2001ರ ನಂತರದಲ್ಲಿ ವಾಣಿಜ್ಯೋದ್ದೇಶದ (ಖಾಸಗಿ) ಎಫ್.ಎಂ ರೇಡಿಯೊಗಳ ಪ್ರಾರಂಭದೊಂದಿಗೆ ‘ರೇಡಿಯೊ ಜಾಕಿ’ (ರೇಡಿಯೊ ನಿರೂಪಕರು)ಗಳ ಹೊಸ ಯುಗ ಕನ್ನಡದಲ್ಲೂ ಶುರುವಾಯಿತೆನ್ನಬೇಕು.
ಅದುವರೆಗಿನ ಸಾರ್ವಜನಿಕ ಪ್ರಸಾರ ಮಾಧ್ಯಮದಲ್ಲಿನ ಕಾರ್ಯಕ್ರಮಗಳು ಸಾಂಪ್ರದಾಯಿಕ ರೂಪದಲ್ಲಿದ್ದು ಪ್ರಸಾರ ಸಮಯದಲ್ಲಿ ಧ್ವನಿಮುದ್ರಿತ ಕಾರ್ಯಕ್ರಮಗಳ ಪ್ರಾರಂಭ ಮತ್ತು ಅಂತ್ಯದಲ್ಲಿ ಉದ್ಘೋಷಕರು ಕಾರ್ಯಕ್ರಮದ ಶೀರ್ಷಿಕೆ, ಭಾಗವಹಿಸಿದವರ, ಸಾಹಿತ್ಯ ರಚಿಸಿದವರ ಮತ್ತು ನಿರ್ಮಾಪಕರ ಹೆಸರು ಹೇಳುವುದು - ಮೊದಲಾದ ಸೀಮಿತ ಕಾರ್ಯಗಳನ್ನಷ್ಟೇ ನಿರ್ವಹಿಸಬೇಕಾಗಿದ್ದಿತು ಎನ್ನುವುದು ಸಾಮಾನ್ಯ ಗ್ರಹಿಕೆ.
ಸಾಂಪ್ರದಾಯಿಕವಾಗಿ ಇದು ಹೀಗೆಯೇ ಇತ್ತಾದರೂ, ಉದ್ಘೋಷಕರು ನಿರ್ಮಾಣದ ಹಂತದಲ್ಲಿ ಅದರ ಸಾಹಿತ್ಯಕ್ಕೆ ಧ್ವನಿ ನೀಡಬೇಕಾಗುತ್ತಿತ್ತು. ಬಹಳಷ್ಟು ಉದ್ಘೋಷಕರು ಸ್ವತಃ ಉತ್ತಮ ಸಾಹಿತ್ಯ ರಚನೆಯ ಸಾಮರ್ಥ್ಯವನ್ನೂ ಹೊಂದಿದ್ದರು ಮತ್ತು ಕಾರ್ಯಕ್ರಮಗಳಿಗೆ ಬೇಕಾದ ಸಾಹಿತ್ಯವನ್ನೂ ಒದಗಿಸುತ್ತಿದ್ದರು. ಸಾರ್ವಜನಿಕ ಪ್ರಸಾರ ಸೇವೆಯ ಮಟ್ಟಿಗೆ ಇಂದಿಗೂ ಇದು ನಿಜ.
ತಮ್ಮ ಸುತ್ತಲ ನಿತ್ಯದ ಸಂಗತಿಗಳಿಗೆ ಸ್ಪಂದಿಸುವ ಸಂವೇದನಾಶೀಲ ಮನೋಧರ್ಮ ಮತ್ತು ಧ್ವನಿಯೊಂದಿಗೆ ತಮ್ಮ ಸೀಮಿತ ಕಾರ್ಯ ವ್ಯಾಪ್ತಿಯಲ್ಲಿಯೇ ಉದ್ಘೋಷಕರು ತಮ್ಮ ಛಾಪು ಮೂಡಿಸಿ ಪ್ರಸಿದ್ಧರಾಗಿದ್ದರು. ಕಾರ್ಯಕ್ರಮದ ನಿರ್ಮಾಪಕರು ಸಾಹಿತ್ಯವನ್ನು ಗಮನಿಸಿ, ಅದಕ್ಕೆ ಹೊಂದುವ ಸೂಕ್ತ ಮನೋಧರ್ಮದ ಉದ್ಘೋಷಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದುದೂ ಉಂಟು.
