ನವದೆಹಲಿ: ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಅಂಕಿತಾ ರೈನಾ ಮತ್ತು ಪ್ರಜ್ಞೇಶ್ ಗುಣೇಶ್ವರನ್ ಅವರನ್ನು ಅಖಿಲ ಭಾರತ ಟೆನಿಸ್ ಸಂಸ್ಥೆಯು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಧ್ಯಾನ್‌ಚಂದ್ ಗೌರವಕ್ಕಾಗಿ ಬಲರಾಮ್ ಸಿಂಗ್ ಮತ್ತು ಎನ್ರಿಕೊ ಪಿಪರ್ನೊ ಅವರ ಹೆಸರುಗಳನ್ನು ಅಂತಿಮಗೊಳಿಸಿದೆ.
ಜಕಾರ್ತ ಮತ್ತು ಪಾಲೆಂಬಾಂಗ್‌ನಲ್ಲಿ ನಡೆದ 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಅಂಕಿತಾ ಮತ್ತು ಪ್ರಜ್ಞೇಶ್ ಇಬ್ಬರೂ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.
ಅಂಕಿತಾ ಈಗ ದೇಶದ ಉನ್ನತ ಕ್ರಮಾಂಕದ ಸಿಂಗಲ್ಸ್ (182) ಮತ್ತು ಡಬಲ್ಸ್ (95) ಆಟಗಾರ್ತಿಯಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಕ್ರೀಡಾಕೂಟದಲ್ಲಿ ಒಲಿಂಪಿಕ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
‘ಈ ವರ್ಷ ನಾವು ಅಂಕಿತಾ ಹಾಗೂ ಪ್ರಜ್ಞೇಶ್ ಅವರನ್ನು ಅರ್ಜುನ ಪ್ರಶಸ್ತಿಗೆ, ಬಲರಾಮ್ ಸಿಂಗ್ ಮತ್ತು ಎನ್ರಿಕೊ ಪಿಪರ್ನೊ ಅವರನ್ನು ಜೀವಮಾನ ಸಾಧನೆಗಾಗಿ ನೀಡುವ ಧ್ಯಾನ್‌ಚಂದ್ ಗೌರವಕ್ಕೆ ಶಿಫಾರಸು ಮಾಡಿದ್ದೇವೆ‘ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಟಿಪಿ ರ‍್ಯಾಂಕಿಂಗ್ ಪಟ್ಟಿಯಲ್ಲಿ 148ನೇ ಸ್ಥಾನದಲ್ಲಿರುವ ಚೆನ್ನೈನ 31 ವರ್ಷದ ಎಡಗೈ ಆಟಗಾರ ಪ್ರಜ್ಞೇಶ್, ದೇಶಕ್ಕಾಗಿ ಐದು ಡೇವಿಸ್ ಕಪ್ ಪಂದ್ಯಗಳನ್ನು ಆಡಿದ್ದಾರೆ.
ಬಲರಾಮ್ ಸಿಂಗ್ ಅವರು50 ವರ್ಷಗಳ ಕಾಲ ರಾಷ್ಟ್ರೀಯ ಟೆನಿಸ್ ಸಂಸ್ಥೆಯೊಂದಿಗೆ ಇದ್ದಾರೆ. 73 ವರ್ಷ ವಯಸ್ಸಿನ ಅವರು, 1989 (ದಕ್ಷಿಣ ಕೊರಿಯಾ) ಮತ್ತು 1990ರ (ಜಪಾನ್) ಡೇವಿಸ್ ಕಪ್ ಪಂದ್ಯಗಳಲ್ಲಿ ಭಾರತ ತಂಡಗಳಿಗೆ ತರಬೇತಿ ನೀಡಿದ್ದರು. ಪಿಪರ್ನೊ ಅವರು 1991-2001ರವರೆಗೆ ಡೇವಿಸ್ ಕಪ್ ತಂಡದ ಕೋಚ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.