ನ್ಯೂಯಾರ್ಕ್ (ಎಎಫ್‌ಪಿ/ರಾಯಿಟರ್ಸ್): ಅಮೋಘ ಆಟ ಆಡಿದ ಕೀ ನಿಶಿಕೋರಿ ಮತ್ತು ನವೊಮಿ ಒಸಾಕ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾರೆ.
ಗ್ರ್ಯಾಂಡ್‌ಸ್ಲಾಮ್ ಟೂರ್ನಿಯೊಂದರ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ಸೆಮಿಗೆ ಲಗ್ಗೆ ಇಟ್ಟ ಜಪಾನ್‌ನ ಮೊದಲ ಜೋಡಿ ಎಂಬ ಹಿರಿಮೆಗೆ ಇವರು
ಪಾತ್ರರಾಗಿದ್ದಾರೆ.
ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ನಿಶಿಕೋರಿ 2–6, 6–4, 7–6, 4–6, 6–4ರಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಕ್ ವಿರುದ್ಧ ಗೆದ್ದರು.
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಸಿಲಿಕ್ ಮೊದಲ ಸೆಟ್‌ನಲ್ಲಿ ಮಿಂಚಿನ ಆಟ ಆಡಿ ಗೆದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 19ನೇ ಸ್ಥಾನ ಹೊಂದಿರುವ ನಿಶಿಕೋರಿ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು.
ಮೂರನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಉಭಯ ಆಟಗಾರರು ಸರ್ವ್ ಕಾಪಾಡಿಕೊಂಡಿದ್ದರಿಂದ 6–6ರ ಸಮಬಲ ಕಂಡುಬಂತು. ‘ಟೈ ಬ್ರೇಕರ್’ನಲ್ಲಿ ನಿಶಿಕೋರಿ ಮೇಲುಗೈ ಸಾಧಿಸಿದರು.
ಇದರಿಂದ ಎದೆಗುಂದದ ಸಿಲಿಕ್ ನಾಲ್ಕನೇ ಸೆಟ್‌ನಲ್ಲಿ ಕೆಚ್ಚೆದೆಯಿಂದ ಹೋರಾಡಿದರು. ಕ್ರಾಸ್‌ಕೋರ್ಟ್ ಮತ್ತು ಬೇಸ್‌ಲೈನ್ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ ಸೆಟ್ ಜಯಿಸಿದರು. ಹೀಗಾಗಿ 2–2ರ ಸಮಬಲ ಕಂಡುಬಂತು.
ಐದನೇ ಸೆಟ್‌ನ ಆರಂಭದಿಂದಲೇ ಉಭಯ ಆಟಗಾರರು ಮಿಂಚಿದರು. ಎಂಟು ಗೇಮ್‌ಗಳ ನಂತರ ಇಬ್ಬರೂ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ನಿಶಿಕೋರಿ ಆಟ ರಂಗೇರಿತು. ಶರವೇಗದ ಸರ್ವ್ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಗೇಮ್ ಗೆದ್ದ ಜಪಾನ್‌ನ ಆಟಗಾರ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.
ಸೆಮಿಫೈನಲ್‌ನಲ್ಲಿ ನಿಶಿಕೋರಿ, ಸರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ ಆಡಲಿದ್ದಾರೆ.
ಗುರುವಾರ ನಡೆದ ಎಂಟರ ಘಟ್ಟದ ಪೈಪೋಟಿಯಲ್ಲಿ ನೊವಾಕ್ 6–3, 6–4, 6–4ರಲ್ಲಿ ಆಸ್ಟ್ರೇಲಿಯಾದ ಜಾನ್ ಮಿಲ್‌ಮ್ಯಾನ್ ವಿರುದ್ಧ ಗೆದ್ದರು.
ಒಸಾಕ ಮಿಂಚು: ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಒಸಾಕ 6–1, 6–1ರ ನೇರ ಸೆಟ್‌ಗಳಿಂದ ಉಕ್ರೇನ್‌ನ ಲೇಸ್ಯಾ ಸುರೆಂಕೊ ಅವರನ್ನು ಪರಾಭವಗೊಳಿಸಿದರು.
ಈ ಹಣಾಹಣಿಯಲ್ಲಿ ಐದು ಏಸ್‌ಗಳನ್ನು ಸಿಡಿಸಿದ ಒಸಾಕ ಐದು ಬ್ರೇಕ್ ಪಾಯಿಂಟ್ಸ್‌ಗಳನ್ನೂ ಜಯಿಸಿದರು. 30 ಸರ್ವ್ ಪಾಯಿಂಟ್ಸ್‌ಗಳನ್ನೂ ಬುಟ್ಟಿಗೆ ಹಾಕಿಕೊಂಡರು.
ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ 6–4, 6–3ರಲ್ಲಿ ಸ್ಪೇನ್‌ನ ಕಾರ್ಲಾ ಸ್ವಾರೆಜ್ ನವಾರೊ ಅವರನ್ನು ಮಣಿಸಿದರು.
ಸೆರೆನಾಗೆ ಸೆವಾಸ್ಟೋವಾ ಸವಾಲು: ಶುಕ್ರವಾರ ನಡೆಯುವ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಲಾಟ್ವಿಯಾದ ಅನಸ್ತೇಸಿಜಾ ಸೆವಾಸ್ಟೋವಾ ಸವಾಲು ಎದುರಿಸಲಿದ್ದಾರೆ.
ತವರಿನ ಅಭಿಮಾನಿಗಳ ಎದುರು ಆಡುವ ಸೆರೆನಾ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಮತ್ತು ನವೊಮಿ ಒಸಾಕ ಮುಖಾಮುಖಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.