ವಾಣಿಜ್ಯೋದ್ದೇಶದ ಖಾಸಗಿ ಎಫ್.ಎಂ ರೇಡಿಯೊಗಳ ಪ್ರಾರಂಭದೊಂದಿಗೆ, ಪ್ರಸಾರ ಮಾಧ್ಯಮಗಳು ಖರೀದಿ ಸಾಮರ್ಥ್ಯವುಳ್ಳ ಯುವ ಜನತೆಯನ್ನು ನೇರವಾಗಿ ಮತ್ತು ಯಶಸ್ವಿಯಾಗಿ ತಲುಪಬೇಕೆನ್ನುವ ಉದ್ದೇಶದಿಂದ ಪಾಶ್ಚಿಮಾತ್ಯ ಎಫ್.ಎಂ ರೇಡಿಯೊ ಪ್ರಸಾರ ಮಾದರಿಯನ್ನು ಸಾರಾಸಗಟಾಗಿ ಭಾರತೀಯ ಸಂದರ್ಭದಲ್ಲಿ ಅಳವಡಿಸುವ ಪ್ರಯತ್ನ ಮಾಡಲಾಯಿತು. ಹಿಂದೊಂದು ಕಾಲಕ್ಕೆ ನಿತ್ಯ ಜೀವನದಲ್ಲಿ ಅತ್ಯಗತ್ಯ ಎನ್ನಿಸಿಕೊಂಡಿದ್ದ ರೇಡಿಯೊ, ಟೆಲಿವಿಷನ್ ಬಂದ ನಂತರ ಸ್ವಲ್ಪ ಮಟ್ಟಿಗೆ ಹಿಂದೆ ಸರಿದಿದ್ದು ಇದೀಗ ಮತ್ತೆ ‘ಲೈಫ್‌ಸ್ಟೈಲ್ ಗ್ಯಾಡ್ಜೆಟ್’ (ಜೀವನ ಶೈಲಿಯ ಉಪಕರಣ) ಎನ್ನುವ ವ್ಯಾಪಾರೀಕರಣದೊಂದಿಗೆ ಪುನರುತ್ಥಾನವನ್ನು ಪಡೆಯಿತು.
ಎಫ್.ಎಂ ಎಂದರೆ ಫ್ರೀಕ್ವೆನ್ಸಿ ಮಾಡ್ಯುಲೇಷನ್ ಎನ್ನುವ ಪ್ರಸಾರ ತಾಂತ್ರಿಕತೆ ಎಂಬ ತಿಳಿವಿನ ಬದಲು ಎಫ್.ಎಂ ಎಂದರೆ ರೇಡಿಯೊ ಎನ್ನುವ ಸರಳ ಸಮೀಕರಣ ಮೂಡಿತು. ಈ ಹೊತ್ತಿಗೆ ಭಾರತದಲ್ಲಿ ತನ್ನ ಸ್ಪಷ್ಟ ಪ್ರಭಾವವನ್ನು ತೋರಲು ಆರಂಭಿಸಿದ್ದ ಜಾಗತೀಕರಣದ ಕಾರಣದಿಂದಾಗಿ ರೇಡಿಯೊದ ಭಾಷೆಯೂ ಬದಲಾಯಿತು. ಅದುವರೆಗೂ ಕೇವಲ ಕಲಿತವರ ಭಾಷೆಯಾಗಿದ್ದ ಇಂಗ್ಲಿಷ್, ಸಾಮಾನ್ಯರ ಭಾಷೆಯಾಗಿ, ಸಂಪರ್ಕ ಭಾಷೆಯಾಗಿ ರೂಪುಗೊಂಡಿದ್ದರ ಹಿನ್ನೆಲೆಯಲ್ಲಿ ಬಾನುಲಿಯಲ್ಲಿ ಕನ್ನಡ ಭಾಷೆ ತನ್ನ ಸ್ವರೂಪದಲ್ಲಿ ಅನಿವಾರ್ಯ(?) ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿ ಬಂತು. ಬೆಂಗಳೂರಿನಂಥ ನಗರ ಪ್ರದೇಶಗಳಲ್ಲಿ ಇದರ ಪ್ರಭಾವವನ್ನು ಹೆಚ್ಚಾಗಿ ಗ್ರಹಿಸಬಹುದು.
