬರು ಸಂಖ್ಯೆಗಳನ್ನು ಉಲ್ಲೇಖಿಸುತ್ತಾರೆ.
ಇದೇ ಹೊತ್ತಲ್ಲಿ ಬೋರ್ಡ್‌ನಲ್ಲಿ ಚಿತ್ರ ಬರೆದು ಅಳಿಸುವ ಕೆಲಸ ನಡೆಯುತ್ತದೆ. ಒಬ್ಬರು ಗಂಟೆ ಬಾರಿಸುತ್ತಾರೆ, ಅಧಿಕ ಪ್ರಸಂಗಿಗಳು ವಿದ್ಯಾರ್ಥಿಗಳ ಚಿತ್ತ ಕದಿಯಲು ಯತ್ನಿಸುತ್ತಾರೆ. ಅಲ್ಲೇ ಸಂಗೀತ ಕೇಳಿಸುತ್ತದೆ, ವಸ್ತು ಮತ್ತು ಪುಸ್ತಕಗಳನ್ನು ತೋರಿಸಲಾಗುತ್ತದೆ. ಪ್ರೇಕ್ಷಕರಲ್ಲಿ ಯಾರು ಏನು ಮಾಡುತ್ತಾರೆ ಎಂದು ಗಮನಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಎಲ್ಲವನ್ನೂ ಮತ್ತೆ ಕೇಳಿದಾಗ ಅವರೆಲ್ಲ ಅದನ್ನು ತಪ್ಪದೇ ಹೇಳಬೇಕು. ಎಡಗೈಗೂ ಬಹಳ ಸಾಮರ್ಥ್ಯ ಇದೆ ಎಂದು ತಿಳಿಸುವುದಕ್ಕಾಗಿ ಅದರಲ್ಲೇ ಚಿತ್ರ ಬರೆಸಲಾಗುತ್ತದೆ.
ಇಷ್ಟೆಲ್ಲ ಕೆಲಸಗಳನ್ನೂ ಒಟ್ಟಿಗೆ ಮಾಡುವುದು ಹೇಗೆ? ನೆನಪಲ್ಲಿ ಇಟ್ಟುಕೊಳ್ಳುವುದು ಹೇಗೆ? ಇದೇನು ಕಣ್ಣುಕಟ್ಟು ವಿದ್ಯೆಯೇ? ಪ್ರಶ್ನೆ ಸಹಜ. ಆದರೆ ಇದನ್ನು ತಿಳಿಯಬೇಕಿದ್ದರೆ ಪ್ರತ್ಯಕ್ಷ ನೋಡಬೇಕು. ಪಟಪಟನೆ ವಿದ್ಯಾರ್ಥಿಗಳು ಉತ್ತರ ಹೇಳುತ್ತಿರುವುದನ್ನು ಕಂಡರೆ ಇದರಲ್ಲೇನೋ `ಮೋಸ' ಇದೆ ಎಂಬ ಭಾವನೆ ಬರುವುದು ಖಂಡಿತ. ಆದರೆ ಗೋಪಾಡ್ಕರ್ ಅವರೇ ಇದರ ಹಿಂದಿನ ಗುಟ್ಟನ್ನು ಬಿಚ್ಚಿಡುವಾಗ ಹೀಗೂ ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಡುವ ಸರದಿ ನಮ್ಮೆಲ್ಲರದಾಗುತ್ತದೆ.
`ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಮಕ್ಕಳಿಗೆ ಹೇಳಿಕೊಟ್ಟರೆ ಅವರ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಆರಂಭದಲ್ಲಿ ಸ್ವಲ್ಪ ನೆರವು ನೀಡಬೇಕು. ಬಳಿಕ ಯಾವುದೇ ನೆರವನ್ನು ನೀಡದೇ ಇದ್ದಾಗಲೂ ಅವರ ನೆನಪಿನ ಶಕ್ತಿ ಜಾಗೃತಗೊಳ್ಳುತ್ತದೆ, ಏಕಕಾಲದಲ್ಲಿ ಹಲವಾರು ಘಟನೆಗಳು ನಡೆದರೂ ಗಮನಿಸಿದ ವಿಚಾರವೆಲ್ಲಾ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ಆದರೆ ಯಾವುದೂ ಹೇರಿಕೆಯಾಗಬಾರದು, ಎಲ್ಲವನ್ನೂ ಸಂತೋಷದಿಂದಲೇ ಸ್ವೀಕರಿಸುವ ಮನೋಭಾವ ಇದ್ದಾಗ ನೆನಪಿನ ಶಕ್ತಿ ಇಮ್ಮಡಿಯಾಗುತ್ತದೆ. ಇದೇ ಸೂತ್ರ ಬಳಸಿಕೊಂಡು ಕಳೆದ ವರ್ಷ ನೆನಪಿನ ಅಷ್ಟಾವಧಾನ ನಡೆಸಲಾಗಿತ್ತು. ಈ ವರ್ಷ ಇನ್ನೂ ನಾಲ್ಕು ಹೆಚ್ಚುವರಿ ಪ್ರಶ್ನೆ ಕೇಳಿ ದ್ವಾದಶ ಅವಧಾನ ಏರ್ಪಡಿಸಲಾಗಿದೆ' ಎಂದು ಹೇಳುತ್ತಾರೆ ಗೋಪಾಡ್ಕರ್.
`ಈಗಿನ ಶಿಕ್ಷಣ ವ್ಯವಸ್ಥೆ ಮಕ್ಕಳ ಸಾಮರ್ಥ್ಯವನ್ನು ಬೆಳಕಿಗೆ ತರುವ ಬದಲಿಗೆ ಅವರ ಪ್ರತಿಭೆಯನ್ನು ವ್ಯವಸ್ಥಿತವಾಗಿ ಕೊಲ್ಲುತ್ತಿದೆ; ಇದರಲ್ಲಿ ಶಿಕ್ಷಕರು, ಪೋಷಕರ ಪಾತ್ರವೂ ದೊಡ್ಡದಿದೆ' ಎಂದು ವಿಷಾದದಿಂದ ನುಡಿಯುವ ಗೋಪಾಡ್ಕರ್ ಅವರು ಕಂಡುಕೊಂಡಿರುವ ಮಕ್ಕಳ ಪ್ರತಿಭಾ ವಿಕಸನ ಸಾಧ್ಯತಾ ಹಾದಿ ವಿಶಿಷ್ಟ ಮಾತ್ರವಲ್ಲ ಅದ್ಭುತವೂ ಹೌದು.
ಅಗಾಧ ಪ್ರತಿಭಾಶಾಲಿಗಳು
ಗೋಪಾಡ್ಕರ್ ಅವರು ನಡೆಸುತ್ತಿರುವ `ಸ್ವರೂಪ' ಅಧ್ಯಯನ ಕೇಂದ್ರದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ 65 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಹೆಚ್ಚಿನವರು `ದಡ್ಡ' ಎಂಬ ಹಣೆಪಟ್ಟಿ ಹೊತ್ತು ಶಾಲೆಯಿಂದ ಹೊರಗೆ ಕಳುಹಿಸಿದ್ದವರು. ಇವರೆಲ್ಲ ಹಾಡು, ನೃತ್ಯ, ಚಿತ್ರಗಳ ಮೂಲಕವೇ ಪ್ರೌಢಶಾಲೆಯ ವಿವಿಧ ಪಠ್ಯಗಳನ್ನು ಕರಗತ ಮಾಡಿಕೊಂಡು ಪ್ರತಿ ವಿಷಯದಲ್ಲೂ ಅಗಾಧ ಜ್ಞಾನ ಸಂಪಾದಿಸಿದ್ದಾರೆ. ತಮ್ಮಲ್ಲಿನ ಸುಪ್ತ ಪ್ರತಿಭೆಯನ್ನು ಕಂಡುಕೊಂಡಿದ್ದಾರೆ.
ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಲವರು ಹೆಚ್ಚು ಅಂಕ ಪಡೆದುಕೊಂಡು ತಮ್ಮ ಮುಂದಿನ ವ್ಯಾಸಂಗ ಆರಂಭಿಸಿದ್ದಾರೆ. ಯಾರನ್ನೂ ನಿರ್ಲಕ್ಷಿಸಬೇಡಿ, ಪ್ರತಿ ಮಗುವೂ ವಿಶಿಷ್ಟ, ಅವರ ಪ್ರತಿಭೆಯ ವಿಕಸನಕ್ಕೆ ಅಡ್ಡಿ ತರಬೇಡಿ ಎಂಬುದೇ `ಸ್ವರೂಪ'ದ ಧ್ಯೇಯವಾಕ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.