ಮಕಾವು: ಭಾರತದ ಕಿದಂಬಿ ಶ್ರೀಕಾಂತ್ ಅವರು ಮಕಾವು ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಎಂಟರ ಘಟ್ಟದಲ್ಲಿ ಶುಕ್ರವಾರ ಹೊರಬಿದ್ದರು. ಆದರೆ ಮಹಿಳೆಯರ ಡಬಲ್ಸ್‌ನಲ್ಲಿ ತ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.
ಮೇ ತಿಂಗಳಲ್ಲಿ ಗಾಯಾಳಾದ ನಂತರ ಈ ಟೂರ್ನಿಯ ಮೂಲಕ ಪುನರಾಗಮನ ಮಾಡಿದ ಶ್ರೀಕಾಂತ್, ಹಾಂಗ್‌ಕಾಂಗ್‌ನ ಎನ್ಜಿ ಕಾ ಲೊಂಗ್ ಆ್ಯಂಗಸ್ ಎದುರು 16–21, 12–21ರಲ್ಲಿ ಸೋತರು. ಆರನೇ ಶ್ರೇಯಾಂಕ ಪಡೆದಿದ್ದ ಶ್ರೀಕಾಂತ್ ಕೇವಲ 31 ನಿಮಿಷಗಳಲ್ಲಿ ಶರಣಾದರು.
ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ತ್ರೀಸಾ ಮತ್ತು ಗಾಯತ್ರಿ 21–12, 21–17 ರಿಂದ ಆರನೇ ಶ್ರೇಯಾಂಕ ಪಡೆದಿದ್ದ ಚೀನಾ ತೈಪಿಯ ಹ್ಸು ಯಿನ್–ಹುಯಿ–ಲೊನ್ ಝಿ ಯುನ್ ಜೋಡಿಯನ್ನು ಸೋಲಿಸಿತು.
ವಿಶ್ವ ಕ್ರಮಾಂಕದಲ್ಲಿ 23ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿಯರು ಸೆಮಿಫೈನಲ್‌ನಲ್ಲಿ ಚೀನಾ ತೈಪಿಯ ಇನ್ನೊಂದು ಜೋಡಿ ಮತ್ತು ಎಂಟನೇ ಶ್ರೇಯಾಂಕದ ಹ್ಸಿ ಪೀ ಶಾನ್– ಹುಂಗ್ ಎನ್–ತ್ಸು ಅವರನ್ನು ಎದುರಿಸಲಿದ್ದಾರೆ.
ಮೇ–ಜೂನ್‌ನಲ್ಲಿ ನಡೆದ ಸಿಂಗಪುರ ಓಪನ್ ಸೂಪರ್ 750 ಟೂರ್ನಿಯಲ್ಲೂ ತ್ರೀಸಾ–ಗಾಯತ್ರಿ ಜೋಡಿ ಸೆಮಿಫೈನಲ್ ತಲುಪಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.