ಅನ್ಯ ಭಾಷೆಗಳ ನುಡಿಗಟ್ಟುಗಳನ್ನು, ವಾಕ್ಯಾಂಶಗಳನ್ನು ಬಳಸಿ ಮಾತನಾಡುವ ಸೌಲಭ್ಯವನ್ನು ಕನ್ನಡದ ‘ಆಡುನುಡಿ’ ಈಗಾಗಲೇ ರೂಢಿಸಿಕೊಂಡಿತ್ತಾದರೂ, ಮಾಧ್ಯಮವೊಂದರ ಭಾಷೆಯಲ್ಲಿ ಈ ಬದಲಾವಣೆ ಅಲ್ಪ ಪ್ರಮಾಣದಲ್ಲಿತ್ತು. ಎಫ್.ಎಂ ರೇಡಿಯೊ ಬಂದ ನಂತರ ಆಂಗ್ಲೀಕೃತ ಕನ್ನಡದ ಕೃತಕತೆಯನ್ನೇ ‘ಸಹಜ’ ಎನ್ನುವಂತೆ ಜನರೂ ಸ್ವೀಕರಿಸತೊಡಗಿದ್ದು ಒಂದು ಅಚ್ಚರಿಯ, ಅಧ್ಯಯನ ಯೋಗ್ಯ ಸಂಗತಿ. ಬೆಂಗಳೂರು ಒಂದು ಕಾಸ್ಮೊಪಾಲಿಟನ್ (ಬಹುಸಂಸ್ಕೃತಿ) ವಾತಾವರಣ ಎನ್ನುವುದನ್ನು ಹೆಚ್ಚುಹೆಚ್ಚಾಗಿ ಬಿಂಬಿಸಿ ಕನ್ನಡದ ‘ಆಡುನುಡಿ’ಯೆಂದರೆ ಎಫ್.ಎಂ ವಾಹಿನಿಗಳ ಕನ್ನಡವೆಂದೇ ಜನರನ್ನು ಪ್ರಭಾವಿಸುವ ಪರೋಕ್ಷ ಪ್ರಯತ್ನಗಳೂ ನಡೆದವು.
ಪ್ರತಿ ರೇಡಿಯೊ ನಿರೂಪಕರೂ ತಮ್ಮದೇ ಆದ ‘ಮ್ಯಾನರಿಸಂ’ಗಳನ್ನು, ರೂಪಿಸಿಕೊಂಡು ತಮ್ಮ ಛಾಪು ಮೂಡಿಸುವ ಹುನ್ನಾರದಲ್ಲಿ ಇಂತಹ ಅನೇಕ ಅನಗತ್ಯ(?) ಆಂಗ್ಲೀಕೃತ ನುಡಿಗಟ್ಟು ಮತ್ತು ವಾಕ್ಯಾಂಶಗಳನ್ನು ಕನ್ನಡಕ್ಕೆ ಕೊಡುಗೆಯಾಗಿ (!) ನೀಡಿದರು. ಕನ್ನಡದ ದೇಹ, ಆಂಗ್ಲ ಮನಸ್ಸುಗಳ ನಿರೂಪಕರು ಅದುವರೆಗಿನ ಕನ್ನಡದ ಭಾಷಾ ಸಂಸ್ಕೃತಿಯನ್ನು, ನುಡಿ ಸಂಸ್ಕೃತಿಯನ್ನು ಅರಿಯಲಾರದೆ ಹೋದರೇನೋ ಎಂದು ಅನಿಸುವುದುಂಟು.
ಸಾಮಾನ್ಯವಾಗಿ ಎಲ್ಲ ಸಾಂಪ್ರದಾಯಿಕ ಮೌಲ್ಯಗಳನ್ನು, ವಿಧಾನಗಳನ್ನು ಧಿಕ್ಕರಿಸುವ ಮನಃಸ್ಥಿತಿಯ ಯುವಪೀಳಿಗೆಯ ರೀತಿ-ನೀತಿಗಳೇ ಒಂದು ಬಗೆಯಲ್ಲಿ ಇಂಥ ಬದಲಾವಣೆಗಳಿಗೆ ಕಾರಣ. ಕೇವಲ ಆಂಗ್ಲಭಾಷೆಯ ಬಳಕೆಯೇ ಈ ಬದಲಾವಣೆಗಳಿಗೆಲ್ಲ ಕಾರಣವೆನ್ನುವಂತಿಲ್ಲ. ಭಾರತೀಯ ಮೂಲದ್ದೇ ಆದ ಹಿಂದಿ ಭಾಷೆಯ ವ್ಯಾಪಕ ಬಳಕೆಯಿಂದಾಗಿಯೂ ಕನ್ನಡದ ಆಡುನುಡಿಯಲ್ಲಿ ಹೀಗಾಗಿ ಇರುವುದುಂಟು.
