ADVERTISEMENT

ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿ: ಸೆಮಿಗೆ ಅಲ್ಕರಾಜ್‌, ಟೈಫೊ

ಅಮೆರಿಕ ಓಪನ್‌ ಟೆನಿಸ್: ಮ್ಯಾರಥಾನ್‌ ಹೋರಾಟದಲ್ಲಿ ಗೆದ್ದ ಸ್ಪೇನ್‌ ಆಟಗಾರ

ಏಜೆನ್ಸೀಸ್
Published 8 ಸೆಪ್ಟೆಂಬರ್ 2022, 12:54 IST
Last Updated 8 ಸೆಪ್ಟೆಂಬರ್ 2022, 12:54 IST
ಗೆಲುವಿನ ಸಂಭ್ರಮದಲ್ಲಿ ಕಾರ್ಲೊಸ್‌ ಅಲ್ಕರಾಜ್‌ –ಎಎಫ್‌ಪಿ ಚಿತ್ರ
ಗೆಲುವಿನ ಸಂಭ್ರಮದಲ್ಲಿ ಕಾರ್ಲೊಸ್‌ ಅಲ್ಕರಾಜ್‌ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಬರೋಬ್ಬರಿ ಐದು ಗಂಟೆ 15 ನಿಮಿಷಗಳ ಸೆಣಸಾಟದ ಬಳಿಕ ಗೆಲುವು ಒಲಿಸಿಕೊಂಡು ಸ್ಪೇನ್‌ನ ಯುವ ಆಟಗಾರ ಕಾರ್ಲೊಸ್‌ ಅಲ್ಕರಾಜ್‌, ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಬುಧವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಅವರು 6-3, 6-7 (7/9), 6-7 (0/7), 7-5, 6-3 ರಲ್ಲಿ ಇಟಲಿಯ ಯಾನಿಕ್‌ ಸಿನೆರ್‌ ವಿರುದ್ಧ ಗೆದ್ದರು.

ಐದು ಸೆಟ್‌ಗಳ ಹೋರಾಟ ಕೊನೆಗೊಂಡಾಗ ಸಮಯ ಮಧ್ಯರಾತ್ರಿ 2.50 ಗಂಟೆ (ಸ್ಥಳೀಯ ಕಾಲಮಾನ ) ಆಗಿತ್ತು. ಅಮೆರಿಕ ಓಪನ್‌ನ 141 ವರ್ಷಗಳ ಇತಿಹಾಸದಲ್ಲಿ ಪಂದ್ಯವೊಂದು ಇಷ್ಟು ತಡವಾಗಿ ಮುಕ್ತಾಯಗೊಂಡದ್ದು ಇದೇ ಮೊದಲು. ಮಧ್ಯರಾತ್ರಿ 2.26ರ ವೇಳೆಗೆ ಪಂದ್ಯ ಪೂರ್ಣಗೊಂಡದ್ದು ಇದುವರೆಗಿನ ದಾಖಲೆಯಾಗಿತ್ತು.

ADVERTISEMENT

ಎರಡನೇ ಸುದೀರ್ಘ ಪಂದ್ಯ: ಅಮೆರಿಕ ಓಪನ್‌ನಲ್ಲಿ ನಡೆದ ಎರಡನೇ ಸುದೀರ್ಘ ಪಂದ್ಯ ಇದಾಗಿದೆ. ಇಲ್ಲಿ ಅತ್ಯಂತ ದೀರ್ಘ ಅವಧಿಯ ಪಂದ್ಯ ಆಡಿದ ದಾಖಲೆ ಸ್ಟೀಫನ್‌ ಎಡ್ಬರ್ಗ್ ಮತ್ತು ಮೈಕಲ್‌ ಚಾಂಗ್‌ ಅವರ ಹೆಸರಿನಲ್ಲಿದೆ. 1992 ಟೂರ್ನಿಯಲ್ಲಿ ಇವರು 5 ಗಂಟೆ 26 ನಿಮಿಷ ಆಡಿದ್ದರು.

ಮೊದಲ ಸೆಟ್‌ 6–3 ರಲ್ಲಿ ಗೆದ್ದ ಅಲ್ಕರಾಜ್‌ ಉತ್ತಮ ಆರಂಭ ಪಡೆದಿದ್ದರು. ಆದರೆ ತಿರುಗೇಟು ನೀಡಿದ ಸಿನರ್‌, ಎರಡು ಮತ್ತು ಮೂರನೇ ಸೆಟ್‌ಗಳನ್ನು ಟೈಬ್ರೇಕರ್‌ನಲ್ಲಿ ತಮ್ಮದಾಗಿಸಿಕೊಂಡರು.

