ಬೆಂಗಳೂರು: ಐದು ತಿಂಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ಗೌತಮ್ ಗಂಭೀರ್ ಮತ್ತು ಅವರ ಸ್ಥಾನಕ್ಕೇರಿದ್ದ ಶ್ರೇಯಸ್ ಅಯ್ಯರ್ ಶನಿವಾರ ಚಿನ್ನಸ್ವಾಮಿ ಅಂಗಳದಲ್ಲಿ ಮುಖಾಮುಖಿಯಾಗಲಿದ್ದಾರೆ.
ಇಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಗೌತಮ್ ನಾಯಕತ್ವದ ದೆಹಲಿ ಮತ್ತು ಶ್ರೇಯಸ್ ಮುಂದಾಳತ್ವದ ಮುಂಬೈ ಹಣಾಹಣಿ ನಡೆಸಲಿವೆ. ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಮುಂಬೈ ತಂಡವು ಹೈದರಾಬಾದ್ ವಿರುದ್ಧ; ಎರಡನೇ ಸೆಮಿಯಲ್ಲಿ ದೆಹಲಿ ತಂಡವು ಜಾರ್ಖಂಡ್ ಎದುರು ಗೆದ್ದಿದ್ದವು.
ಆದರೆ ಈ ಪಂದ್ಯದಲ್ಲಿ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಅವರು ಲಭ್ಯರಿಲ್ಲ. ಅವರು ವಿಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಆಡಲು ಗುವಾಹಟಿಗೆ ತೆರಳಿದ್ದಾರೆ. ಆದರೆ ಉತ್ತಮ ಲಯದಲ್ಲಿರುವ ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶ್ರೇಯಸ್, ಸೂರ್ಯಕುಮಾರ್ ಯಾದವ್, ಆದಿತ್ಯ ಅವರ ಬಲವಿದೆ. ಬ್ಯಾಟಿಂಗ್‌ನಲ್ಲಿ ದೆಹಲಿಗಿಂತಲೂ ಮುಂಬೈ ಬಲಿಷ್ಠವಾಗಿದೆ. ಗಂಭೀರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಉನ್ಮುಕ್ತ್ ಚಾಂದ್, ಧ್ರುವ್ ಶೋರೆ ಮತ್ತು ನಿತೀಶ್ ರಾಣಾ ಕೂಡ ಉತ್ತಮ ಕಾಣಿಕೆ ನೀಡಿದ್ದಾರೆ. ದೆಹಲಿ ಬೌಲಿಂಗ್ ವಿಭಾಗವು ಉತ್ತಮವಾಗಿದೆ. ನವದೀಪ್ ಸೈನಿ, ಪವನ್ ನೇಗಿ, ಎಡಗೈ ಮಧ್ಯಮವೇಗಿ ಕುಲವಂತ ಖೆಜ್ರೋಲಿಯಾ ಅವರು ನಾಕೌಟ್ ಹಂತದಲ್ಲಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದವರು. ಫೈನಲ್‌ನಲ್ಲಿಯೂ ತಮ್ಮ ಮೋಡಿ ಮುಂದುವರಿಸುವ ನಿರೀಕ್ಷೆ ಇದೆ. ಆದರೆ ಮುಂಬೈನ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ವಿಶೇಷ ತಂತ್ರ ರೂಪಿಸುವ ಸವಾಲು ಕೂಡ ಇವರ ಮುಂದಿದೆ. ಮುಂಬೈನ ಬೌಲರ್‌ಗಳಾದ ತುಷಾರ್ ದೇಶಪಾಂಡೆ, ಧವಳ್ ಕುಲಕರ್ಣಿ, ಶಿವಂ ದುಬೆ, ಶಂಸ್ ಮುಲಾನಿ ಅವರು ಪಂದ್ಯಕ್ಕೆ ತಿರುವು ನೀಡಬಲ್ಲ ಸಮರ್ಥರು. ಅವರನ್ನು ಎದುರಿಸಲು ಕೂಡ ದೆಹಲಿ ಬ್ಯಾಟ್ಸ್‌ಮನ್‌ಗಳು ಸಿದ್ಧಗೊಳ್ಳಬೇಕಿದೆ.
ಸೆಮಿಫೈನಲ್‌ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಎದುರಿಸುವಾಗ ಭುಜದ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಪೃಥ್ವಿ ಶಾ ಚೇತರಿಸಿಕೊಂಡಿದ್ದಾರೆಂದು ತಂಡದ ಮೂಲಗಳು ಹೇಳಿವೆ. ಆದರೆ ಅವರು ಕಣಕ್ಕಿಳಿಯುವುದು ಶನಿವಾರ ಬೆಳಿಗ್ಗೆಯೇ ಖಚಿತವಾಗಲಿದೆ.
ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಮುಂಬೈ ಎರಡು ಬಾರಿ ಮತ್ತು ದೆಹಲಿ ಒಂದು ಬಾರಿ ಪ್ರಶಸ್ತಿಯನ್ನು ಗೆದ್ದಿವೆ. ಹೋದ ವರ್ಷದ ರಣಜಿ ಟ್ರೋಫಿ ಫೈನಲ್‌ನಲ್ಲಿ ದೆಹಲಿ ಸೋತಿತ್ತು. ಇದೀಗ ದೇಶಿ ಏಕದಿನ ಕ್ರಿಕೆಟ್‌ನ ‘ರಣಜಿ ಟ್ರೋಫಿ’ಯನ್ನು ಗೆದ್ದು ಋತುವಿನಲ್ಲಿ ಶುಭಾರಂಭ ಮಾಡುವತ್ತ ಚಿತ್ತ ನೆಟ್ಟಿದೆ. ಮುಂಬೈ ಕೂಡ ತನ್ನ ಗತವೈಭವವದತ್ತ ಮರಳಲು ಚಿನ್ನಸ್ವಾಮಿ ಅಂಗಳದಲ್ಲಿ ವಿಜಯವೇದಿಕೆ ಏರುವ ಉತ್ಸಾಹದಲ್ಲಿದೆ. ವಿಜಯದಶಮಿಯ ಸಂಭ್ರಮದ ಗುಂಗಿನಲ್ಲಿರುವ ಕ್ರಿಕೆಟ್‌ಪ್ರೇಮಿಗಳಿಗೆ ಎರಡೂ ‘ಮದಗಜ’ಗಳ ಹೋರಾಟ ನೋಡುವ ಅವಕಾಶ ಸಿಗಲಿದೆ.
ತಂಡಗಳು ಇಂತಿವೆ:
ಮುಂಬೈ: ಶ್ರೇಯಸ್ ಅಯ್ಯರ್ (ನಾಯಕ), ಆದಿತ್ಯ ತಾರೆ (ವಿಕೆಟ್‌ಕೀಪರ್), ಪೃಥ್ವಿ ಶಾ, ಅಜಿಂಕ್ಯ ರಹಾನೆ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಶಂಸ್ ಮುಲಾನಿ, ರಾಯಸ್ಟನ್ ದಿಯಾಸ್, ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಜೈ ಗೋಕುಲ್ ಬಿಸ್ತಾ, ಸಿದ್ಧೇಶ್ ಲಾಡ್, ಏಕನಾಥ್ ಕೆರ್ಕರ್, ಆಕಾಶ್ ಪಾರಕರ್, ವಿಜಯ್ ಗೊಹಿಲ್, ಅಖಿಲ್ ಹೆರ್ವಾಡ್ಕರ್, ಶುಭಂ ರೆನೈನ್,
ದೆಹಲಿ: ಗೌತಮ್ ಗಂಭೀರ್ (ನಾಯಕ), ಉನ್ಮುಕ್ತ್ ಚಾಂದ್ (ವಿಕೆಟ್‌ಕೀಪರ್), ಧ್ರುವ ಶೋರೆ, ನಿತೀಶ ರಾಣಾ, ಹಿಮ್ಮತ್ ಸಿಂಗ್, ಪ್ರಾಂಶು ವಿಜಯನ್, ಸುಬೋಧ್ ಭಾಟಿ, ಲಲಿತ್ ಯಾದವ್, ಪವನ್ ನೇಗಿ, ನವದೀಪ್ ಸೈನಿ, ಕುಲವಂತ ಖೆಜ್ರೋಲಿಯಾ, ಹಿತೇನ್ ದಲಾಲ್, ಗೌರವ್ ಕುಮಾರ್, ಮನನ್ ಶರ್ಮಾ, ಸಿಮ್ರಜೀತ್ ಸಿಂಗ್. ಲಕ್ಷ್ಯ ತರೈರಾ.
ಆರಂಭ: ಬೆಳಿಗ್ಗೆ 9
ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್
***
ಸೈನಿ ಮಿಂಚು: ದೆಹಲಿಗೆ ಜಯ
ದೆಹಲಿ ತಂಡವು ಗುರುವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಎರಡು ವಿಕೆಟ್‌ಗಳಿಂದ ಜಾರ್ಖಂಡ್ ವಿರುದ್ಧ ಗೆದ್ದಿತು.
ಸಂಕ್ಷಿಪ್ತ ಸ್ಕೋರ್
ಜಾರ್ಖಂಡ್: 48.5 ಓವರ್‌ಗಳಲ್ಲಿ 199 (ಆನಂದ್ ಸಿಂಗ್ 36, ವಿರಾಟ್ ಸಿಂಗ್ 71, ಶಾಬಾಜ್ ನದೀಂ 29, ನವದೀಪ್ ಸೈನಿ 30ಕ್ಕೆ4, ಕುಲವಂತ ಖೆಜ್ರೋಲಿಯಾ 31ಕ್ಕೆ2, ಸುಬೋಧ್ ಭಾಟಿ 34ಕ್ಕೆ1, ಪ್ರಾಂಶು ವಿಜಯನ್ 33ಕ್ಕೆ2, ನಿತೀಶ್ ರಾಣಾ 12ಕ್ಕೆ1) ದೆಹಲಿ: 49.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 200 (ಉನ್ಮುಕ್ತ್ ಚಾಂದ್ 17, ಗೌತಮ್ ಗಂಭೀರ್ 27, ಧ್ರುವ್ ಶೋರೆ 15, ನಿತೀಶ್ ರಾಣಾ 39, ಪವನ್ ನೇಗಿ ಔಟಾಗದೆ 39, ನವದೀಪ್ ಸೈನಿ ಔಟಾಗದೆ 13, ವರುಣ್ ಆ್ಯರನ್ 39ಕ್ಕೆ2, ಆನಂದ್ ಸಿಂಗ್ 39ಕ್ಕೆ3, ಶಾಬಾಜ್ ನದೀಂ 34ಕ್ಕೆ2) ಫಲಿತಾಂಶ: ದೆಹಲಿಗೆ 2 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.