ಕನ್ನಡವನ್ನೇ ಮನೆಮಾತಾಗಿ ಹೊಂದಿರುವ ನಿರೂಪಕರೂ, ನಿತ್ಯದ ವ್ಯಾವಹಾರಿಕ ಅಗತ್ಯಗಳನ್ನು ಮೀರಿದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮಹತ್ವದ ಸಂದರ್ಭಗಳಿಗೆ ಅಗತ್ಯವಾದ ಕನ್ನಡವನ್ನು ಸಮರ್ಥವಾಗಿ ರೂಪಿಸಿಕೊಳ್ಳಲಾಗದೆ ಮತ್ತು ಎಫ್.ಎಂ ರೇಡಿಯೊದ ಪ್ರಸಾರದಲ್ಲಿ ಪೂರ್ವಸಿದ್ಧವಾದ ನಿರೂಪಣೆಯ ಬರಹದ ಬಳಕೆ ಇಲ್ಲದೆ ಕೇವಲ ಸಾಂದರ್ಭಿಕವಾಗಿ ನಿರೂಪಣೆಯನ್ನು ರೂಪಿಸುವ ನೇರಪ್ರಸಾರದ ಸಂದರ್ಭಗಳು ನಿರ್ಮಾಣವಾದುದರಿಂದ, ನಿರೂಪಕರ ಮಾತುಗಳಲ್ಲಿ ತಡವರಿಕೆ, ಅಸಂಬದ್ಧತೆ ಹೆಚ್ಚಾದವು.
ಖಾಸಗಿ ಎಫ್.ಎಂ ರೇಡಿಯೊ ಎಂತಹ ಗಂಭೀರ ವಿಷಯಗಳನ್ನೂ ಬಹಳ ತೆಳುವಾಗಿ, (ಅಪ) ಹಾಸ್ಯಮಿಶ್ರಿತವಾಗಿ ಪ್ರಸ್ತುತ ಪಡಿಸುವಂಥ ಪ್ರಯತ್ನಗಳನ್ನು ಮಾಡಿ ಕೇಳುಗರ ಕೋಪಕ್ಕೆ ಗುರಿಯಾಗಿರುವ ಸಂದರ್ಭಗಳೂ ಉಂಟು. ‘ಚಿಲ್ ಮಾಡಿ’, ‘ನಿಮ್ಮ ಮೆಸೇಜ್ ಸೆಂಡ್ ಮಾಡಿ’ ಎನ್ನುವಂಥ ‘ಹೈಬ್ರಿಡ್’ ಭಾಷೆ ಕೇಳಲು ವಿಭಿನ್ನವಾಗಿರುವುದರಿಂದ ಮತ್ತು ಸಂಪ್ರದಾಯವನ್ನು ಮುರಿಯುವುದರಿಂದ ಯುವಸಮುದಾಯಕ್ಕೆ ಖುಷಿ ನೀಡುವುದೇನೋ ನಿಜವೇ, ಒಪ್ಪೋಣ.
ಆದರೆ, ಇದರಿಂದಾಗಿ ಇಂತಹ ಹೈಬ್ರಿಡ್ ನುಡಿಗಟ್ಟುಗಳಲ್ಲಿನ ಇಂಗ್ಲಿಷ್ ಪದಗಳ ಬಳಕೆಯ ಅರ್ಥ/ ಉದ್ದೇಶ, ಈ ಮಾತುಗಳ ಆಚೆ ಇನ್ನಾವುದೋ ನಿರ್ದಿಷ್ಟ ಸಂದರ್ಭದೊಂದಿಗೆ ತಳುಕುಹಾಕಿಕೊಂಡಿರುತ್ತದೆ ಎನ್ನುವುದು ತಕ್ಷಣಕ್ಕೆ ನಮ್ಮ ಗಮನಕ್ಕೆ ಬರುವುದಿಲ್ಲ. ಇಂತಹ ಸಂದರ್ಭಗಳಲ್ಲೆಲ್ಲ ಜಾಹೀರಾತು ಜಗತ್ತಿನ ಉದ್ದೇಶಗಳ ಕುರಿತೂ ಯೋಚಿಸುವಂತಾಗುತ್ತದೆ.
