ಬೆಂಗಳೂರು: ಇಂಡಿಯನ್ ವ್ಹೀಲ್ ಚೇರ್ ಟೆನಿಸ್ ಟೂರ್ (ಐಡಬ್ಲ್ಯೂಟಿಟಿ) ಗಾಲಿ ಕುರ್ಚಿ ಟೆನಿಸ್ ಟೂರ್ನಿಯು ಗುರುವಾರದಿಂದ ಆರಂಭವಾಗಲಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್‌ನಲ್ಲಿ ಟೂರ್ನಿ ನಡೆಯಲಿದೆ.
ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ 32 ಮತ್ತು ಮಹಿಳೆಯರ ವಿಭಾಗದಲ್ಲಿ 12 ಸ್ಪರ್ಧಿಗಳು ಆಡಲಿದ್ದಾರೆ. ಭಾನುವಾರ ಫೈನಲ್ ಪಂದ್ಯಗಳು ನಡೆಯಲಿವೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ಸ್ಪರ್ಧೆಗಳು ನಡೆಯಲಿವೆ. ಶ್ರೇಯಾಂಕಿತ ಆಟಗಾರರಾದ ಶೇಖರ್ ವೀರಸ್ವಾಮಿ, ಬಾಲಚಂದರ್ ಸುಬ್ರಮಣಿಯಂ, ಪ್ರತಿಮಾ, ಶಿಲ್ಪಾ ಅವರು ಆಡಲಿದ್ದಾರೆ.
ಬುಧವಾರ ಟೂರ್ನಿಯ ಟ್ರೋಫಿಯನ್ನು ಅನಾವರಣ ಮಾಡಿದ ಅಂತರರಾಷ್ಟ್ರೀಯ ಟೆನಿಸ್ ಪಟು ರೋಹನ್ ಬೋಪಣ್ಣ, ‘ಕೆಲವು ವರ್ಷಗಳಿಂದ ಗಾಲಿಕುರ್ಚಿ ಟೆನಿಸ್ ಉತ್ತಮವಾಗಿ ಬೆಳೆಯುತ್ತಿದೆ. ನಾನು ಗ್ರ್ಯಾನ್‌ಸ್ಲಾಂ ಟೂರ್ನಿಗಳನ್ನು ಆಡಲು ಹೋದಾಗ ಬೇರೆ ದೇಶಗಳಲ್ಲಿ ಗಾಲಿ ಕುರ್ಚಿ ಟೆನಿಸ್ ಸ್ಪರ್ಧೆಗಳನ್ನು ನೋಡಿದ್ದೇನೆ. ಉತ್ತಮ ಪ್ರೋತ್ಸಾಹ ಲಭಿಸಿದರೆ ಭಾರತದಲ್ಲಿಯೂ ಇನ್ನೂ ಹೆಚ್ಚಿನ ಬೆಳವಣಿಗೆ ಸಾಧ್ಯ’ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ಭಾರತ ತಂಡದ ಕೋಚ್ ಜೀಶನ್ ಅಲಿ, ‘ಈ ಮಾದರಿಯ ಟೆನಿಸ್‌ಗೆ ಬೆಂಬಲ ಲಭಿಸುತ್ತಿರುವುದು ಸಂತಸದಾಯಕ. ವರ್ಷದಿಂದ ವರ್ಷಕ್ಕೆ ಸ್ಪರ್ಧಿಗಳು ಹೆಚ್ಚಾಗುತ್ತಿದ್ದಾರೆ. ಇದು ಉತ್ತಮ ವಿಷಯ. ನಮ್ಮ ಕಡೆಯಿಂದ ಯಾವುದೇ ರೀತಿಯ ನೆರವು ನೀಡಲು ಸಿದ್ಧ’ ಎಂದರು.
ಟೂರ್ನಿಯನ್ನು ಆಯೋಜಿಸುತ್ತಿರುವ ಆಸ್ಥಾ ಸಂಸ್ಥೆಯ ಸಂಸ್ಥಾಪಕ ಸುನಿಲ್ ಜೈನ್, ರೆಫರಿ ಸಂತೋಷ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.