ADVERTISEMENT

ಆಡಲು ನಿರಾಕರಿಸಿದ್ದೇನೆಂಬ ಆರೋಪ ಸರಿಯಲ್ಲ‍: ಐಎಟಿಎ ವಿರುದ್ಧ ಭೂಪತಿ ಆಕ್ರೋಶ

ಪಿಟಿಐ
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST
ಮಹೇಶ್‌ ಭೂಪತಿ
ಮಹೇಶ್‌ ಭೂಪತಿ   

ನವದೆಹಲಿ: ‘ನನ್ನನ್ನು ಭಾರತ ಡೇವಿಸ್‌ ಕಪ್‌ ತಂಡದ ನಾಯಕತ್ವದಿಂದ ಪದಚ್ಯುತಗೊಳಿಸಿದ್ದರಿಂದ ‌ಬೇಸರವಿಲ್ಲ. ಆದರೆ ನಾನು ರಾಷ್ಟ್ರೀಯ ತಂಡಕ್ಕೆ ಆಡಲು ಸಿದ್ಧನಿರಲಿಲ್ಲ ಎಂಬ ಆರೋಪ ಮಾತ್ರ ನನಗೆ ಸಮ್ಮತಾರ್ಹವಲ್ಲ’ ಎಂದು ಮಹೇಶ್‌ ಭೂಪತಿ ಹೇಳಿದ್ದಾರೆ.

ಭಾರತ ತಂಡದ ಯಶಸ್ವಿ ಟೆನಿಸ್‌ ಆಟಗಾರರಲ್ಲಿ ಒಬ್ಬರಾದ ಭೂಪತಿ, ‘ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ನಾನು ಅಲಭ್ಯನಿದ್ದೇನೆ ಎಂದು ಹೇಳಿಯೇ ಇಲ್ಲ’ ಎಂದು ಬುಧವಾರ ಸ್ಪಷ್ಟಪಡಿಸಿದರು.

ಭದ್ರತಾ ಕಳವಳದ ಹಿನ್ನೆಲೆಯಲ್ಲಿ ಈ ಡೇವಿಸ್‌ ಕಪ್‌ (ಏಷ್ಯಾ ಒಷಾನಿಯಾ ವಲಯ) ಪಂದ್ಯವನ್ನು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಇಸ್ಲಾಮಾಬಾದ್‌ನಿಂದ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ADVERTISEMENT

ಎಐಟಿಎ, ಭೂಪತಿ ಅವರ ಸ್ಥಾನಕ್ಕೆ ಮಾಜಿ ಡೇವಿಸ್‌ ಕಪ್‌ ಆಟಗಾರ ರೋಹಿತ್‌ ರಾಜಪಾಲ್‌ ಅವರನ್ನು ಆಯ್ಕೆ ಮಾಡಿತ್ತು. 2017ರಿಂದ ಭೂಪತಿ ಡೇವಿಸ್‌ ಕಪ್‌ ತಂಡವನ್ನು ಮುನ್ನಡೆಸಿದ್ದಾರೆ.

‘12 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವುದರ ಜೊತೆಗೆ 25 ವರ್ಷ ದೇಶಕ್ಕೆ ಆಡಿದ್ದೇನೆ. ರಾಷ್ಟ್ರೀಯ ತಂಡಕ್ಕೆ ಆಡಲು ನಾನು ಸಿದ್ಧನಿರಲಿಲ್ಲ ಎಂಬ ಕಾರಣಕ್ಕೆ ನಾಯಕ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಯಾರಾದರೂ ಹೇಳುವುದನ್ನು ಕೇಳಿ ಸುಮ್ಮನೇಕೆ ಕುಳಿತುಕೊಳ್ಳಬೇಕು’ ಎಂದು ಭೂಪತಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದರು.

‘ನನ್ನನ್ನು ವಜಾ ಮಾಡಲಿ, ಈಗ ಹೊಸ ನಾಯಕನ ಆಯ್ಕೆಗೆ ಸಕಾಲ ಎಂದು ಹೇಳಲಿ. ಆದರೆ ನಾನು ತಂಡಕ್ಕೆ ಆಡಲು ನಿರಾಕರಿಸಿದ್ದೆ ಎಂದು ಹೇಳುವುದು ಸರಿಯಲ್ಲ. ಪಾಕಿಸ್ತಾನದಲ್ಲಿ ಆಡುವುದು ಸುರಕ್ಷಿತವಲ್ಲ ಎಂಬ ಭಾವನೆ ಮೂಡಿತ್ತು. ಐಟಿಎಫ್‌ ಕೂಡ ಸ್ಪಂದಿಸಿದೆ. ಇದಕ್ಕಾಗಿ ನನ್ನನ್ನು, ಆಟಗಾರರನ್ನು ಶಿಕ್ಷಿಸುವುದು ಸರಿಯಲ್ಲ’ ಎಂದರು.

‘ಇನ್ನು ಮುಂದೆ ನಾನು ನಾಯಕನಲ್ಲ ಎಂದು ಯಾವುದಾದರೊಂದು ರೀತಿ ಸಂಪರ್ಕಿಸಿ ಹೇಳಬಹುದಿತ್ತು. ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸಲಾಗುವುದು ಎಂದು ಪ್ರಕಟಿಸುವ ಗಂಟೆಗಳ ಮೊದಲೇ ನನ್ನನ್ನು ತೆಗೆದುಹಾಕಿದ್ದಾರೆ. ಸೌಜನ್ಯಕ್ಕೂ ಕರೆ ಮಾಡಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ, ‘ನಾನೇ ಖುದ್ದಾಗಿ ನವೆಂಬರ್‌ 4ರಂದು ಭೂಪತಿ ಅವರ ಜೊತೆ ಮಾತನಾಡಿ ಹೊಸ ನಾಯಕನ ಆಯ್ಕೆ ಬಗ್ಗೆ ತಿಳಿಸಿದ್ದೆ’ ಎಂದರು.

‘ಅವರಿಗೆ ಬೇಡವೆಂದಾದಲ್ಲಿ ನಾನು ಮುಂದುವರಿಯುವುದಿಲ್ಲ. ಆದರೆ ನಾನು ರಾಷ್ಟ್ರೀಯ ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ್ದೆ ಎಂದು ಹೇಳಬಾರದು. ಇದು ನ್ಯಾಯಸಮ್ಮತವಲ್ಲ’ ಎಂದು ಭೂಪತಿ ಸಿಡಿಮಿಡಿಗೊಂಡರು.

‘ಪಾಕಿಸ್ತಾನಕ್ಕೆ ಹೋಗದಂತೆ ಆಟಗಾರರಿಗೆ ನಾನು ಚಿತಾವಣೆ ಮಾಡಿರಬಹುದೆಂದು ಎಐಟಿಎ ಭಾವಿಸಿದ್ದು ನನ್ನನ್ನು ಆ ಕಾರಣಕ್ಕೇ ತೆಗೆದುಹಾಕಿರಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.