ಭಾಷೆಯೊಂದು ಬೇರೆ ಭಾಷೆಯ ಪದಗಳನ್ನು ಬಳಸಿಯೇ ಬೆಳೆಯಬೇಕು ಎನ್ನುವುದನ್ನು ಸಾಮಾನ್ಯಾರ್ಥದಲ್ಲಿ ಎಲ್ಲರೂ ಒಪ್ಪಬಹುದು. ಕ್ರಿಯಾಪದಗಳು ಹಾಗೂ ವಿಭಕ್ತಿ ಪ್ರಯೋಗಗಳು ಆಯಾ ಭಾಷೆಗೆ ವಿಶಿಷ್ಟವಾಗಿರುವುದರಿಂದ ಭಾಷಾ ಸ್ವರೂಪವನ್ನು ಉಳಿಸಿಕೊಳ್ಳಲು ಇವುಗಳನ್ನಾದರೂ ವಿರೂಪಗೊಳಿಸದೆ ಬಳಸುವ ಪ್ರಯತ್ನಗಳನ್ನು ಮಾಡುವುದು ಒಳಿತು. ಮೆಸೇಜ್ ಎನ್ನುವುದಕ್ಕೆ ‘ಸಂದೇಶ’, ‘ಸೆಂಡ್ ಮಾಡಿ’ ಎನ್ನುವುದಕ್ಕೆ ‘ಕಳಿಸಿ’, ‘ರವಾನಿಸಿ’ ಅಥವಾ ‘ಕಳಿಸಿ ಕೊಡಿ’ ಎನ್ನುವ ಕನ್ನಡದ ಸುಲಭ ಶಬ್ದವಿದ್ದರೂ ಹೈಬ್ರಿಡ್ ಭಾಷೆ ಬಳಸುವ ಅಗತ್ಯ ಏನು, ನಿರೂಪಕರು ಇಂಥವನ್ನು ಬಳಸಲು ಒಲವು ಏಕೆ ತೋರುತ್ತಾರೆ ಎಂಬುದರ ಕುರಿತು ಮಾಧ್ಯಮ ವಿದ್ಯಾರ್ಥಿಗಳು ಒಂದು ಕಿರು ಸಂಶೋಧನೆಯನ್ನೇ ಕೈಗೊಳ್ಳಬಹುದು.
ಪ್ರತಿಯೊಬ್ಬ ನಿರೂಪಕನೂ ತಾನೊಬ್ಬ ‘ಟ್ರೆಂಡ್ ಸೆಟರ್’ ಆಗಬೇಕೆನ್ನುವ ಮಹದುದ್ದೇಶವನ್ನೇ ಹೊಂದಿರುತ್ತಾನೆ. ಈ ಪ್ರಯತ್ನದಲ್ಲಿ ತಾನು ಇತರರಿಗಿಂತಲೂ ‘ವಿಭಿನ್ನ’, ‘ವಿಶಿಷ್ಟ’ ಸಾಮರ್ಥ್ಯವನ್ನು ಹೊಂದಿದ್ದೇನೆ ಎನ್ನುವುದನ್ನು ಕೇಳುಗರ ಗಮನಕ್ಕೆ ತರಬಯಸಿ ತನ್ನ ಮನಃಸ್ಥಿತಿಯ, ಧೋರಣೆಯ, ಕಲ್ಪನೆಯ ಮತ್ತು ಸಾಮರ್ಥ್ಯದ ಅನುಗುಣವಾಗಿ ಕೆಲವೊಂದು ವಿಶಿಷ್ಟ ‘ನುಡಿರೂಢಿ’ (ವೋಕಲ್ ಮ್ಯಾನರಿಸಂ)ಗಳನ್ನು ರೂಪಿಸಿಕೊಳ್ಳುತ್ತಾನೆ.