ನಾಲ್ಕನೇ ಸೆಟ್‌ನಲ್ಲಿ ಅಲ್ಕರಾಜ್‌ 4–5 ರಲ್ಲಿ ಹಿನ್ನಡೆಯಲ್ಲಿದ್ದರು. ಆ ಬಳಿಕ ಅವರಿಂದ ಅಮೋಘ ಆಟ ಮೂಡಿಬಂತು. ಟೈಬ್ರೇಕರ್‌ಗೆ ಸಾಗಿದ ನಾಲ್ಕನೇ ಸೆಟ್‌ ಗೆದ್ದು 2–2 ರಲ್ಲಿ ಸಮಬಲ ಸಾಧಿಸಿದರು. ಐದನೇ ಸೆಟ್‌ನಲ್ಲಿ ಎರಡು ಬಾರಿ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿ ಸ್ಮರಣೀಯ ಗೆಲುವು ಒಲಿಸಿಕೊಂಡರು.

ನಾಲ್ಕನೇ ಸೆಟ್‌ನಲ್ಲಿ ಮ್ಯಾಚ್‌ ಪಾಯಿಂಟ್‌ ಕೂಡಾ ಪಡೆದಿದ್ದ ಸಿನೆಕ್‌ ಅದನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾಗಿ ಆ ಬಳಿಕ ಪಂದ್ಯವನ್ನೇ ಕಳೆದುಕೊಂಡರು. ‘ಈ ಸೋಲು ಕೆಲವು ಸಮಯ ನನ್ನನ್ನು ಕಾಡಲಿದೆ’ ಎಂದು ಪಂದ್ಯದ ಬಳಿಕ ಅವರು ಪ್ರತಿಕ್ರಿಯಿಸಿದರು.

ಟೈಫೊ ಸಾಧನೆ: ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಫ್ರಾನ್ಸೆಸ್‌ ಟೈಫೊ 7-6 (3), 7-6 (0), 6-4 ರಲ್ಲಿ ಆಂಡ್ರೆ ರುಬ್ಲೆವ್‌ ಅವರನ್ನು ಮಣಿಸಿದರು. ಈ ಮೂಲಕ 16 ವರ್ಷಗಳ ಬಳಿಕ ಇಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅಮೆರಿಕದ ಮೊದಲ ಆಟಗಾರ ಎನಿಸಿಕೊಂಡರು. ಆ್ಯಂಡಿ ರಾಡಿಕ್‌ ಅವರು 2006ರಲ್ಲಿ ಕೊನೆಯದಾಗಿ ಸೆಮಿಫೈನಲ್‌ ಪ್ರವೇಶಿಸಿದ್ದರು.

24 ವರ್ಷದ ಟೈಫೊ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ನಾಲ್ಕರಘಟ್ಟ ಪ್ರವೇಶಿಸಿದ್ದು ಇದೇ ಮೊದಲು. ಹಿಂದಿನ ಪಂದ್ಯದಲ್ಲಿ ಅವರು 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ಸ್ಪೇನ್‌ನ ರಫೆಲ್‌ ನಡಾಲ್‌ಗೆ ಆಘಾತ ನೀಡಿದ್ದರು.

ಸೆಮಿಗೆ ಸ್ವಟೆಕ್‌, ಸಬಲೆಂಕಾ: ಅಗ್ರ ಶ್ರೇಯಾಂಕದ ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಟೆಕ್‌ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ಸ್ವಟೆಕ್‌ 6-3, 7-6 (7/4) ರಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ಎದುರು ಗೆದ್ದರು. 21 ವರ್ಷದ ಸ್ವಟೆಕ್ ಮೊದಲ ಸೆಟ್‌ ಸುಲಭವಾಗಿ ಜಯಿಸಿದರೆ, ಎರಡನೇ ಸೆಟ್‌ನಲ್ಲಿ ಪ್ರತಿರೋಧ ಎದುರಿಸಿದರು. ಆದರೆ ಟೈಬ್ರೇಕರ್‌ನಲ್ಲಿ ಶಿಸ್ತಿನ ಆಟವಾಡಿ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟರು.

ಇನ್ನೊಂದು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ 6-1, 7-6 (7/4) ರಲ್ಲಿ ಜೆಕ್‌ ರಿಪಬ್ಲಿಕ್‌ನ ಕರೊಲಿನಾ ಪಿಸ್ಕೊವಾ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.