ಅದು ಕನ್ನಡದ ಆಡುನುಡಿಯ ಸೌಂದರ್ಯಕ್ಕೆ ಪೂರಕವಾಗಿದೆಯೋ – ಮಾರಕವಾಗಿದೆಯೋ ಗಮನಿಸುವ, ಆನಂತರದಲ್ಲಷ್ಟೇ ಅದನ್ನು ಅಳವಡಿಸಿಕೊಳ್ಳುವ ಸೂಕ್ಷ್ಮಜ್ಞತೆಯನ್ನು ಎಲ್ಲ ನಿರೂಪಕರೂ ಹೊಂದಿರುತ್ತಾರೆಂದು ಹೇಳಲು ಸಾಧ್ಯವಿಲ್ಲ. ಕೇವಲ ಇಂತಹ ವಿಭಿನ್ನ ವೈಯಕ್ತಿಕ ‘ನುಡಿರೂಢಿ’ಗಳಿಂದಲೇ ನಿರೂಪಕರು ತಮ್ಮ ವೃತ್ತಿಯಲ್ಲಿ ಸಫಲರಾಗುತ್ತಾರೆನ್ನುವುದು ಸಂಪೂರ್ಣ ಸುಳ್ಳು.
ಅವರು ನಿರ್ವಹಿಸುವ ಕೆಲಸದಲ್ಲಿನ ತಾದಾತ್ಮ್ಯ, ಪ್ರಸ್ತುತಪಡಿಸುವ ವಿಷಯದ ಕುರಿತು ಅವರಿಗಿರುವ ವಿಸ್ತೃತ ಸಂಶೋಧಿತ ಮಾಹಿತಿ, ಆ ವಿಷಯದ ಕುರಿತು ಅವರಿಗಿರುವ ಸಂವೇದನೆ, ಕೇಳುಗರ ಮಾನಸಿಕತೆಯ ಕುರಿತು ಅವರಿಗಿರುವ ಕಾಳಜಿ - ಈ ಮೊದಲಾದ ಗಂಭೀರ ವಿಷಯಗಳ ಕಾರಣ ಅವರ ಮನಸ್ಸಿನಲ್ಲಿ ಮೂಡುವ ಅಭಿಪ್ರಾಯ, ಸಮರ್ಪಕ ನುಡಿಗಟ್ಟುಗಳೊಂದಿಗೆ ಮಾತಿನ ಸ್ವರೂಪ ಪಡೆದು ತನ್ನ ಉದ್ದೇಶವನ್ನು ಸಾಧಿಸಲು ಪ್ರಯತ್ನಿಸುತ್ತದೆ.
ಕೇಳುಗರ ಅಗತ್ಯ, ಸಂವೇದನೆ, ವಿಷಯದ ಕುರಿತು ಅವರಿಗಿರುವ ಆಸಕ್ತಿ, ಕೇಳಲು ಅವರಿಗೆ ದೊರಕುತ್ತಿರುವ ಸಮಯ- ಈ ಮೊದಲಾದ ಹತ್ತು ಹಲವು ಸಂಗತಿಗಳನ್ನು ಆಧರಿಸಿ ಸಂವಹನ ಸಾಧ್ಯ. ನಿರೂಪಕರಿಗೆ ತಾವು ‘ಟ್ರೆಂಡ್ ಸೆಟರ್’ ಆಗಬೇಕೆನ್ನುವ ಉತ್ಸಾಹವಿರುವುದು ಸರಿಯೇ. ಆದರೆ, ಅಂತಹ ಪ್ರಯತ್ನ ಮಾನ್ಯವಾಗಲು ಕೆಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಘನೋದ್ದೇಶಗಳನ್ನು ಪೂರೈಸಬೇಕಾಗುತ್ತದೆ ಎನ್ನುವುದನ್ನು ನಿರೂಪಕರು ಮರೆಯುವಂತಿಲ್ಲ. ಯಾವತ್ತಿಗೂ ‘ಅಸಲು’ ಮಾತ್ರ ವೃದ್ಧಿಯಾಗಬಲ್ಲುದೇ ಹೊರತು ‘ನಕಲಿ’ಯಲ್ಲ.
99860 01369
ಮುಂದಿನವಾರ: ಅನಪೇಕ್ಷಿತ ನುಡಿರೂಢಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.